“ಸ್ವಚ್ಛ ಭಾರತ- ಸ್ವಸ್ಥ ಭಾರತ” ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ 2ನೇ ಅಕ್ಟೋಬರ್ 2014ರಂದು ರಾಷ್ಟ್ರರಾಜಧಾನಿ ದೆಹಲಿಯ ರಾಜ್ ಘಾಟ್‌ನ ರಸ್ತೆಯೊಂದನ್ನು ಖುದ್ದು ಪೊರಕೆ ಹಿಡಿದು ಗುಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಇಡೀ ದೇಶಾದ್ಯಂತ ಜನಾಂದೋಲನವನ್ನಾಗಿಸಿದರು. ಇದರ ಫಲವಾಗಿಯೇ 2ನೇ ಅಕ್ಟೋಬರ್ 2019 ರಂದು ಇಡೀ ದೇಶವನ್ನು ಬಯಲು ಬಹಿರ್ದೆಸೆ ಮುಕ್ತ ದೇಶವೆಂದು ಘೋಷಣೆ ಮಾಡಲಾಯಿತು.
ಪ್ರಸ್ತುತ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಹಂತ-2 ಜಾರಿಯಲ್ಲಿದ್ದು, ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆಯನ್ನು ಕಾಪಾಡಲು ODF Plus ಚಟುವಟಿಕೆಗಳನ್ನು ದೇಶಾದ್ಯಂತ ಅನುಷ್ಠಾನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಭಾರತ ಸರ್ಕಾರವು ಆಗಿಂದಾಗ್ಗೆ ವಿಶೇಷ ಆಂದೋಲನಗಳನ್ನು ರೂಪಿಸುತ್ತಿದ್ದು, ರಾಜ್ಯಗಳೂ ಸಹ ತಮ್ಮ ತಮ್ಮ ರಾಜ್ಯಗಳನ್ನು ಹಂತ ಹಂತವಾಗಿ ODF Plus ಮಾಡಲು ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿವೆ. ಹಾಗಾದ್ರೆ ರಾಜ್ಯದಲ್ಲಿ ODF Plus ಚಟುವಟಿಕೆಗಳು ಹೇಗೆಲ್ಲಾ ಸಾಗುತ್ತಿವೆ ಎಂಬುದನ್ನು ನೋಡೋಣ ಬನ್ನಿ.
ಗ್ರಾಮವೊಂದನ್ನು ODF Plus ಎಂದು ಘೋಷಿಸಬೇಕಾದರೆ, ಆ ಗ್ರಾಮದ ಎಲ್ಲಾ ಮನೆಗಳು ವೈಯಕ್ತಿಕ ಶೌಚಾಲಯವನ್ನು ಹೊಂದಿರಬೇಕು ಹಾಗೂ ಪ್ರತಿಯೊಬ್ಬರು ಪ್ರತಿ ಸಲ ಶೌಚಾಲಯವನ್ನು ಬಳಸುತ್ತಿರಬೇಕು. ಇದರ ಜೊತೆಗೆ ಗ್ರಾಮದಲ್ಲಿ ಘನ ಮತ್ತು ದ್ರವ ತ್ಯಾಜ್ಯದ ನಿರ್ವಹಣೆ ಸಮರ್ಪಕವಾಗಿ ಆಗುತ್ತಿರಬೇಕು. ಇಡೀ ಗ್ರಾಮ ನೋಡಲು ಶುಚಿಯಾಗಿದ್ದರೆ ಅಂತಹ ಗ್ರಾಮವನ್ನು ODF Plus ಗ್ರಾಮ ಎಂದು ಘೋಷಿಸಲಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ 1501 ಗ್ರಾಮಗಳನ್ನು ODF Plus ಗ್ರಾಮಗಳೆಂದು ಘೋಷಿಸಲಾಗಿದೆ.
ODF Plus ಎಂದು ಘೋಷಿಸಿರುವ ಗ್ರಾಮಗಳ ಪೈಕಿ ಶಿವಮೊಗ್ಗ ಜಿಲ್ಲೆಯ ತೋಗರ್ಸಿ ಗ್ರಾಮ ಪಂಚಾಯಿತಿಯ ತೋಗರ್ಸಿ ಗ್ರಾಮವೂ ಒಂದಾಗಿದೆ. ಜಿಲ್ಲಾ ಕೇಂದ್ರದಿಂದ 85 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಪುರಾತನಮಲ್ಲಿಕಾರ್ಜುನ ಸ್ವಾಮಿ ದೇವಾಲಯವಿದ್ದು, ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಗ್ರಾಮದಲ್ಲಿ 1079 ಮನೆಗಳಿದ್ದು, 4917 ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮದಲ್ಲಿ ಎಲ್ಲಾ ಮನೆಗಳು ವೈಯಕ್ತಿಕ ಶೌಚಾಲಯವನ್ನು ಹೊಂದಿದ್ದು ಎಲ್ಲರೂ ಶೌಚಕ್ಕಾಗಿ ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಅದಲ್ಲದೆ ಈ ಗ್ರಾಮದಲ್ಲಿ 2 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಗ್ರಾಮ ಪಂಚಾಯಿತಿಯೇ ನಿರ್ವಹಿಸುತ್ತಿದೆ. ಜೊತೆಗೆ ಈ ಗ್ರಾಮದಲ್ಲಿ ಸ್ವಚ್ಛ ಸಂಕೀರ್ಣ ಘಟಕವಿದ್ದು, ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಬೂದು ನೀರಿನ ನಿರ್ವಹಣೆಯೂ ಆಗುತ್ತಿದ್ದು, ಉದ್ಯೋಗ ಖಾತರಿ ಯೋಜನೆಯ ಬಚ್ಚಲುಗುಂಡಿ ಅಭಿಯಾನದಡಿ ಬಹುತೇಕ ಎಲ್ಲಾ ಮನೆಗಳು ವೈಯಕ್ತಿಕ ಇಂಗುಗುಂಡಿಗಳನ್ನು ನಿರ್ಮಿಸಿಕೊಂಡಿವೆ.ಗ್ರಾಮದಲ್ಲಿ ಬೂದು ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರಿಂದ ಈ ಗ್ರಾಮವನ್ನುODF Plus ಗ್ರಾಮ ಎಂದು ಘೋಷಿಸಲಾಗಿದೆ.
ಇವಿಷ್ಟು ಚಟುವಟಿಕೆಗಳು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಆದವಲ್ಲ. ಬದಲಿಗೆ ಈ ಎಲ್ಲಾ ಚಟುವಟಿಕೆಗಳಿಗೆ ಪ್ರಮುಖ ಕಾರಣ ಇಲ್ಲಿನ ಜನರ ಮನಸ್ಥಿತಿಯನ್ನು ಪರಿವರ್ತಿಸುವಲ್ಲಿ ಆಗಿಂದಾಗ್ಗೆ ಹಲವು ಐ.ಇ.ಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು. ಶಾಲಾ ಮಕ್ಕಳಿಗೆ ಶುಚಿತ್ವ ಮತ್ತು ನೈರ್ಮಲ್ಯದ ಕುರಿತು ಮೊದಲಿಗೆ ಮಾಹಿತಿ ನೀಡಲಾಯಿತು. ಬಳಿಕ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ಭೇಟಿ ನೀಡಿ ಶುಚಿತ್ವ ಹಾಗೂ ಸಮರ್ಪಕ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಕುರಿತು ಆಗಿಂದಾಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಜೊತೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ, ಈ ಗ್ರಾಮದ ಚುನಾಯಿತ ಪ್ರತಿನಿಧಿಗಳು ಜನರ ಮನಃಪರಿವರ್ತಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಮೂಲಕ ಈ ಗ್ರಾಮವನ್ನು ODF Plus ಗ್ರಾಮವನ್ನಾಗಿಸಿದ್ದು, ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪಾತ್ರ ಈ ಎಲ್ಲಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತೋಗರ್ಸಿ ಗ್ರಾಮ ಪಂಚಾಯಿತಿ ಗ್ರಾಮವೊಂದು ಉದಾಹರಣೆಯಷ್ಟೆ. ಹೀಗೆ ರಾಜ್ಯದಲ್ಲಿ 1501 ಗ್ರಾಮಗಳನ್ನು ODF Plus ಗ್ರಾಮಗಳನ್ನಾಗಿ ಈಗಾಗಲೇ ಘೋಷಿಸಲಾಗಿದ್ದು ಈ ಪೈಕಿ 1417 ಗ್ರಾಮಗಳನ್ನು ODF Plus Aspiring ಗ್ರಾಮಗಳೆಂದು ಗುರುತಿಸಲಾಗಿದೆ.( ODF Plus Aspiring ಗ್ರಾಮ ಎಂದರೆ ಗ್ರಾಮವೊಂದರಲ್ಲಿನ ಎಲ್ಲಾ ಮನೆಗಳು ವೈಯಕ್ತಿಕ ಶೌಚಾಲಯವನ್ನು ಹೊಂದಿರಬೇಕು. ಹಾಗೂ ಗ್ರಾಮದಲ್ಲಿರುವ ಎಲ್ಲಾ ಅಂಗನವಾಡಿ, ಶಾಲೆಗಳು, ಗ್ರಾಮ ಪಂಚಾಯಿತಿ ಕಟ್ಟಡಗಳು ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯಿರಬೇಕು. ಜೊತೆಗೆ ಘನ ಅಥವಾ ದ್ರವ ತ್ಯಾಜ್ಯ ನಿರ್ವಹಣೆ ಇವುಗಳಲ್ಲಿ ಒಂದು ವ್ಯವಸ್ಥೆಯನ್ನು ಹೊಂದಿರಬೇಕು.)
36 ಗ್ರಾಮಗಳು ODF Plus Rising ಗ್ರಾಮಗಳಾಗಿವೆ. ( ODF Plus Rising ಗ್ರಾಮ ಎಂದರೆ ಗ್ರಾಮವೊಂದರಲ್ಲಿನ ಎಲ್ಲಾ ಮನೆಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿದ್ದು, ಗ್ರಾಮದಲ್ಲಿರುವ ಎಲ್ಲಾ ಅಂಗನವಾಡಿ, ಶಾಲೆಗಳು, ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿರಬೇಕು.ಅಲ್ಲದೇ ಗ್ರಾಮದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆಗಳಿರಬೇಕು.)
48 Model ಗ್ರಾಮಗಳಾಗಿವೆ. ( ODF Plus Model ಗ್ರಾಮ ಎಂದರೆ ಗ್ರಾಮದಲ್ಲಿರುವ ಎಲ್ಲಾ ಮನೆಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿದ್ದು, ಜೊತೆ ಎಲ್ಲಾ ಅಂಗನವಾಡಿ, ಶಾಲೆಗಳು, ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರಬಾರದು, ಅಲ್ಲಲ್ಲಿ ನೀರು ನಿಂತಿರಬಾರದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸುರಿದಿರಬಾರದು. ಇದರೆ ಜೊತೆಗೆ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಗಳಿರಬೇಕು. ಗ್ರಾಮ ಒ.ಡಿ.ಎಫ್ ಪ್ಲಸ್ ಎಂದು ಘೋಷಣೆಯಾಗಿರುವ ಬಗ್ಗೆ ಮಾಹಿತಿ, ಶಿಕ್ಷಣ, ಸಂವಹನ ಸಂದೇಶಗಳಾದ ಚಿತ್ರಗಳು, ಗೋಡೆ ಬರಹಗಳ ಮೂಲಕ ತಿಳಿಸಬೇಕು.)
ಈ ರೀತಿ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಗ್ರಾಮವನ್ನು ಒಡಿಎಫ್ ಪ್ಲಸ್ ಗ್ರಾಮ ಎಂದು ಘೋಷಿಸಲಾಗುತ್ತದೆ. ಈ ಗ್ರಾಮಗಳು ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದು, ನೀವೂ ಸಹ ನಿಮ್ಮ ಗ್ರಾಮವನ್ನು ODF Plus ಗ್ರಾಮವನ್ನಾಗಿಸಲು ಪ್ರತಿಜ್ಞೆ ಮಾಡಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಆದಷ್ಟು ಬೇಗ ನಿಮ್ಮ ಗ್ರಾಮವನ್ನೂ ODF Plus ಗ್ರಾಮವನ್ನಾಗಿಸಬಹುದು.
4,744 total views, 1 views today