Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸ್ವಚ್ಛ ಸಂಕೀರ್ಣ ಘಟಕಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು ಈಗಾಗಲೇ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಕಟ್ಟಡ ಮತ್ತು ಹಳೆ ಕಟ್ಟಡಗಳಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಾರಂಭಿಸಿರುವುದರಿಂದ ಇನ್ನು ಮುಂದೆ ಹಳ್ಳಿಗಳಲ್ಲಿ ಸ್ವಚ್ಛವಾಹಿನಿ ಮೂಲಕ ಹಸಿ-ಕಸ ಒಣ-ಕಸವನ್ನು ವಿಂಗಡಿಸಿ ಪಡೆಯುತ್ತಾರೆ. ಇಲ್ಲಿನ ವಿಶೇಷವೆಂದರೆ ಕಸ ಸಂಗ್ರಹಣೆ, ವಿಂಗಡಣೆ ಅಷ್ಟೇ ಅಲ್ಲದೇ, ಸ್ವಚ್ಛ ವಾಹಿನಿಯ ಚಾಲನೆ ಕೂಡ ಮಹಿಳೆಯರೇ ಮಾಡಲಿದ್ದಾರೆ.

ಮಹಿಳಾ ಸಬಲೀಕರಣದ ಆಶಯದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಈ ಮಹತ್ವದ ಹೆಜ್ಜೆ ಇಟ್ಟಿದ್ದು, ಸ್ವಚ್ಛತಾ ಕಾರ್ಯದ ಸಂಪೂರ್ಣ ಹೊಣೆಯನ್ನು ಮಹಿಳೆಯರಿಗೆ ವಹಿಸಲು ಮುಂದಾಗಿದೆ.

ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆ 15ನೇ ಹಣಕಾಸು ನಿಧಿ ಮತ್ತು ಗ್ರಾಮ ಪಂಚಾಯಿತಿಯ ಅನುದಾನ ಬಳಸಿಕೊಂಡು ವಾಹನ ವ್ಯವಸ್ಥೆ, ಸ್ವಚ್ಛ ಸಂಕೀರ್ಣ ಘಟಕದ ನಿರ್ಮಾಣ, ಪರಿಕರಗಳ ಖರೀದಿ, ಬಕೆಟ್ ಖರೀದಿ ಮಾಡಿ ಎಲ್ಲಾ ಗ್ರಾಮಗಳ ಎಲ್ಲಾ ಮನೆಯ ಕಸದ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ. ತರಬೇತಿ ಪಡೆದ ಮಹಿಳೆಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆಗಳಿಂದಲೂ ಕಸ ಸಂಗ್ರಹಿಸಿ, ವಿಲೇವಾರಿ ಮಾಡಬೇಕು, ಕಸ ಸಂಪನ್ಮೂಲದಿಂದ ಬಂದ ಆದಾಯವನ್ನು ಸಿಬ್ಬಂದಿ, ವಾಹನ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ವಿಶ್ವನಾಥನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿನೂತವಾಗಿ ಸ್ವಚ್ಛ ಸಂಕೀರಣ ಘಟಕವನ್ನು ಪ್ರಾರಂಭ ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಹಿನ್ನಲೆಯಲ್ಲಿ ಸಂಜೀವಿನಿ ಒಕ್ಕೂಟವು ಮಹಿಳೆಯರಿಗೆ ಜಿಲ್ಲಾ ಮಟ್ಟದಲ್ಲಿ ವಾಹನ ಚಾಲನ ತರಬೇತಿ ನೀಡುತ್ತಿದೆ.

//swachhamevajayate.org/wp-content/uploads/2022/09/1-1.png

ಇಲ್ಲಿ ಸ್ವಚ್ಛ ವಾಹಿನಿ ಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಿಯಾಂಕ ಅವರ ಕಥೆ ಸ್ಫೂರ್ತಿದಾಯಕವಾಗಿದೆ. ಪ್ರಿಯಾಂಕರವರು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ವಿಶ್ವನಾಥನಹಳ್ಳಿ ಗ್ರಾಮ ಪಂಚಾಯಿತಿಯ ನಿವಾಸಿ. ಕಾವೇರಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಹಾಗೂ ಸಂಜೀವಿನಿ ಒಕ್ಕೂಟದಲ್ಲಿ 6 ವರ್ಷಗಳಿಂದ ಸಕ್ರಿಯ ಸದಸ್ಯರಾಗಿದ್ದಾರೆ.

ಇವರಿಗೆ ಮೊದಲಿನಿಂದಲೂ ಚಾಲನೆಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ಸಿ.ಇ.ಓರವರು ಸ್ವಚ್ಛ ವಾಹಿನಿಗೆ ಮಹಿಳೆಯರನ್ನು ನೇಮಕ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದು ಇವರು ತರಬೇತಿ ಪಡೆಯಲು ಮುಂದಾದರು. ಒಂದು ತಿಂಗಳ ತರಬೇತಿ ಪಡೆದು ವಾಹನಾ ಚಾಲನೆಗೆ ತಯಾರಾದರು. ಇದಕ್ಕೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರ ಬೆಂಬಲವು ಸಿಕ್ಕಿತ್ತು.

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಸ್ವಚ್ಛ ವಾಹಿನಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ವೇಳಾ ಪಟ್ಟಿಯನ್ನು ನಿಗದಿ ಮಾಡಿ ಸಮರ್ಪಕವಾಗಿ ಘನ ತ್ಯಾಜ್ಯವನ್ನು ಸಂಗ್ರಹಣೆ, ವಿಂಗಡಣೆ, ವಿಲೇವಾರಿ ಮಾಡಲಾಗುತ್ತಿದ್ದು ಮತ್ತು ಸ್ವಚ್ಛ ವಾಹಿನಿ ಮೂಲಕ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸಮರ್ಪಕವಾಗಿ ಕಸ ಸಂಗ್ರಹಣೆ ಮಾಡುತ್ತಿದ್ದಾರೆ.

//swachhamevajayate.org/wp-content/uploads/2022/09/2-1.png

ಪ್ರಿಯಾಂಕರವರ ಕಾರ್ಯವೈಖರಿಯನ್ನು ಗ್ರಾಮದ ಸಾರ್ವಜನಿಕರು, ಅಧಿಕಾರಿಗಳು, ಪ್ರಶಂಸನೆ ಮಾಡಿದ್ದಾರೆ. ಮಹಿಳೆಯರು ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ ಎಂದು ಸಾಬೀತು ಮಾಡಿದ್ದಾರೆ. ಸ್ವಾವಲಂಬಿಗಳು ಆಗುವುದರ ಜೊತೆಗೆ ಸಾಮಾಜಿಕ ಸ್ಫೂರ್ತಿಯಾಗಿ ನಿಲ್ಲಬೇಕೆಂದು ತೋರಿಸಿಕೊಟ್ಟಿದ್ದಾರೆ. ಮಹಿಳೆ ಕುಟುಂಬದ ಜವಾಬ್ದಾರಿಯ ಜೊತೆಗೆ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಂಡು ಸಮಾಜದ ಏಳಿಗೆಗೆ ಶ್ರಮವಹಿಸಬೇಕೆಂಬುದಕ್ಕೆ ಮಾದರಿಯಾಗಿದ್ದಾರೆ.

ಎಲ್ಲಾ ಮಹಿಳೆಯರು ಚಾಲನೆ ಕಲಿಯಬೇಕೆಂದು ಸಲಹೆ ನೀಡುತ್ತಾರೆ ಪ್ರಿಯಾಂಕ. ಹೊರಗಡೆ ಹೋಗುವಾಗ ಮನೆಯ ಪುರುಷರಿಗೆ ಕಾಯುವುದು, ಅವರನ್ನೇ ಆಶ್ರಹಿಸುವುದು ಇದರಿಂದ ತಪ್ಪುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಪ್ರಿಯಾಂಕರವರು ವಿಭಿನ್ನವಾದ ಹುದ್ದೆಯನ್ನು ಆರಿಸಿಕೊಂಡಿರುವುದರಿಂದ ಇವರಂತೆ ಸ್ವಚ್ಛತಾ ಅಭಿಯಾನದಲ್ಲಿ ಉಳಿದ ಸ್ವಸಹಾಯ ಸಂಘದ ಗುಂಪುಗಳ ಮಹಿಳೆಯರು ಪಾಲ್ಗೊಂಡು ಘನತ್ಯಾಜ್ಯ ಸಂಗ್ರಹಣೆಗೆ, ವಿಂಗಡಣೆ, ವಿಲೇವಾರಿ ಮಾಡುವ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಿಯಾಂಕರವರು ಸ್ವಚ್ಛ ವಾಹಿನಿ ಚಾಲನೆ ಮಾಡುತ್ತಾ, ಸ್ವಚ್ಛತೆಯ ಪಾಠ ಹೇಳುತ್ತಾ  ಊರಿನವರಿಗೆ ಮಾದರಿಯಾಗಿದ್ದಾರೆ.

 3,079 total views,  1 views today

WhatsApp chat