Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಆ ಮಹಿಳೆಯರು ನರೇಗಾದಡಿ ಕೆಲಸ ಮಾಡುತ್ತಲೇ ಏನನ್ನಾದರೂ ಸಾಧಿಸುವ ಕನಸು ಕಂಡವರು. ಕೊಪ್ಪಳ ಜಿಲ್ಲಾ ಪಂಚಾಯತಿಯ ಎನ್.ಆರ್.ಎಲ್.ಎಂ ಯೋಜನೆ ಅವರ ಕೈ ಹಿಡಿಯಿತು. ಯೋಜನೆಯಡಿ ಮಹಿಳೆಯರ ಸ್ಯಾನಿಟರಿ ಪ್ಯಾಡ್ ತಯಾರಿಸುವ ಘಟಕ ಸ್ಥಾಪಿಸಿ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.

ಕೊಪ್ಪಳ ತಾಲೂಕಿನ ಹೊಸಹಳ್ಳಿಯ ಧರಿಯಾಜ್ ಬೇಗಂ, ಶಶಿಕಲಾ, ಮುಮ್ತಾಜ್, ಆಶಾಬೀ ಎಂಬ ಮಹಿಳೆಯರು ಇಂದು ತಮ್ಮ ದೈನಂದಿನ ಕರ್ತವ್ಯದೊಂದಿಗೆ ನರೇಗಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ವೈಯಕ್ತಿಕ ಸಮಸ್ಯೆಗೆ ಪರಿಹಾರವಾಗಿ, ಕಾರ್ಮಿಕ ಮಹಿಳೆಯರ ಆರೋಗ್ಯ ರಕ್ಷಣೆಯ ಮೂಲಕ ತಮ್ಮದೇ ಸ್ವಂತ ಆದಾಯದ ದಾರಿಯನ್ನು ಕಂಡುಕೊಂಡಿದ್ದಾರೆ.

ಮಹಿಳೆಯರ ಸಮಸ್ಯೆಗಳು ಮಹಿಳೆಯರಿಗೇ ಅರ್ಥವಾಗುತ್ತಲ್ಲವೇ!. ಅದರಂತೆ ಧರಿಯಾಜ್ ಬೇಗಂ, ಶಶಿಕಲಾ, ಮುಮ್ತಾಜ್, ಆಶಾಬೀ ಅವರು ತಾವು ತಯಾರಿಸಿದ ಋತುಚಕ್ರ ಶುಚಿತ್ವದ ಪ್ಯಾಡ್(ಸ್ಯಾನಿಟರಿ ಪ್ಯಾಡ್) ಗಳೊಂದಿಗೆ ನರೇಗಾ ಕಾಮಗಾರಿ ನಡೆಯುವ ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟರು. ಅಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ಯಾಡ್ ನೀಡುವುದಷ್ಟೇ ಅಲ್ಲದೆ, ಋತುಚಕ್ರ ನೈರ್ಮಲ್ಯ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಿದರು. ಉತ್ಪಾದನೆಯಷ್ಟೇ ಇವರ ಉದ್ದೇಶವಲ್ಲ. ಗ್ರಾಮೀಣ ಮಹಿಳೆಯರು ಅವುಗಳ ಉಪಯೋಗ ಪಡೆದು ಆರೋಗ್ಯವಂತರಾಗಿರಬೇಕು ಅನ್ನೋದು ಅವರ ಕಾಳಜಿ. ನರೇಗಾದಿಂದ ಸ್ವಂತ ಆದಾಯ ಕಾಣುತ್ತಿದ್ದ ಮಹಿಳೆಯರು ತಮ್ಮ ಹಾಗೂ ತಮ್ಮ ಮಕ್ಕಳ ಶುಚಿತ್ವಕ್ಕಾಗಿ ಅವುಗಳನ್ನು ಖರೀದಿಸಿ, ಬಳಸಲು ಮುಂದೆ ಬಂದರು. ಇವರ ಈ ಯಶೋಗಾಥೆ ಇಲ್ಲಿಗೆ ಮುಗಿಯುವುದಿಲ್ಲ. ಇದರೊಂದಿಗೆ ಬಳಸಿದ ಪ್ಯಾಡ್‌ಗಳ ಸೂಕ್ತ ನಿರ್ವಹಣೆ ಸಮಸ್ಯೆಯ ಹೊಸದೊಂದು ಅಧ್ಯಾಯ ತೆರೆದುಕೊಳ್ಳುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಕಾರ್ಯನಿರತರಾದವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಣಿಗೇರೆ ಗ್ರಾಮದ ಅಶ್ವಿನಿ, ಸಾವಿತ್ರಿ, ಸಂಗೀತಾ, ಬಸವಣ್ಣೆಮ್ಮ ಎಂಬ ಶಾಲಾ ವಿದ್ಯಾರ್ಥಿನಿಯರು.

ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಪರಿಸರದ ಮೇಲಷ್ಟೆ ಅಲ್ಲ, ಆರೋಗ್ಯದ ಮೇಲೂ ಪರಿಣಾಮ ಬೀರುವಂತದ್ದು ಎಂಬುದನ್ನು ಅರ್ಥ ಮಾಡಿಕೊಂಡಿದ್ದ ವಿದ್ಯಾರ್ಥಿನಿಯರು ತಮ್ಮಲ್ಲೇ ತಂಡಗಳನ್ನಾಗಿ ಮಾಡಿಕೊಂಡು ಗ್ರಾಮದ ಮನೆ ಮನೆಗೆ ಹೋಗಿ, ಹೆಂಗಸರಲ್ಲಿ ಬಳಸಿದ ಪ್ಯಾಡ್‌ಗಳ ಸಮರ್ಪಕ ವಿಲೇವಾರಿ ಕುರಿತು ಜಾಗೃತಿ ಮೂಡಿಸಿದರು.

ಸ್ವಚ್ಛ ಭಾರತ್ ಮಿಷನ್ ವತಿಯಿಂದ ಕಸ ಸಂಗ್ರಹಿಸಲು ಬರುವ ಸ್ವಚ್ಛ ವಾಹಿನಿಗಳಲ್ಲಿ ಸ್ಯಾನಿಟರಿ ಪ್ಯಾಡ್ ಸಂಗ್ರಹಿಸುವುದಕ್ಕೆಂದೇ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಬಳಸಿದ ಪ್ಯಾಡ್‌ಗಳನ್ನು ಮಹಿಳೆಯರು ಅಲ್ಲಿ ಪ್ಯಾಡ್‌ಗಳನ್ನು ಹಾಕುವಂತೆ ತಿಳುವಳಿಕೆ ಮೂಡಿಸಿದರು. ಗ್ರಾಮದ ಮಹಿಳೆಯರು ಅವರ ಸಲಹೆಯನ್ನು ಪಾಲಿಸಿ, ಕಸ ಸಂಗ್ರಹದ ವಾಹನದಲ್ಲಿ ಪ್ಯಾಡ್‌ಗಳನ್ನು ಹಾಕಲಾರಂಭಿಸಿದರು.

ಇದನ್ನು ಗ್ರಾಮದ ಹೊರ ವಲಯದಲ್ಲಿರುವ ಸ್ವಚ್ಚ ಸಂಕೀರ್ಣ ಘಟಕಕ್ಕೆ ತರಲಾಗುತ್ತದೆ. ನಂತರ ಇನ್ಸಿನರೇಟ್ ಯಂತ್ರದಲ್ಲಿ ಸುರಕ್ಷಿತವಾಗಿ ಸುಟ್ಟು ಬೂದಿಯಾಗಿಸುತ್ತಾರೆ. ಕೊನೆಗೆ ತ್ಯಾಜ್ಯವನ್ನು ಸುರಕ್ಷಿತವಾಗಿ ನೆಲದೊಳಗೆ ಹೂತು ಹಾಕುತ್ತಾರೆ. ಇದರಿಂದ ಗ್ರಾಮದ ಮಹಿಳೆಯರ ಆರೋಗ್ಯ ರಕ್ಷಣೆ ಜೊತೆಗೆ ಗ್ರಾಮದ ಸ್ವಚ್ಛತೆ ಹಾಗೂ ನೈರ್ಮಲ್ಯಯುತ ವಾತಾವರಣಕ್ಕೆ ಸ್ವಾವಲಂಬಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಪರೋಕ್ಷವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಕೊಪ್ಪಳ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಬಿ ಫೌಜಿಯಾ ತರನ್ನುಮ್ ಹೇಳಿದ್ದು ಹೀಗೆ, “ಗ್ರಾಮೀಣಾಭಿವೃದ್ಧಿ ಇಲಾಖೆಯ ನಾನಾ ಯೋಜನೆಗಳು ಈಗ ಹಳ್ಳಿಗಳಿಗೆ ಸ್ವಾವಲಂಬನೆಯನ್ನೂ ತುಂಬುತ್ತಿವೆ, ಆರೋಗ್ಯ ಜಾಗೃತಿಯನ್ನೂ ಮೂಡಿಸುತ್ತಿವೆ. ಎನ್.ಆರ್.ಎಲ್.ಎಂ ನ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರಂತೆ ಪ್ರತಿ ವಿದ್ಯಾರ್ಥಿನಿ, ಮಹಿಳೆ ಸ್ವಯಂ ಆಸಕ್ತಿ ತೋರಿದಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಸುಂದರವಾಗಿಟ್ಟುಕೊಳ್ಳಬಹುದು. ಅದರೊಂದಿಗೆ ಆರೋಗ್ಯಯುತ ಜೀವನ ಸಾಗಿಸಲು ಸಾಧ್ಯವಾಗುತ್ತದೆ.”

ನಿಜಕ್ಕೂ ಒಂದು ಆರೋಗ್ಯಯುತ ಸಮಾಜ ನಿರ್ಮಿಸಲು ಈ ಹೆಣ್ಣುಮಕ್ಕಳು ಇಟ್ಟಿರುವ ದಿಟ್ಟ ಹೆಜ್ಜೆ ಎಲ್ಲಾ ಹೆಣ್ಣುಮಕ್ಕಳಿಗೂ ಸ್ಫೂರ್ತಿ. ಇವರ ಈ ನಡೆ ಎಲ್ಲರಿಗೂ ಪ್ರೇರಣೆಯಾಗಲಿ ಅನ್ನೋದೇ ನಮ್ಮ ಆಶಯ.

 3,691 total views,  6 views today

WhatsApp chat