ಮುಟ್ಟು ಎಂದರೆ ಗುಟ್ಟು ಎಂಬ ಕೀಳರಿಮೆ ನಮ್ಮ ಸಮಾಜದಲ್ಲಿ ಶತಮಾನಗಳಿಂದಲೂ ಇದೆ. ಮುಟ್ಟಾದ ಮಹಿಳೆಯನ್ನು ಮನೆಯಿಂದ ಹೊರಗೆ ಕೂರಿಸುವ ಪದ್ದತಿ ಇಂದಿಗೂ ಕೆಲವೆಡೆ ಜೀವಂತವಾಗಿದೆ. ಹಾಗಾಗಿ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿವಿಧ IEC ಕಾರ್ಯಕ್ರಮಗಳನ್ನು ಮಾಡುತ್ತಲೇ ಇದೆ. ಅದರ ಫಲವಾಗಿ ಇವತ್ತು ಎಷ್ಟೋ ಕಡೆಗಳಲ್ಲಿ ಹೆಣ್ಣು ಮಕ್ಕಳನ್ನು ಮುಟ್ಟಿನ ದಿನಗಳನ್ನು ನೆಮ್ಮದಿಯಿಂದ ಕಳೆಯುವಂತಾಗಿದೆ.
ಮುಟ್ಟಿನ ಸಂದರ್ಭದಲ್ಲಿ ಹೆಣ್ಣುಮಕ್ಕಳು ವೈಯಕ್ತಿಕ ಶುಚಿತ್ವ ಹಾಗೂ ನೈರ್ಮಲ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಹೀಗಿದ್ದಲ್ಲಿ ಅವರ ಆರೋಗ್ಯ ಮಟ್ಟ ಸುಧಾರಿಸುತ್ತದೆ. ಹೆಣ್ಣು ಮಕ್ಕಳಲ್ಲಿ ಋತುಚಕ್ರದ ಬಗೆಗಿರುವ ಬೇರೆ ಬೇರೆ ತಪ್ಪು ಕಲ್ಪನೆಗಳನ್ನು ದೂರವಾಗಿಸಲು ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ ವೈಯಕ್ತಿಕ ಶುಚಿತ್ವ ಹಾಗೂ ನೈರ್ಮಲ್ಯಕ್ಕೆ ಸಂಬಂಧಪಟ್ಟಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಲ್ಲೂ ಕೆಲವೊಂದು ಜಿಲ್ಲೆಗಳಲ್ಲಿ ಪಂಚಾಯಿತಿಗಳಲ್ಲಿ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇಲ್ಲಿನ 101 ಗ್ರಾಮ ಪಂಚಾಯಿತಿಗಳಲ್ಲಿ ಮುಟ್ಟಿನ ತ್ಯಾಜ್ಯ ನಿರ್ವಹಣೆಗಾಗಿ ಇನ್ಸಿನರೇಟರ್ ಅಳವಡಿಸಲಾಗಿದ್ದು, ಇದರಿಂದಾಗಿ ಬಳಸಿದ ಸ್ಯಾನಿಟರಿ ಪ್ಯಾಡ್ ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದೆ.
ಅಂದ್ಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜನರಿಗೆ ಋತುಚಕ್ರದ ಬಗ್ಗೆ ಮಾಹಿತಿ ನೀಡಲಾಗಿದೆ.ಹಾಗೂ ಹೆಣ್ಣು ಮಕ್ಕಳು ಪ್ರತಿ ತಿಂಗಳು ಋತುಚಕ್ರ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸಿದ ಮೇಲೆ ಸೂಕ್ತವಾಗಿ ವಿಲೇವಾರಿ ಮಾಡಲು ಇನ್ಸಿನರೇಟರ್ ಯಂತ್ರವನ್ನು ಬಳಸುವ ಬಗ್ಗೆಯೂ ಮಾಹಿತಿ ನೀಡಲಾಗಿದೆ . ಜಿಲ್ಲೆಯ 101 ಗ್ರಾಮ ಪಂಚಾಯಿತಿಗಳ ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ ಇನ್ಸಿನರೇಟರ್ ಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವತಿಯಿಂದ ಅಳವಡಿಸಲಾಗಿದೆ. ಫ್ರೌಢಶಾಲೆ ಹಾಗೂ ಕಾಲೇಜುಗಳು ಹೆಣ್ಣು ಮಕ್ಕಳ ವಸತಿ ನಿಲಯಗಳಲ್ಲೂ ಇನ್ಸಿನರೇಟರ್ ಅನ್ನು ಆಳವಡಿಸಲಾಗಿದೆ. ಅಲ್ಲದೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಹದಿಹರೆಯದ ಹೆಣ್ಣುಮಕ್ಕಳಿಗೆ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಲಾಗಿದ್ದು,ಅದರಂತೆ ಸ್ವಚ್ಛತಾ ಕಾರ್ಮಿಕರು ಒಣ ತ್ಯಾಜ್ಯ ಸಂಗ್ರಹಣೆಗೆ ಹೋದಾಗ ಹೆಣ್ಣು ಮಕ್ಕಳು ಬಳಸಿದ ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರತ್ಯೇಕವಾಗಿ ಹಾಳೆಯಲ್ಲಿ ಸುತ್ತಿ ಸ್ವಚ್ಛತಾ ಕಾರ್ಮಿಕರಿಗೆ ನೀಡುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 70 ಸಿದ್ಧ ಉಡುಪುಗಳ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಲ್ಲಿ ಶೇ.80 ರಷ್ಟು ಜನ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ಇಂತಹ ಮಹಿಳೆಯರು ಋತುಚಕ್ರದ ವೇಳೆ ಅನುಭವಿಸುವ ಸಮಸ್ಯೆಗಳನ್ನು ತಪ್ಪಿಸಲು ಇಲ್ಲಿನ ಫ್ಯಾಕ್ಟರಿ ಸರ್ಕಲ್ ಬಸ್ ನಿಲ್ದಾಣದ ಬಳಿ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಇಲ್ಲಿ ಮಹಿಳೆಯರ ಶೌಚಾಲಯದಲ್ಲಿ ಹೊಸ ನ್ಯಾಪಕಿನ್ ಮಿಷನ್ ಅಳವಡಿಸಲಾಗಿದೆ. ಇದರಲ್ಲಿ 5 ರೂಪಾಯಿ ಕಾಯಿನ್ ಹಾಕಿ ಹೊಸ ನ್ಯಾಪಕಿನ್ ನ್ನು ಮಹಿಳೆಯರು ಪಡೆಯುತ್ತಾರೆ. ಅಲ್ಲದೇ ಇದೇ ಶೌಚಾಲಯದಲ್ಲಿ ಮಹಿಳೆಯರು ಉಪಯೋಗಿಸಿದ ನ್ಯಾಪಕಿನ್ ನ್ನು ಸುಡಲು ಇನ್ಸಿನರೇಟರ್ ಮಿಷನ್ ನ್ನು ಕೂಡ ಅಳವಡಿಸಲಾಗಿದೆ.ಇದರಿಂದ ಕಾರ್ಖಾನೆಗಳಲ್ಲಿ ಕರ್ತವ್ಯನಿರ್ವಹಿಸುವ ಮಹಿಳೆಯರಿಗೆ ಈ ಸಮುದಾಯ ಶೌಚಾಲಯ ವರದಾನವಾಗಿ ಪರಿಣಿಮಿಸಿದೆ.
ಬೆಳಿಗ್ಗೆ 8 ರಿಂದ ಸಂಜೆ 7ರವರೆಗೆ ಈ ಶೌಚಾಲಯ ತೆರೆದಿರುತ್ತದೆ.ಕೇವಲ 5 ರೂಪಾಯಿಗೆ ಹೊಸ ನ್ಯಾಪಕಿನ್ ಸಿಗುವುದರಿಂದ ಎಲ್ಲಾ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಹಾಯದಿಂದ ಕಾರ್ಯನಿರ್ವಹಿಸುವ ಈ ಯಂತ್ರದಲ್ಲಿ ಒಮ್ಮೆಗೆ 50 ಹೊಸ ನ್ಯಾಪಕಿನ್ ಗಳನ್ನು ಶೇಖರಿಸಬಹುದಾಗಿದೆ. ದಿನಕ್ಕೆ ಸುಮಾರು 30 ನ್ಯಾಪಕಿನ್ ಗಳನ್ನು ಮಹಿಳೆಯರು ಉಪಯೋಗಿಸುತ್ತಿದ್ದಾರೆ. ಒಟ್ಟಿನಲ್ಲಿ ಋತುಚಕ್ರದ ವೇಳೆ ಹೆಣ್ಣುಮಕ್ಕಳಿಗೆ ಅಗತ್ಯವಾಗಿ ಬೇಕಾದ ಎಲ್ಲ ವ್ಯವಸ್ಥೆಗಳು ಈ ಶೌಚಾಲಯದಲ್ಲಿ ಇರುವುದರಿಂದ ಹೆಣ್ಣುಮಕ್ಕಳು ಮುಟ್ಟಿನ ಅವಧಿಯಲ್ಲೂ ನೆಮ್ಮದಿಯಿಂದ ಕೆಲಸ ಮಾಡುವಂತಾಗಿದೆ.
3,695 total views, 2 views today