Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಹೆಣ್ಣು ನಾಲ್ಕು ಗೋಡೆಗಳಿಗಷ್ಟೇ ಸೀಮಿತ ಎಂಬ ಕಾಲದಿಂದ ದೇಶದ ಅತ್ಯುನ್ನತ ಸ್ಥಾನ ಪಡೆಯುವ ಮಟ್ಟಿಗೆ ಹೆಣ್ಣು ಬದಲಾಗಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷನಿಗೆ ಸರಿಸಮನಾಗಿ ನಿಂತು ತನ್ನ ಸಾಮರ್ಥ್ಯದ ಅರಿವು ಮೂಡಿಸುತ್ತಿದ್ದಾಳೆ. ಹೆಣ್ಣು ಮನಸ್ಸು ಮಾಡಿದರೆ ಆಕಾಶದೆತ್ತರದಷ್ಟು ಸಾಧಿಸಬಲ್ಲಳು ಎಂಬುದಕ್ಕೆ ನಮ್ಮ ನಿಮ್ಮ ನಡುವಿರುವ ನೂರಾರು ಸಾಧಕಿಯರು ಸಾಕ್ಷಿಯಾಗಿ ನಿಂತಿದ್ದಾರೆ. ದೇಶದ ಅತ್ಯುನ್ನತ ಸ್ಥಾನ ರಾಷ್ಟ್ರಪತಿ ಸ್ಥಾನದಿಂದ ಹಿಡಿದು ಆಟೋ ಚಲಾಯಿಸುವವರೆಗೂ ಮಹಿಳೆ ತನ್ನ ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೊತ್ತು ಎಲ್ಲವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೇವಲ ನೀರು ಮತ್ತು ನೈರ್ಮಲ್ಯ ವಿಷಯಗಳಿಗಷ್ಟೇ ಸೀಮಿತವಾಗಿರದೆ, ಗ್ರಾಮೀಣ ಪ್ರದೇಶಗಳ ಮಹಿಳೆಯರ ಸಬಲೀಕರಣಕ್ಕೂ ಒತ್ತು ನೀಡಲಾರಂಭಿಸಿದೆ.

ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಗ್ರಾಮೀಣ ಕರ್ನಾಟಕದಾದ್ಯಂತ ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ 1337 ಸ್ವಚ್ಛ ಸಂಕೀರ್ಣಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯನ್ನು ಮಾಡಲಾಗುತ್ತಿದೆ. ಬಹುತೇಕ ಘಟಕಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆಯನ್ನು ಸ್ಥಳೀಯ ಮಹಿಳಾ ಸಂಘಗಳಿಗೆ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಹಾಗೂ ಮಹಿಳಾ ಸಂಘಗಳ ನಡುವೆ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆಯನ್ನು ನೋಡುವುದಾದರೆ, ರಾಜ್ಯದ ಶಿವಮೊಗ್ಗ ಜಿಲ್ಲೆಯ 268 ಗ್ರಾಮ ಪಂಚಾಯಿತಿಗಳಲ್ಲಿ ನೂತನ ಅಥವಾ ಹಳೇ ಕಟ್ಟಡಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಈ ಘಟಕಗಳ ಮೂಲಕ ಎಲ್ಲಾ ಗ್ರಾಮಗಳಿಂದಲೂ ಘನ ತ್ಯಾಜ್ಯವನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇಲ್ಲಿನ ಮತ್ತೊಂದು ವಿಶೇಷ ಅಂದ್ರೆ ಈ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಯೂ ಮಹಿಳೆಯರೇ ಆಗಿದ್ದಾರೆ. ಮೊದಲ ಹಂತದಲ್ಲಿ ಭದ್ರಾವತಿ ಮತ್ತು ಶಿವಮೊಗ್ಗ ತಾಲ್ಲೂಕುಗಳ ಆಯ್ದ 30 ಮಹಿಳೆಯರಿಗೆ ಮೊದಲ ಬ್ಯಾಚ್‌ನಲ್ಲಿ ಸ್ವಚ್ಛ ವಾಹಿನಿಯ ಚಾಲನೆಗೆ ಕೌಶಲ್ಯ ಕರ್ನಾಟಕದ ವತಿಯಿಂದ ಚಾಲನಾ ತರಬೇತಿ ಹಾಗೂ ಡಿ.ಎಲ್ ಅನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

ಮುಂದುವರೆದು ಜಿಲ್ಲೆಯಾದ್ಯಂತ 300ಕ್ಕೂ ಹೆಚ್ಚು ಮಹಿಳಾ ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಈಗಾಗಲೇ ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ತರಬೇತಿಯನ್ನು ನೀಡಿ ಇವರುಗಳನ್ನೇ ಮಾಸ್ಟರ್ ಟ್ರೈನರ್ಸ್ ಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಚಾಲನಾ ತರಬೇತಿ ಹಾಗೂ ತ್ಯಾಜ್ಯ ವಿಂಗಡಣೆ ಮತ್ತು ಸಮರ್ಪಕ ವಿಲೇವಾರಿ ಬಗ್ಗೆ ತರಬೇತಿ ಪಡೆದುಕೊಂಡ ಮಹಿಳೆಯರು ನಿಗಧಿತ ಅವಧಿಗಳಂದು ಮನೆ ಮನೆಗಳಿಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸಿಕೊಂಡು ಸ್ವಚ್ಛ ಸಂಕೀರ್ಣಕ್ಕೆ ತರುತ್ತಾರೆ. ಇಲ್ಲಿ ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ಸೇರಿದಂತೆ ತ್ಯಾಜ್ಯವನ್ನು ವಿಂಗಡಣೆ ಮಾಡುತ್ತಾರೆ. ಬಳಿಕ ಹಸಿ ತ್ಯಾಜ್ಯವನ್ನು ಘಟಕಗಳಲ್ಲಿಯೇ ಗೊಬ್ಬರವನ್ನಾಗಿಸುವ ಪ್ರಕ್ರಿಯೆಗೆ ಹಾಗೂ ಒಣ ತ್ಯಾಜ್ಯವನ್ನು ವಿವಿಧ ವಿಭಾಗಗಳನ್ನಾಗಿ ವಿಂಗಡಿಸಿ ಮಾರಾಟ ಮಾಡುತ್ತಿದ್ದಾರೆ. ಹೀಗೆ ಮಾರಾಟ ಮಾಡಿ ಬಂದ ಹಣದಿಂದ ಸಿಬ್ಬಂದಿ ಸಂಬಳ ಸೇರಿದಂತೆ ಘಟಕದ ನಿರ್ವಹಣೆಗೂ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ. ವೈಶಾಲಿಯವರೂ ಮುತುವರ್ಜಿ ವಹಿಸಿದ್ದು, ತಾವೇ ಸ್ವಚ್ಛ ವಾಹಿನಿಯನ್ನು ಚಾಲನೆ ಮಾಡಿ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಸಚಿವರಾದ ಶ್ರೀ.ಕೆ.ಎಸ್. ಈಶ್ವರಪ್ಪ ರವರು “ತ್ಯಾಜ್ಯ ಸಂಗ್ರಹಣೆಯ ವಾಹನಗಳ ಚಾಲಕರಾಗಲು ಸ್ತ್ರೀಯರಿಗೆ ಅವಕಾಶ ಕಲ್ಪಿಸಲಾಗಿದೆ. ಮನೆಯನ್ನು ಸ್ವಚ್ಛವಾಗಿಡುವ ಮಹಿಳೆಯರು ಗ್ರಾಮವನ್ನೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ”ಎಂದಿದ್ದಾರೆ.

ಒಟ್ಟಿನಲ್ಲಿ ಇದುವರೆಗೂ ಪುರುಷರ ಪಾರುಪತ್ಯವೇ ಹೆಚ್ಚಾಗಿದ್ದ ವಾಹನ ಚಾಲನೆ ಮತ್ತು ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಕ್ಷೇತ್ರವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದು, ಇದು ಸ್ತ್ರೀ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.

 5,018 total views,  2 views today

WhatsApp chat