ಲಂಬಾಣಿ ತಾಂಡಾದಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೂ ಶುದ್ಧ ಕುಡಿಯುವ ನೀರಿನ ಭಾಗ್ಯ.

ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನ ಗೌಡಗೆರೆ ತಾಂಡಾದಲ್ಲಿ 70 ಲಂಬಾಣಿ ಪರಿಶಿಷ್ಟ ಜಾತಿಯ ಕುಟುಂಬಗಳಿದ್ದು ಹೆಚ್ಚಿನ ಜನರು ಕೂಲಿ ಕೆಲಸವನ್ನೇ ಅವಲಂಬಿಸಿದ್ದಾರೆ. ರಾಜ್ಯ ಹೆದ್ದಾರಿಯಿಂದ ಸುಮಾರು 12 ಕಿ. ಮೀ ಅಂತರದಲ್ಲಿರುವ ಸಣ್ಣದಾದ ಈ ತಾಂಡಾದ ಹತ್ತಿರದಲ್ಲಿ ಯಾವುದೇ ನೀರಿನ ಮೂಲ ಇಲ್ಲವಾದ್ದರಿಂದ ನೀರಿನ ಅಭಾವ ಹೆಚ್ಚಾಗಿತ್ತು. ಇಲ್ಲಿನ ಜನರು ನೀರಿಗಾಗಿ ತೊಂಬೆನಲ್ಲಿಯನ್ನೇ ಅವಲಂಬಿಸಿದ್ದರು. ಅಲ್ಲದೆ, ನೀರಿನ ಸಮಸ್ಯೆಯಿಂದಾಗಿ ಸ್ವಚ್ಛತೆಯೂ ಕಣ್ಮರೆಯಾಗಿತ್ತು.
ಗೌಡಗೆರೆ ತಾಂಡಾದಲ್ಲಿ ಅಂಗನವಾಡಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಸಮುದಾಯಕ್ಕೆ 2 ತೊಂಬೆ ನಲ್ಲಿಯಿಂದ ಕುಡಿಯುವ ನೀರಿನ ಸೌಲಭ್ಯವನ್ನು ಮಾಡಿಕೊಡಲಾಗಿದ್ದು, ಒಂದು ತೊಂಬೆ ನಲ್ಲಿ ಅಂಗನವಾಡಿಗೆ ಹತ್ತಿರವಿದ್ದು, ಮತ್ತೊಂದು ಶಾಲೆಯ ಬಳಿ ಇದೆ.
ತಾಂಡಾದಲ್ಲಿ ಒಟ್ಟು 73 ಮಕ್ಕಳು ಅಂಗನವಾಡಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇವರಲ್ಲಿ 3 ರಿಂದ 6 ವರ್ಷದೊಳಗಿನ 31 ಮಕ್ಕಳು ಅಂಗನವಾಡಿಗೆ ಬರುತ್ತಾರೆ ಹಾಗೂ 6 ತಿಂಗಳಿಂದ 3 ವರ್ಷದ ಒಳಗಿನ 42 ಮಕ್ಕಳು ಮನೆಯ ಮಕ್ಕಳಾಗಿರುತ್ತಾರೆ. ಇದೀಗ ‘100 ದಿನಗಳ ಅಭಿಯಾನ’ ಕಾರ್ಯಕ್ರಮದಡಿಯಲ್ಲಿ ಅಂಗನವಾಡಿಗೆ ನಳ ಸಂಪರ್ಕ ಕಲ್ಪಿಸಿರುವುದರಿಂದ ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರಕಿದಂತಾಗಿದೆ. “ಮೊದಲೆಲ್ಲಾ, ಅಡುಗೆ ಮಾಡಲು ನೀರು ತರುವುದಕ್ಕಾಗಿ ದೂರ ಹೋಗಬೇಕಾದ ಪರಿಸ್ಥಿತಿ ಇತ್ತು. ತುಂಬಾ ಸಮಯ ಬೇಕಾಗುತ್ತಿತ್ತು. ಈಗ ಅಂಗನವಾಡಿಗೆ ನೀರಿನ ಸೌಲಭ್ಯ ಕಲ್ಪಿಸಿರುವುದರಿಂದ ಸರಿಯಾದ ಸಮಯಕ್ಕೆ ಮಕ್ಕಳಿಗೆ ಊಟ ತಯಾರಿಸಲು ಸಾಧ್ಯವಾಗುತ್ತಿದೆ. ಜೊತೆಗೆ ಅಂಗನವಾಡಿಗೆ ಬರುವ ಮಕ್ಕಳು ಕುಡಿಯುವ ನೀರಿಗಾಗಿ ಹೊರಗೆ ಹೋಗುವುದರಿಂದ ಮುಕ್ತಿ ದೊರೆತಿದೆ” ಎಂದು ಅಂಗನವಾಡಿ ಕಾರ್ಯಕರ್ತೆಯಾದ ನೀಲಾ ಬಾಯಿಯವರು ಅಭಿಪ್ರಾಯಪಟ್ಟಿದ್ದಾರೆ.


ಈ ಹಿಂದೆ ಅಂಗನವಾಡಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲದಿದ್ದುದರಿಂದ ಮಕ್ಕಳು ನೀರಿಗಾಗಿ ಮನೆಗೆ ತೆರಳಬೇಕಾಗಿತ್ತು ಅಥವಾ ತೊಂಬೆನಲ್ಲಿಯಲ್ಲಿ ನೀರು ಬರುತ್ತಿದ್ದಾಗ ಹೋಗಿ ಕುಡಿಯಬೇಕಾಗಿತ್ತು. ಮನೆಯ ಸದಸ್ಯರೆಲ್ಲ ಕೂಲಿ ಕೆಲಸಕ್ಕೆ ಹೊರಗೆ ಹೋಗಿರುವ ಸಂದರ್ಭದಲ್ಲಿ ಮಕ್ಕಳಿಗೆ ಅಲ್ಲಿಯೂ ನೀರು ಸಿಗುತ್ತಿರಲಿಲ್ಲ. ಚಿಕ್ಕ ಮಕ್ಕಳಾಗಿದ್ದರಿಂದ ಮನೆಗೆ ಬಂದ ಮಕ್ಕಳು ಆಟವಾಡಲು ಹೋಗುತ್ತಿದ್ದರು. ಹೀಗಾಗಿ ಅಂಗನವಾಡಿಗೆ ತಡವಾಗಿ ಹೋಗುತ್ತಿದ್ದರು. ಜಲ ಜೀವನ್ ಮಿಷನ್ ಯೋಜನೆಯಿಂದ ಅಂಗನವಾಡಿಗೆ ಕುಡಿಯುವ ನೀರಿನ ಸಂಪರ್ಕ ನೀಡಿರುವುದು ಅಲ್ಲಿನ ಮಕ್ಕಳ ಪೋಷಕರು ನೆಮ್ಮದಿಯಿಂದ ಇರುವಂತಾಗಿದೆ.
100 ದಿನದ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ನಳದ ಸಂಪರ್ಕ ಕಲ್ಪಿಸಲಾಗಿದ್ದು, ಇಲ್ಲಿ 32 ಮಕ್ಕಳು ಓದುತ್ತಿದ್ದಾರೆ. ಕುಡಿಯಲು ಮತ್ತು ಕೈತೊಳೆಯಲು ನೀರು ದೊರೆತಿರುವುದು ಮಕ್ಕಳಿಗೆ ಸಂತಸ ತಂದಿದೆ. ಇದರಿಂದ ಅವರು ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಶೌಚಾಲಯ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಶೌಚಾಲಯಕ್ಕೂ ನಳ ಸಂಪರ್ಕ ನೀಡಿರುವುದರಿಂದ ಮಕ್ಕಳು ಬಯಲಿಗೆ ಹೋಗುವುದು ತಪ್ಪಿದೆ. ಇದಷ್ಟೇ ಅಲ್ಲದೆ, ಶಾಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಮರುಪೂರಣ ವ್ಯವಸ್ಥೆ ಜೊತೆಗೆ, ಮಳೆನೀರಿನ ಕೊಯ್ಲು ಪದ್ಧತಿಯನ್ನೂ ಅಳವಡಿಸಿಕೊಳ್ಳಲಾಗಿದೆ. ಗ್ರಾಮದ ಪ್ರತಿ ಮನೆಯಲ್ಲೂ ಶೌಚಾಲಯ ಹಾಗೂ ಇಂಗು ಗುಂಡಿ ಸೌಲಭ್ಯವಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲ ಜೀವನ್ ಮಿಷನ್ ಯೋಜನೆಯ 100 ದಿನಗಳ ಅಭಿಯಾನ ಕಾರ್ಯಕ್ರಮದಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಗ್ರಾಮಸ್ಥರು ಮತ್ತು ಪೋಷಕರು ಹರ್ಷವ್ಯಕ್ತಪಡಿಸುತ್ತಿದ್ದಾರೆ.
7,119 total views, 4 views today