Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಶಕ್ತಿ ಮಿಷನ್ ಭಾರತ ಸರ್ಕಾರವು “ಜಲ ಜೀವನ್ ಮಿಷನ್” ಯೋಜನೆಯಡಿ ರಾಜ್ಯದ ಅಂಗನವಾಡಿ ಕೇಂದ್ರ, ಶಾಲೆ, ಆಶ್ರಮ ಶಾಲೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿಶೇಷ ನೂರು ದಿನಗಳ ಆಂದೋಲನವನ್ನು ಆಯೋಜಿಸಲಾಗಿತ್ತು. 2ನೇ ಅಕ್ಟೋಬರ್ 2020 ರಂದು ಈ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಮಾಡಿಕೊಂಡು ರಾಜ್ಯದ ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರ, ಶಾಲೆ, ಗ್ರಾಮ ಪಂಚಾಯಿತಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನಗಳು, ಸಮುದಾಯ ಶೌಚಾಲಯಗಳಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಒದಗಿಸುವ ಜೊತೆಗೆ ಶಾಲಾ ಮಕ್ಕಳಲ್ಲಿ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸುವ ಧ್ಯೇಯೋದ್ದೇಶವನ್ನು ಈ ಆಂದೋಲನ ಒಳಗೊಂಡಿದೆ.

ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯದ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಆಶ್ರಮ ಶಾಲೆಗಳಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶೌಚಾಲಯದ ವ್ಯವಸ್ಥೆ ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಮೂಲಕ ಶುದ್ಧ ನೀರನ್ನು ಒದಗಿಸಲು ಮುಂದಾಗಿದೆ.

ಪ್ರಸ್ತುತ ದಿನಾಂಕ: 20-01-2021 ಕ್ಕೆ ರಾಜ್ಯದಲ್ಲಿ 42,015 ಶಾಲೆಗಳು, 53,901 ಅಂಗನವಾಡಿ ಕೇಂದ್ರಗಳು ಹಾಗೂ 109 ಆಶ್ರಮ ಶಾಲೆಗಳಿವೆ. ಈ ಪೈಕಿ ನಳ ಸಂಪರ್ಕ ಹೊಂದಿರದ 17,714 ಶಾಲೆಗಳು, 31,208 ಅಂಗನವಾಡಿ ಕೇಂದ್ರಗಳು ಹಾಗೂ 10 ವಸತಿ ಶಾಲೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಈಗಾಗಲೇ 5,096 ಶಾಲೆಗಳಿಗೆ ಹಾಗೂ 10,295 ಅಂಗನವಾಡಿ ಕೇಂದ್ರ ಸೇರಿ ಒಟ್ಟು 15,395 ಕಟ್ಟಡಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ ಶುದ್ಧ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಒಟ್ಟು 96,025 ಕಟ್ಟಡಗಳಿಗೆ FHTC ಮೂಲಕ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಲಾಗಿದ್ದು ಈ ಪೈಕಿ ಈಗಾಗಲೇ 15,395 ಕಟ್ಟಡಗಳಿಗೆ ಶುದ್ಧ ನೀರು ಒದಗಿಸಲಾಗುತ್ತಿದೆ. ಇನ್ನುಳಿದ 48,449 ಕಟ್ಟಡಗಳಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಫೆಬ್ರವರಿ 2021ರ ಅಂತ್ಯದ ವೇಳೆಗೆ ಗುರಿ ಸಾಧಿಸುವ ಅಭಿಲಾಷೆಯನ್ನು ಹೊಂದಲಾಗಿದೆ.

ತಮ್ಮ ಶಾಲೆಗೆ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ನೀರನ್ನು ಪಡೆದ ಶಿಕ್ಷಕರೊಬ್ಬರು ತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಂಡಿದ್ದಾರೆ. “ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದೇವೆ. ಇದರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬರು ಪುರುಷರಿದ್ದಾರೆ. ಹಾಗೂ 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಹೆಗ್ಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಮ್ಮದು. ಈ ಹಿಂದೆ ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ನಾ ಮುಂದು ತಾ ಮುಂದು ಎಂದು ಬರುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನೂ ಶಾಲೆ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಲು ಮುಂದಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ನಮ್ಮ ಶಾಲೆಯಲ್ಲಿ ಶೌಚಾಲಯವಿದೆ ಆದರೆ ನೀರಿಲ್ಲ. ಕುಡಿಯುವ ನೀರಿನ ಸಂಪರ್ಕವೂ ಸಮರ್ಪಕವಾಗಿಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಲು ಹಿಂಜರಿಯುತ್ತಿದ್ದರು. ಆದರೆ ಜಲ ಜೀವನ್ ಮಿಷನ್ ಯೋಜನೆಯಿಂದ ನಮ್ಮ ಶಾಲೆಗೆ ನಲ್ಲಿ ಸಂಪರ್ಕದ ಮೂಲಕ ನೀರನ್ನು ಒದಗಿಸುತ್ತಿರುವುದರಿಂದ ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ನಮ್ಮ ಶಾಲೆಗೆ ಬರುವ ನಿರೀಕ್ಷೆ ಇದೆ" ಎನ್ನುತ್ತಿದ್ದಾರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೇಶವ್.

 6,653 total views,  6 views today

WhatsApp chat