ಟೈಗರ್ ಟಾಯ್ಲೆಟ್ / ವರ್ಮಿ ಫಿಲ್ಟರ್ ಕಾಂಪೋಸ್ಟಿಂಗ್ ಶೌಚಾಲಯ, ಉಡುಪಿ ಜಿಲ್ಲೆಯಲ್ಲಿ ಒಂದು ವಿನೂತನ ಪ್ರಯೋಗ
Vermifilter Composting / Tiger Toilet
ಸ್ವಚ್ಛ ಪರಿಸರ ನಿರ್ಮಾಣದಲ್ಲಿ ಪ್ರಮುಖ ಅಂಶವಾದ ಮಾನವ ಮಲದ ಸುರಕ್ಷಿತ ವಿಲೇವಾರಿಗೆ ಅವಳಿ ಗುಂಡಿ ಶೌಚಾಲಯ, ಸೆಫ್ಟಿಕ್ ಟ್ಯಾಂಕ್, ಇಕೋ ಸಾನ್, ಹೀಗೆ ವಿವಿಧ ಮಾದರಿಯ ಶೌಚಾಲಯ ತಂತ್ರಜ್ಞಾನಗಳು ಬಳಕೆಯಲ್ಲಿದೆ. ಇದೀಗ ಟೈಗರ್ ಟಾಯ್ಲೆಟ್/ ವರ್ಮಿ ಫಿಲ್ಟರ್ ಕಾಂಪೋಸ್ಟಿಂಗ್ ಶೌಚಾಲಯ ಎಂಬ ವಿನೂತನವಾದ ಶೌಚಾಲಯ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ, ಉಡುಪಿ ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಪೈಲಟ್ ಯೋಜನೆಯಾಗಿ ಕಡ್ತಲ ಹಾಗೂ ಅಂಬಲಪಾಡಿ, ಹಂಗಳೂರು, ಹೊಸಾಡು, ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯ್ದ ಕುಟುಂಬಗಳಿಗೆ ಈ ಮಾದರಿಯ ಶೌಚಾಲಯ ನಿರ್ಮಿಸಲಾಗಿದೆ.
ಏನಿದು ಟೈಗರ್ ಟಾಯ್ಲೆಟ್ / ವರ್ಮಿ ಫಿಲ್ಟರ್ ಕಾಂಪೋಸ್ಟಿಂಗ್ ಶೌಚಾಲಯ ?
ಶೌಚಾಲಯ ನಿರ್ಮಿಸಿಕೊಂಡಿರುವ ಹೆಚ್ಚಿನ ಕುಟುಂಬಗಳು ಒಂದು ಗುಂಡಿಯ ಶೌಚಾಲಯ ನಿರ್ಮಿಸಿಕೊಂಡಿದ್ದು, ಇಂತಹ ಶೌಚಾಲಯದ ಗುಂಡಿಗಳು ಆಗಾಗ್ಗೆ ಭರ್ತಿಯಾಗುವ ಸಂಭವವಿರುತ್ತದೆ. ಹೀಗೆ ಭರ್ತಿಯಾಗುವ ಶೌಚಾಲಯಗಳ ಮಲದ ಹೂಳನ್ನು ತೆಗೆಯುವುದು, ಸಾಗಾಣಿಕೆ ಮಾಡುವುದು ಹಾಗೂ ಸಂಸ್ಕರಣೆ ಮಾಡುವುದು ಅತ್ಯಂತ ಕಷ್ಟದಾಯಕವಾದ ಕೆಲಸ ಹಾಗೂ ದುಬಾರಿ ಕೂಡಾ, ವರ್ಮಿಫಿಲ್ಟರ್ ಕಾಂಪೋಸ್ಟಿಂಗ್ ಶೌಚಾಲಯ ಇದಕ್ಕೆ ಪರಿಹಾರವಾಗಬಲ್ಲದು. ಈ ತಂತ್ರಜ್ಞಾನವನ್ನು ಮಹಾರಾಷ್ಟದ ಪುಣೆ ಮೂಲದ ಪ್ರೈಮ್ ಮೂವ್ (Primemove) ಎಂಬ ಸಂಸ್ಥೆ ಅಭಿವೃದ್ದಿ ಪಡಿಸಿರುತ್ತದೆ.
ಈ ಮಾದರಿಯಲ್ಲಿ ಈಗಾಗಲೇ ನಿರ್ಮಾಣ ಮಾಡಿ ಬಳಸುತ್ತಿರುವ ಶೌಚಾಲಯದ ಗುಂಡಿಯನ್ನು ಪರಿವರ್ತನೆ ಮಾಡಿ ಫಿಲ್ಟರ್ ಬೆಡ್ ರಚನೆ ಮಾಡಿ, ಅದರಲ್ಲಿ ಎರೆಹುಳ ಮಾದರಿಯ ಹುಳು (ಟೈಗರ್ ವರ್ಮ್)ಗಳನ್ನು ಬಿಡಲಾಗುತ್ತದೆ.
ಈ ಹುಳುಗಳು ಶೌಚದ ಗುಂಡಿಯ ಒಳಗೆ ಬರುವ ಮಾನವನ ಮಲವನ್ನು ತಿಂದು ಕರಗಿಸುತ್ತವೆ. ಹೀಗೆ ಕರಗಿದ ಮಾನವನ ಮಲವನ್ನು ಸಾವಯವ ಗೊಬ್ಬರವಾಗಿ ಬಳಕೆ ಮಾಡಲು ಸಾದ್ಯವಿದೆ.
ವರ್ಮಿಫಿಲ್ಟರ್ ಕಾಂಪೋಸ್ಟಿಂಗ್ ಶೌಚಾಲಯದ ಅನುಷ್ಟಾನ:
ಈಗಾಗಲೇ ಬಳಕೆಯಲ್ಲಿರುವ ಶೌಚಾಲಯದ ಗುಂಡಿಯನ್ನು ಪರಿವರ್ತನೆ ಮಾಡಿ ಅಥವಾ ೩x೪ ಅಡಿ ಅಳತೆಯ ಹೊಸ ಗುಂಡಿಯನ್ನು ನಿರ್ಮಾಣ ಮಾಡಿ, ಅದಕ್ಕೆ ೨.೫ ಅಡಿಯಷ್ಟು ಕ್ರಮವಾಗಿ ೧೦೦ mm, ೪೦ mm, ೨೦ mm ಹಾಗೂ ೬ mm ಜಲ್ಲಿ ಕಲ್ಲುಗಳನ್ನು ತುಂಬಿ ಫಿಲ್ಟರ್ ಬೆಡ್ ರಚನೆ ಮಾಡಲಾಗುತ್ತದೆ. ಇದರ ಮೇಲೆ ಸಾವಯವ ಗೊಬ್ಬರವನ್ನು ಹರಡಿ ಟೈಗರ್ ವರ್ಮ್ಗಳನ್ನು ಬಿಡಬೇಕು. ಇವು ಶೌಚ ಗುಂಡಿಯ ಒಳಬರುವ ಮಲವನ್ನು ತಿಂದು ಗೊಬ್ಬರವನ್ನಾಗಿ ಪರಿವರ್ತಿಸುತ್ತವೆ. ಅಲ್ಲದೇ ಶೌಚಾಲಯದಲ್ಲಿ ಬಳಕೆಯಾದ ತ್ಯಾಜ್ಯ ನೀರು ಪ್ರತ್ಯೇಕಗೊಂಡು ಫಿಲ್ಟರ್ ಬೆಡ್ ಮೂಲಕ ಹರಿದು ಭೂಮಿಯಲ್ಲಿ ಇಂಗುತ್ತದೆ. ಅಂತಿಮವಾಗಿ ಗುಂಡಿಯಲ್ಲಿ ೧.೫ ಅಡಿಯಷ್ಟು ಜಾಗ ಲಭ್ಯವಾಗುತ್ತದೆ.ಈ ಗುಂಡಿ ಸುಮಾರು ೬ ರಿಂದ ೭ ವರ್ಷಗಳವರೆಗೆ ಬಳಸಬಹುದು, ನಂತರ ಗೊಬ್ಬರವನ್ನು ಹೊರತೆಗೆದ ನಂತರ ಪುನಃ ಬಳಕೆ ಮಾಡಬಹುದಾಗಿದೆ.
ಈ ಶೌಚಾಲಯದ ಬಳಕೆ ಮತ್ತು ನಿರ್ವಹಣೆ
- ೫ ರಿಂದ ೭ ಮಂದಿ ಸದಸ್ಯರು ಇರುವ ಕುಟುಂಬವು ಪ್ರತಿ ಶೌಚಾಲಯ ಬಳಕೆಯ ನಂತರ ೩ ರಿಂದ ೫ ಲೀಟರ್ ನಷ್ಟು ನೀರನ್ನು ಮಾತ್ರ ಪ್ಲಶ್ ಮಾಡಲು ಬಳಸಬಹುದು.
- ವರ್ಮಿಫಿಲ್ಟರ್ ಶೌಚಾಲಯವನ್ನು ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು. ಶೌಚಾಲಯವನ್ನು ಸ್ವಚ್ಛಗೊಳಿಸಲು ಬೂದಿ ಅಥವಾ ವೈಟ್ ಹಾರ್ಪಿಕ್ ಅನ್ನು ಬಳಕೆ ಮಾಡಬಹುದು.
- ವರ್ಮಿಫಿಲ್ಟರ್ ಶೌಚಾಲಯವು ಪ್ರತಿ ದಿನ ಬಳಕೆಯಲ್ಲಿರಬೇಕು.
- ಶೌಚಾಲಯದ ಒಳಗೆ ಧೂಮಪಾನ ಅಥವಾ ತಂಬಾಕು ಅಗಿಯುವುದನ್ನು ಮಾಡಬಾರದು.
- ಪ್ಲಾಸ್ಟಿಕ್ ಚೂರು, ಸ್ಯಾನಿಟರಿ ಪ್ಯಾಡ್ ಅಥವಾ ಕೊಳೆಯದ ಯಾವುದೇ ವಸ್ತುಗಳನ್ನು ಶೌಚಾಲಯದಲ್ಲಿ ಹಾಕಬಾರದು.
- ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಶೌಚಾಲಯಕ್ಕೆ ಬಳಸಬಾರದು.
- ಶೌಚಾಲಯವನ್ನು ಸ್ನಾನ ಮಾಡುವ ಉದ್ದೇಶಕ್ಕೆ ಬಳಸಬಾರದು.
- ಟೈಗರ್ ಶೌಚಾಲಯದ ಗುಂಡಿಯನ್ನು ಅದರ ಮಾದರಿ ಬಗ್ಗೆ ಪರಿಣತಿ ಉಳ್ಳ ತಂಡಕ್ಕೆ ತಿಳಿಸದೇ ತೆರೆಯಬಾರದು.
ಪ್ರಯೋಜನಗಳು: ಈಗಾಗಲೇ ಒಂದು ಗುಂಡಿಯ ಶೌಚಾಲಯವನ್ನು ನಿರ್ಮಾಣ ಮಾಡಿಕೊಂಡು ಬಳಸುತ್ತಿರುವವರು ಆಗಾಗ್ಗೆ ಭರ್ತಿಯಾಗುವ ಗುಂಡಿಯನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಲು ತಮ್ಮ ಮನೆಯ ಶೌಚಾಲಯದ ಗುಂಡಿಯನ್ನು ಈ ಮಾದರಿಗೆ ಪರಿವರ್ತಿಸಿಕೊಳ್ಳಬಹುದು ಹಾಗೂ ಈ ಮಾದರಿಯಲ್ಲಿ ನೀರಿನ ಮೂಲಗಳು ಕಲುಷಿತವಾಗುವುದನ್ನು ತಡೆಯಬಹುದಾಗಿದೆ. ಈ ಮಾದರಿಯಲ್ಲಿ ಮಾನವನ ಮಲವು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗಲಿದ್ದು ಕೃಷಿಯಲ್ಲಿ ಬಳಕೆ ಮಾಡಬಹುದು.
7,656 total views