ನಾವೆಲ್ಲಾ ಮದುವೆಯಲ್ಲಿ ಹುಡುಗನಿಗೆ ಕಾರು, ಬೈಕು, ಚಿನ್ನ, ಆಸ್ತಿ, ಮನೆ ಹೀಗೆ ಬೇರೆ ಬೇರೆ ರೀತಿಯ ಉಡುಗೊರೆಗಳನ್ನು ಕೊಡುವುದನ್ನು ನೋಡಿದ್ದೇವೆ. ಆದರೆ ಮದುವೆಯಾಗಿ ಮನೆಗೆ ಬಂದ ಅಳಿಯನಿಗೆ ಶೌಚಾಲಯವೊಂದನ್ನು ಉಡುಗೊರೆಯಾಗಿ ಕೊಡುವುದನ್ನು ಎಲ್ಲಾದರೂ ನೋಡಿದ್ದೀರಾ? ಕೇಳೋದಕ್ಕೆ ವಿಚಿತ್ರ ಅನ್ನಿಸಿದರೂ ಇಂತಹದ್ದೊಂದು ಘಟನೆ ನಡೆದಿರುವುದು ಮಾತ್ರ ಸತ್ಯ.
ಅಂದ ಹಾಗೇ, ಈ ರೀತಿ ಅತ್ತೆ ಅಳಿಯನಿಗೆ ಉಡುಗೊರೆ ನೀಡಿರುವುದು ಭರಟಗಿ ಗ್ರಾಮ ಪಂಚಾಯಿತಿಯು ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಭರಟಗಿ ಗ್ರಾಮ ಪಂಚಾಯತ್ ನ ಹಂಚನಾಳ ಗ್ರಾಮದಲ್ಲಿ. ಈ ಗ್ರಾಮದ ಒಟ್ಟು ಜನಸಂಖ್ಯೆ 6,496. ಈ ಗ್ರಾಮದ ಬಹುತೇಕ ಮಂದಿ ಕೂಲಿ ಹಾಗೂ ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇಂದಿಗೂ ಇಲ್ಲಿನ ಬಹುತೇಕ ಮಂದಿ ಬಯಲು ಶೌಚಾಲಯವನ್ನೇ ಅವಲಂಬಿಸಿರುವುದು ಗ್ರಾಮಕ್ಕಂಟಿದ ಕಳಂಕ ಅನ್ನೋದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಬಹುತೇಕರು ಬಯಲು ಶೌಚಕ್ಕೆ ಹೋಗುತ್ತಿರುವುದರಿಂದ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವುದು ಬಹುದೊಡ್ಡ ಸಮಸ್ಯೆಯಾಗಿದೆ. ಇದರಿಂದ ಗ್ರಾಮದಲ್ಲಿ ಆಗಾಗ್ಗೆ ಜನ ಆರೋಗ್ಯ ಹಾಗೂ ಸುರಕ್ಷತೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
ಜನರ ಈ ಸಮಸ್ಯೆಗಳನ್ನು ಮನಗಂಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಸಭೆ ಸೇರಿ ಸ್ವಚ್ಛ ಭಾರತ್ ಮಿಷನ್ ಹಾಗೂ MGNREGS ಯೋಜನೆಯ ಅಡಿಯಲ್ಲಿ ಪ್ರಾಯೋಗಿಕವಾಗಿ ಹಂಚನಾಳ LT(ಲಂಬಾಣಿ ತಾಂಡಾ)_3ರ100 ಮನೆಗಳಿಗೆ ಶೌಚಾಲಯ ಕಲ್ಪಿಸಲು ತೀರ್ಮಾನಿಸಿತು.ಅದೇ ರೀತಿಯಾಗಿ ಆ ಹಳ್ಳಿಯಲ್ಲಿ ಮೊದಲು ಡ್ರೈನೇಜ್ ವ್ಯವಸ್ಥೆಯನ್ನು ಮಾಡಲಾಗಿತು. ನಂತರ ಪ್ರತಿ ಮನೆಗೂ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬಳಿಕ ಹಂಚನಾಳ LT (ಲಂಬಾಣಿ ತಾಂಡಾ)-3ರಲ್ಲಿ IEC ಮೂಲಕ ಶೌಚಾಲಯದ ಬಳಕೆ ಹಾಗೂ ವ್ಯವಸ್ಥಿತ ನಿರ್ವಹಣೆ ಕುರಿತು ತರಬೇತಿಗಳ ಮೂಲಕ ಅರಿವನ್ನು ಮೂಡಿಸಲಾಯಿತು. ಪರಿಣಾಮ ಹಂಚನಾಳ LT_3ರ ಪ್ರತಿಯೊಬ್ಬರು ಶೌಚಾಲಯವನ್ನು ಬಳಸುತ್ತಿದ್ದಾರೆ.
ಭರಟಗಿ ಗ್ರಾಮ ಪಂಚಾಯಿತಿಯ ಹಂಚನಾಳ LT_3ರನಲ್ಲಿ ಕೈಗೊಂಡ ವಿನೂತನ ಯೋಜನೆಯಿಂದ 100 ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿಯೊಬ್ಬರು ಶೌಚಾಲಯದ ಮಹತ್ವವನ್ನು ಅರಿತುಕೊಂಡು ಸುವ್ಯವಸ್ಥಿತವಾಗಿ ಶೌಚಾಲಯವನ್ನು ಬಳಸುತ್ತಿದ್ದಾರೆ.ಅದರಲ್ಲೂ ಇಲ್ಲಿನ ಹಂಚನಾಳ LT_3ರ ನಿವಾಸಿಯಾಗಿರುವ ಶ್ರೀಮತಿ ನೀಲು ಆನಂದ ರಾಠೋಡ್ ಅವರು ಇಡೀ ಕರ್ನಾಟಕಕ್ಕೆ ಮಾದರಿಯಾಗಿದ್ದಾರೆ. ಅಂದ ಹಾಗೇ ನೀಲು ಆನಂದ ರಾಠೋಡ್ ಅವರದ್ದು 7 ಸದಸ್ಯರಿರುವ ಕುಟುಂಬ. ಐದು ಜನ ಮಕ್ಕಳಲ್ಲಿ ಮೂವರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ನೀಲು ಆನಂದ ರಾಠೋಡ್ ಅವರುಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಮೂವರು ಹೆಣ್ಣುಮಕ್ಕಳಲ್ಲಿ ಮೊದಲನೇ ಮಗಳನ್ನು 2018ರಲ್ಲಿ ವಿವಾಹ ಮಾಡಿಕೊಡಲಾಗಿತ್ತು.ವಿವಾಹ ಬಳಿಕ ಅಳಿಯ ಮಾತ್ರ ಅತ್ತೆ ಮನೆಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದ. ಆರಂಭದಲ್ಲಿ ಒಂದೆರಡು ಬಾರಿ ಬಂದು ಉಳಿದು ಹೋಗಿದ್ದ ಅಳಿಯ ಯಾಕೋ ಆಮೇಲೆ ಬಂದರೂ ಅತ್ತೆ ಮನೆಯಲ್ಲಿ ಉಳಿದುಕೊಳ್ಳುತ್ತಿರಲಿಲ್ಲ. ಅಳಿಯ ಯಾಕೆ ಈ ರೀತಿ ಮಾಡುತ್ತಿದ್ದಾನೆ ಅಂತಾ ನೋಡಿದಾಗ ಅವರಿಗೆ ನಿಜ ವಿಚಾರ ತಿಳಿಯಿತು. ಅತ್ತೆ ಮನೆಯಲ್ಲಿ ಶೌಚಾಲಯ ಇಲ್ಲ ಶೌಚಕ್ಕೆ ಬಯಲಿಗೆ ಹೋಗುವುದಕ್ಕೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕೆ ಆತ ಅತ್ತೆ ಮನೆಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದ ಎಂದು.
ನಿಜ ವಿಚಾರ ತಿಳಿದಾಗ ನೀಲು ಅವರಿಗೆ ತುಂಬಾ ಬೇಸರವಾಗುತ್ತದೆ. ತಮ್ಮ ತಪ್ಪಿನ ಅರಿವಾಗುತ್ತದೆ. ಕೂಡಲೇ ನಿರ್ಧಾರವೊಂದಕ್ಕೆ ಬರುತ್ತಾರೆ. ಅದರಂತೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಶೌಚಾಲಯ ನಿರ್ಮಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಶೌಚಾಲಯ ನಿರ್ಮಿಸಿಕೊಳ್ಳುತ್ತಾರೆ. ಅಂದಿನಿಂದ ಅಳಿಯ ಖುಷಿ ಖುಷಿಯಿಂದ ಮನೆಗೆ ಬರುವುದಕ್ಕೆ ಆರಂಭಿಸುತ್ತಾರೆ. ಅಲ್ಲದೇ ಇಡೀ ಮನೆಯವರು ಯಾವುದೇ ರೀತಿಯಲ್ಲಿ ಮುಜುಗರ ಪಟ್ಟುಕೊಳ್ಳಲು ಅವಶ್ಯಕತೆ ಇಲ್ಲ ಎಂದು ಆರಾಮವಾಗಿದ್ದಾರೆ. ಇನ್ನು ನೀಲು ಅವರಿಂದ ಪ್ರೇರಣೆ ಪಡೆದ ಒಂದಷ್ಟು ಮಂದಿ ಇದೇ ರೀತಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.
4,927 total views, 2 views today