Englishs

ನೀರು ಪ್ರತಿಯೊಂದು ಜೀವಕ್ಕೂ ಆಧಾರ. ಯಾವುದೇ ನಾಡಿನ ಸುಸ್ಥಿರತೆಯು ಆ ನೆಲದ ನೀರಿನ ಮೂಲಗಳ ಸಮರ್ಪಕ ನಿರ್ವಹಣೆಯ ಮೇಲೆ ಅವಲಂಬಿತವಾಗಿರುತ್ತದೆ. ಬೆಳೆಯುತ್ತಿರುವ ಜನಸಂಖ್ಯೆಯ ಜೊತೆಜೊತೆಗೆ ನೀರಿನ ಅವಶ್ಯಕತೆ ಹಾಗೂ ಪೂರೈಕೆಗಳ ಮಟ್ಟದಲ್ಲಿ ಹಲವಷ್ಟು ಬದಲಾವಣೆಗಳಾಗುತ್ತಿರುವುದನ್ನು ನಾವು ಕಾಣಬಹುದು. ಹವಾಮಾನ ಬದಲಾವಣೆ ಹಾಗೂ ಮಳೆಯ ಮಾದರಿಗಳಲ್ಲಿನ ಬದಲಾವಣೆಗಳಿಂದ ಕರ್ನಾಟಕ ಇಂದು ತೀವ್ರ ಬರವನ್ನೆದುರಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ರಾಜ್ಯದ ಇಂದಿನ ನೀರಿನ ಕೊರತೆಗೆ ಮೇಲ್ಮೈ ನೀರು ಹಾಗೂ ಅಂತರ್ಜಲದ ಬತ್ತುವಿಕೆಯೂ ಕಾರಣವಾಗಿದೆ.

ರಾಜಸ್ಥಾನದ ನಂತರ ಭಾರತದ ಎರಡನೆಯ ಅತಿ ಶುಷ್ಕ ರಾಜ್ಯವೆಂದರೆ ಕರ್ನಾಟಕ. ರಾಜ್ಯದ ಮೇಲ್ಮೈ ನೀರು ಹಾಗೂ ಅಂತರ್ಜಲಸದ ಸಂಗ್ರಹಣೆಗೆ ಸಕಾಲಿಕ ಮಳೆ ಪ್ರಮುಖ ಕಾರಣವಾಗುತ್ತದೆ. ಕರ್ನಾಟಕದಲ್ಲಿ ಅಕಾಲಿಕ ಮಳೆಯು ಅನಿರ್ದಿಷ್ಟ ಸ್ಥಳಗಳಲ್ಲಿ ಸುರಿಯುತ್ತದೆ. ರಾಜ್ಯದ ಸುಮಾರು 2/3ರಷ್ಟು ಭೌಗೋಳಿಕ ಪ್ರದೇಶದಲ್ಲಿ 750mm ಗಿಂತಲೂ ಕಡಿಮೆ ಮಳೆಯಾಗುತ್ತದೆ. ಅಂದಾಜು 55 ದಿನಗಳಲ್ಲಿ 1,138mm ವಾರ್ಷಿಕ ಮಳೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಪೂರ್ವದಲ್ಲಿ ಕನಿಷ್ಠ 569mm ನಿಂದ ಪಶ್ಷಿಮದಲ್ಲಿ ಗರಿಷ್ಠ 4,029mm ವರೆಗೂ ಮಳೆಯಾಗುತ್ತದೆ. ರಾಜ್ಯದಲ್ಲಿರುವ ಏಳು ನದಿ ಪಾತ್ರಗಳ ಸುಮಾರು 3475.2 TMC ನೀರಿನಲ್ಲಿ ಕೇವಲ 1690.30 TMC ನೀರು ಅಂದರೆ ಸುಮಾರು 50% ನೀರು ಮಾತ್ರ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲ್ಪಡುತ್ತದೆ.

2018ರ ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಸುಮಾರು 156 ತಾಲೂಕುಗಳು ಬರಪೀಡಿತವಾಗಿವೆ. ನೀರಿನ ಬೇಡಿಕೆಯು ದಿನದಿಂದ ದಿನೇ ಹೆಚ್ಚುತ್ತಿದ್ದು, ನೀರಿನ ಬತ್ತುವಿಕೆ ಹಾಗೂ ನೀರಿನ ಸಂಪನ್ಮೂಲಗಳ ಅವನಿತಿಯು ರಾಜ್ಯದಲ್ಲಿ ನೀರಿನ ಕೊರತೆಯನ್ನುಂಟುಮಾಡುತ್ತಿದೆ. ಕರ್ನಾಟಕವು ಸರ್ಕಾರವು ಜನತೆಗೆ ನೀರಿನ ಕೊರತೆಯನ್ನು ನೀಗಿಸಲು ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ನೀರಿನ ಸುಸ್ಥಿರ ಬಳಕೆ, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಹಾಗೂ ಕರ್ನಾಟಕವನ್ನು ಜಲಸುಭದ್ರ ಮಾಡುವತ್ತ ಹೆಜ್ಜೆಯಿಡುತ್ತಿದೆ.

ಕರ್ನಾಟಕದಲ್ಲಿ ಪ್ರಸ್ತುತ ನೀರಿನ ಸ್ಥಿತಿ ಗತಿ

ಕರ್ನಾಟಕದ ಕುಡಿಯುವ ನೀರಿಗೆ ಅಂತರ್ಜಲವು ಪ್ರಮುಖ ಮೂಲವಾಗಿದೆ. ನದಿಗಳು ಹಾಗೂ ಅಂತರ್ಜಲದ ಬತ್ತುವಿಕೆಯಿಂದಾಗಿ ಜನತೆ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಮಳೆಗಾಲ ಹಾಗೂ ಮಳೆಗಾಲರಹಿತ ಎರಡೂ ಋತುಗಳನ್ನು ಸೇರಿಸಿ ರಾಜ್ಯದಲ್ಲಿ ಮರುಪೂರಣ ಮಾಡಬಹುದಾದ ಅಂತರ್ಜಲದ ನೀರಿನ ಮಟ್ಟ 17.03 ಬಿಲಿಯನ್ ಕ್ಯೂಬಿಕ್ ಮೀಟರ್ಸ್. ರಾಜ್ಯವು ಈಗಾಗಲೇ 64 ಪ್ರತಿಶತದಷ್ಟು ಅಂತರ್ಜಲದ ನೀರನ್ನು ಬಳಸಿದ್ದು ಈಗ ಮುಂದಿನ ಭವಿಷ್ಯದ ಬಳಕೆಗೆ 6.53 ಬಿಲಿಯನ್ ಕ್ಯೂಬಿಕ್ ಮೀಟರ್ ಗಳಷ್ಟು ಮಾತ್ರ ಲಭ್ಯವಿದೆ. ಗ್ರಾಮೀಣ ಕರ್ನಾಟಕದ ಕುಡಿಯುವ ನೀರಿನ ಬೇಡಿಕೆಗಳನ್ನು ಪೂರೈಸಲು ಕರ್ನಾಟಕ ಸರ್ಕಾರವು ಜಲಧಾರೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಂತಾದ ಯೋಜನೆಗಳ ಅನುಷ್ಠಾನದ ಜೊತೆಗೆ ನೀರಿನ ಶುದ್ಧೀಕರಣ ಘಟಕಗಳನ್ನು ರಾಜ್ಯದಾದ್ಯಂತ ಅಳವಡಿಸಿದೆ.

ಜಲಜೀವನ್ ಮಿಷನ್ (JJM)

ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ 2014 ರ ವೇಳೆಗೆ ಕಾರ್ಯಾತ್ಮಕ ನಳ ಸಂಪರ್ಕ (FHTC) ಕಲ್ಪಿಸುವ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮಹತ್ತರ ಉದ್ದೇಶದೊಂದಿಗೆ ಜಲಜೀವನ್ ಮಿಷನ್ (JJM) ಯೋಜನೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ನೀರಿನ ಮೂಲಗಳ ಸುಸ್ಥಿರತೆಯನ್ನು ಕಾಪಾಡಿಕೊಂಡು, ಬೂದು ನೀರಿನ ನಿರ್ವಹಣೆ, ನೀರಿನ ಸಂರಕ್ಷಣೆ, ಮಳೆ ನೀರು ಕೊಯ್ಲು, ಜಲಮೂಲಗಳ ಮರುಪೂರಣ ಕೂಡ ಈ ಯೋಜನೆಯ ಅಂಗವಾಗಿವೆ. ಜಲಜೀವನ್ ಮಿಷನ್ ಸಮುದಾಯ ಆಧಾರಿತ ವಿಧಾನವನ್ನು ಒಳಗೊಂಡಿದ್ದು ಪರಿಣಾಮಕಾರಿಯಾದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಈ ಯೋಜನೆಯ ಪ್ರಮುಖಾಂಶಗಳಾಗಿವೆ. ಜಲಜೀವನ್ ಮಿಷನ್ ನೀರಿಗಾಗಿ ದೇಶವ್ಯಾಪಿ ಆಂದೋಲನವನ್ನು ಸೃಷ್ಟಿಸಲಿದ್ದು ಇದು ಪ್ರತಿಯೊಬ್ಬರ ಆದ್ಯತೆಯೂ ಆಗಿದೆ.

ಇತಿಹಾಸ:

ಗ್ರಾಮೀಣ ಪ್ರದೇಶದ ಜನರಿಗೆ ಕೈಗೆಟಕುವ ದರದಲ್ಲಿ ಸಾಕಷ್ಟು ಪ್ರಮಾಣದ ಶುದ್ಧ ಕುಡಿಯುವ ನೀರನ್ನು ಪ್ರತಿನಿತ್ಯ ಮತ್ತು ದೀರ್ಘಕಾಲದವರೆಗೆ ಒದಗಿಸುವುದರ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ದೂರದೃಷ್ಟಿಯಾಗಿದೆ. 1954 ರಿಂದ ಹಿಡಿದು ಪ್ರಸ್ತುತದ ವರೆಗೆ ಹಲವು ಕುಡಿಯುವ ನೀರಿನ ಯೋಜನೆಗಳು ಬಂದುಹೊಗಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ರಾಷ್ಟ್ರೀಯ ನೀರು ಸರಬರಾಜು ಯೋಜನೆ, ಜಲ ನಿರ್ಮಲ ಅಭಿಯಾನ, ಜಲನಿಧಿ, ಸ್ವಜಲಧಾರ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಇತ್ಯಾದಿ. ಇದೀಗ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ ಈ ಮೂಲಕ ಪ್ರತಿದಿನ ತಲಾ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸಲು ಜಲ ಜೀವನ್ ಮಿಷನ್ (JJM Karnataka) ಯೋಜನೆಯನ್ನು 2020 ರಿಂದ 2024ರ ವರೆಗೆ ಜಾರಿಯಲ್ಲಿರುವಂತೆ ಜಾರಿಗೆ ತರಲಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಸ್ತುತ ಇರುವ ಅಸಮರ್ಪಕ ಪ್ರಮಾಣದ ಕುಡಿಯುವ ನೀರಿನ ಸೌಲಭ್ಯವನ್ನು ಸರಿಪಡಿಸಿ ಆ ಮೂಲಕ ಪ್ರತಿಯೊಂದು ಮನೆಗೂ ಪ್ರತ್ಯೇಕವಾದ ಹಾಗೂ ನಿಯಮಿತ ಮತ್ತು ನಿರಂತರವಾಗಿ ಗುಣಮಟ್ಟದಿಂದ ಕೂಡಿರುವ ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ದೀರ್ಘಾವಧಿ ಆಧಾರದಲ್ಲಿ ಗ್ರಾಮೀಣ ಸಮುದಾಯದ ಜೀವನೋಪಾಯದ ಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಕೈಗೆಟಕುವ ವಿತರಣ ದರದಲ್ಲಿ ಸೇವೆಯನ್ನು ಒದಗಿಸುವುದು ಈ ಯೋಜನೆಯ ಪ್ರಮುಖಾಂಶವಾಗಿದೆ.

ಉದ್ದೇಶಗಳು:
  • ಗ್ರಾಮೀಣ ಬಾಗದ ಪ್ರತಿಯೊಂದು ಮನೆಗೂ ಕೂಡ FHTC ಸಂಪರ್ಕ ಕಲ್ಪಿಸುವುದು.
  • ನೀರಿನ ಗುಣಮಟ್ಟದ ಕೊರತೆಯಿರುವ ಗ್ರಾಮ, ಬರಪೀಡಿತ, ಮರುಭೂಮಿ ಪ್ರದೇಶಗಳಿಗೆ ಈ ಮೂಲಕ ಸಂಪರ್ಕ ಕಲ್ಪಿಸಲು ತ್ವರಿತ ಆದ್ಯತೆ ನೀಡುವುದು.
  • ನೀರಿನ ಸಂಪರ್ಕವನ್ನು ವ್ಯವಸ್ಥಿತವಾಗಿ ಉಸ್ತುವಾರಿ ಮಾಡುವುದು
  • ಪ್ರತಿಯೊಂದು ಗ್ರಾಮದ ಶಾಲೆ, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಛೇರಿಯ ಕಟ್ಟಡ, ಆರೋಗ್ಯ ಕೇಂದ್ರಗಳು, ಸಮುದಾಯ ಅಭಿವೃದ್ಧಿ ಕೇಂದ್ರಗಳ ಕಟ್ಟಡಗಳಿಗೆ FHTC ಸಂಪರ್ಕ ಕಲ್ಪಿಸುವುದು.
  • ಸ್ಥಳೀಯ ಸಮುದಾಯದಲ್ಲಿ ಸ್ವಯಂ ಪ್ರೇರಿತ ಮಾಲೀಕತ್ವಕ್ಕೆ ಉತ್ತೇಜಿಸುವುದು.
  • ನೀರಿನ ಸರಬರಾಜು ವ್ಯವಸ್ಥೆಯಲ್ಲಿ ಸುಸ್ಥಿರತೆಯನ್ನು ಕಾಯ್ದುಕೊಳ್ಳುವುದು.
  • ಈ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲವನ್ನು ಸಶಕ್ತಗೊಳಿಸುವುದು ಮತ್ತು ಆ ಮೂಲಕ ಅಭಿವೃದ್ಧಿಪಡಿಸುವುದು.
  • ಸುರಕ್ಷಿತ ಕುಡಿಯುವ ನೀರಿನ ವಿವಿಧ ಅಂಶಗಳು ಮತ್ತು ಮಹತ್ವದ ಬಗ್ಗೆ ಸಂಬಂಧಿಸಿದ ಫಲಾನುಭವಿಗಳಿಗೆ / ಕಾರ್ಯನಿರ್ವಹಿಸುವವರಿಗೆ ಅರಿವು ಮೂಡಿಸುವುದು.
ಕಿರು ನೀರು ಸರಬರಾಜು ಯೋಜನೆ (SVS)

ಈ ಯೋಜನೆಯಲ್ಲಿ 3-4 ನಲ್ಲಿಗಳನ್ನು ಅಳವಡಿಸಿರುವ ಸಣ್ಣ ಟ್ಯಾಂಕಿಗೆ (ಆರ್.ಸಿ.ಸಿ ಹ್ಯೂಂ ಪೈಪ್ ಸಿಸ್ಟನ್) ಕೊಳವೆ ಬಾವಿಯಿಂದ ವಿದ್ಯುತ್ ಪಂಪಿನ ಸಹಾಯದಿಂದ ನೀರನ್ನು ತುಂಬಿ ಗ್ರಾಮೀಣ ಜನರು ಕುಡಿಯುವ ನೀರು ಪಡೆಯಲು ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಪ್ರಾರಂಭದಿಂದ 2018-19 ನೇ ಸಾಲಿನ ಅಂತ್ಯಕ್ಕೆ ಒಟ್ಟು 51,120 ಕಿರು ನೀರು ಸರಬರಾಜು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಕಿರು ನೀರು ಸರಬರಾಜು ಯೋಜನೆಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳು ನಿರ್ವಹಿಸುತ್ತಿವೆ.

ಬಹುಗ್ರಾಮ ಯೋಜನೆ (MVS)

ಭೂಮಿಯ ಮೇಲ್ಮೈ ನೀರಿನ ಜಲಮೂಲ ಆಧಾರಿತ ಯೋಜನೆಗಳನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಭೂಮಿಯ ಮೇಲ್ಮೈ ನೀರನ್ನು ವಿವಿಧ ಜಲಮೂಲಗಳಿಂದ ಪಡೆದು ಶುದ್ಧೀಕರಿಸಿ ಅಧಿಕ ಫ್ಲೋರೈಡ್, ಸವಳು ಅಂಶ (TDS), ನೈಟ್ರೇಟ್ ಹಾಗೂ ಕಬ್ಬಿಣ ಅಂಶಗಳ ಬಾಧೆಗೊಳಗಾಗಿರುವ ಜನವಸತಿಗಳಿಗೆ ಸುರಕ್ಷಿತ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಕುಡಿಯುವ ನೀರಿನ ಶಾಶ್ವತ ಪರಿಹಾರದ ಸಲುವಾಗಿ ನದಿ, ಕೆರೆ, ಕಾಲುವೆಯಂತಹ ಭೂಮಿಯ ಮೇಲ್ಮೈ ಜಲಮೂಲಗಳನ್ನು ಆಧರಿಸಿ ಯೋಜನೆಗಳನ್ನು ರೂಪಿಸಲಾಗಿದೆ.

NRDWP ಯೋಜನೆ, 13 ನೇ ಹಣಕಾಸು ಅನುದಾನದಡಿಯಲ್ಲಿ ಹಾಗೂ ಜಲನಿರ್ಮಲ ಯೋಜನೆಗಳ ಮಾರ್ಗಸೂಚಿಗಳು ಜಾರಿಯಾದ ನಂತರ ಇಲ್ಲಿಯವರೆಗೆ KUWSB ಸೇರಿದಂತೆ ರೂ. 12875.51 ಕೋಟಿ ಅಂದಾಜು ಮೊತ್ತದ 548 (2019ರ ಅಂತ್ಯದ ವೇಳೆಗೆ) ಬಹುಗ್ರಾಮ ಯೋಜನೆಗಳಿಗೆ, ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ 474 ಯೋಜನೆಗಳನ್ನು ರೂ.5663.85 ಕೋಟಿ ವೆಚ್ಚದೊಂದಿಗೆ ಪೂರ್ಣಗೊಳಿಸಲಾಗಿದೆ ಹಾಗೂ ರೂ.6116.24 ಕೋಟಿ ಅಂದಾಜು ಮೊತ್ತದ 64 ಕಾಮಗಾರಿಗಳ ಅನುಷ್ಠಾನ ಪ್ರಗತಿಯಲ್ಲಿರುತ್ತದೆ.

ಶುದ್ಧ ಕುಡಿಯುವ ನೀರಿನ ಘಟಕಗಳು (WPP)

IS-10500:2012 specification ತಿಳಿಸಿರುವ ಯಾವುದೇ ಮಾನದಂಡಗಳಿಗೆ ಗುಣಮಟ್ಟ ಬಾಧಿತ ಜಲಮೂಲಗಳಿರುವ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸೂಕ್ಷ್ಮಾಣು ಜೀವಿಗಳಿಂದ ಗುಣಮಟ್ಟ ಬಾಧೆಗೊಳಗಾಗಿರುವ ಜನವಸತಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. 18,000ಕ್ಕೂ ಹೆಚ್ಚು ನೀರು ಶುದ್ಧೀಕರಣ ಘಟಕಗಳನ್ನು ಈಗಾಗಲೇ ಅಳವಡಿಸಲಾಗಿದೆ.

ಜಲ ಸಂರಕ್ಷಣೆ

ನೀರಿನ ಸಂರಕ್ಷಣೆ ಕುರಿತಾಗಿ ಸರಿಯಾದ ಜ್ಞಾನವಿಲ್ಲದುದರ ಪರಿಣಾಮವಾಗಿ ನಾವು ಇಂದು ನೀರಿನ ಕೊರತೆಯನ್ನು ಎದುರಿಸುತ್ತಿದ್ದೇವೆ. ವರ್ಷದಿಂದ ವರ್ಷಕ್ಕೂ ಕರ್ನಾಟಕದ ತಾಲೂಕುಗಳು ತೀವ್ರ ಬರಪೀಡಿತವಾಗುತ್ತಿದ್ದು ಜನತೆಯಲ್ಲಿ ಜಲಪ್ರಜ್ಞೆಯ ಹಾಗೂ ಸಾಮುದಾಯಿಕ ನಿರ್ವಹಣೆಯ ಕೊರತೆಯಿಂದಾಗಿ ರಾಜ್ಯವು ನೀರಿನ ಕೊರತೆಯನ್ನು ಅನುಭವಿಸುತ್ತಿದೆ. ಕೃಷಿ, ಕುಡಿಯಲು, ಉದ್ಯಮ, ಪರಿಸರ ಹಾಗೂ ಇನ್ನಿತರ ಕಾರಣಗಳಿಗಾಗಿ ನೀರಿನ ಬೇಡಿಕೆ ಅತಿವೇಗವಾಗಿ ಹೆಚ್ಚುತ್ತಿದೆ. ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳಲು ರಾಜ್ಯ ಸರ್ಕಾರವು 2019ನ್ನು ಜಲವರ್ಷವೆಂದು ಘೋಷಿಸಿದ್ದು, ರಾಜ್ಯದ ಅತಿ ಮಹತ್ವದ ಸಮುದಾಯ ಚಾಲಿತ ಜಲ ಸಂರಕ್ಷಣಾ ಚಳವಳಿ ‘ಜಲಾಮೃತ’ವನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಹಾಗೂ ಸಾರ್ವಜನಿಕರು ಭಾಗಿದಾರರಾಗಿರುತ್ತಾರೆ.

ಜಲಾಮೃತದ ನಾಲ್ಕು ಮುಖ್ಯ ಅಂಗಗಳು:

ಜಲ ಸಾಕ್ಷರತೆ: ಜನತೆಯಲ್ಲಿ ನಡವಳಿಕೆ ಬದಲಾವಣೆಯ ಮೂಡಿಸುವ ಕಾರ್ಯಕ್ರಮಗಳ ಮೂಲಕ ನೀರಿನ ಪ್ರತಿ ಹನಿಯೂ ಮಹತ್ವ ಎಂಬ ಅರಿವು ಮೂಡಿಸುವುದು. ಈ ಅಭಿಯಾನವು ಪ್ರತೀ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಗಳಲ್ಲಿ ಆರಂಭವಾಗುತ್ತಿದ್ದು ಚಳುವಳಿಯ ಎಲ್ಲ ಭಾಗೀದಾರರೂ ಈ ಅಭಿಯಾನದ ಭಾಗವಾಗುತ್ತಾರೆ.

ಜಲ ಸಂರಕ್ಷಣೆ: ಈಗಾಗಲೇ ಇರುವ ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸಿ ಹೊಸ ನೀರಿನ ಮೂಲಗಳನ್ನು ಸೃಷ್ಟಿಸುವುದು. ನೀರಿನ ಪಾತ್ರಗಳ ಹಾಗೂ ಅವನತಿ ಹೊಂದುತ್ತಿರುವ ನೀರಿನ ಮೂಲಗಳನ್ನು ಸಂರಕ್ಷಿಸುವುದು.

ನೀರಿನ ಪ್ರಜ್ಞಾವಂತ ಬಳಕೆ: ನೀರಿನ ಸಮರ್ಥ ಬಳಕೆಯನ್ನು ಪ್ರೋತ್ಸಾಹಿಸುವುದು. ಕರ್ನಾಟಕದ ಜನತೆಯಲ್ಲಿ ಜಲಪ್ರಜ್ಞೆಯನ್ನು ಮೂಡಿಸಿ ಮಳೆನೀರಿನ ಕುಯಿಲು, ತಂತ್ರಜ್ಞಾನಗಳ ಬಳಕೆಯಿಂದ ನೀರಿನ ಸಂಗ್ರಹಣೆ ಹಾಗೂ ಸಂರಕ್ಷಣೆ ಮಾಡುವುದು.

ಹಸಿರೀಕರಣ: ಸಮುದಾಯ ಸಹಭಾಗಿತ್ವದೊಂದಿಗೆ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಕನಿಷ್ಠ 500 ಗಿಡಗಳನ್ನು ನೆಡುವಂತಹಾ ಚಟುವಟಿಕೆಗಳ ಮೂಲಕ ನೀರಿನ ಸಂಪನ್ಮೂಲಗಳ ಸುಸ್ಥಿರತೆಯನ್ನು ಕಾಪಾಡುವುದು.

ಕರ್ನಾಟಕದ ನೀರಿನ ಕೊರತೆಗೆ ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳುತ್ತಾ ನಾಡನ್ನು ಜಲಸುಭದ್ರಗೊಳಿಸುವ ನಿಟ್ಟಿನಲ್ಲಿ ಆರಂಭಿಸಲಾದ ಯೋಜನೆ ಜಲಾಮೃತ.

ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮ (WQMSP)

ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡುವ ಮುಖ್ಯ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ ನೀರಿನ ಗುಣಮಟ್ಟವನ್ನು ಖಾತರಿ ಪಡಿಸಿಕೊಂಡ ನಂತರ ಸರಬರಾಜು  ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಇಲಾಖೆ ಗ್ರಾಮೀಣ ಪ್ರದೇಶದ ಎಲ್ಲಾ ಕುಡಿಯುವ ನೀರಿನ ಮೂಲಗಳ ಮಾದರಿಗಳಲ್ಲಿರುವ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾಗಳ ಪರೀಕ್ಷೆಗೆ ಮುಂದಾಗಿದೆ.

ಗ್ರಾಮೀಣ ಪ್ರದೇಶದ ಎಲ್ಲಾ ಕುಡಿಯುವ ನೀರಿನ ಮೂಲಗಳ ಮಾದರಿಗಳಲ್ಲಿರುವ ರಾಸಾಯನಿಕ (ಫ್ಲೋರೈಡ್, ಆರ್ಸೆನಿಕ್, ನೈಟ್ರೇಟ್, ಐರನ್, ಪಿ.ಹೆಚ್, ಕ್ಲೋರೈಡ್) ಮತ್ತು ಬ್ಯಾಕ್ಟೀರಿಯಾ (ಕೋಲಿಫಾರ್ಮ್, ಈ.ಕೋಲಿ) ಗಳ ಗುಣಮಟ್ಟದ ಪರೀಕ್ಷೆಗಳನ್ನು ಮೊದಲ ಹಂತದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ, ಗ್ರಾಮದ ನೀರು ಮತ್ತು ನೈರ್ಮಲ್ಯ ಸಮಿತಿ (VWSC) ನೆರವಿನೊಂದಿಗೆ Field Test Kit & H2S Vials ಗಳ ಮೂಲಕ ಮತ್ತು ಪ್ರಯೋಗಾಲಯಗಳಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಮತ್ತು 47 ತಾಲ್ಲೂಕು ಕೇಂದ್ರಗಳಲ್ಲಿ ಕುಡಿಯುವ ನೀರಿನ ಪರೀಕ್ಷಾ ಪ್ರಯೋಗಾಲಯಗಳನ್ನು ಇಲಾಖೆಯ ವತಿಯಿಂದ ಸ್ಥಾಪಿಸಲಾಗಿದ್ದು, ಈ ಪ್ರಯೋಗಾಲಯಗಳಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ.

ನಂತರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವ ನೀರಿನ ಮಾದರಿಗಳಲ್ಲಿ ರಾಸಾಯನಿಕ ಅಂಶವು ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿರುವುದು ಕಂಡು ಬಂದರೆ, ಅಂತಹ ನೀರಿನ ಮಾದರಿಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರೀಯ ಪ್ರಯೋಗಾಲಯವನ್ನು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ರಾಜ್ಯ ಮಟ್ಟದ Referral  laboratory ಯನ್ನಾಗಿ ಉಪಯೋಗಿಸಿಕೊಳ್ಳಲು ಸದರಿ ಮಂಡಳಿಯ ಜೊತೆ ಕರಾರು ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು, ಈ ಪ್ರಯೋಗಾಲಯಗಳಲ್ಲಿಯೂ ನೀರಿನ ಗುಣಮಟ್ಟ ಪರೀಕ್ಷಿಸಲಾಗುತ್ತದೆ.

ಸದರಿ ಮಂಡಳಿಯವರು ನೀಡುವ ನೀರಿನ ಗುಣಮಟ್ಟದ ವರದಿಗಳ ಆಧಾರದ ಮೇಲೆ, ಆ ಜನವಸತಿ ಪ್ರದೇಶದ  ನೀರಿನ ಮಾದರಿಯು  ಕುಡಿಯಲು ಯೋಗ್ಯವಲ್ಲವೆಂದು ಕಂಡು ಬಂದರೆ ಅಂತಹ ಜನವಸತಿ ಪ್ರದೇಶಗಳಿಗೆ ತಾತ್ಕಾಲಿಕ ಪರಿಹಾರವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸುವ ಕಾರ್ಯವನ್ನು ಇಲಾಖೆ ಮಾಡುತ್ತಾ ಬಂದಿದೆ.

 5,130 total views,  3 views today

WhatsApp chat