ರಾಜ್ಯದ ಪುಣ್ಯ ಕ್ಷೇತ್ರಗಳ ಪೈಕಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಅತಿ ಹೆಚ್ಚು ಯಾತ್ರಾರ್ಥಿಗಳನ್ನು ತನ್ನತ್ತ ಕೈ ಬೀಸಿ ಕರೆಯುವ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಿಗೆ ಹೋಗುವ ದಾರಿ ಮಧ್ಯೆ ಪ್ರವಾಸಿಗರೆಲ್ಲರು ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಪ್ರಕೃತಿ ಮಡಿಲಿನಲ್ಲಿರುವ ಶಿರಾಡಿಘಾಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗುಂಡ್ಯ ಗ್ರಾಮದಲ್ಲಿ ಹೆಚ್ಚಿನ ವಾಹನಗಳನ್ನು ನಿಲುಗಡೆ ಮಾಡಿ, ರಸ್ತೆಯ ಇಕ್ಕೆಲಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಅಂತೆಯೇ ಪ್ರವಾಸಿಗರು/ಪ್ರಯಾಣಿಕರು ಈ ಪ್ರದೇಶದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಶೌಚಕ್ಕಾಗಿ ಎಲ್ಲರೂ ಬಯಲನ್ನೇ ಅವಲಂಬಿಸಿದ್ದರು. ಇದರಿಂದಾಗಿ ಸ್ಥಳೀಯ ನಿವಾಸಿಗಳು ರಸ್ತೆ ಬದಿಗಳಲ್ಲಿ ತಿರುಗಾಡಲು ಮತ್ತು ಇಲ್ಲಿ ಚಿಕ್ಕ ಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಜೀವನ ನಡೆಸುವುದು ಕಷ್ಟಕರವಾಗಿತ್ತು. ಈ ಪರಿಸ್ಥಿತಿಯನ್ನು ಸರಿಪಡಿಸಲು ಮುಂದಾದ ಇಲ್ಲಿನ ಜನರು, ಕಳೆದು ಹತ್ತಾರು ವರ್ಷಗಳಿಂದ ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಸಹ ಪ್ರಯೋಜನವಾಗಿರಲಿಲ್ಲ.
ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇದೀಗ ಜೀವ ಬಂದಿದ್ದು, ಕಡಲ ನಗರಿ ಮಂಗಳೂರಿನಿಂದ ಹಾಸನ ಮಾರ್ಗವಾಗಿ ಉದ್ಯಾನಗಳ ನಗರಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75ರ ಗುಂಡ್ಯ ಗ್ರಾಮದಲ್ಲಿ ಇದೀಗ ಸುಸಜ್ಜಿತ ವ್ಯವಸ್ಥೆಯುಳ್ಳ ಸಮುದಾಯ ಶೌಚಾಲಯವನ್ನು ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ದಿನದ 24 ಗಂಟೆಗಳೂ ಸಾವಿರಾರು ಯಾತ್ರಾರ್ಥಿಗಳು ಪ್ರಯಾಣಿಸುವ ಈ ಜಾಗದಲ್ಲಿ ಪುರುಷರಿಗೆ 2 ಪ್ರತ್ಯೇಕ ಸ್ನಾನದ ಗೃಹ, ಶೌಚಾಲಯ ಹಾಗೂ ಮೂತ್ರ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ ಜೊತೆಗೆ ಮಹಿಳೆಯರಿಗೆ 2 ಸ್ನಾನದ ಗೃಹ , ಶೌಚಾಲಯದ ವ್ಯವಸ್ಥೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕೈ ತೊಳೆಯಲು ಪ್ರತ್ಯೇಕ ವಾಶ್ ಬೇಸಿನ್‌ಗಳು ಹಾಗೂ ದಿನದ 24 ಗಂಟೆಗಳೂ ಸಹ ನೀರು ಮತ್ತು ಕರೆಂಟ್ ವ್ಯವಸ್ಥೆಗಳನ್ನು ಹೊಂದಿರುವ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ. ಇದಿಷ್ಟೇ ಅಲ್ಲದ ಸೆಪ್ಟಿಕ್ ಟ್ಯಾಂಕ್ ಮೂಲಕ ಮಲ ತ್ಯಾಜ್ಯ ನಿರ್ವಹಣೆಯನ್ನೂ ಸಮರ್ಪಕವಾಗಿ ಮಾಡಲಾಗುತ್ತಿದೆ.
ಅನುದಾನ ಬಳಕೆ
ಈ ಶೌಚಾಲಯ ನಿರ್ಮಾಣಕ್ಕಾಗಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಹಂತ-2 ರ ಮೂಲಕ ರೂ.2.10 ಲಕ್ಷ ಮತ್ತು 15 ನೇ ಹಣಕಾಸು ಆಯೋಗದಿಂದ ರೂ.1.50 ಲಕ್ಷಗಳು ಸೇರಿ ಒಟ್ಟು ರೂ.3 ಲಕ್ಷಗಳನ್ನು ಖರ್ಚು ಮಾಡಿ ಸುಸಜ್ಜಿತ ವ್ಯವಸ್ಥೆಯುಳ್ಳ ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗಿದೆ.
ಕಾರ್ಯಾಚರಣೆ ಮತ್ತು ನಿರ್ವಹಣೆ
ಇನ್ನು ಹೀಗೆ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡ ಶೌಚಾಲಯದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆಯನ್ನು ಜನಸೇವಾ ಫೌಂಡೇಶನ್ ಹಾಸನ ಇವರಿಗೆ ವಹಿಸಿಕೊಡಲಾಗಿದೆ. ಸದರಿ ಸಂಸ್ಥೆಯವರು ಬಳಕೆದಾರರಿಂದ ಬಳಕೆದಾರರ ಶುಲ್ಕವನ್ನು ವಸೂಲಿ ಮಾಡುತ್ತಿದ್ದು, ಮೂತ್ರ ವಿಸರ್ಜನೆಗಾಗಿ ರೂ.2 ಗಳನ್ನು, ಶೌಚಾಲಯ ಬಳಕೆಗಾಗಿ ರೂ.5 ಗಳನ್ನು ಹಾಗೂ ಸ್ನಾನದ ಗೃಹ ಬಳಕೆಗಾಗಿ ರೂ.10 ಯಂತೆ ದರ ನಿಗದಿ ಮಾಡಲಾಗಿದ್ದು, ಇದೆಲ್ಲದರ ಮೇಲುಸ್ತುವಾರಿಯನ್ನು ಗ್ರಾಮ ಪಂಚಾಯಿತಿಯೇ ವಹಿಸಿಕೊಂಡಿದೆ. ಪ್ರತಿ ತಿಂಗಳಲ್ಲಿ ಅಂದಾಜು ರೂ.3 ಲಕ್ಷ ಬಳಕೆದಾರರಿಂದ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಗ್ರಾಮ ಪಂಚಾಯಿತಿಗೆ ಇದೊಂದು ಆದಾಯದ ಮೂಲವಾಗಿ ಪರಿಣಮಿಸಿದೆ.
ಮುಂದುವರೆದು ಶೌಚಾಲಯದ ಆವರಣ ಮತ್ತು ಶೌಚಗೃಹಗಳನ್ನು ಶುಚಿಯಾಗಿಡುವ ಉದ್ದೇಶದಿಂದ ಎಲ್ಲಾ ಶೌಚಗೃಹಗಳಲ್ಲಿಯೂ ಕಸದ ಬುಟ್ಟಿಗಳನ್ನು ಇಡಲಾಗಿದೆ. ಸ್ಯಾನಿಟರಿ ನ್ಯಾಪ್ಕಿನ್ಗಳ ಸಂಗ್ರಹಣೆಗೆ ಪ್ರತ್ಯೇಕವಾದ ಪಿಂಕ್ಬಾಕ್ಸ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಬಾಕ್ಸ್ ಗಳಲ್ಲಿ ಸಂಗ್ರಹವಾದ ಸ್ಯಾನಿಟರಿ ಪ್ಯಾಡ್ಗಳನ್ನು incinerator ಗಳ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದಿಷ್ಟೇ ಅಲ್ಲದೇ ಪ್ರಯಾಣಿಕರಿಗೆ ಸುಲಭವಾಗಿ ಶೌಚಾಲಯವಿರುವ ಮಾಹಿತಿಯನ್ನು ನೀಡಲು ರಸ್ತೆಯ ಇಕ್ಕೆಲಗಳಲ್ಲಿ ಸೈನ್ ಬೋರ್ಡ್ ಗಳನ್ನು ಅಳವಡಿಸಲಾಗಿದ್ದು, ಇಡೀ ಶೌಚಾಲಯವನ್ನು ಗೋಡೆಬರಹಗಳನ್ನು ಬರೆಯಲಾಗಿದ್ದು, ಇಲಾಖೆಯ ಸಂದೇಶಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ.
ಇನ್ನು ಈ ಸಮುದಾಯ ಶೌಚಾಲಯದ ಬಗ್ಗೆ ಮಾತನಾಡಿರುವ ದಕ್ಷಿಣಕನ್ನಡ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, “ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯೆಂದು ಘೋಷಿಸಲಾಗಿದ್ದು, ಜಿಲ್ಲೆಯಾದ್ಯಂತ 384 ಸಮುದಾಯ ಶೌಚಾಲಯಗಳನ್ನು ನಿರ್ಮಿಸಿ ಬಳಕೆ ಮಾಡಲಾಗುತ್ತಿದೆ. ಜಿಲ್ಲೆಯ ಜನ ನಿಬಿಡ ಪ್ರದೇಶಗಳು, ಯಾತ್ರಾ ಸ್ಥಳಗಳು ಮತ್ತು ಹೆದ್ದಾರಿಗಳಲ್ಲಿ ಅವಶ್ಯವಿರುವ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿ ಬಳಕೆ ಮಾಡಲಾಗುತ್ತದೆ” ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ “ಗುಂಡ್ಯದಲ್ಲಿ ಸಾರ್ವಜನಿಕ ಶೌಚಾಲಯಕ್ಕಾಗಿ ಕಳೆದ 20 ರಿಂದ 3೦ ವರ್ಷಗಳಿಂದಲೂ ಬೇಡಿಕೆ ಇತ್ತು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಈ ಭಾಗದ ಪ್ರಮುಖ ತೀರ್ಥ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಇಲ್ಲಿನ ಸ್ಥಳೀಯರ ಬೇಡಿಕೆಗನುಗುಣವಾಗಿ ಸುಸಜ್ಜಿತ ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡಿ ಬಳಕೆ ಮಾಡಲಾಗುತ್ತಿದೆ. ಜನರು/ಯಾತ್ರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದಿದ್ದಾರೆ.
ಒಟ್ಟಿನಲ್ಲಿ ಈ ಭಾಗದ ಸಾರ್ವಜನಿಕರ ಬೇಡಿಕೆಗೆ ದಶಕಗಳ ಬಳಿಕ ಜಿಲ್ಲಾ ಪಂಚಾಯಿತಿ ಸ್ಪಂದಿಸಿದ್ದು ಸದ್ಯ ಇಲ್ಲಿನ ನಿವಾಸಿಗಳು ಬಹಿರ್ದೆಸೆಯ ಸಮಸ್ಯೆಗಳಿಂದ ಸ್ವಚ್ಛಂದ ಬದುಕು ಕಂಡುಕೊಂಡಿದ್ದಾರೆ.
4,669 total views, 3 views today