ತ್ಯಾಜ್ಯ ಸಮಸ್ಯೆ ಅನ್ನೋದು ಇವತ್ತು ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು. ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದು ಬಹುದೊಡ್ಡ ಸವಾಲೇ ಸರಿ. ಮೊದಲೆಲ್ಲಾ ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆ ಜಾರಿಯಾದ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿಯೂ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಲಾಗುತ್ತಿದೆ. ಸ್ವಚ್ಛ, ಸ್ವಸ್ಥ ಭಾರತ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ. ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಿ ಮರುಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು, ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಶಿವಮೊಗ್ಗ ಜಿಲ್ಲೆಯ, ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮ ಪಂಚಾಯಿತಿಯಲ್ಲಿ ನಿರ್ಮಾಣವಾಗಿರುವ ಸ್ವಚ್ಛ ಸಂಕೀರ್ಣ ಘಟಕ. ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆ ಹಂತ-1 ರಲ್ಲಿ ಈ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ಮಿಸಲಾಯಿತು. ಘಟಕ ನಿರ್ಮಾಣಕ್ಕೂ ಮುನ್ನವೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಮನೆಗಳಿಂದ ಒಣ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿತ್ತು. ಬಳಿಕ ಘಟಕ ನಿರ್ಮಾಣದ ನಂತರ ಸಂಗ್ರಹಿಸಲಾದ ಎಲ್ಲಾ ಒಣ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ಪ್ರತ್ಯೇಕಿಸಿ ಮಾರಾಟ ಮಾಡುವ ಮೂಲಕ ಗ್ರಾಮ ಪಂಚಾಯಿತಿಯು ಆದಾಯದ ಮೂಲವನ್ನು ಹೆಚ್ಚಿಸಲಾಯಿತು.
ಬಳಿಕ ಈ ಸ್ವಚ್ಛ ಸಂಕೀರ್ಣ ಘಟಕವನ್ನು 2ನೇ ಅಕ್ಟೋಬರ್ 2019 ರಂದು ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಬ್ರಾಂಡಿಂಗ್ ಮಾಡುವ ಮೂಲಕ ಈ ಘಟಕವು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಯಿತು. ಈ ಮೂಲಕ ಇಲಾಖೆ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರತ್ಯೇಕವಾದ ಲೋಗೋವನ್ನೊಳಗೊಂಡ ತನ್ನದೇ ಆದ ಬ್ರಾಂಡಿಂಗ್ ಅನ್ನು ಹೊಂದುವ ಮೂಲಕ ಈ ಗ್ರಾಮ ಪಂಚಾಯಿತಿಯಲ್ಲಿ ಮೊದಲ ಬ್ರಾಂಡಿಂಗ್ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ, ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲ್ ಹಾಗೂ ಇತರೆ ತ್ಯಾಜ್ಯ ವಸ್ತುಗಳಿಂದ ನಿರ್ಮಿಸಿರುವ ರಾಮ ಮಂದಿರ, ಪ್ಲಾಸ್ಟಿಕ್ ಮನೆ, ಪ್ಲಾಸ್ಟಿಕ್ ಭೂತ ಹಾಗೂ ನಿರುಪಯುಕ್ತ ಟೈಯರ್‌ಗಳಿಂದ ಸಿದ್ಧಪಡಿಸಿರುವ ಆಸನಗಳು ಇತ್ಯಾದಿ. ಬ್ರಾಂಡಿಂಗ್ ವೇಳೆಯಲ್ಲಿ ನಿರ್ಮಿಸಲಾಗಿರುವ ಈ ಎಲ್ಲಾ ವಸ್ತುಗಳನ್ನು ಸ್ವಚ್ಛ ಸಂಕೀರ್ಣ ಘಟಕದಲ್ಲಿಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಈ ಘಟಕಕ್ಕೆ ಕಲಿಕಾ ಪ್ರವಾಸಕ್ಕೆ ಬರುವ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಇದೊಂದು ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಇದಿಷ್ಟೇ ಅಲ್ಲದೆ ಶಿವಮೊಗ್ಗ ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯಿತಿಗಳಲ್ಲಿಯೂ ಸ್ವಚ್ಛ ಸಂಕೀರ್ಣ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಘಟಕಗಳ ನಿರ್ವಹಣೆಯ ಹೊಣೆಯನ್ನು ಸ್ಥಳೀಯ ಸ್ವ ಸಹಾಯ ಸಂಘಗಳಿಗೆ ನೀಡಲಾಗಿದ್ದು, ಸ್ವಚ್ಛ ವಾಹಿನಿಗಳ ಚಾಲನೆಗೆ ಆಯ್ದ ಮಹಿಳೆಯರಿಗೆ ಚಾಲನಾ ತರಬೇತಿಯನ್ನು ನೀಡುವ ಜೊತೆಗೆ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಗಳನ್ನು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಈ ಗ್ರಾಮಪಂಚಾಯಿತಿಗೆ ಮಾನ್ಯ ಪ್ರಧಾನಿಗಳ ಆಗಮನದ ನಿರೀಕ್ಷೆ ಇರುವುದರಿಂದ ಸ್ವಚ್ಛ ಸಂಕೀರ್ಣ ಘಟಕಕ್ಕೆ ಮತ್ತಷ್ಟು ಮೆರುಗು ಸಿಕ್ಕಂತಾಗಿದೆ.
ಒಟ್ಟಿನಲ್ಲಿ ತ್ಯಾಜ್ಯವನ್ನು ಸರಿಯಾಗಿ ಬಳಸಿಕೊಂಡರೆ ಅದನ್ನೇ ಸಂಪನ್ಮೂಲವನ್ನಾಗಿಸಬಹುದು ಎನ್ನುವುದಕ್ಕೆ ಹೊಳಲೂರು ಗ್ರಾಮ ಪಂಚಾಯಿತಿ ಉತ್ತಮ ಉದಾಹರಣೆ. ಇಂತಹ ಕೆಲಸಗಳು ಎಲ್ಲಾ ಕಡೆ ನಡೆದರೆ ಖಂಡಿತವಾಗಿಯೂ ಪ್ಲಾಸ್ಟಿಕ್ ಎಂಬ ಹೊರೆಯ ಭಾರವನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬಹುದು.
4,506 total views, 3 views today