Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಅನುಗವಳ್ಳಿಯು ಹಾಸನ ತಾಲೂಕು, ದುದ್ದ ಹೋಬಳಿ, ಹೊನ್ನಾವರ ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು 300 ಕುಟುಂಬಗಳುಳ್ಳ ಪುರಾತನ ಗ್ರಾಮ. ಸುಮಾರು 1081 ಜನಸಂಖ್ಯೆಯಿದ್ದು, ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಎರಡು ಕುಟುಂಬ ಒಂದು ಪುರೋಹಿತ ಕುಟುಂಬ ಬಿಟ್ಟರೆ ಉಳಿದೆಲ್ಲಾ ಕುಟುಂಬಗಳು ಗೌಡ ಸಮುದಾಯದವರಾಗಿದ್ದಾರೆ. ಶೇ.99 ಭಾಗ ಕೃಷಿ ಮತ್ತು ಪಶುಸಂಗೋಪನೆಯನ್ನೇ ನಂಬಿಕೊಂಡಿವೆ. ಊರ ಸುತ್ತಲೆಲ್ಲಾ ಸಮೃದ್ಧವಾಗಿ ಬೆಳೆದು ನಿಂತ ತೋಟಗಳು, ಗದ್ದೆ, ಬೆಳೆಯನ್ನೇ ಹೊದ್ದ ಕೃಷಿಭೂಮಿ ಆಶ್ರಯಿಸಿರೋದು ಕಟ್ಟೆ ಮತ್ತು ಕಲ್ಯಾಣಿಗಳನ್ನು. ಮಾತ್ರವಲ್ಲದೇ, ರೈತರು ತಮ್ಮ ಖಾಸಗಿ ಜಮೀನುಗಳಲ್ಲಿ 150ಕ್ಕೂ ಹೆಚ್ಚು ಕೊಳವೆಬಾವಿಗಳನ್ನೇ ಆಶ್ರಯಿಸಿದ್ದಾರೆ. ಕುಡಿಯುವ ನೀರಿಗಾಗಿ ಸುಮಾರು 450ರಿಂದ 800 ಅಡಿಯ ಆಳದವರೆಗೆ ಕೊರೆದ 3 ಸರ್ಕಾರಿ ಕೊಳವೆ ಬಾವಿಗಳ ಮೂಲಕ ಅನುಗವಳ್ಳಿಯ ಜನ ಮತ್ತು ಜಾನುವಾರುಗಳಿಗೆ ಗ್ರಾಮ ಪಂಚಾಯಿತಿಯು ಕುಡಿಯುವ ನೀರಿನ ಪೂರೈಕೆ ಮಾಡುತ್ತಿದೆ. ಈ ಗ್ರಾಮವು ಮುಜರಾಯಿ ಇಲಾಖೆಗೆ ಸೇರಿದ ಚೆನ್ನಕೇಶವ ದೇವಾಲಯ ಮತ್ತು ಕೋದಂಡರಾಮ ದೇವಾಲಯವನ್ನು ಒಳಗೊಂಡಿದೆ. ಮತ್ತು 80ರ ದಶಕದಿಂದೀಚೆಗೆ ನಿರ್ಮಾಣವಾದ ಆಂಜನೇಯ ಮತ್ತು ಈಶ್ವರ ದೇವಾಲಯವನ್ನು ಕಾಣಬಹುದು.

ಸೀತಾ ಕಲ್ಯಾಣಿ ಹಿನ್ನೆಲೆ:

ತ್ರೇತಾಯುಗದಲ್ಲಿ ಶ್ರೀರಾಮರು ವನವಾಸದ ಸಂದರ್ಭದಲ್ಲಿ ಅನುಗವಳ್ಳಿ(ತಂಗವಳ್ಳಿ)ಯಲ್ಲಿ ತಂಗಿದ್ದರೆಂಬ ಪ್ರತೀತಿ ಇದೆ. ವಿಜಯನಗರ ಸಾಮ್ರಾಜ್ಯದ ಶಾಸನದಲ್ಲಿ ಅನುಗವಳ್ಳಿ ದಾಖಲಾಗಿರುವ ಬಗ್ಗೆ ಸಂಶೋಧನೆಗಳು ತಿಳಿಸುತ್ತವೆ. ಅದಕ್ಕೆ ಇಲ್ಲಿನ ಶಾಸನಗಳು ಪುಷ್ಟಿನೀಡುತ್ತವೆ. ಶ್ರೀರಾಮ ಸೀತೆಗಾಗಿ ಸ್ನಾನ, ಸಂಧ್ಯಾವಂದನೆಗಾಗಿ ಬಾಣ ಪ್ರಯೋಗಿಸಿದ ಪರಿಣಾಮ ಸೀತಾಕೊಳ ಉದ್ಭವಿಸುತ್ತದೆ. ನಂತರದಲ್ಲಿ ಶ್ರೀರಾಮಾನುಜರು 12ನೇ ಶತಮಾನದಲ್ಲಿ ಈ ಕೊಳವನ್ನು ಕಲ್ಯಾಣಿಯಾಗಿ ಪ್ರತಿಷ್ಟಾಪನೆ ಮಾಡುತ್ತಾರೆ. ಅಂದಿನಿಂದ ಸೀತಾ ಕಲ್ಯಾಣಿಯ ನೀರನ್ನು ತೀರ್ಥವೆಂದೇ ಇಲ್ಲಿನ ಜನ ಭಾವಿಸುತ್ತಾರೆ. ದೇವತಾ ಆರಾಧನೆ, ಸೇವನೆ, ಸ್ನಾನದ ಬಳಕೆಗೆಲ್ಲಾ ಇದೇ ತೀರ್ಥವನ್ನೇ ಬಳಸುತ್ತಾ ಬಂದಿದ್ದೇವೆ ಎನ್ನುತ್ತಾರೆ ಇಲ್ಲಿನ ಅರ್ಚಕರು. 25 ವರ್ಷಗಳ ಹಿಂದೆ ಶ್ರೀರಾಮ ನವಮಿಯ ವೇಳೆಗೆ ಈ ಕಲ್ಯಾಣಿ ತುಂಬಿರುತ್ತಿತ್ತು. ಇದೀಗ ಪಂಪ್‌ಸೆಟ್‌ಗಳ ಪರಿಣಾಮ ಅಂತರ್ಜಲದ ಸಮಸ್ಯೆಯನ್ನ ಎದುರಿಸಬೇಕಾಗಿದೆ.

ಗಿಡಗಂಟೆ, ಬೇರುಗಳ ಮೂಲಕ ಹಾದು ಕಲ್ಯಾಣಿ ಸೇರಿಕೊಳ್ಳುತ್ತಿದ್ದ ಜಲ ಆಯುರ್ವೇದ ಔಷಧಿಯಗುಣ ಹೊಂದಿದೆ. ಈ ನೀರು ಬಳಸುವಾಗ ಜನ ಆರೋಗ್ಯವಾಗಿದ್ದರು. 12 ಮೂಲೆಯುಳ್ಳ ಈ ಕಲ್ಯಾಣಿಯ ನಿಖರ ಆಳದ ಬಗ್ಗೆ ಅಂದಾಜಿಸಿಲ್ಲವಾದರು, ಸುಮಾರು 85 ಅಡಿ ಆಳ, 150 ಅಡಿ ಉದ್ದ, 120 ಅಡಿ ಅಗಲ ಇರಬಹುದೆಂದು ಸ್ಥಳೀಯರು ತಿಳಿಸುತ್ತಾರೆ. ಕಲ್ಯಾಣಿ ಕೇವಲ ನೀರನ್ನಷ್ಟೇ ಒಳಗೊಂಡಿಲ್ಲ, ಅನೇಕ ಜೀವರಾಶಿಗಳನ್ನು ಒಳಗೊಂಡಿವೆ. ಇವೆಲ್ಲಾ ನಮ್ಮ ಬದುಕಿನ ಭಾಗವೇ ಆಗಿರುವ ಬಗ್ಗೆ ಇಲ್ಲಿನ ಜನ ನೆನಪು ಮಾಡಿಕೊಳ್ಳುತ್ತಾರೆ.

ಪುನಃಶ್ಚೇತನ ಚಟುವಟಿಕೆ:

ಜಲಜೀವನ ಮಿಷನ್ ಯೋಜನೆಯ ಭಾಗವಾಗಿ ಸಣ್ಣಜಲಮೂಲಗಳ ಪುನಃಶ್ಚೇತನ ಚಟುವಟಿಕೆ ಆಯೋಜಿಸಲು ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದಾಗ ಐತಿಹಾಸಿಕ ಹಿನ್ನೆಲೆಯಿರುವ ಈ ಸೀತಾ ಕಲ್ಯಾಣಿಯ ಪರಿಚಯವಾಗಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರ ಸಹಕಾರದೊಂದಿಗೆ 2021ರ ಜುಲೈ 26 ರಂದು ಕಲ್ಯಾಣಿಯನ್ನು ಪುನಃಶ್ಚೇತನಗೊಳಿಸಲು ಸಾಧ್ಯವಾಯಿತು. ಪುನಃಶ್ಚೇತನದ ನಂತರ ಕಲ್ಯಾಣಿಯ ಉಳಿವಿನ ಮಹತ್ವದ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ರಂಗೋಲಿ ಸ್ಪರ್ಧೇಯನ್ನು ಏರ್ಪಡಿಸಿ ಸಮುದಾಯವನ್ನು ಒಟ್ಟುಗೂಡಿಸಿ ಜಲಸಾಕ್ಷರತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಸುಮಾರು 100 ವರ್ಷಗಳ ಹಿಂದೆ ಈ ಭಾಗದ ಕೆರೆಯೊಡೆದು, ಪ್ರವಾಹದಿಂದ ಈ ಕಲ್ಯಾಣಿ ಮುಚ್ಚಿಹೋಗಿ, ಕೆಲವು ದಶಕಗಳ ನಂತರದಲ್ಲಿ ಇದರ ಮಟ್ಟುಗಳನ್ನು ಕಂಡ ಗ್ರಾಮಸ್ಥರು ಹೂಳುಮಣ್ಣನ್ನು ತೆಗೆದು ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಬಳಕೆಗೆ ಸಿದ್ಧಪಡಿಸಿದ್ದರೆಂಬ ಅಭಿಪ್ರಾಯಗಳನ್ನು ಪ್ರೇರೇಪಿಸಿ ಈಗ ಅದರ ಮರುಬಳಕೆಯಾಗುವಂತೆ ಪ್ರೋತ್ಸಾಹಿಸಲಾಯಿತು.

ಸುಮಾರು 50 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಇದೇ ಕಲ್ಯಾಣಿಯನ್ನು ಅವಲಂಬಿಸಿದ್ದೇವೆಂದು ಸ್ಥಳೀಯರು ಹೇಳುತ್ತಾರೆ. ಸತತ ಐದು ವರ್ಷ ನೀರಿನ ಬರ ಎದುರಾದರೂ ಈ ಕಲ್ಯಾಣಿಗೆ ನೀರಿನ ಬರ ತಟ್ಟಿರಲಿಲ್ಲ ಎನ್ನುತ್ತಾರೆ ಹಿರಿಕರು. ಪುನಃಶ್ಚೇತನ ಚಟುವಟಿಕೆಯ ಪರಿಣಾಮ ಹಾಗೂ ಮಳೆಯ ಪರಿಣಾಮ ಮತ್ತು ಸ್ಥಳೀಯ ನೀರಿನ ಮೂಲಗಳ ಸಹಕಾರದಿಂದ 2022ರ ಶ್ರೀರಾಮನವಮಿಗೆ ಕಲ್ಯಾಣಿ ಭರ್ತಿಯಾಗಿ ಅದ್ದೂರಿ ಶ್ರೀರಾಮೇಶ್ವರ ಉತ್ಸವ ನಡೆಯಲು ಕಾರಣವಾಯಿತು. ಇದೇ ನೀರನ್ನು ಮಡಿಸ್ನಾನ, ಪೂಜಾ ಬಳಕೆಗೆ, ಎಲ್ಲಾ ಶುಭಕಾರ್ಯಗಳಿಗೂ ಮೂಲಜಲವಾಗಿ ಬಳಕೆ ಮಾಡಲು ಪುನಃಶ್ಚೇತನದ ಮೂಲಕ ಸಾಧ್ಯವಾಯಿತು. ರಾಮೇಶ್ವರನ ಉತ್ಸವದಲ್ಲಿ ಕಲ್ಯಾಣಿಯ ಸುತ್ತಲೂ ನೆರೆದ ಜನರು ದೇವತಾ ಮೂರ್ತಿಯ ಸ್ನಾನ ಪೂಜೆಗಳನ್ನು ಕಲ್ಯಾಣಿಯ ಕಣ್ತುಂಬಿಕೊಂಡರು. ಇದು ಪುನಃಶ್ಚೇತನದಿಂದಾದ ಬದಲಾವಣೆ. ಈ ಬಾರಿಯ ಖುಷಿಗೆ ಯುವಕ ಮಂಡಳಿಯವರೆಲ್ಲಾ ಕಲ್ಯಾಣಿಯಲ್ಲಿ ಸಾಮೂಹಿಕವಾಗಿ ಈಜುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೆಲಸವನ್ನು ತಪ್ಪದೇ ನಡೆಸಿಕೊಂಡು ಹೋಗಲು ಬಗ್ಗೆ ಪಿಡಿಒ ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ನಿರ್ಧರಿಸಿದ್ದಾರೆ.

 3,953 total views,  2 views today

WhatsApp chat