
ಮುರುಡೇಶ್ವರ. ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕಿನಲ್ಲಿರುವ ಧಾರ್ಮಿಕ ಪುಣ್ಯ ಕ್ಷೇತ್ರ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಲು, ಶಿವನ ದರ್ಶನ ಪಡೆಯಲು ಭೇಟಿ ನೀಡುತ್ತಲೇ ಇರುತ್ತಾರೆ. ಮೂರು ಕಡೆಗಳಿಂದಲೂ ಅರಬ್ಬೀ ಸಮುದ್ರದಿಂದ ಸುತ್ತುವರೆದಿರುವ ಈ ರಮಣೀಯ ತಾಣವನ್ನು ಕಣ್ತುಂಬಿಕೊಳ್ಳೋದೇ ಕಣ್ಣಿಗೊಂದು ಹಬ್ಬ.
ಯಾವುದೇ ಪ್ರವಾಸಿ ತಾಣ ಅಂದಾಕ್ಷಣ ಅಲ್ಲಿಗೆ ಸಾಕಷ್ಟು ಪ್ರವಾಸಿಗರು ಪ್ರತಿದಿನ ಭೇಟಿ ನೀಡುವುದರಿಂದ ಅಲ್ಲಿ ಸ್ವಚ್ಛತೆ ಕಾಪಾಡುವುದು ಸಂಬಂಧಪಟ್ಟವರಿಗೆ ಸವಾಲೇ ಸರಿ. ಆದರೆ ಇಲ್ಲಿನ ಗ್ರಾಮ ಪಂಚಾಯಿತಿ ಅದರಲ್ಲಿ ಯಶಸ್ಸು ಕಂಡಿದೆ. ಪ್ರತಿದಿನ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದರಿಂದ ಮುರುಡೇಶ್ವರ ದೇಗುಲದ ಸುತ್ತಮುತ್ತ, ಬೀಚ್ ಗಳಲ್ಲಿ ಸ್ವಚ್ಛತೆ ನಿರ್ವಹಣೆ ಮಾಡುವುದು ಸ್ಥಳೀಯ ಗ್ರಾಮ ಪಂಚಾಯಿತಿಗೆ ದೊಡ್ಡ ತಲೆನೋವಾಗಿತ್ತು. ಈ ತಲೆನೋವಿಗೆ ರಾಮಬಾಣವಾಗಿದ್ದು ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣ.

ಇಲ್ಲಿನ ಮಾವಳ್ಳಿ 1 ಮತ್ತು 2 ಗ್ರಾಮ ಪಂಚಾಯತ್ ಗಳು ಈಗ ಸ್ವಚ್ಛ ಸಂಕೀರ್ಣ ಘಟಕವನ್ನು ಸ್ಥಾಪಿಸಿ ಕಸವನ್ನು ಪ್ರತಿನಿತ್ಯ ವಿಲೇವಾರಿ ಮಾಡುತ್ತಿರುವುದರಿಂದ ಈಗ ಇಲ್ಲಿನ ವಾತಾವರಣ ಸ್ವಚ್ಛವಾಗಿದೆ. ಮಾವಳ್ಳಿ – 1 ಮತ್ತು ಮಾವಳ್ಳಿ – 2 ಗ್ರಾಮ ಪಂಚಾಯತ್ ಗಳು ಒಟ್ಟಾಗಿ ಸೇರಿ ಬಹು ಗ್ರಾಮ ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ಮಾಣ ಮಾಡಿಕೊಂಡಿವೆ. ಶೇಕಡಾ 50 ರ ಅನುಪಾತದಂತೆ ಒಟ್ಟು 14.90 ಲಕ್ಷ ರೂಪಾಯಿ ವೆಚ್ಚದಲ್ಲಿ ಘಟಕವನ್ನು ಸ್ಥಾಪಿಸಿದೆ. ಅದರಂತೆ ಮಾವಳ್ಳಿ -1ರಲ್ಲಿ ಶೇಕಡಾ 65 ಮತ್ತು ಮಾವಳ್ಳಿ – 2 ರಲ್ಲಿ ಶೇಕಡಾ 35 ರಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ. ಸದ್ಯ ಸ್ವಚ್ಛ ಸಂಕೀರ್ಣದಲ್ಲಿ ಮೂವರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದೆ ಈ ಘಟಕದ ನಿರ್ವಹಣೆಯ ಜವಾಬ್ದಾರಿಯನ್ನು ಸಂಜೀವಿನಿ ಸ್ವಸಹಾಯ ಸಂಘಗಳಿಗೆ ನಿರ್ವಹಿಸಲು ಪಂಚಾಯತ್ ಮುಂದಾಗಿದೆ.

ಮಾವಳ್ಳಿ – 1 ಮತ್ತು ಮಾವಳ್ಳಿ – 2 ಗ್ರಾಮ ಪಂಚಾಯಿತಿಗಳು ಭೌಗೋಳಿಕವಾಗಿ ತುಂಬಾ ವಿಸ್ತಾರವಾಗಿದೆ. ಮಾವಳ್ಳಿ – 1 ರಲ್ಲಿ ಒಟ್ಟು 13 ಮಜಿರೆಗಳಿದ್ದು, 7 ವಾರ್ಡಳನ್ನು ಹೊಂದಿದೆ. ಗ್ರಾಮ ಪಂಚಾಯತ್ 27 ಸದಸ್ಯರನ್ನು ಹೊಂದಿದೆ. ಜನಸಂಖ್ಯೆ ದೃಷ್ಟಿಯಿಂದ ನೋಡಿದಾಗ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಕುಟುಂಬಗಳು ವಾಸಿಸುತ್ತಿದೆ. 10,439 ಜನಸಂಖ್ಯೆಯಿದ್ದು, 2577 ಕುಟುಂಬಗಳಿವೆ. ಪಂಚಾಯತ್ ವ್ಯಾಪ್ತಿಯಲ್ಲಿ 108 ಅಂಗಡಿಗಳು, 45 ಹೋಟೇಲ್ ಗಳು, 2 ಆಸ್ಪತ್ರೆಗಳು, 14 ಅಂಗನವಾಡಿಗಳು, 2 ಶಾಲೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಂತೆ ಮಾವಳ್ಳಿ – 2 ರಲ್ಲಿ ಒಟ್ಟು 13 ಮಜಿರೆಗಳಿದ್ದು, 5 ವಾರ್ಡ್ ಗಳನ್ನು ಹೊಂದಿದೆ. ಪಂಚಾಯತ್ 17 ಸದಸ್ಯರನ್ನು ಹೊಂದಿದೆ. ಮಾವಳ್ಳಿ – 2 ಗ್ರಾಮ ಪಂಚಾಯತ್ ಒಟ್ಟು 6623 ಜನಸಂಖ್ಯೆ ಹೊಂದಿದ್ದು, 1689 ಕುಟುಂಬಗಳಿವೆ. ಈ ಪಂಚಾಯತ್ ವ್ಯಾಪ್ತಿಯಲ್ಲಿ 20 ಅಂಗಡಿಗಳು, 14 ಹೋಟೇಲ್ ಗಳು, 45 ಲಾಡ್ಜ್ ಗಳು, ಇತರೆ 50 ಅಂಗಡಿಗಳು, 1 ಪದವಿ ಕಾಲೇಜು, 1 ಪಾಲಿಟೆಕ್ನಿಕ್, ಸೇರಿದಂತೆ 1 ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.

ಈಗ ಮಾವಳ್ಳಿ 1 ಮತ್ತು 2 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಶುಚಿತ್ವ ಕಾಪಾಡಿಕೊಳ್ಳುವ ದೃಷ್ಟಿಯಿಂದ ಹೊಸದಾಗಿ ಒಣ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಶುಚಿತ್ವದ ಬಗ್ಗೆ ಹೆಚ್ಚು ಒತ್ತು ನೀಡುವ ಜೊತೆಗೆ ಮನೆ ಮತ್ತು ಅಂಗಡಿಗಳಿಂದ ತ್ಯಾಜ್ಯವನ್ನು ಪಡೆಯಲು ಕ್ರಮಕೈಗೊಳ್ಳಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನವನ್ನೇ ಆರಂಭಿಸಿರುವ ಮಾವಳ್ಳಿ 1 ಮತ್ತು 2 ಗ್ರಾಮ ಪಂಚಾಯತ್, ಗ್ರಾಮದ ಪ್ರಮುಖ ರಸ್ತೆ, ಅಂಗಡಿಗಳ ಮುಂದೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಬೋರ್ಡ್ ಗಳನ್ನು ಅಳವಡಿಸಿದೆ. ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸಮರ್ಪಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿರುವುದರಿಂದ ಪ್ರವಾಸಿ ತಾಣ ಮುರುಡೇಶ್ವರ ಈಗ ಸ್ವಚ್ಛತೆಯ ಮೂಲಕ ಗಮನ ಸೆಳೆಯುತ್ತಿದೆ.
ಮುಖ್ಯವಾಗಿ ಮಾವಳ್ಳಿ 1 ಮತ್ತು 2 ರಲ್ಲಿ ಮಾಂಸಾಹಾರಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸಮಸ್ಯೆ ಎದುರಾಗಿತ್ತು. ಈ ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ 100 ಕೆ.ಜಿಯಷ್ಟು ಮಾಂಸಾಹಾರಿ ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು. ಇದನ್ನು ಸಮಪರ್ಕವಾಗಿ ವಿಲೇವಾರಿ ಮಾಡಲು ಕಷ್ಟ ಸಾಧ್ಯವಾದ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಂ ರವರು ಹೆಚ್ಚು ಮುತುವರ್ಜಿ ವಹಿಸಿ,ಮುರುಡೇಶ್ವರ ಸೇರಿದಂತೆ ಕರಾವಳಿಯ 9 ಗ್ರಾಮ ಪಂಚಾಯತ್ ಗಳು ಮಂಗಳೂರಿನ ಪೆಡಿಗ್ರಿ ಉತ್ಪಾದಕರ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಂಡು ಮಾಂಸಹಾರಿ ತ್ಯಾಜ್ಯವನ್ನು ಕಳಿಸುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಮಾಂಸಹಾರಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಪರಿಹಾರ ಸಿಕ್ಕಿದೆ.

ಇದರ ಜೊತೆಗೆ ಮುಖ್ಯವಾಗಿ ಮಾವಳ್ಳಿ 1 ಮತ್ತು 2 ಗ್ರಾಮ ಪಂಚಾಯತ್ ಈಗಾಗಲೇ ಒಡಂಬಡಿಕೆ ಮಾಡಿಕೊಂಡು ಬಹು ಗ್ರಾಮ ಸ್ವಚ್ಛ ಸಂಕೀರ್ಣ ಘಟಕ ಹೊಂದಿದೆ. ಅದರಂತೆ ಎರಡು ಗ್ರಾಮ ಪಂಚಾಯತ್ ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ತ್ಯಾಜ್ಯ ಸಂಗ್ರಹಿಸಲು ಸ್ವಚ್ಛ ವಾಹಿನಿಯನ್ನು ಖರೀದಿಸಿದೆ. ಗ್ರಾಮದ ಬೀಚ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹ ಆರಂಭಿಸಲಾಗಿದ್ದು, ಮನೆ ಮತ್ತು ಅಂಗಡಿಗಳಲ್ಲಿ ಸಮಪರ್ಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಗ್ರಾಮ ಪಂಚಾಯತ್ ಮುಂದಾಗಿದೆ.
ಒಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ಮುರುಡೇಶ್ವರ ಈಗ ಸ್ವಚ್ಛತೆಯಿಂದಲೂ ಕಂಗೊಳಿಸುತ್ತಿದೆ. ಮಾವಳ್ಳಿ 1 ಮತ್ತು 2 ರ ಗ್ರಾಮ ಪಂಚಾಯತ್ ಆಡಳಿತ ಹೀಗೆ ಸ್ಚಚ್ಛತೆ ಕಡೆಗೆ ಇನ್ನಷ್ಟು ಗಮನವನ್ನು ಕೇಂದ್ರಿಕರಿಸಿದ್ದಲ್ಲಿ ಮುರುಡೇಶ್ವರದ ಹೆಸರು ಇನ್ನಷ್ಟು ಶೋಭಿಸಲಿದೆ.

4,385 total views, 4 views today