Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು ಪಂಚಾಯತ್ ವ್ಯಾಪ್ತಿಯ ಅಣ್ಣೂರು ಗ್ರಾಮ ಪಂಚಾಯಿತಿಯು ಅಣ್ಣೂರು ಗ್ರಾಮದಲ್ಲಿ ಸ್ಮಶಾನಕ್ಕೆ ನಿಗದಿಯಾಗಿರುವ ಸ್ಥಳಕ್ಕೆ ಹೊಂದಿಕೊಂಡಂತಿರುವ ಅನುಪಯುಕ್ತ ಸ್ಥಳದಲ್ಲಿ ತ್ಯಾಜ್ಯ ನೀರಿನ ನಿರ್ವಹಣೆಗಾಗಿ ತಾಜ್ಯ ನೀರಿನ ಸ್ಥಿರೀಕರಣ ಹೊಂಡ (Water stabilization Pond)ವನ್ನು ನಿರ್ಮಿಸಿದ್ದು, ಗ್ರಾಮದ  ಚರಂಡಿಗಳ ತ್ಯಾಜ್ಯ ನೀರನ್ನು ಇಂಗುವಂತೆ ಮಾಡುವಲ್ಲಿ ಯಶಸ್ವಿಯಾಗಿರುತ್ತದೆ.

ಅಣ್ಣೂರು ಗ್ರಾಮದಲ್ಲಿ ತಾಜ್ಯ ನೀರಿನ ಸ್ಥಿರೀಕರಣ ಹೊಂಡ ನಿರ್ಮಾಣದ ಮುಂಚಿನ ಸ್ಥಿತಿ

ಅಣ್ಣೂರು ಗ್ರಾಮದಲ್ಲಿ ಅಂದಾಜು 1200 ಕುಟುಂಬಗಳಿದ್ದು, ಈ ಕುಟುಂಬಗಳು ಅಡುಗೆ ಮಾಡಲು, ಬಟ್ಟೆಒಗೆಯಲು, ಪಾತ್ರೆ ತೊಳೆಯಲು, ಸ್ನಾನ ಮಾಡಲು ಮತ್ತು ಇನ್ನಿತರೆ ಗೃಹ ಕೃತ್ಯಗಳಿಗಾಗಿ ಬಳಕೆ ಮಾಡುವ ನೀರನ್ನು ಚರಂಡಿ ಕಾಲುವೆಗಳ ಮೂಲಕ ಊರ ಹೊರಗಿನ ಸ್ಥಳಕ್ಕೆ ಹರಿಯಬಿಡಲಾಗಿತ್ತು. ಪ್ರಾರಂಭದಲ್ಲಿ ಗ್ರಾಮದ ಒಳಗಿನ ಸ್ವಚ್ಛತೆ ಸುಧಾರಣೆ ಆಯಿತು ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಚರಂಡಿ ನೀರು ಸೇರುತ್ತಿದ್ದ ಊರ ಹೊರಗಿನ ಸ್ಥಳದಲ್ಲಿ ಕಲುಷಿತ ವಾತಾವರಣ ಉಂಟಾಗಿ ಹೊಸ ಸಮಸ್ಯೆಯೊಂದು ಪ್ರಾರಂಭವಾಯಿತು. ಆ ಸ್ಥಳದಲ್ಲಿ ವಾಸಿಸುತ್ತಿದ್ದ ಕುಟುಂಬಗಳು ಪ್ರತಿ ದಿನ ಗ್ರಾಮ ಪಂಚಾಯತ್‌ಗೆ ಬಂದು ತ್ಯಾಜ್ಯ ನೀರನ್ನು ತೆರವುಗೊಳಿಸಿ ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಡ ಹಾಕಲು ಪ್ರಾರಂಭಿಸಿದರು.

ಈ ಸಮಸ್ಯೆಯನ್ನು ಪರಿಹರಿಸಲು ತಾಜ್ಯನೀರಿನ ಸ್ಥಿರೀಕರಣ ಹೊಂಡವನ್ನು ನಿರ್ಮಿಸಲು ಯೋಜನೆ ರೂಪಿಸಲಾಯಿತು. ಸದರಿ ಹೊಂಡವನ್ನು ಗ್ರಾಮ ಪಂಚಾಯತ್‌ನ ಸ್ವಂತ ನಿಧಿಯಿಂದ ನಿರ್ಮಾಣ ಮಾಡಲು ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಕ್ರಿಯಾಯೋಜನೆಗೆ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ನಿಂದ ಅನುಮೋದನೆ ಪಡೆಯಲಾಯಿತು.

ಜಲ ಸಂರಕ್ಷಣೆಯ ಕುರಿತು ಅರಿವು ಹೊಂದಿದ್ದ ಗ್ರಾಮ ಪಂಚಾಯತ್‌ನ ಹಿಂದಿನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯವರಾದ ಶ್ರೀ ಮಧುಸೂದನ್‌ರವರು ಪಂಚಾಯತ್‌ರಾಜ್‌ ಇಂಜಿನಿಯರಿಂಗ್ ವಿಭಾಗದ ಅಭಿಯಂತರರೊಂದಿಗೆ ಚರ್ಚಿಸಿ ತ್ಯಾಜ್ಯನೀರು ನಿಲ್ಲುತ್ತಿದ್ದ ಸ್ಥಳದಲ್ಲಿ ತ್ಯಾಜ್ಯ ಸ್ಥಿರೀಕರಣ  ಹೊಂಡವನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿದರು.

ತಾಜ್ಯ ನೀರಿನ ಸ್ಥಿರೀಕರಣ ಹೊಂಡ ನಿರ್ಮಾಣದ ವಿಧಾನ:

ಮೊದಲಿಗೆ ತ್ಯಾಜ್ಯ ನೀರು ಬಂದು ಸೇರುವ ಸ್ಥಳದಲ್ಲಿ ಸಿಮೆಂಟ್ ರಿಂಗ್‌ಗಳನ್ನು ಬಳಸಿ ಇನ್‌ಲೆಟ್‌ ಟ್ಯಾಂಕ್‌ ಅನ್ನು ನಿರ್ಮಿಸಿದರು. ಈ ಇನ್‌ಲೆಟ್‌ ಟ್ಯಾಂಕ್‌ಗೆ ನೀರು ಬರುವ ಮುನ್ನ ಘನ ತ್ಯಾಜ್ಯ ವಸ್ತುಗಳು ಬರದಂತೆ ತಡೆಯಲು ಕಬ್ಬಿಣದ ಸರಳುಗಳನ್ನು ಅಳವಡಿಸಲಾಯಿತು. ಈ ಟ್ಯಾಂಕ್‌ಗೆ ಬಂದ ತ್ಯಾಜ್ಯ ನೀರು ಹೊರಹೋಗಲು ಟ್ಯಾಂಕ್‌ನ ಮೇಲ್ಭಾಗದಲ್ಲಿ ಪೈಪ್ ಅಳವಡಿಸಿದರು ಇದರಿಂದ ನೀರಿನೊಂದಿಗೆ ಬಂದ ತ್ಯಾಜ್ಯಅಲ್ಲೇ ಉಳಿದ ಕೇವಲ ನೀರು ಮಾತ್ರ ಹೊರ ಹೋಗಲು ಸಾಧ್ಯವಾಯಿತು.

ಇನ್‌ಲೆಟ್‌ಟ್ಯಾಂಕ್‌ನಿಂದ ಹೊರಬಂದ ನೀರನ್ನು ಸಂಸ್ಕರಿಸಲು 20 X 10 ಅಡಿ ಅಳತೆಯ ತೊಟ್ಟಿಯೊಂದನ್ನು ನಿರ್ಮಿಸಲಾಯಿತು. ಈ ತೊಟ್ಟಿಯ ತಳಬಾಗದಲ್ಲಿ 2 ಅಡಿಗಳಷ್ಟುಎತ್ತರದಪ್ಪಕಲ್ಲುಗಳನ್ನು ಹಾಕಲಾಯಿತು, ನಂತರ 2 ಅಡಿಗಳಷ್ಟುಎತ್ತರ 40 mm ಗಾತ್ರದ ಕಲ್ಲುಗಳನ್ನುತುಂಬಲಾಯಿತು. ಅದರ ಮೇಲೆ ೧ ಅಡಿಗಳಷ್ಟುಎತ್ತರ 20 mm ಗಾತ್ರದ ಜಲ್ಲಿಕಲ್ಲುಗಳನ್ನುತುಂಬಲಾಯಿತು. ನಂತರ ಕಲ್ಲುಗಳ ಮೇಲೆ ಒಂದು 3 ಇಂಚು ಇದ್ದಿಲನ್ನು ಹಾಕಿ ಅದರ ಮೇಲೆ ನೈಲಾನ್‌ಪರದೆಯನ್ನು ಹಾಸಲಾಯಿತು. ಕೊನೆಯದಾಗಿ 2 ಅಡಿಗಳಷ್ಟು ಎತ್ತರ ಮರಳನ್ನು ತುಂಬಲಾಯಿತು. ಇನ್‌ಲೆಟ್‌ ಟ್ಯಾಂಕ್‌ನಿಂದ ಬಂದ ನೀರು ಸಂಸ್ಕರಣಾ ತೊಟ್ಟಿಯ ಮೂಲಕ ಸಂಸ್ಕರಣೆಯಾಗಿ ಪಕ್ಕದಲ್ಲೇ ನಿರ್ಮಿಸಲಾಗಿದ್ದ ಹೊಂಡದಲ್ಲಿ ಶೇಖರಣೆಯಾಯಿತು.  ಪ್ರಸ್ತುತ ನೀರನ್ನು ಸ್ಮಶಾನದಲ್ಲಿ ನೆಟ್ಟಿರುವ ಗಿಡಗಳಿಗೆ ನೀರೆತ್ತುವ ಯಂತ್ರದ ಮೂಲಕ ಹಾಯಿಸಲಾಗುತ್ತಿದೆ.

ಸದರಿ ಸ್ಥಿರೀಕರಣ ಹೊಂಡದ ಅನುಕೂಲತೆಯನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ. ಇದರ ಜೊತೆಗೆ ಗೃಹಬಳಕೆಯ ತ್ಯಾಜ್ಯ ನೀರನ್ನು ಮನೆ ಹಂತದಲ್ಲಿಯೇ ಇಂಗಿಸುವ ವ್ಯವಸ್ಥೆಯನ್ನು ಸೋಕ್ ಪಿಟ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಗ್ರಾಮ ಪಂಚಾಯತ್‌ ಅನ್ನು ದ್ರವ ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿ ತೀರ್ಮಾನಿಸಿದೆ. ನರೇಗಾ ಯೋಜನೆ, 15ನೇ ಹಣಕಾಸು ಯೋಜನೆ ಮತ್ತು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಗಳ ಸಂಯೋಜನೆಯೊಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಿ ಜಿಲ್ಲೆ ಮತ್ತು ರಾಜ್ಯದಲ್ಲಿಯೇ ಮಾದರಿ ಗ್ರಾಮ ಪಂಚಾಯತ್ ಎನ್ನಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯನ್ನಿಡಲಾಗುತ್ತಿದೆ.

ಅಣ್ಣೂರು ಗ್ರಾಮ ಪಂಚಾಯತ್‌ಗೆ 2018-19ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪಂಚಾಯತ್ ಶಕ್ತೀಕರಣ ಪುರಸ್ಕಾರ ದೊರೆಯಲು ಪ್ರಮುಖ ಕಾರಣವೇ ಗ್ರಾಮ ಪಂಚಾಯತ್‌ನಲ್ಲಿ ಕೈಗೊಳ್ಳಲಾದ ಸ್ವಚ್ಛತಾ ಚಟುವಟಿಕೆಗಳು. ಸದರಿ ಪ್ರಶಸ್ತಿಯಿಂದ ಗ್ರಾಮ ಪಂಚಾಯತ್‌ನ ಜವಾಬ್ದಾರಿ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿಯೂ ಸ್ವಚ್ಛತೆಯ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸಲಾಗುತ್ತದೆ.

ಪ್ರಸ್ತುತ ಚರಂಡಿ ನೀರು ನಿಲ್ಲುತ್ತಿದ್ದ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಈ ಮಾದರಿಯಿಂದ ಸಾಧ್ಯವಾಯಿತು. ಅಲ್ಲದೇ ಚರಂಡಿಯ ನೀರನ್ನು ಸಂಸ್ಕರಿಸಿ ಗಿಡ ಮರಗಳಿಗೆ ನೀರುಣಿಸುವ ಮೂಲಕ ಪರಿಸರವನ್ನು ಸಂರಕ್ಷಿಸಲು ಹಾಗೂ ಹೆಚ್ಚುವರಿ ನೀರನ್ನು ಭೂಮಿಯಲ್ಲಿ ಇಂಗಿಸಲು ಸಾಧ್ಯವಾಯಿತು. ಈ ಮೂಲಕ ಸ್ವಚ್ಛಗ್ರಾಮ ಸ್ವಚ್ಛ ಪರಿಸರ ಪರಿಕಲ್ಪನೆಯನ್ನು ಅಣ್ಣೂರು ಗ್ರಾಮದಲ್ಲಿ ಸಾಕಾರಗೊಳಿಸಲಾಗಿದೆ.  ಈ ಮಾದರಿಯನ್ನುಗ್ರಾಮ ಪಂಚಾಯತ್  ವ್ಯಾಪ್ತಿಯ ಇತರ ಗ್ರಾಮಗಳಲ್ಲಿಯೂ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ.

ಅಶ್ವಿನಿ ಎಂ.ಆರ್,

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ,

ಅಣ್ಣೂರು ಗ್ರಾಮ ಪಂಚಾಯತ್,

ಮದ್ದೂರು ತಾಲ್ಲೂಕು

 6,421 total views,  6 views today

WhatsApp chat