Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೌಶಲ್ಯ ಮತ್ತು ಉದ್ಯೋಗಶೀಲತೆ ಬಹುಮುಖ್ಯ ಪಾತ್ರ ವಹಿಸುತ್ತವೆ. ಅಲ್ಲದೆ, ದೇಶದ ಆರ್ಥಿಕ ಸ್ಥಿತಿಗತಿಗಳ ಉನ್ನತೀಕರಣಕ್ಕೂ ಇದು ಲಾಭದಾಯಕ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಭಾರತದಲ್ಲಿ ಸಾಕಷ್ಟು ಯುವಕರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಶಿಕ್ಷಣ ಮತ್ತು ತರಬೇತಿಯ ಅಭಾವದಿಂದಾಗಿ ಅವರ ಕಾರ್ಯಕ್ಷಮತೆ ಪ್ರಮಾಣ ಕಡಿಮೆಯಿದೆ. ಹಾಗಾದರೆ, ಸಾಮಾನ್ಯ ಕಾರ್ಮಿಕರನ್ನು ಕುಶಲಕರ್ಮಿಗಳಾಗಿ ಸಿದ್ಧಗೊಳಿಸುವುದು ಹೇಗೆ? ಅವರ ಕಾರ್ಯಕ್ಷಮತೆ ಹೆಚ್ಚಿಸುವುದು ಹೇಗೆ? ಇದಕ್ಕಾಗಿಯೇ ಕೇಂದ್ರ ಸರ್ಕಾರವು ಕಾರ್ಮಿಕರ ಕೌಶಲ್ಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಭಾರತದ ಶೇ.70ರಷ್ಟು ಕಾರ್ಮಿಕರು ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿದ್ದು, ಇವರಿಗೆ ಕೌಶಲ್ಯ ತರಬೇತಿ ಒದಗಿಸಿ ಉದ್ಯೋಗಾವಕಾಶ ನೀಡುವುದಷ್ಟೇ ಅಲ್ಲದೆ, ಸ್ವಯಂ ಉದ್ಯೋಗಕ್ಕೂ ಇದು ದಾರಿಯಾಗಲಿದೆ.

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ)

ಕೇಂದ್ರ ಸರ್ಕಾರದ ಈ ಯೋಜನೆಯು ಭಾರತೀಯ ಯುವಜನರಿಗೆ ಉದ್ಯಮಾಧಾರಿತ ಕೌಶಲ್ಯ ತರಬೇತಿಯನ್ನು ಪಡೆಯಲು ಮತ್ತು ಉತ್ತಮ ಜೀವನೋಪಾಯ ಮಾರ್ಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಅಗತ್ಯವಾದ ಕುಶಲಕರ್ಮಿಗಳನ್ನು ಗುರುತಿಸಲು ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಲ್ಲಿ ಪಿಎಂಕೆವಿವೈ ಪ್ರಮುಖ ಪಾತ್ರ ವಹಿಸಿದೆ.

ಗ್ರಾಮೀಣ ಭಾಗದ ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲು ನಿರಂತರ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ದೀರ್ಘಾವಧಿಯ ಆಧಾರದ ಮೇಲೆ ಎಲೆಕ್ಟ್ರಿಕ್, ಪ್ಲಂಬಿಂಗ್, ಮೇಸ್ತ್ರಿ ಹೀಗೆ ವಿವಿಧ ಕೆಲಸಗಳಲ್ಲಿ ನುರಿತ ಮಾನವ ಸಂಪನ್ಮೂಲದ ಅಗತ್ಯ ಇರುವುದರಿಂದ ಜಿಲ್ಲಾವಾರು ಮಾನವ ಸಂಪನ್ಮೂಲದ ಅಗತ್ಯಕ್ಕೆ ಅನುಗುಣವಾಗಿ ಪ್ರಧಾನ ಮಂತ್ರಿ ಕೌಶಲ ವಿಕಾಸ ಕೇಂದ್ರದಲ್ಲಿ ಯುವ ಕುಶಲಕರ್ಮಿಗಳಿಗೆ ತರಬೇತಿಯನ್ನು ನೀಡಿ, ಅವರಿಗೆ ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಉದ್ಯೋಗ ನೀಡಿ, ಕೈಗೊಳ್ಳುವ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತಿದೆ.

ಉನ್ನತಿ ಯೋಜನೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂಜಿಎನ್‌ಆರ್‌ಇಜಿಎಸ್) ಯೋಜನೆಯಡಿ 100 ದಿನ ಕಾರ್ಯನಿರ್ವಹಿಸಿದ ಕೌಶಲ್ಯರಹಿತ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ‘ಉನ್ನತಿ’ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಪ್ರಮುಖ ಉದ್ದೇಶಗಳೆಂದರೆ, ಕೌಶಲ್ಯ ತರಬೇತಿಯ ಮೂಲಕ ಸ್ಥಳೀಯ ಸಮುದಾಯಗಳ ಸಬಲೀಕರಣ, ಕಾರ್ಮಿಕರಿಗೆ ಉತ್ತಮ ಉದ್ಯೋಗವಕಾಶ ಒದಗಿಸುವುದು, ನುರಿತ ಕಾರ್ಮಿಕರಾಗಿ ಸಜ್ಜುಗೊಳಿಸುವುದು, ಸ್ವಯಂ ಉದ್ಯೋಗವಕಾಶ ಸೃಷ್ಟಿಗೆ ಅವಕಾಶ ಕಲ್ಪಿಸುವುದು ಹಾಗೂ ತರಬೇತಿ ಅವಧಿಯಲ್ಲಿ ಸ್ಟೈಫಂಡ್ ನೀಡುವ ಮೂಲಕ ಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗುವುದಾಗಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕರ್ನಾಟಕದಲ್ಲಿ ಯೋಜನೆಯ ಅನುಷ್ಠಾನ ಪೂರ್ವ ಚಟುವಟಿಕೆಗಳು ಪ್ರಗತಿಯಲ್ಲಿವೆ.

JJM ಮತ್ತು SBM ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ನುರಿತ ಕುಶಲಕರ್ಮಿಗಳಷ್ಟೇ ಅಲ್ಲದೆ, ಯೋಜನೆಯ ಅನುಷ್ಠಾನ ಪೂರ್ವ ಮತ್ತು ಅನುಷ್ಠಾನೋತ್ತರ ವ್ಯವಸ್ಥೆಗಳ ನಿರ್ವಹಣೆಗಾಗಿ ಜವಾಬ್ದಾರಿಯುತ ಮತ್ತು ಸ್ಪಂದನಾಶೀಲ ನಾಯಕತ್ವದ ಅಗತ್ಯವಿದೆ. ಒಂದೆಡೆ, ಎಚ್‌ಆರ್‌ಡಿ ಬೆಂಬಲ ಚಟುವಟಿಕೆಗಳು ಯೋಜನೆಯ ವಿವಿಧ ಸಹಭಾಗೀದಾರರಾದ ಯುವಕರು, ಮಹಿಳೆಯರು ಮತ್ತು ಸಂಘ ಸಂಸ್ಥೆಗಳ ಸಾಮರ್ಥ್ಯವನ್ನು ತರಬೇತಿಗಳ ಮೂಲಕ ಅಭಿವೃದ್ಧಿಗೊಳಿಸುವಲ್ಲಿ ಕಾರ್ಯೋನ್ಮುಖವಾಗಿವೆ. ಮತ್ತೊಂದೆಡೆ, ಮಾಹಿತಿ ಶಿಕ್ಷಣ ಸಂವಹನ (ಐಇಸಿ) ಚಟುವಟಿಕೆಗಳು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಮುಖವಾಗಿದೆ. ಐಇಸಿ ಚಟುವಟಿಕೆಗಳಾದ ಪಿಆರ್‌ಎ ಚಟುವಟಿಕೆಗಳು, ಅಂತರ್-ವ್ಯಕ್ತಿ ಸಂವಹನ (Inter Personal Communication), ವರ್ತನೆ ಬದಲಾವಣೆ ಸಂವಹನ (Behavioral Change Communication) ಮತ್ತು ಇತರ ಎಲ್ಲಾ ಸಂಬಂಧಿತ ಸಂವಹನ ಚಟುವಟಿಕೆಗಳನ್ನು ಯೋಜನೆಯಡಿ ಕೈಗೊಂಡು ಗ್ರಾಮೀಣ ಜನರಿಗೆ ನೀರು, ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಅನುಷ್ಠಾನೋತ್ತರ ನಿರ್ವಹಣೆ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ.

 5,649 total views,  6 views today

WhatsApp chat