Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ನೀರುಇದಿಲ್ಲದೆ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹನಿ ನೀರಿನ ಮೌಲ್ಯ ನೀರಿಗಾಗಿ ಪರಿತಪಿಸಿದವರಿಗಷ್ಟೇ ಗೊತ್ತು. ನೀರಿಗಾಗಿ ಒಂಟಿ ಹೋರಾಟ ಮಾಡಿ, ಯಶಸ್ವಿ ಕೃಷಿಕರಾಗಿ, ಇತ್ತೀಚೆಗೆ ಪದ್ಮಶ್ರೀ ಗೌರವ ಭಾಜನರಾದ ವಿಶೇಷ ವ್ಯಕ್ತಿಯ ಬದುಕಿನ ಕಥೆ ಇಲ್ಲಿದೆ.

ಅಂದ್ಹಾಗೆ ನಮ್ಮ ಕಥೆಯ ನಾಯಕ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 76ರ ಹರೆಯದ ಮಹಾಲಿಂಗ ನಾಯ್ಕ. ಮಹಾಲಿಂಗ ನಾಯ್ಕ ಅವರು ಸುಮಾರು 42 ವರ್ಷಗಳ ಹಿಂದೆ ತಮ್ಮ ಮನೆಯ ಸಮೀಪದ ಮಹಾಬಲ ಭಟ್ ಎಂಬವರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಸ್ವಂತ ಜಮೀನು ಹೊಂದಬೇಕು ಎಂಬ ಕನಸ್ಸು ಹೊಂದಿದ್ದ ಮಹಾಲಿಂಗ ನಾಯ್ಕ ಅವರಿಗೆ 1978ರಲ್ಲಿ ಮಹಾಬಲ ಭಟ್ ಅವರು ಎರಡು ಎಕರೆ ಜಾಗ ನೀಡಿದ್ರು.

ಜಾಗವೇನೋ ಸಿಕ್ಕಿತ್ತು.ಆದರೆ ಅದು ಮನೆ ಕಟ್ಟಲು ಅಸಾಧ್ಯವಾದ, ನೀರಿಲ್ಲದ ಇಳಿಜಾರು ಗುಡ್ಡವಾಗಿತ್ತು. ಆಗಿನ ಪರಿಸ್ಥಿತಿಗೆ ಅಲ್ಲಿ ಕೃಷಿ ತೋಟ ಮಾಡುವುದು ಕನಸಿನ ಮಾತೇ ಆಗಿತ್ತು.ಆದರೆ ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡ ಮಹಾಲಿಂಗ ನಾಯ್ಕ ಅವರು ಅದಕ್ಕಾಗಿ ಭಗೀರಥ ಪ್ರಯತ್ನ ಆರಂಭಿಸಿದರು. ಬಾವಿ ತೊಡಲು ಹಣವಿಲ್ಲದ ಕಾರಣ ಅವರು ಸುರಂಗ ಕೊರೆಯುವ ನಿರ್ಧಾರ ಮಾಡಿದರು. ಅರ್ಧ ದಿನ ಕೂಲಿ ಕೆಲಸ ಮಾಡಿ ಮನೆಗೆ ಬಂದು ಸುರಂಗ ಕೊರೆಯುವ ಕೆಲಸ ಮಾಡುತ್ತಿದ್ದರು. ರಾತ್ರಿ ಸೀಮೆ ಎಣ್ಣೆ , ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದರು. ಆದರೆ ನೀರು ಮಾತ್ರ ಸಿಗಲಿಲ್ಲ. ಹಾಗಂಥ ಅವರು ಪ್ರಯತ್ನ ಕೈಬಿಡಲಿಲ್ಲ. ಹೀಗೆ ಪ್ರಯತ್ನ ಮುಂದುವರೆಸಿ 7ನೇ ಸುರಂಗ ಕೊರೆಯುತ್ತಿದ್ದಂತೆ ಅವರಿಗೆ ಬೇಕಾದಷ್ಟು ನೀರು ಸಿಕ್ಕಿತ್ತು. ಆಗ ಮಹಾಲಿಂಗ ನಾಯ್ಕ ಅವರಿಗೆ ಜಗತ್ತನ್ನೇ ಗೆದ್ದ ಸಂಭ್ರಮ. ಮಹಾಲಿಂಗ ನಾಯ್ಕ ಅವರದ್ದು ಹುಚ್ಚು ಪ್ರಯತ್ನ ಎಂದವರಿಗೆ ಇದು ತಿರುಗೇಟು ನೀಡಿದಂತಿತ್ತು.

ಆಗ ಅವರ ತೋಟದ ಕನಸು ಮತ್ತೆ ಗರಿಗೆದರಿತು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ಯಥೇಚ್ಛ ನೀರಿನ ಲಭ್ಯತೆಯಿಂದಾಗಿ ಅವರ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಿಕೆ, ತೆಂಗು , ಬಾಳೆ ಕೃಷಿ ಕೈಗೊಂಡರು. ಮಡದಿ ಲಲಿತ ಮೂವರು ಮಕ್ಕಳು ಪ್ರಯತ್ನಕ್ಕೆ ಕೈ ಜೋಡಿಸಿದರು. ಮುಂದೆ ಯಶಸ್ವಿ ಕೃಷಿಕರಾದರು. ಮಹಾಲಿಂಗ ನಾಯ್ಕ ಅವರಿಗೆ ನೀರಿಗಾಗಿ ತಾವು ಅನುಭವಿಸಿದ ಕಷ್ಟದ ಅರಿವಿರುವುದರಿಂದ ಇಂದಿಗೂ ಹನಿ ನೀರು ವ್ಯರ್ಥವಾಗದಂತೆ ಎಚ್ಚರವಹಿಸುತ್ತಿದ್ದಾರೆ. ತೋಟದ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿಕೊಂಡು ಜಲಸಂರಕ್ಷಣೆಗೆ ಕ್ರಮಕೈಗೊಂಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರು ಪೋಲಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಅನೇಕ ಅಂತರರಾಷ್ಟ್ರೀಯ ವಾಹಿನಿಗಳು ಕೂಡ ಮಹಾಲಿಂಗ ನಾಯ್ಕ ಅವರ ಕುರಿತಾಗಿ ಸಾಕ್ಷ್ಯ ಚಿತ್ರಗಳನ್ನು ತಯಾರಿಸಿವೆ. ಇದಕ್ಕಿಂತ ಹೆಚ್ಚಾಗಿ 2022ನೇ ಸಾಲಿನ ಪದ್ಮಶ್ರೀ ಗೌರವಕ್ಕೂ ಮಹಾಲಿಂಗ ನಾಯ್ಕ ಅವರು ಪಾತ್ರವಾಗುವ ಮೂಲಕ ದೇಶದ ಗಮನಸೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಹಾಲಿಂಗ ನಾಯ್ಕ ಅವರ ಭಗೀರಥ ಪ್ರಯತ್ನವನ್ನು ಹಾಡಿ ಹೊಗಳಿದ್ದರು.

ಸದ್ಯ 76 ರ ಹರೆಯದ ಮಹಾಲಿಂಗ ನಾಯ್ಕ ಅವರು ಇಂದಿಗೂ ಕೂಡ ಸುಮ್ಮನೆ ಕೂತಿಲ್ಲ. ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಸಾವಯವ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ನೀರು ಎಷ್ಟು ಅಮೂಲ್ಯ ಸಂಪತ್ತು ಎಂಬ ಅರಿವಿರುವ ಮಹಾಲಿಂಗ ನಾಯ್ಕ ಅವರು ಇಂದಿಗೂ ಜಲಸಂರಕ್ಷಣೆಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ.

 3,064 total views,  5 views today

WhatsApp chat