Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಪಾಂಡು ನಾಯಕನ ತಾಂಡಾವು ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಒಂದು ಪುಟ್ಟ ಗ್ರಾಮ. ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಈ ಗ್ರಾಮ ಜಿಲ್ಲಾ ಕೇಂದ್ರದಿಂದ ಸುಮಾರು 42 ಕಿ.ಮೀ ದೂರದಲ್ಲಿದೆ. ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಿಂದ 611 ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ಪ್ರಸ್ತುತ 108 ಆದಿವಾಸಿ ಕುಟುಂಬಗಳು ವಾಸವಿದ್ದು, ಈ ಗ್ರಾಮದ ಜನರು ಕುಡಿಯುವ ನೀರಿಗಾಗಿ ಕಿ.ಮೀ ಗಟ್ಟಲೆ ನಡೆದು ಹೋಗಿ ನೀರನ್ನು ತರುವ ಪರಿಸ್ಥಿತಿ ಇತ್ತು. ಸದ್ಯ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು ಈ ಗ್ರಾಮದ ನಿವಾಸಿಗಳೆಲ್ಲರೂ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಿದೆ.

ಪಾಂಡು ನಾಯಕನ ತಾಂಡಾದಲ್ಲಿನ ಎಲ್ಲಾ 108 ಮನೆಗಳಿಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ಯೋಜನೆಯಡಿ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ ತಲಾ 55 ಲೀಟರ್‌ನಂತೆ ಪ್ರತಿದಿನ ಶುದ್ಧ ನೀರನ್ನು ಒದಗಿಸಲಾಗುತ್ತಿದೆ. ಈ ನಳ ಸಂಪರ್ಕ ಏಕಾಏಕಿ ಈ ತಾಂಡಾಕ್ಕೆ ಬಂದದ್ದಲ್ಲ. ಬದಲಿಗೆ ಈ ಯೋಜನೆಯನ್ನು ಇಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಸಮಾಲೋಚಕರು ಮತ್ತು ಅನುಷ್ಠಾನ ನೆರವು ಸಂಸ್ಥೆಗಳ ಪಾತ್ರ ಮಹತ್ವದ್ದಿದೆ. ಮೊದಲಿಗೆ ಈ ತಾಂಡಾದಲ್ಲಿ ಸಭೆ ನಡೆಸಿ ಯೋಜನೆಯ ಬಗ್ಗೆ ವಿವರಿಸಿದಾಗ ಇಲ್ಲಿನ ನಿವಾಸಿಗಳೆಲ್ಲರೂ ಖುಷಿ ಪಟ್ಟರು. ಆದ್ರೆ ಈ ಯೋಜನೆಯ ಅನುಷ್ಠಾನದಲ್ಲಿ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು, ಇದಕ್ಕಾಗಿ ಸಮುದಾಯ ವಂತಿಗೆಯನ್ನು ನೀಡಬೇಕಾಗುತ್ತದೆ ಎಂದಾಗ ಇಲ್ಲಿನ ನಿವಾಸಿಗಳೆಲ್ಲರೂ, ‘ನಾವು ಬಡವರು, ನಮ್ಮಿಂದ ಸಮುದಾಯ ವಂತಿಗೆಯನ್ನು ಪಾವತಿಸಲು ಸಾಧ್ಯವಿಲ್ಲ’ ಎಂದು ಯೋಜನೆಯನ್ನು ನಿರಾಕರಿಸಿದ್ದರು. ಬಳಿಕ ಇಲಾಖೆಯ ಅಧಿಕಾರಿಗಳು, ಸಮಾಲೋಚಕರು ಹಾಗೂ ಐ.ಎಸ್.ಎ ತಂಡದ ಪ್ರತಿನಿಧಿಗಳು ಈ ಗ್ರಾಮದಲ್ಲಿ ನಿರಂತರ ಸಭೆ ಮಾಡುವ ಮೂಲಕ ಇಲ್ಲಿನ ನಾಯಕರು ಹಾಗೂ ಜನಪ್ರತಿನಿಧಿಗಳಿಗೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಚುನಾಯಿತ ಪ್ರತಿನಿಧಿಗಳು ಹಾಗೂ ತಾಂಡಾದ ನಾಯಕರುಗಳನ್ನು ಮನವೊಲಿಸಿದರು.

ಬಳಿಕ ಸ್ಥಳೀಯ ಭಾಷೆಯನ್ನು ಬಲ್ಲವರಾದ ತಾಂಡಾದ ನಾಯಕರುಗಳ ನೇತೃತ್ವದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಜನರ ಮನವೊಲಿಸಲಾಯಿತು. ಹಾಗೂ ಗ್ರಾಮದ ನಿವಾಸಿಗಳೆಲ್ಲರೂ ಪರಿಶಿಷ್ಟ ಪಂಗಡದವರಾಗಿರುವುದರಿಂದ, ಜಲ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನ ಮಾಡಲು ತಗಲುವ ವೆಚ್ಚದ ಕೇವಲ ಶೇಕಡಾ 5ರಷ್ಟನ್ನು ಮಾತ್ರ ಸಮುದಾಯ ವಂತಿಗೆ ರೂಪದಲ್ಲಿ ಪಡೆಯಲಾಗುವುದು ಎಂಬ ವಿಚಾರವನ್ನು ತಿಳಿಸಿ ಹೇಳಲಾಯಿತು. ಪ್ರತಿ ಕುಟುಂಬ ಕೇವಲ 750 ರೂಪಾಯಿಗಳನ್ನು ಮಾತ್ರ ನೀಡಬೇಕಾಗುತ್ತದೆ ಎಂಬುದನ್ನು ಹೇಳಲಾಯಿತು. ಕ್ರಮೇಣವಾಗಿ ಇಲ್ಲಿನ ಎಲ್ಲಾ ನಿವಾಸಿಗಳು ಸಮುದಾಯ ವಂತಿಗೆಯನ್ನು ನೀಡಲು ಮುಂದಾದರು. ಪ್ರತಿ ಕುಟುಂಬಕ್ಕೆ 750 ರೂ.ಗಳಂತೆ  ಒಟ್ಟು 108 ಕುಟುಂಬಗಳಿಂದ81,000 ರೂ.ಗಳನ್ನು ಸಮುದಾಯ ವಂತಿಗೆಯಾಗಿ ಸಂಗ್ರಹಿಸಲಾಯಿತು. ಬಳಿಕ ಈ ಗ್ರಾಮದಲ್ಲಿ 50,000 ಲೀಟರ್ ಸಾಮರ್ಥ್ಯದ OHTಯನ್ನು ನಿರ್ಮಿಸಿ ಇದರಿಂದ ಎಲ್ಲಾ ಮನೆಗಳಿಗೆ Distribution line ಅನ್ನು ಹಾಕುವ ಮೂಲಕ ಪ್ರಸ್ತುತ ಈ ಗ್ರಾಮದ ಎಲ್ಲಾ ನಿವಾಸಿಗಳಿಗೆ ತಲಾ 55 ಲೀ. ಶುದ್ಧ ನೀರನ್ನು ಪ್ರತಿದಿನ ಒದಗಿಸಲಾಗುತ್ತಿದೆ. ಜೊತೆಗೆ ಗ್ರಾಮದಲ್ಲಿನ ನಿವಾಸಿಗಳಲ್ಲಿ ಕೆಲವರು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರಾಗಿರುವುದರಿಂದ ಇದರ ನಿರ್ವಹಣೆ ಮತ್ತು ಮೇಲುಸ್ತುವಾರಿಯ ಹೊಣೆಯನ್ನು ತಾವೇ ವಹಿಸಿಕೊಂಡು ಯೋಜನೆಯ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ.

ಈ ಬಗ್ಗೆ ಇಲ್ಲಿನ ನೀರುಘಂಟಿ ಸಂಗೀತಾ ಅವರು ಹೀಗೆ ಹೇಳುತ್ತಾರೆ “ಜಲ ಜೀವನ್ ಮಿಷನ್ ಯೋಜನೆಯಿಂದ ಗ್ರಾಮದ ಎಲ್ಲರಿಗೂ ಅನುಕೂಲವಾಗಿದೆ. ನೀರಿಗಾಗಿ ಪರದಾಡುವ ಪರಿಸ್ಥಿತಿ ಬದಲಾಗಿದೆ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲಗಳಾಗಿದ್ದು, ತಾಂಡಾದ ಜನ ತೋರುತ್ತಿರುವ ಕಾಳಜಿ ಮತ್ತು ನೀರು ಪೋಲಾಗದಂತೆ ಅವರು ಕ್ರಮ ವಹಿಸುತ್ತಿರುವುದು ಖುಷಿ ತಂದಿದೆ.” ಎಂದಿದ್ದಾರೆ.

ಇದಿಷ್ಟೇ ಅಲ್ಲದೆ ಈ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೂ ಜಲ ಜೀವನ್ ಮಿಷನ್ ಯೋಜನೆಯಡಿ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ ಶುದ್ಧ ನೀರನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಈ ಗ್ರಾಮ ಕಲ್ಬುರ್ಗಿ ಜಿಲ್ಲೆಯಲ್ಲಿ ಮಾದರಿ ಗ್ರಾಮವಾಗಿದ್ದು, ಇತರೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ತಮ್ಮ ತಮ್ಮ ಗ್ರಾಮಗಳಲ್ಲಿಯೂ ಇದೇ ಮಾದರಿಗಳನ್ನು ಅನುಸರಿಸಿ ಸಮುದಾಯ ವಂತಿಗೆ ಸಂಗ್ರಹಣೆಗೆ ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಯಶಸ್ಸಿಗೆ ಕ್ರಮ ವಹಿಸಲಿರುವುದಾಗಿ ಹೇಳುತ್ತಿರುವುದು ಖುಷಿಯ ವಿಚಾರವಾಗಿದೆ.

 4,758 total views,  1 views today

WhatsApp chat