Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಎಲ್ಲಿ ನೋಡಿದರೂ ನೀರಿಗಾಗಿ ಪರದಾಟ, ಒಂದು ಕೊಡ ನೀರಿಗಾಗಿ ಮೈಲಿಗಟ್ಟಲೆ ನಡೆಯುವ ಪರಿಸ್ಥಿತಿ. ಇದರ ಜೊತೆಗೆ ಕರ್ನಾಟಕ ರಾಜ್ಯ ದೇಶದ ಎರಡನೇ ಶುಷ್ಕ ರಾಜ್ಯ ಎಂಬ ಹಣೆಪಟ್ಟಿ ಬೇರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾರತದ ಜನತೆಯ ನೀರಿನ ಬವಣೆ ನೀಗಿಸಲು ದನಿಯಾಗಿದ್ದು, ಕೇಂದ್ರ ಸರ್ಕಾರದ ‘ಜಲ ಜೀವನ್ ಮಿಷನ್ ’ ಯೋಜನೆ!

ಗ್ರಾಮೀಣ ಭಾರತದ ಪ್ರತಿ ಗ್ರಾಮದ ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ, ಪ್ರತಿ ವ್ಯಕ್ತಿಗೆ ಪ್ರತಿ ದಿನ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮೂಲಕ ಗ್ರಾಮೀಣ ಸಮುದಾಯಗಳ ಜೀವನ ಮಟ್ಟದಲ್ಲಿ ಸುಧಾರಣೆ ತರುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಸಚಿವಾಲಯವು ಜಾರಿಗೊಳಿಸಿರುವ 'ಜಲ ಜೀವನ್ ಮಿಷನ್' ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ‘ಮನೆ ಮನೆಗೆ ಗಂಗೆ ’ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಿದೆ. 2023 ರ ವೇಳೆಗೆ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗೆ ಹಾಗೂ ಸರ್ಕಾರಿ ಕಟ್ಟಡ, ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ, ವಸತಿ ಶಾಲೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವತ್ತ ದಾಪುಗಾಲಿಟ್ಟಿದೆ.

ಪ್ರತಿ ಗ್ರಾಮದ ನೀರಿನ ಮೂಲಗಳು ಮತ್ತು ಅಗತ್ಯತೆಗೆ ಅನುಗುಣವಾಗಿ ಕೆಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ:

ಬಹುಗ್ರಾಮ ಯೋಜನೆ:

ಒಂದಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರದ ಸಲುವಾಗಿ ನದಿ, ಕೆರೆ, ಕಾಲುವೆಯಂತಹ ಭೂಮಿಯ ಮೇಲ್ಮೈ ಜಲಮೂಲಗಳನ್ನು ಆಧರಿಸಿ ಈ ಯೋಜನೆಯನ್ನು ರೂಪಿಸಲಾಗಿದೆ. ಜಲ ಮೂಲಗಳಿಂದ ಜಾಕ್ವೆಲ್ ಮುಖಾಂತರ ನೀರನ್ನು ಎತ್ತಿ, ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜು ಮಾಡಿ, ಬಳಿಕ ದೊಡ್ಡ ಪೈಪುಗಳ ಮೂಲಕ ಗ್ರಾಮಗಳಿಗೆ ನೀರಿನ ಸಂಪರ್ಕ ಒದಗಿಸಿ, ಪ್ರತಿ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಹೀಗೆ ನೀರಿನ ಸಂಸ್ಕರಣೆ ಮತ್ತು ವಿತರಣಾ ವ್ಯವಸ್ಥೆಗಳ ಬೃಹತ್ ವರ್ಗಾವಣೆಗೆ ಮೂಲಸೌಕರ್ಯದೊಂದಿಗೆ ಹಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಈ ಯೋಜನೆಯಡಿ ಕಲ್ಪಿಸಲಾಗುತ್ತಿದೆ.

ಈಗಾಗಲೇ ರಾಜ್ಯಾದ್ಯಂತ ಒಟ್ಟು 6737 ಜನವಸತಿಗಳಿಗೆ ಶುದ್ಧ-ಸುರಕ್ಷಿತ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಯೋಜನೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ 479 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಬಹುಗ್ರಾಮ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಟ್ಟೇರಿ ಗ್ರಾಮ ಪಂಚಾಯಿತಿ ಪಿ.ಡಿ.ಒ. ಮಹೇಶ್ ರವರು, “ಮಂಡ್ಯ ಜಿಲ್ಲೆಯ ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೃಷ್ಣರಾಜಸಾಗರ ಅಣೆಕಟ್ಟೆಯ ಹಿನ್ನೀರನ್ನು ಜಾಕ್ವೇಲ್ ಮುಖಾಂತರ ನೀರಿನ ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಿ, ದೊಡ್ಡ ಪೈಪುಗಳ ಮೂಲಕ ಹಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪಾಂಡವಪುರ ತಾಲ್ಲೂಕಿನ ಒಟ್ಟು 63 ಗ್ರಾಮಗಳ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ” ಎಂದಿದ್ದಾರೆ.

ಏಕ-ಗ್ರಾಮ ಯೋಜನೆ

ಒಂದು ಗ್ರಾಮದಲ್ಲಿನ ಅಂತರ್ಜಲ ಅಥವಾ ಸ್ಥಳೀಯ ಮೇಲ್ಮೈ ನೀರಿನ ಆಧಾರಿತ ಯೋಜನೆ ಇದಾಗಿದ್ದು, ಗ್ರಾಮದ ನೀರಿನ ಅಗತ್ಯತೆಗಳನ್ನು ಅರಿತು, ಪ್ರತಿ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲು ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲಿದೆ. ಈ ಯೋಜನೆಯ ಉಸ್ತುವಾರಿ ಮತ್ತು ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಮತ್ತು ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯು ನಿರ್ವಹಿಸುತ್ತಿದೆ.

ನೀರಿಗೆ ಸಾಕಷ್ಟು ತೊಂದರೆಯಿದ್ದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಅಂಗನವಾಡಿಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿರುವುದರಿಂದ ತುಂಬಾ ಉಪಯೋಗವಾಗಿದೆ. ಇದರಿಂದ ಮಕ್ಕಳಿಗೆ ಕುಡಿಯಲು ಮತ್ತು ಅಡುಗೆಗೆ ಶುದ್ಧ ನೀರಿನ ಪೂರೈಕೆಯಾಗುತ್ತಿದೆ. ಮಕ್ಕಳೂ ಸಹ ಆರೋಗ್ಯದಿಂದ ಇದ್ದಾರೆ ಎನ್ನುತ್ತಾರೆ, ಕಾರಹಳ್ಳಿಯ ಅಂಗನವಾಡಿ ಕಾರ್ಯಕರ್ತರಾದ ಶೋಭಾರವರು.

ಕಿರು ನೀರು ಸರಬರಾಜು ಯೋಜನೆ

ಈ ಯೋಜನೆಯಲ್ಲಿ 3-4 ನಲ್ಲಿಗಳನ್ನು ಅಳವಡಿಸಿರುವ ಸಣ್ಣ ಟ್ಯಾಂಕಿಗೆ (ಆರ್.ಸಿ.ಸಿ ಹ್ಯೂಂ ಪೈಪ್ ಸಿಸ್ಟರ್ನ್) ಕೊಳವೆ ಬಾವಿಯಿಂದ ವಿದ್ಯುತ್ ಪಂಪಿನ ಸಹಾಯದಿಂದ ನೀರನ್ನು ತುಂಬಿ ಗ್ರಾಮೀಣ ಜನರು ಕುಡಿಯುವ ನೀರು ಪಡೆಯಲು ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಕಿರು ನೀರು ಸರಬರಾಜು ಯೋಜನೆಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳು ನಿರ್ವಹಿಸುತ್ತಿವೆ.

ಶುದ್ಧ ಕುಡಿಯುವ ನೀರಿನ ಘಟಕ

ಕುಡಿಯುವ ನೀರಿನ ಗುಣಮಟ್ಟ ಬಾಧಿತ ಜಲಮೂಲಗಳಿರುವ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸೂಕ್ಷ್ಮಾಣು ಜೀವಿಗಳಿಂದ ಗುಣಮಟ್ಟ ಬಾಧೆಗೊಳಗಾಗಿರುವ ಜನವಸತಿ ಪ್ರದೇಶಗಳಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿ, ಜನರಿಗೆ ಶುದ್ಧ-ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ರಾಜ್ಯಾದ್ಯಂತ 17,600 ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಮಂಡ್ಯ ತಾಲ್ಲೂಕಿನ ಗೋಪಾಲಪುರದ ಗ್ರಾಮಸ್ಥೆ ಆಶಾರವರು, “ಈ ಹಿಂದೆ ನಾವು ಕೆರೆ, ಬಾವಿ ಹಾಗೂ ನಲ್ಲಿ ನೀರನ್ನು ಕುಡಿಯಲು ಬಳಸುತ್ತಿದ್ದೆವು. ಇದರಿಂದ ಆರೋಗ್ಯ ಹದಗೆಡುತ್ತಿತ್ತು. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳು ಆರಂಭವಾದ ಬಳಿಕ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿವೆ. ಇದರಿಂದ ಜನತೆಗೆ ಬಹಳ ಉಪಯೋಗವಾಗಿದೆ”ಎಂದಿದ್ದಾರೆ.

ಅಷ್ಟೇ ಅಲ್ಲದೆ, ಗ್ರಾಮೀಣ ಭಾಗದ ಜನತೆಗೆ ಮಾಹಿತಿ, ಶಿಕ್ಷಣ ಸಂವಹನದ ಮೂಲಕ ನೀರಿನ ಸಂರಕ್ಷಣೆ, ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.

 6,061 total views,  6 views today

WhatsApp chat