Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಯಾವುದೇ ಕಾಯಿಲೆ ಅಥವಾ ರೋಗಗಳು ಸಾಂಕ್ರಾಮಿಕವಾಗಲು ಪ್ರಮುಖ ಕಾರಣವೆಂದರೆ ಸ್ವಚ್ಛತೆಯ ಕೊರತೆ. ಪ್ರಸ್ತುತ ಸಂದರ್ಭದಲ್ಲಿ ರೋಗಗಳು ಸಾಂಕ್ರಾಮಿಕವಾಗುವುದನ್ನು ತಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದು ಕೈಗಳ ಸ್ವಚ್ಛತೆ. ಕೈಯಿಂದ ಮುಟ್ಟುವುದರಿಂದ ರೋಗಾಣುಗಳು ಹರಡುವ ಸಾಧ್ಯತೆ ಬಹಳಷ್ಟಿರುವುದರಿಂದ, ಕೈಗಳ ಸ್ವಚ್ಛತೆಯ ಕುರಿತಾದ ಜಾಗೃತಿ ಈಗ ಜನರಲ್ಲಿ ಮೂಡಲಾರಂಭಿಸಿದೆ. ಸೋಪಿನಿಂದ ಕೈತೊಳೆಯುವುದರಿಂದ ಅತಿಸಾರ ಅರ್ಧದಷ್ಟು ಮತ್ತು ಉಸಿರಾಟದ ಸಮಸ್ಯೆ ಮೂರನೇ ಒಂದರಷ್ಟು ಕಡಿಮೆಯಾಗಬಲ್ಲದು. ಕೈಗಳ ಸ್ವಚ‍್ಛತೆ ಲಸಿಕೆಯಷ್ಟೇ ಇಲ್ಲಿ ಮುಖ್ಯವಾಗುತ್ತದೆ.[1]

ಶಿಕ್ಷಣದ ಹಕ್ಕು (2009) ಸಹ ಶಾಲೆಗಳಲ್ಲಿ ಸಮರ್ಪಕ ನೀರು, ನೈರ್ಮಲ್ಯ ಮತ್ತು ಶುಚಿತ್ವದ ಸೌಲಭ್ಯಗಳನ್ನು ಅಳವಡಿಸುವಂತೆ ಸೂಚಿಸುತ್ತದೆ. ಯುನಿಸೆಫ್ ನ ಒಂದು ವರದಿಯ ಅನುಸಾರ, ಪ್ರಪಂಚದ ಸುಮಾರು 40% ಜನರಿಗೆ ಮನೆಯಲ್ಲಿ ನೀರು ಮತ್ತು ಸೋಪನ್ನು ಬಳಸಿ ಕೈತೊಳೆಯುವ ಸೌಲಭ್ಯಗಳಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಕೇವಲ ಕೈತೊಳೆಯುವ ಸೌಲಭ್ಯವಿಲ್ಲದೇ ಬಹಳಷ್ಟು ಜನರು ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ. [2]

ಜಗತ್ತಿನ 47% ಶಾಲೆಗಳಲ್ಲಿ ನೀರು ಮತ್ತು ಸಾಬೂನಿನಿಂದ ಕೈಗಳನ್ನು ಸ್ವಚ್ಛಗೊಳಿಸುವ ಸೌಲಭ್ಯಗಳಿಲ್ಲ, ಇದರಿಂದ ಸುಮಾರು 900 ಮಿಲಿಯನ್ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಯುನಿಸೆಫ್ ನ ವರದಿಯೊಂದು ತಿಳಿಸಿದೆ.[3]

ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕವಾಗುತ್ತಿರುವ ಹಿನ್ನೆಲೆಯಲ್ಲಿ, ಕೈಗಳ ಸ್ವಚ್ಛತೆ ಕುರಿತಾದ ಜಾಗೃತಿ ಮತ್ತೆ ಮುನ್ನೆಲೆಗೆ ಬರುತ್ತಿದೆ. WASH ಮತ್ತು UNICEF ಸಹಯೋಗದಲ್ಲಿ ಜನ ಜಾಗೃತಿ ಮೂಡಿಸಲು ಕೈಗಳ ಸ್ವಚ್ಛತೆ ಕುರಿತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ‍್ಳಲಾಗುತ್ತಿದೆ.  ಯುನಿಸೆಫ್ ನ ವರದಿಯ ಅನುಸಾರ, ಪ್ರತಿಕ್ರಿಯಿಸು, ಪುನರ್ನಿರ್ಮಿಸು ಮತ್ತು ಮರು ರೂಪಿಸು ಎಂಬ ಮೂರು ಘೋಷಣೆಗಳಡಿ ಕೈಗಳ ಸ್ವಚ್ಛತೆಯನ್ನು ಜನರ ಜೀವನದಲ್ಲಿ ರೂಢಿಸಲಾಗುತ್ತಿದೆ. ಪ್ರತಿಕ್ರಿಯಿಸುವಿಕೆ ಎಂದರೆ, ಪ್ರಸ್ತುತ ಸಾಂಕ್ರಾಮಿಕವಾಗಿರುವ ಕೋವಿಡ್ 19 ರ ಹರಡುವಿಕೆಯನ್ನು ತಡೆಗಟ್ಟುವುದು, ಪುನರ್ನಿರ್ಮಿಸು ಎಂದರೆ ಕೈಗಳ ಸ್ವಚ್ಛತೆಯನ್ನು ಸಾರ್ವಜನಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದು. ಮರು ರೂಪಿಸು ಎಂದರೆ ಕೈಗಳ ಸ್ವಚ‍್ಛತೆಯನ್ನು ಸದಾಕಾಲ ಬದುಕಿನ ಒಂದು ಸುಸ್ಥಿರ ಅಭ್ಯಾಸವನ್ನಾಗಿಸುವುದು.[4] ಕೈಗಳ ಸ್ವಚ‍್ಛತೆಯ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಅಕ್ಟೋಬರ್ 15ರಂದು ವಿಶ್ವ ಕೈತೊಳೆಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಅನಾರೋಗ್ಯ ಮತ್ತು ಅಭಿವೃದ‍್ಧಿಯ ಕೊರತೆಗೆ ಮುಖ್ಯ ಕಾರಣವೆಂದರೆ ನೈರ್ಮಲ್ಯದ ಕೊರತೆ. ಬಯಲು ಬಹಿರ್ದೆಸೆಯ ದುರಭ್ಯಾಸದಿಂದ ಗ್ರಾಮಗಳು ಅನಾರೋಗ್ಯ ಪೀಡಿತವಾಗುತ್ತಿದ್ದವು. ಈ ನಿಟ್ಟಿನಲ್ಲಿ ಒಂದು ಸುಸ್ಥಿರ ನೈರ್ಮಲ್ಯ ಯೋಜನೆಯಾಗಿ ಅನುಷ್ಠಾನಗೊಂಡದ್ದು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆ. ಪ್ರತಿ ಮನೆಯಲ್ಲಿಯೂ ವೈಯಕ್ತಿಕ ಶೌಚಾಲಯದ ನಿರ್ಮಾಣ ಮತ್ತು ಬಳಕೆಯನ್ನು ಪ್ರೋತ್ಸಾಹಿಸಿದ ಈ ಯೋಜನೆಯಿಂದ 2019ರಲ್ಲಿ ಗ್ರಾಮೀಣ  ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲ್ಪಟ್ಟಿತು. ಬೇಸ್ ಲೈನ್ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳಿಗೂ ಶೌಚಾಲಯ ನಿರ್ಮಿಸಲು ಸ್ವಚ‍್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯು ಅನುವು ಮಾಡಿಕೊಟ್ಟಿದೆ.ಇದರ ಮುಂದುವರಿದ ಭಾಗವಾಗಿ ಈ ಯೋಜನೆಯು ಕೈಗಳ ಸ್ವಚ್ಛತೆಯನ್ನು ಪ್ರೋತ್ಸಾಹಿಸುತ್ತಿದೆ. ಶೌಚಾಲಯವನ್ನು ಸಮರ್ಪಕವಾಗಿ ಬಳಸುವುದು ಎಷ್ಟು ಮುಖ್ಯವೋ, ಶೌಚಾಲಯದ ಬಳಕೆಯ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ‍್ಛವಾಗಿ ತೊಳೆದುಕೊಳ್ಳುವುದೂ ಅಷ್ಟೇ ಮುಖ್ಯ. ಆಹಾರ ಸೇವಿಸುವ ಮೊದಲು ಕೈಗಳನ್ನು ಸ್ವಚ‍್ಚವಾಗಿ ತೊಳೆದುಕೊಳ್ಳುವುದರಿಂದ ರೋಗಾಣುಗಳು ನಮ್ಮ ದೇಹವನ್ನು ಸೇರುವುದನ್ನು ತಡೆಯಬಹುದು. ಪ್ರಸ್ತುತ ಕೋವಿಡ್ 19 ಸಾಂಕ್ರಾಮಿಕವನ್ನು ತಡೆಯುವ ನಿಟ್ಟಿನಲ್ಲಿ ಕೈಗಳ ಸ್ವಚ್ಛತೆಯನ್ನು ಇನ್ನೂ ಜವಾಬ್ದಾರಿಯಿಂದ ಕಾಪಾಡಿಕೊಳ‍್ಳಬೇಕು. ಎಲ್ಲೆಂದರಲ್ಲಿ ಮುಟ್ಟದಿರುವುದು, ಇತರರು ಬಳಸುವ ವಸ್ತುಗಳನ್ನು ಕೈಯಿಂದ ಮುಟ್ಟದಿರುವುದು, ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು, ಕೈಯಿಂದ ಮೂಗು-ಬಾಯನ್ನು ಮುಟ್ಟಿಕೊಳ್ಳದಿರುವುದು ಕೋವಿಡ್ 19ನ್ನು ತಡೆಗಟ್ಟಲು ಬೇಕಾದ ಪ್ರಮುಖ ಹೆಜ್ಜೆಗಳು.

ಸಾರ್ವಜನಿಕರನ್ನು ಈ ನಿಟ್ಟಿನಲ್ಲಿ ಜಾಗೃತರನ್ನಾಗಿಸಲು ಯುನಿಸೆಫ್ ಕೈಗಳನ್ನು ತೊಳೆಯುವ ಸರಿಯಾದ ಕ್ರಮವನ್ನು ನೀಡಿದೆ:

  1. ಹರಿಯುವ ನೀರಿನಲ್ಲಿ ಕೈಗಳನ್ನು ಒದ್ದೆಯಾಗಿಸಿ
  2. ತೇವಗೊಂಡ ಕೈಗಳಿಗೆ ಸೋಪನ್ನು ಹಚ್ಚಿರಿ
  3. ಕೈಗಳ ಎರಡೂ ಬದಿ – ಹಿಂಭಾಗ, ಬೆರಳುಗಳ ನಡುವೆ, ಉಗುರುಗಳ ಕೆಳಗೆ, ಮಣಿಕಟ್ಟನ್ನು ಸುಮಾರು 20 ಸೆಕೆಂಡುಗಳ ಕಾಲ ಉಜ್ಜಿರಿ
  4. ಹರಿಯುವ ನೀರಿನಲ್ಲಿ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ‍್ಳಿ

ಒಂದು ಸುಲಭ, ಸರಳ ಅಭ್ಯಾಸವಾದ ಕೈತೊಳೆಯುವುದರ ಹಿಂದೆ ಹಲವಾರು ವಿಷಯಗಳು ಅಡಗಿವೆ. ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಆದರೆ ಇವೆಲ್ಲ ಕಾರ್ಯಕ್ರಮಗಳೂ ಯಶಸ್ವಿಯಾಗುವುದು ಜನರ ಸಹಕಾರದಿಂದ. ನಮ್ಮ ಜವಾಬ್ದಾರಿ ಅರಿಯೋಣ.  ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಕೈಗಳ ಸ್ವಚ್ಛತೆ ಕಾಪಾಡೋಣ.

Sources:

[1] The HandWashing Book, By World Bank

[2] https://www.unicef.org/media/71776/file/Hand-hygiene-for-all-2020.pdf

[3] https://www.unicef.org/press-releases/fact-sheet-handwashing-soap-critical-fight-against-coronavirus-out-reach-billions

[4] https://www.unicef.org/media/71776/file/Hand-hygiene-for-all-2020.pdf

 6,709 total views,  2 views today

WhatsApp chat