Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಪಶ್ಚಿಮ ಘಟ್ಟದ ದಟ್ಟ ಕಾನನದ ತಪ್ಪಲಿನಲ್ಲಿರುವ ಕಾರ್ಕಳದ ನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಕಾಲಿಟ್ಟೊಡನೆ ಥಟ್ಟನೆ ನೆನಪಾಗುವುದು ‘ಪ್ರಕೃತಿ ಶಿಕ್ಷಣ’. ಶ್ರೀ ರವೀಂದ್ರನಾಥ ಟಾಗೋರರ ನಿಸರ್ಗದೊಂದಿಗಿನ ಒಡನಾಟದೊಂದಿಗಿನ ಶಿಕ್ಷಣದ ಪರಿಕಲ್ಪನೆ ಇಲ್ಲಿ
ಸಾಕಾರಗೊಳ್ಳುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಸ್ಥಳೀಯ ಗ್ರಾಮ ಪಂಚಾಯತ್ ನಿಂದ ಬರುವ ಸವಲತ್ತು ಅನುದಾನವನ್ನು ಬಳಸಿಕೊಂಡು ಶಾಲೆಯನ್ನು ಪ್ರಕೃತಿ ಸ್ನೇಹಿ ಮಾಡುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ, ಜಲ ಸಂರಕ್ಷಣೆ, ಗಿಡಮೂಲಿಕೆಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸುತ್ತಿರುವ ಇಲ್ಲಿನ ಶಿಕ್ಷಣದ ಪರಿ ಒಮ್ಮೆ  ಬೆರಗು ಮೂಡಿಸುತ್ತದೆ.

ಉಡುಪಿ ಜಿಲ್ಲಾಡಳಿತದಿಂದ ‘ಸ್ವಚ್ಛ ವಿದ್ಯಾಲಯ’ ಪುರಸ್ಕಾರ ಪಡೆದಿರುವ ಕಾರ್ಕಳ ತಾಲೂಕಿನ ನಲ್ಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅನ್ಯ ಶಾಲೆಗಳಿಗೆ ಮೇಲ್ಪಂಕ್ತಿ ಹಾಕಿದ್ದಾರೆ. ಕಸವನ್ನು ಮೂಲದಲ್ಲೇ ಹಸಿ ಕಸ ಹಾಗೂ ಒಣಕಸ ಎಂದು ಪ್ರತ್ಯೇಕಿಸುವುದರಿಂದ ಹಿಡಿದು ಸ್ಥಳೀಯ ಘನ ತ್ಯಾಜ್ಯ ನಿರ್ವಹಣಾ
ಘಟಕಕ್ಕೆ ಕಸವನ್ನು ವಿಲೇವಾರಿಗೆ ಕೊಡುವುದರ ಜೊತೆ, ಉಳಿದ ಹಸಿ ಕಸದಿಂದ ಪೈಪ್ ಕಾಂಪೋಸ್ಟ್ ಮೂಲಕ ಗೊಬ್ಬರ ಮಾಡಿ ಕೈತೋಟಗಳಿಗೆ ಬಳಸುವವರೆಗೆ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಇಡೀ ಪ್ರಕ್ರಿಯೆಗೆ ಈ ಶಾಲೆ ನಾಂದಿ ಹಾಡಿದೆ. ಒಟ್ಟು 101 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ತ್ಯಾಜ್ಯವೆನ್ನುವುದೇ
ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಸುಧಾರಣೆ ಕಂಡುಬಂದಿದೆ.

 

ಜಲ ಸಂರಕ್ಷಣೆ ವಿಷಯದಲ್ಲೂ ವಿದ್ಯಾರ್ಥಿಗಳಿಗೆ ವಿವಿಧ ಮಾಹಿತಿ ಕಾರ್ಯಾಗಾರಗಳನ್ನು ಶಾಲೆಯಲ್ಲಿ ಆಯೋಜಿಸಲಾಗಿರುತ್ತದೆ. ಸ್ಥಳೀಯ ನಲ್ಲೂರು ಗ್ರಾಮ ಪಂಚಾಯತ್ ತನ್ನ 15ನೇ ಹಣಕಾಸು ಯೋಜನೆಯಡಿ ರೂ 80 ಸಾವಿರ ಅನುದಾನದಲ್ಲಿ ಮಳೆ ನೀರು ಕೊಯ್ಲು ಘಟಕವನ್ನು ಶಾಲೆಗೆ ಒದಗಿಸಿರುತ್ತದೆ. ಇಲ್ಲಿ ಒಂದು ಸರ್ತಿಗೆ 2
ಟ್ಯಾಂಕ್ ಗಳಲ್ಲಿ 1000 ಲೀಟರ್ ನೀರನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಕೈತೊಳೆಯಲು ಹಾಗೂ ಶೌಚಾಲಯಕ್ಕೆ ಬಳಸಲಾಗುತ್ತದೆ.

ಬೂದು ನೀರಿನ ನಿರ್ವಹಣೆಯಲ್ಲೂ ಮುಂದು: ಶಾಲೆಯಲ್ಲಿ ದಿನವೊಂದಕ್ಕೆ ಸುಮಾರು 2000 ಲೀಟರ್ ನಷ್ಟು ಕೈತೊಳೆದ ಹಾಗೂ ಪಾತ್ರೆ ತೊಳೆದ ಬೂದು ನೀರು ಉತ್ಪತ್ತಿಯಾಗುತ್ತಿದ್ದು, ಇದನ್ನು ಶಾಲಾ ಕೈತೋಟದ ಮೂಲಕ ಇದರ ವ್ಯವಸ್ಥಿತ ನಿರ್ವಹಣೆ ಮಾಡಲಾಗುತ್ತದೆ.

ನೈರ್ಮಲ್ಯಕ್ಕೆ ಪ್ರಾಮುಖ್ಯತೆ ಕೊಡುವ ದೃಷ್ಟಿಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ವಿಶ್ವ ಕೈತೊಳೆಯುವ ದಿನದ ಅಂಗವಾಗಿ ಮಕ್ಕಳಿಗೆ ಸರಿಯಾಗಿ ಕೈತೊಳೆಯುವ ಕ್ರಮವನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಯಿತು.

ವಿದ್ಯಾಲಯ ಗ್ರಾಮದ ಆಮ್ಲಜನಕ ಆಲಯ: ಪ್ರಕೃತಿಯ ಮಡಿಲಲ್ಲಿ ಕುಳ್ಳಿರಿಸಿ ಮಕ್ಕಳಿಗೆ ಪಾಠ ಹೇಳುವ ಸೊಗಸಿನೊಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣದ ವಿಧಾನವನ್ನೂ ಇಲ್ಲಿ ಹೇಳಿಕೊಡಲಾಗುತ್ತಿದೆ. ಶಾಲೆಯ ಆವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡಮೂಲಿಕೆಗಳನ್ನು ನೆಡುವುದರ ಮೂಲಕ ಶಾಲೆಯು ಗ್ರಾಮದ

ಪ್ರಮುಖ ಆಮ್ಲಜನಕ ಉತ್ಪತ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಇಲ್ಲಿ ಧನ್ವಂತರಿ ಆರೋಗ್ಯವನವನ್ನು ನಿರ್ಮಿಸಿದ್ದು, ಸುಮಾರು 100ಕ್ಕೂ ಅಧಿಕ ವಿವಿಧ ಜಾತಿಯ ಗಿಡಮೂಲಿಕೆಗಳನ್ನು ನೆಡಲಾಗಿದೆ.ಆರೋಗ್ಯವನವನ್ನು ನಿರ್ಮಿಸಿದ್ದು, ಸುಮಾರು 100ಕ್ಕೂ ಅಧಿಕ ವಿವಿಧ ಜಾತಿಯ ಗಿಡಮೂಲಿಕೆಗಳನ್ನು ನೆಡಲಾಗಿದೆ.

 

ಕದಂಬ, ನಾಗಕೇಸರಿ, ಶಮೀವೃಕ್ಷ, ಸೀಮಾರೂಢ, ಕರ್ಪೂರ, ಪುತ್ರಂಜೀವ ಸೇರಿದಂತೆ ವಿವಿಧ ರೀತಿಯ ವಿರಳಾತಿ ವಿರಳ ಔಷಧಿ ಗಿಡಗಳನ್ನು ಇಲ್ಲಿ ಕಾಣಬಹುದಾಗಿದೆ. ಸ್ಥಳೀಯ ಆಯುರ್ವೇದ ವೈದ್ಯರ ಮಾರ್ಗದರ್ಶನ ಹಾಗೂ ಸ್ಥಳೀಯ ದಾನಿಗಳ ನೆರವಿನಿಂದ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗೇಶ್ ಆರೋಗ್ಯ ವನ ನಿರ್ಮಿಸಿ ವಿಶೇಷ ಕಾಳಜಿವಹಿಸುತ್ತಿದ್ದಾರೆ. ಈ ಎಲ್ಲಾ ಗಿಡಮೂಲಿಕೆಗಳ ವೈಜ್ಞಾನಿಕ ಹೆಸರು, ಔಷಧಿಗುಣದ ಬಗ್ಗೆ ದಾಖಲೀಕರಣ(Documentation)ಆರಂಭಿಸಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ.

ಉಡುಪಿ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿ ಅವರು ಈ ಆರೋಗ್ಯವನಕ್ಕೆ ಭೇಟಿ ನೀಡಿ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಲೆಯಲ್ಲಿ ಸ್ವಚ್ಛತೆ ಹಾಗೂ ಪರಿಸರ ಸ್ನೇಹಿ ವಾತಾವರಣವನ್ನು ನಿರ್ಮಿಸಿರುವುದನ್ನು ಶ್ಲಾಘಿಸಿ ಸದರಿ ಶಾಲೆಗೆ ಈ ಹಿಂದೆ ‘ಹಸಿರು ಶಾಲೆ’ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು
ಸ್ಮರಿಸಬಹುದು. ಪ್ರಕೃತಿಯ ಮಡಿಲಿನಲ್ಲಿರುವ ಈ ಶಾಲೆ ಸ್ವಚ್ಛತೆಯ ಶಿಕ್ಷಣವನ್ನೂ ನೀಡುತ್ತಿದೆ. ಒಟ್ಟಿನಲ್ಲಿ ನಲ್ಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇತರೆ ಶಾಲೆಗಳಿಗೆ ಮಾದರಿಯಾಗಿದೆ.

 2,070 total views,  6 views today

WhatsApp chat