Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ನಾನು ಕಳೆದ 15 ವರ್ಷಗಳಿಂದ ಒಂದೇ ಜಾಗದಲ್ಲಿ ನೆಲೆಯೂರಿದ್ದೇನೆ. ನನ್ನ ವಾಸಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೇರಮಜಲು ಗ್ರಾಮ ಪಂಚಾಯಿತಿಯ ಅಬ್ಬೆಟ್ಟು ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ. ನಾನಿಲ್ಲಿ ನೆಲೆಯೂರೋಕು ಮುನ್ನ ಇಲ್ಲಿನ ಜನರು ನೀರಿಗಾಗಿ ಪರದಾಡ್ತಿದ್ರು, ಕೊಡ ಹಿಡಿದು ಕೆರೆ, ಕಟ್ಟೆ, ಬಾವಿ ಅಂತೆಲ್ಲಾ ಸುತ್ತಾಡಿ, ನೀರು ತಂದು ಅಡುಗೆ ಮಾಡಿ ತಿನ್ನೋವಷ್ಟರಲ್ಲಿ ಉಸ್‍ ಅಂತ ನಿಟ್ಟುಸಿರು ಬಿಡ್ತಿದ್ರಂತೆ. ಇದನ್ನೆಲ್ಲಾ ನೋಡ್ತಿದ್ದ ನಮ್ಮ ಯಜಮಾನ ನನ್ನನ್ನ ಇಲ್ಲಿಗೆ ತಂದು ಕೂರಿಸಿದ. ಅವಾಗಿಂದ ಇವಾಗಿನೊರ್ಗೂ ನಂಗೆ ಬಿಡುವೇ ಇಲ್ಲ ನೊಡ್ರಪ್ಪ.

ನನ್ನ ಸುತ್ತಮುತ್ತ ಇರೋ 80 ರಿಂದ 100 ಮನೆಯವ್ರು ನನ್ನನ್ನೇ ನಂಬ್ಕಂಡು ಜೀವನ ನಡೆಸ್ತಾವ್ರೆ. ಪ್ರತಿ ದಿನ ಅವರೆಲ್ಲರ ದಣಿವಾರಿಸೋ ಜೊತೆಗೆ ಮನೆ ಕೆಲಸಗಳಿಗೆಲ್ಲಾ ಸಾಕಾಗುವಷ್ಟು ನೀರನ್ನು ನಾ ಕೊಡ್ತಾ ಬಂದಿದೀನಿ. ನನ್ನನ್ನ ಇಲ್ಲಿಗೆ ಕರ್ಕೊಂಡು ಬಂದಾಗ 2 ಇಂಚಿನಷ್ಟು ನೀರುಕೊಡ್ತಿದ್ದೆ, ಇವಾಗ್ಲೂ ಅಷ್ಟೇ ನೀರನ್ನ ಕೊಡ್ತಾ ಇದೀನಿ. ನನ್ನ ನೋಡಿಕೊಳ್ತಾನಲ್ಲ Waterman, ಅವನು ನನ್ನ ಬಗ್ಗೆ ಏನ್ ಹೇಳವನೆ ನೀವೇ ಕೇಳಿ- "ಕಳೆದ ಹದಿನೈದು ವರ್ಷಗಳಲ್ಲಿ ಈ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾದ ಅಥವಾ ನೀರು ಬತ್ತಿದ ನಿದರ್ಶನಗಳೇ ಇಲ್ಲ. ಆದ್ದರಿಂದ ಇಲ್ಲಿನ ಸ್ಥಳೀಯರಿಗೆ ನೀರಿನ ಅಭಾವ ಎಂದೂ ಎದುರಾಗಿಲ್ಲ" ಅಂದವನೆ.

ನನ್ನ ಸುತ್ತಮುತ್ತ ದೊಡ್ಡ ದೊಡ್ಡ ಕೆರೆಗಳಿಲ್ಲದಿದ್ರೂ, ನಿಸರ್ಗ ನನಗಾಗಿಯೇ ಕೆಲವು ಚಿಕ್ಕ-ಪುಟ್ಟ ಹೊಂಡಗಳನ್ನು ಕೊಟ್ಟಿದೆ. ಮಳೆಗಾಲದಲ್ಲಿ ಈ ಹೊಂಡಗಳೆಲ್ಲಾ ತುಂಬಿ ತುಳುಕುತ್ತಿರ್ತವೆ. ಇಲ್ಲಿ ಶೇಖರಣೆಯಾದ ನೀರು ಭೂತಾಯಿಯ ಒಡಲು ಸೇರಿ ನನ್ನ ನೀರಿನ ಸೆಲೆಗೆ ಬಂದು ಸೇರಿಕೊಳ್ತದೆ. ಇದರಿಂದಾಗಿ ನಾನು, ನನ್ನನ್ನೇ ನಂಬಿರೋ ಜನರ ಜೀವನಾಡಿಯಾಗಿದ್ದೇನೆ. ನನ್ನ ಸುತ್ತಮುತ್ತಲಿನವರು ನನ್ನಿಂದ ಪಡೆದ ನೀರಿಗೆ ಪವಿತ್ರ ಸ್ಥಾನ ನೀಡುವ ಜೊತೆಗೆ ಗಂಗೆ ಪೂಜೆಯ ಹೆಸರಲ್ಲಿ ನನ್ನನ್ನು ಪೂಜೆ ಮಾಡ್ತಿದ್ದಾರೆ. ಹಾಗೇ ನನ್ನ ಸುತ್ತಮುತ್ತಲಿನ ಪರಿಸರವನ್ನು ಸದಾ ಶುಚಿಯಾಗಿಟ್ಟುಕೊಂಡಿದ್ದಾರೆ.

ನಾನು ಸದಾ ಶುಚಿಯಾಗಿರೋದ್ರಿಂದ ಇಲ್ಲಿನ ಮಕ್ಕಳು, ವಯಸ್ಕರು, ವೃದ್ಧರೆಲ್ಲರೂ ನನ್ನ ಒಡಲಿನ ನೀರನ್ನು ಕುಡಿದು ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು, ನನ್ನ ಬಗ್ಗೆ ನಮ್ಮ ಗ್ರಾಮ ಪಂಚಾಯಿತಿ ಸದಸ್ಯೆ ಜಯಶ್ರೀ ಕರ್ಕೇರ ಅವರು ಒಂದಷ್ಟು ಮಾತು ಹೇಳವ್ರೆ. ಅದೇನಂತ ವಸಿ ಕೇಳನ ಬನ್ನಿ... "ಈ ಕೊಳವೆ ಬಾವಿಯನ್ನು ಕೊರೆಯುವುದಕ್ಕಿಂತ ಮುಂಚೆ ಇಲ್ಲಿನ ಜನರು ನೀರಿಗಾಗಿ ಪರದಾಡುತ್ತಿದ್ದರು. ತೆರೆದ ಬಾವಿ, ಕೆರೆ-ಕಟ್ಟೆಗಳಿಂದ ನೀರನ್ನು ತಂದು ಜೀವನ ಸಾಗಿಸುತ್ತಿದ್ದರು. ಇದನ್ನು ಮನಗಂಡ ಸರ್ಕಾರ ಸುಮಾರು 15 ವರ್ಷಗಳ ಹಿಂದೆ ಅಬ್ಬೆಟ್ಟು ಎಂಬಲ್ಲಿನ ಸರ್ಕಾರಿ ಜಾಗದಲ್ಲಿ ಒಂದು ಕೊಳವೆ ಬಾವಿಯನ್ನು ಕೊರೆಸಲು ನಿರ್ಧರಿಸಲಾಗಿ, ಒಂದು ಜಾಗವನ್ನು ಗುರುತು ಮಾಡಲಾಯಿತು. ಆ ಜಾಗದಲ್ಲಿ ಬೋರ್‌ವೆಲ್ ಕೊರೆದಾಗ 2 ಇಂಚುಗಳಷ್ಟು ನೀರು ಬಂದಿದ್ದು, ಅಂದಿನಿಂದ ಇಂದಿನವರೆಗೂ ಇದೇ ಪ್ರಮಾಣದ ನೀರು ಈ ಬೋರ್‌ವೆಲ್‍ನಿಂದ ಬರುತ್ತಿದೆ" ಎಂದು ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಿಷ್ಟು ನನ್ನ ಕಥೆ. ನನ್ನಂಥವರು ಪ್ರತಿಯೊಂದು ಹಳ್ಳಿನಲ್ಲೂ ಇರ್ತಾರೆ. ಆದ್ರೆ ಅವರನ್ನು ಗುರುತಿಸಿ, ಅದೆಷ್ಟೋ ವರ್ಷಗಳಿಂದ ಬತ್ತಿಹೋಗಿರುವ ಅಂತರ್ಜಲದ ಮರುಪೂರಣವಾದರೆ, ಅವುಗಳೂ ಸಹ ನನ್ನಂತೆಯೇ ಫಲ ಕೊಡುತ್ತವೆ. ನೀರಿಗಾಗಿ ಸಾವಿರಾರು ಅಡಿಗಳಷ್ಟು ಭೂತಾಯಿಯ ಒಡಲನ್ನು ಕೊರೆಯುವ ಬದಲು, ಇರುವ ಬೋರ್‌ವೆಲ್‍ಗಳಿಗೆ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ.

 6,168 total views,  3 views today

WhatsApp chat