Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಶುದ್ಧ ನೀರು ಜೀವ ಪೋಷಕ-ಜೀವ ರಕ್ಷಕ. ಪ್ರಕೃತಿಯಲ್ಲಿ ಪ್ರತಿ ಜೀವಿಗೂ ನೀರು, ಗಾಳಿ, ಆಹಾರ ಅತಿ ಮುಖ್ಯ. ಅದರಲ್ಲೂ ನೀರು ಅತಿ ಪ್ರಾಮುಖ್ಯತೆಯನ್ನೆ ಪಡೆದಿದೆ ಎಂದರೆ ತಪ್ಪಾಗಲಾರದು. ನಮ್ಮ ಸಂಪೂರ್ಣ ಆರೋಗ್ಯಕ್ಕೆ ನೀರು ಅತಿ ಅಗತ್ಯವೆನ್ನುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ನಾವು ದೇಹದಲ್ಲಿ ದ್ರವಾಂಶವನ್ನು ಕಾಯ್ದುಕೊಳ್ಳಲು ನೀರು ಕುಡಿಯಬೇಕು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಪ್ರತಿರೋಧಕ ವ್ಯವಸ್ಥೆಗೆ ತುಂಬಾ ಲಾಭಕರ.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಭಾರತ್ ಸರ್ಕಾರ 2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆ ಮನೆಗೂ ನಳದ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಗುರಿಯನ್ನು ಕರ್ನಾಟಕ ರಾಜ್ಯ ಸರ್ಕಾರವು 2023 ರೊಳಗಾಗಿ ರಾಜ್ಯ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಕಾರ್ಯತ್ಮಕ ನಳ ಸಂಪರ್ಕವನ್ನು ಕಲ್ಪಿಸಲು ಮನೆ ಮನೆಗೆ ಗಂಗೆ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಸ್ಥಾಪಿಸಲಾಗಿರುವ ಜಿಲ್ಲಾ ಮಟ್ಟದ ಕುಡಿಯುವ ನೀರಿನ ಮಾದರಿ ಪರೀಕ್ಷಾ ಪ್ರಯೋಗಾಲಯ ದೊಡ್ಡಬಳ್ಳಾಪುರದಲ್ಲಿ ಸ್ಥಾಪಿಸಲಾಗಿದೆ. ಬೆಂಗಳೂರು ಗ್ರಾಮಾಂತರ ವಿಭಾಗದ ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಮೂಲಗಳ ನೀರನ್ನು ಪರೀಕ್ಷೆ ಮಾಡಿ ನೀರಿನ ಗುಣಮಟ್ಟ ಖಾತರಿಪಡಿಸಿಕೊಂಡು ಕುಡಿಯಲು ಯೋಗ್ಯವಾದ ನೀರನ್ನು ಜನವಸತಿ ಪ್ರದೇಶಗಳಿಗೆ ಸರಬರಾಜು ಮಾಡುವುದು ಇದರ ಮುಖ್ಯ ಕರ್ತವ್ಯವಾಗಿದೆ. ಈ ಪ್ರಯೋಗಾಲಯದಲ್ಲಿ ಹಿರಿಯ ವಿಶ್ಲೇಷಣೆಗಾರರು, ಕಿರಿಯ ವಿಶ್ಲೇಷಣೆಗಾರರು, ನೀರಿನ ಮಾದರಿಕೋಶದ ಜವಾಬ್ದಾರಿಯ ಸಿಬ್ಬಂದಿ ಹಾಗೂ ನೀರಿನ ಮಾದರಿ ಸಂಗ್ರಹಗಾರರು ಸೇರಿ ಒಟ್ಟು ಆರು ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

ಗ್ರಾಮೀಣ ಜನವಸತಿ ಪ್ರದೇಶಗಳಿಗೆ ನೀರಿನ ಸಂಗ್ರಹಗಾರರು ತೆರಳಿ ಅಲ್ಲಿ ಲಭ್ಯವಿರುವ ನೀರಿನ ಮೂಲಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ಸಲ್ಲಿಸುತ್ತಾರೆ. ಸದರಿ ನೀರಿನ ಮಾದರಿಗಳನ್ನು ನೀರಿನ ಸಂಗ್ರಹಕೋಶದ ಸಿಬ್ಬಂದಿ ಪರಿಶೀಲಿಸಿ, decoding ಮಾಡಿ, ನೀರಿನ ಗುಣಮಟ್ಟದ ವಿಶ್ಲೇಷಣೆಗಾಗಿ ಒದಗಿಸುತ್ತಾರೆ. ಪ್ರಯೋಗಾಲಯಗಳಲ್ಲಿ ಇರುವ ನುರಿತ ರಾಸಾಯನಿಕ ತಜ್ಞರು  ISO 17025:2017 ಪ್ರಕಾರ ಎಲ್ಲಾ 16 ನಿಯತಾಂಕಗಳ ವಿಶ್ಲೇಷಣೆಗಳನ್ನು ಕೈಗೊಂಡು ವರದಿಗಳನ್ನು ಭಾರತ ಸರ್ಕಾರದ IMIS Portalನಲ್ಲಿ Upload ಮಾಡುತ್ತಾರೆ. ಆ 16 ನಿಯತಾಂಕಗಳೆಂದರೆ ಬಗ್ಗಡುತನ (Turbidity), ಎನ್.ಟಿ.ಯು, ಒಟ್ಟು ಕರಗಿರುವ ವಸ್ತುಗಳು (TDS) (mg/l), ಪಿ.ಹೆಚ್ ಮೌಲ್ಯ, ಕ್ಷಾರೀಯತೆ (CaCO3, mg/l), ಒಟ್ಟು ಗಡಸುತನ (CaCO3, mg/l), ಕ್ಲೋರೈಡ್ (mg/l), ಕ್ಯಾಲ್ಸಿಯಂ (mg/l), ಮೆಗ್ನೇಶಿಯಂ (mg/l), ಫ್ಲೋರೈಡ್ (mg/l), ಸಲ್ಫೇಟ್ (mg/l), ನೈಟ್ರೇಟ್ (mg/l), ಕಬ್ಬಿಣ (mg/l), ಆರ್ಸೇನಿಕ್ (mg/l), ಒಟ್ಟು ಕೋಲಿಫಾರ್ಮ್, ಇ.ಕೋಲಿ.

ಇದಲ್ಲದೇ ಪ್ರಾಥಮಿಕ ಹಂತದಲ್ಲಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಇಲಾಖೆಯಿಂದ Field Testing Kit (FTK)ಗಳನ್ನು ಒದಗಿಸಲಾಗಿದೆ. ಈ FTK ಗಳನ್ನು ಉಪಯೋಗಿಸಿ, ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ನೀರಿನ ಗಂಟಿಗಳಿಗೆ (Waterman), ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು VWSCಯ ಆಸಕ್ತ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ.

ಎಫ್.ಟಿ.ಕೆ (FTK) ಮೂಲಕ ನೀರಿನಗುಣಮಟ್ಟ ಪರಿಶೀಲನೆ:

ಜಲಮೂಲಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ, ಎಫ್.ಟಿ.ಕೆ(FTK) ಗಳ ಮೂಲಕ 6 ನಿಯತಾಂಕಗಳನ್ನು (Parameters) ಪರೀಕ್ಷೆ ಮಾಡಬಹುದು.

  1. ಪಿ.ಹೆಚ್ ಮೌಲ್ಯ: 6.5 ಯಿಂದ 8.5 ಕುಡಿಯಲು ಯೋಗ್ಯ

5 ml ನೀರಿನ ಮಾದರಿಯನ್ನು ಪ್ರಣಾಳಿಕೆಯಲ್ಲಿ ತೆಗೆದುಕೊಂಡು ಅದಕ್ಕೆ 10 ಹನಿ pH ರಿಏಜೆಂಟ್ ಸೇರಿಸಬೇಕು. ನಂತರ ಬಣ್ಣವನ್ನು ಕಲರ್‌ ಚಾರ್ಟಿನೊಂದಿಗೆ ಹೋಲಿಸಿ ಪಿ.ಹೆಚ್‌ ಅನ್ನು ಲೆಕ್ಕಾಚಾರ ಮಾಡಿ/ಮಾದರಿ ನೀರಿನ ಹನಿಯನ್ನು ಪೇಪರ್ ಮೇಲೆ ಹಾಕಿ ಚಾರ್ಟಿನೊಂದಿಗೆ ಹೋಲಿಸಬೇಕು.

  1. ಒಟ್ಟು ಗಡಸುತನ: 200 ppm ರವರೆಗೂ ಸ್ವೀಕಾರಾರ್ಹ ಮಿತಿ, 600 ppm ವರೆಗೆ ಅನುಮತಿಸಬಹುದಾದ ಮಿತಿ

10 ml ನೀರಿನ ಮಾದರಿಯನ್ನು ಹಾಕಿಕೊಂಡು ಇದಕ್ಕೆ ಇ.ಬಿ.ಟಿ ಒಂದು ಚಿಟಿಕೆ ಪೌಡರ್ ಸೇರಿಸಿ ಕಲಕುತ್ತ ಇ.ಡಿ.ಟಿ.ಎ ದ್ರಾವಣವನ್ನು ಹನಿ, ಹನಿಯಾಗಿ ಹನಿಗಳನ್ನು ಎಣಿಸುತ್ತಾ, ನೀರು ಆಕಾಶ ನೀಲಿ ಬಣ್ಣಕ್ಕೆ ತಿರುಗುವವರೆಗೆ ಸೇರಿಸಬೇಕು. ಇ.ಡಿ.ಟಿ.ಎ ದ್ರಾವಣ ಎಣಿಕೆ ಮಾಡಿದ ಹನಿಗಳ ಸಂಖ್ಯೆ ಎಷ್ಟು ಎಂದು ಬರೆದಿಡಿ.

ಒಟ್ಟು ಗಡಸುತನ (ppm) = ಇ.ಡಿ.ಟಿ.ಎ ದ್ರಾವಣದ ಹನಿಗಳ ಸಂಖ್ಯೆ ಎಣಿಕೆ x 10

  1. ಕ್ಲೋರೈಡ್: 250 ppm ರವರೆಗೂ ಸ್ವೀಕಾರಾರ್ಹ ಮಿತಿ, 1000 ppm ವರೆಗೆ ಅನುಮತಿಸಬಹುದಾದ ಮಿತಿ

10 ml ನೀರಿನ ಮಾದರಿಯನ್ನು ಹಾಕಿಕೊಂಡು ಅದಕ್ಕೆ ಕ್ರೊಮೇಟ್‌ ದ್ರಾವಣವನ್ನು 3 ಹನಿ ಸೇರಿಸಿ, ಕಲಕಿದಾಗ ಹಳದಿ ಬಣ್ಣದ ದ್ರಾವಣವಾಗುತ್ತದೆ. ನಂತರ ಸಾವಕಾಶವಾಗಿ ಸಿಲ್ವರ್ ನೈಟ್ರೇಟ್‌ ರಿಏಜೆಂಟ್‌ನ್ನು ಹನಿ ಹನಿಯಾಗಿ ಸಂಖ್ಯೆಗಳನ್ನು ಎಣಿಸುತ್ತಾ, ನೀರಿನ ಬಣ್ಣವು ಕಂದು ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುವವರೆಗೆ ಸೇರಿಸಬೇಕು. ಸಿಲ್ವರ್ ನೈಟ್ರೇಟ್‌ ರಿಏಜೆಂಟ್ ನ ಎಣಿಕೆ ಮಾಡಿದ ಹನಿಗಳ ಸಂಖ್ಯೆ ಎಷ್ಟು ಎಂದು ಬರೆದಿಡಿ.

ಕ್ಲೋರೈಡ್‌ ppm = ಸಿಲ್ವರ್ ನೈಟ್ರೇಟ್‌ ರಿಏಜೆಂಟ್‌ನ ಹನಿಗಳ ಸಂಖ್ಯೆ x 5

  1. ಕಬ್ಬಿಣ: 1 mg ರವರೆಗೂ ಸ್ವೀಕಾರಾರ್ಹ ಮಿತಿ

5 ml ನೀರಿನ ಮಾದರಿಯನ್ನು ಹಾಕಿಕೊಂಡು ಇದಕ್ಕೆ ಕಬ್ಬಿಣ ರಿಏಜೆಂಟ್‌ನ್ನು 5 ಹನಿ ಹಾಕಿ 10 ನಿಮಿಷ ಇಟ್ಟು ಕಲರ್‌ ಚಾರ್ಟಿನೊಂದಿಗೆ ಹೋಲಿಸಿ ಕಬ್ಬಿಣಾಂಶವನ್ನು ಲೆಕ್ಕ ಹಾಕಿರಿ.

  1. ನೈಟ್ರೇಟ್: 45 mg ರವರೆಗೂ ಸ್ವೀಕಾರಾರ್ಹ ಮಿತಿ

10 ml ನೀರಿನ ಮಾದರಿಯನ್ನು ಹಾಕಿಕೊಂಡು ಇದಕ್ಕೆ ನೈಟ್ರೇಟ್‌ ರಿಏಜೆಂಟ್-ಎ ನ ಒಂದು ಚಿಟಿಕೆ ಪೌಡರ್ ಹಾಕಬೇಕು. ನಂತರ 5 ml ನೀರಿನ ಮಾದರಿಯನ್ನು ಹಾಕಿಕೊಂಡು ಇದಕ್ಕೆ ನೈಟ್ರೇಟ್‌ ರಿಏಜೆಂಟ್-ಬಿ ಒಂದು ಚಿಟಿಕೆ ಪೌಡರ್ ಸೇರಿಸಬೇಕು. 5 ನಿಮಿಷದಲ್ಲಿ ಕಲರ್‌ಚಾರ್ಟ್ ನೊಂದಿಗೆ ಹೋಲಿಸಿ ನೈಟ್ರೇಟ್‌ ಅಂಶವನ್ನು ಲೆಕ್ಕ ಹಾಕಿರಿ.

  1. ಫ್ಲೋರೈಡ್: 1.5mg ರವರೆಗೂ ಸ್ವೀಕಾರಾರ್ಹ ಮಿತಿ

5 ml ನೀರಿನ ಮಾದರಿಯನ್ನು ಹಾಕಿಕೊಂಡು ಇದಕ್ಕೆ ಫ್ಲೋರೈಡ್‌ ರಿಏಜೆಂಟ್‌ನ 10 ಹನಿಗಳನ್ನು ಸೇರಿಸಬೇಕು. 5 ನಿಮಿಷಗಳಲ್ಲಿ ದ್ರಾವಣದ ಬಣ್ಣವನ್ನು ಕಲರ್‌ಚಾರ್ಟ್ ನೊಂದಿಗೆ ಹೋಲಿಸಿ ಫ್ಲೋರೈಡ್‌ ಅಂಶವನ್ನು ಲೆಕ್ಕ ಹಾಕಿರಿ.

ಈ ಫಲಿತಾಂಶವನ್ನು Result Sheet ನಲ್ಲಿ ನಮೂದಿಸಿ ಜೆ.ಜೆ.ಎಂ ವೆಬ್‌ಸೈಟ್‌ನ WQMIS ನಲ್ಲಿ ದಾಖಲಿಸಲಾಗುತ್ತದೆ. ಈ ದಾಖಲಾತಿಯ ಅನ್ವಯಎಲ್ಲಾ ಫಲಿತಾಂಶವನ್ನು ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರುರವರ ಮುಖಾಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿರವರಿಗೆ ತಲುಪಿಸಲಾಗುತ್ತದೆ. ನೀರಿನ ಗುಣಮಟ್ಟ ಸರಿಯಿಲ್ಲದಿದ್ದರೆ ಅದರ ನಿವಾರಣೋಪಾಯಗಳನ್ನು ಕಾರ್ಯಪಾಲಕ ಅಭಿಯಂತರರು ಕೈಗೊಳ್ಳುತ್ತಾರೆ. ರಾಸಾಯನಿಕ ನಿಯತಾಂಕಗಳನ್ನು ವರ್ಷಕ್ಕೆಒಂದು ಬಾರಿ ಮತ್ತು ಬಯೋಲಾಜಿಕಲ್ ನಿಯತಾಂಕಗಳನ್ನು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಮಾಡಲಾಗುತ್ತದೆ.

ಪ್ರಯೋಗಾಲಯ ಹಂತವಲ್ಲದೆ ಜನಸಾಮಾನ್ಯರು ತಮ್ಮ ಖಾಸಗಿ ಬೋರ್‌ವೆಲ್ ನೀರಿನ ಗುಣಮಟ್ಟವು ಸಹ ಗ್ರಾಮ ಪಂಚಾಯಿತಿಯಲ್ಲಿ ನೀಡಿರುವ ಎಫ್.ಟಿ.ಕೆ (FTK) ಬಳಸಿ ಪರೀಕ್ಷೆ ಮಾಡಿಕೊಳ್ಳಬಹುವುದು. ಅಲ್ಲದೇ ಪ್ರಯೋಗಾಲಯಕ್ಕೂ ನೀರಿನ ಮಾದರಿಯನ್ನು ತಂದು ನಿಗದಿಪಡಿಸಿದ ಶುಲ್ಕವನ್ನು ನೀಡಿ ನೀರನ್ನು ಪರೀಕ್ಷೆ ಮಾಡಿಕೊಳ್ಳಬಹುದು.

 5,411 total views,  1 views today

WhatsApp chat