Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

`ನೀರು’ ಭೂಮಿಯ ಮೇಲಿನ ಪ್ರತಿ ಜೀವಿಯ ಜೀವನಾಧಾರ. ಭೂಮಿಯ ಮೇಲೆ ಶೇ.97 ರಷ್ಟು ಉಪ್ಪು ನೀರಿದ್ದು, ಕೇವಲ ಶೇ.3 ರಷ್ಟು ಮಾತ್ರ ಸಿಹಿ ನೀರಿದೆ. ಆದರೆ, ಅದರಲ್ಲಿ ಶೇ.1 ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಾಗಿದ್ದು, ಉಳಿದ ನೀರು ಹಿಮ ಪರ್ವತ ಹಾಗೂ ಹಿಮನದಿಗಳಲ್ಲಿದೆ. ಆದ್ದರಿಂದ ಭೂಮಿಯ ಮೇಲೆ ವಾಸಿಸುವ ಪ್ರತಿಯೊಬ್ಬರಿಗೂ ನೀರಿನ ಅಗತ್ಯ ಇರುವುದರಿಂದ ನಾವು ನೀರನ್ನು ಸಂರಕ್ಷಿಸಬೇಕಿದೆ.

ಇದನ್ನು ಅರಿತಿದ್ದ ನಮ್ಮ ಪೂರ್ವಜರು ನೀರಿನ ಸಂರಕ್ಷಣೆಗಾಗಿ ಹಲವು ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಿದ್ದರು. ಈ ಮೂಲಕ ಕೃಷಿ ಚಟುವಟಿಕೆಗಳಿಗೆ ಹಾಗೂ ಮಾನವನ ಬಳಕೆಗೆ ಅಗತ್ಯವಾದ ನೀರಿನ ಪೂರೈಕೆಗೆ ದಾರಿಕಂಡುಕೊಂಡಿದ್ದರು. ಈ ವಿಧಾನಗಳು ಹೆಚ್ಚು ಜನಪ್ರಿಯತೆ ಪಡೆಯದಿದ್ದರೂ ಸಹ ಹೆಚ್ಚು ಪರಿಣಾಮಕಾರಿಯಾಗಿದ್ದು ಇನ್ನೂ ಬಳಕೆಯಲ್ಲಿವೆ.

ಅವುಗಳೆಂದರೆ:

  1. ಕಟ್ಟ : ಸಣ್ಣ ಪುಟ್ಟತೊರೆ, ತೋಡು, ಹಳ್ಳಗಳಿಂದ ಹಿಡಿದು ಮಧ್ಯಮ ಪ್ರಮಾಣದ ಹೊಳೆಗಳಿಗೆ ಹರಿಯುವ ನೀರಿಗೆ ತಡೆಯೊಡ್ಡಿ ನಿಲ್ಲಿಸುವುದೇ ಕಟ್ಟ. ಇದು ಸ್ಥಳೀಯವಾಗಿ ಲಭ್ಯವಿರುವ ಮಣ್ಣು ಮತ್ತು ಸಡಿಲವಾದ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗುವ ತಾತ್ಕಾಲಿಕ ಚೆಕ್ ಡ್ಯಾಮ್‍ಗಳು ಎಂದೇ ಹೇಳಬಹುದು. ಈ ರೀತಿ ಹರಿಯುವ ನೀರು ನಿಲ್ಲಿಸುವುದರಿಂದ ಸುತ್ತಮುತ್ತಲಿನ ಕೆರೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲಿದೆ. ಇದು ಸಾಂಪ್ರದಾಯಿಕ ಜಲ ಸಂರಕ್ಷಣೆಯ ಸರಳ ವಿಧಾನವಾಗಿದ್ದು, ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಬಹುದು.

2. ಮದಕ: ಇವು ಸಾಂಪ್ರದಾಯಿಕವಾಗಿ ಮಳೆ ನೀರನ್ನು ಸಂಗ್ರಹಿಸುವ ವಿಧಾನವಾಗಿದ್ದು ರಾಜಸ್ಥಾನದ ಜೋಹಾಡ್ ಮಾದರಿಯನ್ನು ಹೋಲುತ್ತದೆ. ನೈಸರ್ಗಿಕವಾದ ಮೂರು ಬದಿಗಳಲ್ಲಿ ಎತ್ತರದ ಪ್ರದೇಶವಿದ್ದು, ಸುತ್ತಲಿನ ಇಳಿಜಾರುಗಳಿಂದ ಇಳಿಯುವ ಮಳೆನೀರು ತಗ್ಗಿರುವ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಈ ಮಳೆನೀರು ಇಳಿಜಾರುಗಳಿಂದ ಹರಿದು ಹೋಗದಂತೆ ಮಾಡಲು, ನಾಲ್ಕನೆಯ ತೆರೆದ ಬದಿಗೆ ಬದುಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಇದರಿಂದ ಅಂತರ್ಜಲವೂ ವೃದ್ಧಿಯಾಗಲಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಎಂಬುವರು ಕುಂದೂರು ಬೆಟ್ಟದಲ್ಲಿ ಇಂತಹ ಸಾಕಷ್ಟು ಸಾಂಪ್ರದಾಯಿಕ ಜಲ ಮೂಲಗಳನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ ಪ್ರಸಾರವಾದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೂ ಪಾತ್ರರಾಗಿದ್ದರು.

3. ಬಾವ್ಡಿ/ಹೆಜ್ಜೆ ಬಾವಿಗಳು: ಇವು ಸಾಮಾನ್ಯವಾಗಿ ದೊಡ್ಡ ತೆರೆದ ಬಾವಿಗಳಾಗಿದ್ದು, ಮೆಟ್ಟಿಲುಗಳನ್ನು ಹೊಂದಿರುತ್ತದೆ. ಅಲ್ಲದೆ, ಸುಂದರ ಕಮಾನುಗಳು, ಬದಿಗಳಲ್ಲಿ ಕೊಠಡಿಗಳನ್ನೂ ಹೊಂದಿದ್ದು ಸಾವಿರಾರು ಲೀಟರ್ ನೀರನ್ನು ಸಂಗ್ರಹಿಸಬಹುದಾಗಿದೆ. ಶುಷ್ಕ ಪ್ರದೇಶಗಳಲ್ಲಿ ನೀರಿನ ಅಗತ್ಯತೆಯನ್ನು ಪೂರೈಸಲು ಇವುಗಳನ್ನು ನಿರ್ಮಿಸಲಾಗಿತ್ತು. ವಿಜಯಪುರದಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು. ಅಂದಿನ ಬಿಜಾಪುರದ ಆದಿಲ್ ಶಾಹಿ ರಾಜವಂಶದ ಆಡಳಿತಗಾರರು ನಿರ್ಮಿಸಿದ ಅಂತರ-ಸಂಪರ್ಕ ಕಾಲುವೆಗಳ ಸುರಂಗ ಮಾರ್ಗವನ್ನು ಹೊಂದಿರುವ ಅಸಂಖ್ಯಾತ ಬಾವ್ಡಿಗಳಿವೆ. ಇವುಗಳ ಪುನಶ್ಚೇತನಕ್ಕಾಗಿ ವಿಜಯಪುರ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ.

ಹಲವು ವರ್ಷಗಳ ಹಿಂದೆ, ಇಂತಹ ಸಾಂಪ್ರದಾಯಿಕ ಜಲಮೂಲಗಳಿಂದಲೇ ಜನರ ಜೀವನಕ್ಕೆ ಹಾಗೂ ಕೃಷಿಗೆ ಅಗತ್ಯವಾದ ನೀರಿನ ಪೂರೈಕೆಯಾಗುತ್ತಿತ್ತು. ಎಂತಹ ಬೇಸಿಗೆಯಲ್ಲೂ ಇವು ಬತ್ತದೆ ನೀರೊದಗಿಸುತ್ತಿದ್ದವು. ಅಲ್ಲದೆ ಇವುಗಳ ಬಳಕೆಯಿಂದಾಗಿ ಅಂತರ್ಜಲದ ಸಂರಕ್ಷಣೆ ಜೊತೆಗೆ ವೃದ್ಧಿಯೂ ಆಗುತ್ತಿತ್ತು. ಆದರೀಗ ಈ ಜಲಮೂಲಗಳು ಅಳಿವಿನಂಚಿನಲ್ಲಿವೆ. ನೀರಿನ ಅಭಾವದಿಂದಾಗಿ ಎಲ್ಲರೂ ಅಂತರ್ಜಲವನ್ನೇ ಅವಲಂಬಿಸಿದ್ದು, ಅಂತರ್ಜಲ ಮಟ್ಟವೂ ಕಡಿಮೆಯಾಗಿದೆ. ನೀರಿಗೆ ನೀರೇ ಪರ್ಯಾಯವಾಗಿರುವುದರಿಂದ ಕೆರೆ, ಕಟ್ಟೆ, ಕಲ್ಯಾಣಿಗಳು ಮತ್ತು ಇತರ ಸಾಂಪ್ರದಾಯಿಕ ಜಲ ಮೂಲಗಳನ್ನು ಪುನಶ್ಚೇತನಗೊಳಿಸಿ, ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

 6,132 total views,  3 views today

WhatsApp chat