Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ನನ್ನ ಹೆಸರು ಚಿಲುಮೆ ಅಂತ, ಚಿಲುಮೆ ಅಂದ್ರೆ ಗೊತ್ತಲ್ಲಾ..ಒರತೆ ಅಂತಾ. ಈ ಹಿಂದೆ ನನ್ನನ್ನ ಡಂಗೂರ ಸಾರೋದು, ಶ್ರಮದಾನ, ಜಾಗೃತಿ ಮೂಡಿಸುವ ಕಾರ್ಯಕ್ರಮ, ಜಾಥಾ, ಗೋಡೆ ಬರಹ ಅಂತೆಲ್ಲಾ ಹೇಳಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆ ಅಂತಾ ಕರೀತಿದ್ರು. ಆದ್ರೆ ನನ್ನ ಜಿಲ್ಲೆಯಾದ ಕೊಪ್ಪಳದಲ್ಲಿ ಒಂದು ಹೆಜ್ಜೆ ಮುಂದೆಹೋಗಿ ನನಗೆ ಚಿಲುಮೆ ಅಂತ ನಾಮಕರಣ ಮಾಡಿದ್ದಾರೆ. ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಾಗೂ ಜಲ ಜೀವನ್ ಮಿಷನ್ ಯೋಜನೆಗಳು ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಅನುದಾನವನ್ನೆಲ್ಲಾ ಕ್ರೋಢೀಕರಿಸಿ ನನ್ನ ಹೆಸರಿನಲ್ಲಿ ನನ್ನ ಜಿಲ್ಲೆಯ ಜನರಿಗೆ, ‘ನನ್ನ ಗ್ರಾಮ ನನ್ನ ಜವಾಬ್ದಾರಿ’ ಎಂಬ ಅರಿವನ್ನು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನನ್ನ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯಿತಿಗಳಿದ್ದು, 27ನೇ ಆಗಸ್ಟ್ 2021 ರಿಂದ 1ನೇ ಅಕ್ಟೋಬರ್ 2021 ರವರೆಗೂ ಚಿಲುಮೆ ಶೀರ್ಷಿಕೆಯಡಿ ಜಿಲ್ಲೆಯನ್ನು ಸ್ವಚ್ಛ ಮತ್ತು ಸುಂದರ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಸ್ವಚ್ಛ ಶುಕ್ರವಾರ: ನನ್ನ ಗ್ರಾಮ ನನ್ನ ಜವಾಬ್ದಾರಿ ಎಂಬ ಮನೋಭಾವನೆ ಸಾರ್ವಜನಿಕರಲ್ಲಿ ಮೂಡಲಿ ಎಂಬ ಕಾರಣದಿಂದಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಚಿಲುಮೆ ಕಾರ್ಯಕ್ರಮದ ಅವಧಿಯಲ್ಲಿ ಪ್ರತಿ ಶುಕ್ರವಾರಗಳಂದು ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಚಟುವಟಿಕೆಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಆಂದೋಲನ ಮತ್ತು ಶ್ರಮಾದಾನ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಯಿತು. ಹಾಗೂ ಈ ಚಟುವಟಿಕೆಗಳಲ್ಲಿ ಸಾವಿರಾರು ಮಂದಿ ಸಾರ್ವಜನಿಕರು, ಸ್ವ ಸಹಾಯ ಸಂಘಗಳ ಮಹಿಳೆಯರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಯುವ ಸಂಘಟನೆಗಳ ಸದಸ್ಯರುಗಳು ಭಾಗವಹಿಸಿ ಸಾರ್ವಜನಿಕ ಸ್ಥಳಗಳಾದ ಶಾಲೆಗಳ ಅಂಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಭವನ, ದೇವಸ್ಥಾನಗಳು, ಐತಿಹಾಸಿಕ ಸ್ಥಳಗಳು, ಬಸ್ ನಿಲ್ದಾಣಗಳು ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸುವ ಮೂಲಕ ಸ್ವಚ್ಛ ಶುಕ್ರವಾರ ಅಭಿಯಾನವನ್ನು ಯಶಸ್ವಿಗೊಳಿಸಿದರು.

ಇದಿಷ್ಟೇ ಅಲ್ಲದೆ ಚಿಲುಮೆ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತಿ ದಿನ ಪ್ರತಿ ಸಲ ಶೌಚಾಲಯ ಬಳಕೆ, ಹದಿಹರೆಯದ ಹೆಣ್ಣುಮಕ್ಕಳಿಗೆ ಋತುಚಕ್ರ ನೈರ್ಮಲ್ಯ ಹಾಗೂ ಸ್ಯಾನಿಟರಿ ಪ್ಯಾಡ್‌ಗಳ ವೈಜ್ಞಾನಿಕ ನಿರ್ವಹಣೆ ಹಾಗೂ ಮನೆಯ ಹಂತದಲ್ಲಿ ತ್ಯಾಜ್ಯ ವಿಂಗಡಣೆ, ವೈಯಕ್ತಿಕ ಶುಚಿತ್ವದ ಬಗ್ಗೆ ಡಂಗೂರ ಸಾರಿ, ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಲಾಯಿತು. ಇದರ ಜೊತೆಯಲ್ಲಿಯೇ ನೀರು ಮತ್ತು ನೈರ್ಮಲ್ಯ ವಿಷಯಗ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಗ್ರಾಮದ ನೀರು ಮತ್ತು ನೈರ್ಮಲ್ಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡ 10ನೇ ತರಗತಿಯ ವಿದ್ಯಾರ್ಥಿನಿ ಅನಿತಾ ಗುರುಸ್ವಾಮಿ ಹೇಳುವಂತೆ “ಚಿಲುಮೆ ಅಭಿವೃದ್ಧಿ ಅಭಿಯಾನ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಅದರಲ್ಲಿ ವೈಯಕ್ತಿಕ ಶುಚಿತ್ವ ಮತ್ತು ಋತು ಚಕ್ರ ನೈರ್ಮಲ್ಯ ಕುರಿತು ಮಾಹಿತಿ ನೀಡಿದರು. ಕಸವಿಂಗಡಿಸಿ ಹಸಿಕಸ ಮನೆ ಹಂತದಲ್ಲಿ ನಿರ್ವಹಣೆ ಮಾಡುವಂತೆ ಒಣಕಸವನ್ನು ಗ್ರಾಮ ಪಂಚಾಯತ್ ವಾಹನಕ್ಕೆ (ಸ್ವಚ್ಛ ವಾಹಿನಿ) ನೀಡಬೇಕು, ಮಹಿಳೆಯರು ಹಾಗೂ ಕಿಶೋರಿಯರು ಬಳಸಿದ ಪ್ಯಾಡ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಸ್ವಚ್ಛ ವಾಹಿನಿಗೆ ಕೊಡುವಂತೆ ಮಾಹಿತಿ ನೀಡಿದರು. ಆಗ ನನಗೆ ಮೊದಲು ಮುಜುಗರ ಅನಿಸಿತು, ನಂತರ ನಮ್ಮ ಊರಿನ ಸ್ವಚ್ಛತೆ ಕುರಿತು ಮನವರಿಕೆ ಮಾಡಿಕೊಟ್ಟ ನಂತರ ನಾವು ಮತ್ತು ನಮ್ಮ ಗೆಳತಿಯರು ಮಾತನಾಡಿಕೊಂಡು ಈ ಕಾರ್ಯದಲ್ಲಿ ನಾವು ಸಕ್ರಿಯರಾಗಿ ಭಾಗವಹಿಸಿ ಒಂದು ತಿಂಗಳಲ್ಲಿ ಕಸ ವಿಂಗಡನೆ ಹಾಗೂ ಪ್ಯಾಡ್ ಸಂಗ್ರಹ ವಾಗುವಂತೆ ಮಾಡುವುದಾಗಿ ಅಂದೇ ಪಣತೊಟ್ಟು ನಾವು ಪ್ರತಿಯೊಬ್ಬರು 5 ಮನೆಗಳನ್ನು ಆಯ್ಕೆ ಮಾಡಿಕೊಂಡು ಮನವೊಲಿಸುವ ಕಾರ್ಯ ಪ್ರಾರಂಭಿಸಿದ 1 ವಾರದಲ್ಲಿ ಬಳಸಿದ ಪ್ಯಾಡ್ ಸಂಗ್ರಹ ಪ್ರಾರಂಭವಾಯಿತು. ನಮ್ಮ ಊರಲ್ಲಿ ಎಲ್ಲೆಂದರಲ್ಲಿ ಕಸ ಇರುವುದು ಕಡಿಮೆ ಆಗಿದೆ. ಮನೆ ಮನೆ ಭೇಟಿ ಮಾಡಿದಾಗ ಕೆಲವು ತಾಯಂದಿರು ಕಸದ ವಾಹನಕ್ಕೆ ಕಸ ಹಾಕಲು ಆಗಲ್ಲ ಅಂದಾಗ ನನಗೆ ಕೊಡಿ ನಾನು ಹಾಕುತ್ತೇನೆ ಎಂದಾಗ ಅವರಿಗೆ ಮುಜುಗರ ಎನಿಸಿ ಇಲ್ಲ. ನಿನ್ನ ಸ್ವಚ್ಛತೆಯ ಕಾಳಜಿ ಮೆಚ್ಚಬೇಕು ನಾವು ನಿಮಗೆ ಸಹಕರಿಸುತ್ತೇವೆ ಎಂದು ತಿಳಿಸಿದಾಗ ಇದು ನಮಗೆ ತುಂಬಾ ಹೆಮ್ಮೆ ಅನಿಸಿದೆ” ಎನ್ನುತ್ತಾರೆ ಅನಿತಾ ಗುರುಸ್ವಾಮಿ. ಈ ಮೂಲಕ ಪರಸ್ಪರ ಕೈಜೋಡಿಸಿದರೆ ಎಂತಹ ಬದಲಾವಣೆ ಬೇಕಾದರೂ ಮಾಡಬಹುದು ಎಂದು ತೋರಿಸಿದ್ದಾರೆ.

 4,302 total views,  3 views today

WhatsApp chat