Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಪುಟ್ಟ ಹುಡುಗಿ ನೀಲು ಶಾಲೆಗೆ ಜಡೆ ಹಾಕುವುದನ್ನು ನಿಲ್ಲಿಸಿದ್ದಾಳೆ. ಶಿಕ್ಷಕಿಯ ಪ್ರಶ್ನೆಗಳಿಗೆ ಅವಳ ಉತ್ತರ ಅಮ್ಮ ಜಡೆ ಹಾಕ್ತಾ ಇಲ್ಲ ಅನ್ನುವುದು ಮಾತ್ರ. ಶಿಕ್ಷಕಿ ನೀಲುಗೆ ತಾಯಿಯನ್ನು ಕರೆದುಕೊಂಡು ಬರಲು ತಿಳಿಸಿದ್ದಾರೆ. ನೀಲುವಿನ ಅಮ್ಮ ಶಿಕ್ಷಕಿಯ ಮುಂದೆ ಮುಜುಗರದಿಂದ ನಿಂತಿದ್ದಾರೆ. “ಯಾಕಮ್ಮಾ, ನಿಮ್ಮ ಮಗಳಿಗೆ ಜಡೆ ಹಾಕಿಲ್ಲ?, ಶಾಲೆಯಲ್ಲಿ ರೂಲ್ಸ್ ಇದೆ” ಶಿಕ್ಷಕಿಯ ಮಾತು. “ಅದು.. ಅದು.. ಕೈ ಕುಯ್ದುಬಿಟ್ಟಿದೆ ಮೇಡಮ್ನೋರೇ.. ಕೂದಲು ಸಿಕ್ಕಿದಾಗೆಲ್ಲ ತುಂಬಾ ನೋವಾಗತ್ತೆ” ತಡವರಿಸುತ್ತಾ ನಿಧಾನವಾಗಿ ಹೇಳುತ್ತಾರೆ  ನೀಲುವಿನ ತಾಯಿ. “ಯಾಕೆ ಏನಾಯ್ತು?” ಶಿಕ್ಷಕಿ ಕೇಳಿದರು ಮೆಲ್ಲಗೆ.

“ಅದು, ನಾನು ಸ್ವಚ್ಛತಾ ಕಾರ್ಮಿಕಳಾಗಿ ಕೆಲಸ ಮಾಡುತ್ತೇನೆ. ಯಾರೋ ಕಸವನ್ನು ವಿಂಗಡಿಸದೇ ಹಾಗೆಯೇ ಎಸೆದು ಬಿಟ್ಟಿದ್ದರು. ಅದನ್ನು ಕೈಗಳಿಂದ ವಿಂಗಡಿಸುವಾಗ ಅದರಲ್ಲಿದ್ದ ಗಾಜಿನ ಚೂರುಗಳು ಕೈಗೆ ತಗುಲಿ ಕೈಗಳು ಗಾಯವಾಗಿವೆ. ಜಡೆ ಹಾಕುವಾಗ ಕೂದಲು ಸಿಕ್ಕಿಕೊಂಡರೆ ತುಂಬಾ ನೋಯುತ್ತದೆ. ಹಾಗಾಗಿ ಮಗಳಿಗೆ ಜಡೆ ಹಾಕಲು ಆಗ್ಲಿಲ್ಲ.” ನೀಲುವಿನ ತಾಯಿ ವಿವರಿಸುವಾಗ ಶಿಕ್ಷಕಿಯ ಕಣ್ಣಲ್ಲೂ ನೀರು.

ಇದು ಕೇವಲ ಇವರೊಬ್ಬರ ಸಮಸ್ಯೆಯಲ್ಲ. ನಾಡಿನಾದ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಸ್ವಚ್ಛತಾ ಕಾರ್ಮಿಕರ ಸಮಸ್ಯೆ. ತ್ಯಾಜ್ಯ ನಿರ್ವಹಣೆ ಇಡೀ ದೇಶವನ್ನೇ ಕಾಡುತ್ತಿರುವ ಪ್ರಸ್ತುತ ಸಮಸ್ಯೆ. ನಮ್ಮ ಬೇಜವಾಬ್ದಾರಿಗಳು ಈ ಸಮಸ್ಯೆಯನ್ನು ಪೆಡಂಭೂತವಾಗಿಸಿವೆ. ಸಮರ್ಪಕವಾಗಿ ವಿಂಗಡಣೆಯಾಗದ ತ್ಯಾಜ್ಯದಿಂದ ಪರಿಸರಕ್ಕೆ, ಪ್ರಾಣಿಗಳಿಗೆ, ಜಲಚರಗಳಿಗೆ ಒಟ್ಟಾರೆ ಜೀವಸಂಕುಲಕ್ಕೆ ಅಪಾಯವಾಗುತ್ತಿದೆ. ನಮ್ಮ ಗ್ರಾಮ, ರಸ್ತೆ, ಪರಿಸರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಸ್ವಚ್ಛತಾ ಕಾರ್ಮಿಕರು ತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಅನೇಕ ರೀತಿಯ ಅಪಾಯಕ್ಕೊಳಗಾಗುತ್ತಿದ್ದಾರೆ.

ಸಮರ್ಪಕ ತ್ಯಾಜ್ಯ ನಿರ್ವಹಣೆಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಪಂಚಾಯಿತಿಯಲ್ಲೂ ಸ್ವಚ್ಛತಾ ಕಾರ್ಮಿಕರು ಮನೆ ಮನೆಯಿಂದಲೂ ವಿಂಗಡಿಸಿದ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ  ತ್ಯಾಜ್ಯವನ್ನು ಘನ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಮತ್ತು ಒಣ ತ್ಯಾಜ್ಯವನ್ನು ಮರುಬಳಕೆಗೆ ಬಳಸಲಾಗುತ್ತಿದೆ.

ಇಲ್ಲಿ ತ್ಯಾಜ್ಯವನ್ನು ಕಾಲಕಾಲಕ್ಕೆ ಸಂಗ್ರಹಿಸಿ ವಿಲೇವಾರಿ ಮಾಡುವುದು ಹೇಗೆ ಸ್ವಚ್ಛತಾಕಾರ್ಮಿಕರ ಜವಾಬ್ದಾರಿಯೋ, ಅದನ್ನು ಮೂಲದಲ್ಲಿಯೇ ಸಮರ್ಪಕವಾಗಿ ವಿಂಗಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಸ್ವಚ್ಛತಾಕಾರ್ಮಿಕರ ಕಾರ್ಯ ನಿರ್ವಹಣೆಯ ಕುರಿತಾಗಿ ಅರಿತು ಅವರೊಂದಿಗೆ ಗೌರವದಿಂದ, ಮಾನವೀಯತೆಯಿಂದ, ಆದರದಿಂದ ನಡೆದುಕೊಳ್ಳುವುದು ಅತ್ಯಂತ ಮುಖ್ಯ.

ಕಸವನ್ನು ಮೂಲದಲ್ಲಿಯೇ ವಿಂಗಡಿಸುವುದು ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. ಹಸಿ ಕಸವನ್ನು ಮನೆಯಲ್ಲಿಯೇ ಗೊಬ್ಬರವಾಗಿಸಿ ಗಿಡಗಳಿಗೆ ಬಳಸಬಹುದು. ಹಸಿ ಕಸವನ್ನು ಪ್ರತ್ಯೇಕಿಸಿ ಎರೆಹುಳು ಗೊಬ್ಬರ, ಪೈಪ್ ಕಾಂಪೋಸ್ಟಿಂಗ್, ಮಡಿಕೆಯಲ್ಲಿ ಕಾಂಪೋಸ್ಟಿಂಗ್ ಮುಂತಾದ ಅನೇಕ ಸರಳ ವಿದಾನಗಳನ್ನು ಬಳಸಿ ಸಂಪನ್ಮೂಲವಾಗಿ ಪರಿವರ್ತಿಸಬಹುದು. ಒಣ ಕಸವನ್ನು ಪ್ರತ್ಯೇಕಿಸಿ ಪಂಚಾಯಿತಿಯ ಗಾಡಿಗೆ ನೀಡಬೇಕು. ಸ್ಯಾನಿಟರಿ ತ್ಯಾಜ್ಯವನ್ನು ಕಾಗದದಲ್ಲಿ ಸುತ್ತಿ ಅದರ ಮೇಲೆ ಕೆಂಪು ಶಾಯಿಯಿಂದ ಗುರುತು ಮಾಡಿ ಪ್ರತ್ಯೇಕಿಸಿ ಪಂಚಾಯಿತಿಯ ಗಾಡಿಗೆ ನೀಡಬೇಕು. ಅಪಾಯಕಾರಿ ತ್ಯಾಜ್ಯಗಳನ್ನು ಒಣ ಕಸದೊಂದಿಗೆ ಮಿಶ್ರ ಮಾಡಿ ನೀಡಬಾರದು.

ನಮ್ಮ ಬೇಜವಾಬ್ದಾರಿತನದಿಂದ ತ್ಯಾಜ್ಯ ಸಂಗ್ರಹಕಾರರಿಗೆ ಅನೇಕ ಅಪಾಯಗಳಾಗುತ್ತವೆ. ವಿಂಗಡಿಸದೆ ಇರುವ ತ್ಯಾಜ್ಯವನ್ನು ವಿಂಗಡಿಸುವಾಗ ಆಕಸ್ಮಿಕವಾಗಿ ಗಾಯಗಳು, ಸೋಂಕು, ಸುಟ್ಟ ಗಾಯಗಳು, ಇತರೆ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿರುತ್ತದೆ. ಅವರ ಸಮಯದ ಉಳಿತಾಯ, ಆರೋಗ್ಯದ ಕಾಳಜಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯೂ ಹೌದು.

ಇಂದೇ ನಮ್ಮ ಸ್ವಚ್ಛತಾ ಕಾರ್ಮಿಕರಿಗೆ ಸಹಕರಿಸುವ ಪಣ ತೊಡೋಣ. ಅವರ ಆರೋಗ್ಯ- ಘನತೆಯ ಕಾಳಜಿ ವಹಿಸೋಣ. ನಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸೋಣ.

Rural Drinking Water and Sanitation Department

 6,595 total views,  2 views today

WhatsApp chat