Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಮೇ 2020

ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮತ್ತು ನಿರ್ವಹಣೆ ಮಾಡಲು ಕಾಯಕಲ್ಪ ನೀಡಬೇಕು, ನೈರ್ಮಲ್ಯದ ವಿಚಾರಗಳು ಗ್ರಾಮೀಣ ಭಾಗದ ಜನರಲ್ಲಿ ಬೇರೂರುವಂತೆ ಮಾಡಬೇಕು ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಗ್ರಾಮಗಳಲ್ಲಿ ಸಮರ್ಪಕವಾಗಿ, ತ್ವರಿತಗತಿಯಲ್ಲಿ ಅನುಷ್ಠಾನ ಮಾಡಬೇಕು, ರಾಜ್ಯದ ಎಲ್ಲೆಡೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಶುಚಿತ್ವವನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಪ್ರಗತಿಯನ್ನು ಇಮ್ಮಡಿಗೊಳಿಸಬೇಕು, ಇದನ್ನು ಸಾಧ್ಯಗೊಳಿಸಲು “ತ್ಯಾಜ್ಯ ನಿರ್ವಹಣೆಯ ಆಂದೋಲನ”ವನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಮುಂದಾಗಿದೆ.

ಸ್ವಚ್ಛ ಸುಂದರ ಕರ್ನಾಟಕವನ್ನಾಗಿಸುವ ವಿಶಾಲ ದೃಷ್ಟಿಕೋನವನ್ನು ಸಾಧಿಸಲು ರಾಜ್ಯದ ಎಲ್ಲಾ ಗ್ರಾಮೀಣ ಕುಟುಂಬಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ರಾಜ್ಯದೆಲ್ಲೆಡೆ ಪ್ರವಾಸವನ್ನು ಕೈಗೊಂಡು ಸ್ವಚ್ಛಗ್ರಾಮಗಳನ್ನು ರೂಪಿಸಲು ಪಂಚಾಯಿತಿ ಅಧ್ಯಕ್ಷರು/ಸದಸ್ಯರುಗಳು, ಪಂಚಾಯಿತಿ ಅಧಿಕಾರಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ತಂತ್ರಜ್ಞರೊಂದಿಗೆ ನಿರಂತರವಾಗಿ ಚರ್ಚೆ, ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಇತ್ತೀಚಿಗೆ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್ ರಾಜ್ ಸಚಿವರು ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮೀಣ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ಗ್ರಾಮ ಪಂಚಾಯಿತಿಗಳನ್ನು “ಬಯಲು ಶೌಚ ಮುಕ್ತ ಮತ್ತು ತ್ಯಾಜ್ಯ ಮುಕ್ತ”ವನ್ನಾಗಿ ರೂಪಿಸಲು ಕರೆ ನೀಡಿದ್ದಾರೆ.

ಪ್ರತಿಯೊಂದು ಗ್ರಾಮದಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಎಲ್ಲರೂ  ಶ್ರಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಿದೆ. ಸ್ವಚ್ಛತೆಯಿರುವ  ಕುಟುಂಬ ಸುಖಿ ಕುಟುಂಬ ಎಂಬ ಪ್ರತೀತಿಯಿದೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಪರಿಕಲ್ಪನೆ ನಮ್ಮಲ್ಲಿ ಮೊದಲಿನಿಂದಲ್ಲೂ ಬೇರೂರಿದೆ. ಸ್ವಚ್ಛತೆ ಎಲ್ಲಿರುತ್ತದೆಯೋ ಅಲ್ಲೇ ಅಭಿವೃದ್ಧಿಯಿರುತ್ತದೆ, ಆದಕಾರಣ ನಮ್ಮ ಮನೆ-ನಮ್ಮ ಗ್ರಾಮ ಸ್ವಚ್ಛವಾಗಿಟ್ಟುಕೊಳ್ಳುವುದಾಗಿ ಪ್ರತಿಯೊಬ್ಬರು ಪ್ರತಿಜ್ಞೆ ಮಾಡುವಂತೆ ಮಾನ್ಯ ಸಚಿವರು ಮನವಿ ಮಾಡಿದ್ದಾರೆ.

ದೇಶದಲ್ಲಿ ಸ್ವಚ್ಛತೆಯ ಅಲೆ ಬೀಸುತ್ತಿದ್ದು, ಗೌರವಾನ್ವಿತ ಪ್ರಧಾನ ಮಂತ್ರಿಗಳು ಸಹ ಸ್ವಚ್ಛತೆಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ಮಹಾತ್ಮ ಗಾಂಧೀಜಿಯವರ ಆಶಯದಂತೆ ಎಲ್ಲಾ ಗ್ರಾಮಗಳು ಸ್ವಚ್ಛತೆಯಿಂದ ಕೂಡಿರಬೇಕು, ಎಲ್ಲೆಂದರಲ್ಲಿ ಕಸ ಬಿಸಾಡದೇ ಮೂಲದಲ್ಲಿಯೇ ಕಸವನ್ನು ಹಸಿಕಸ-ಒಣ ಕಸವನ್ನಾಗಿ ಬೇರ್ಪಡಿಸಿ ವಿಲೇವಾರಿ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಕರೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳ ಸಲಹೆ ಅಭಿಪ್ರಾಯಗಳನ್ನು ನೀಡಿ ಉತ್ತಮ ರೀತಿಯಲ್ಲಿ ಘನ ತ್ಯಾಜ್ಯ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಇಲಾಖೆಗೆ ಸಹಕರಿಸಲು ಮಾನ್ಯ ಸಚಿವರು ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಏಳಿ, ಏದ್ದೇಳಿ! ನಮ್ಮೂರಿನಲ್ಲಿರುವ ಬಯಲು ಬಹಿರ್ದೆಸೆಯಂತಹ ಅನಾಗರೀಕ ಪದ್ದತಿಯನ್ನು ಹೋಗಲಾಡಿಸೋಣ, ನಮ್ಮ ಮನೆ, ನಮ್ಮ ಕೇರಿ, ನಮ್ಮೂರನ್ನ ಸ್ವಚ್ಛ ಹಾಗೂ ಸುಂದರವಾಗಿಸೋಣ ‘ಪಾಯಿಖಾನೆ ಅವಶ್ಯಕತೆ ಗಂಡಸರಿಗೆ ಅಷ್ಟೊಂದಿಲ್ಲಾ, ಅದರ ಸಂಕಟ, ಅವಮಾನ ಎಷ್ಟೆಂಬುದು ಗೊತ್ತಿಲ್ಲ, ಸೂರ್ಯನಿರದ ಸಮಯದಲ್ಲಿ ಮಾತ್ರ, ರಸ್ತೆ ಬದಿಯಲ್ಲಿ ಬಹಿರ್ದಿಸೆಗೆ ತೆರಳುವ ಮಹಿಳೆಯರಿಗೆ ಮಾತ್ರ ಗೊತ್ತು, ಅದರ ತೊಂದರೆ ಏನೆಂಬುದು! ಮಹಿಳೆಯರೇ ಹಾಗಂತ ಸುಮ್ನೆ ಕೂಡ್ಬೇಡಿ, ಶೌಚಾಲಯ ಕಟ್ಸಿ, ಅಂತ ನಿಮ್ಮ ಮನೆಯಲ್ಲಿ ಪಟ್ಟು ಹಿಡಿದು ಶೌಚಾಲಯವನ್ನು ಕಟ್ಸಿಕೊಂಡು  ನಿರಂತರವಾಗಿ ಉಪಯೋಗಿಸಲು ಮುಂದಾಗಬೇಕು.

ರಾಜ್ಯದಲ್ಲಿ ಉಡುಪಿ, ಮಂಗಳೂರು, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿನೂತನ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಘಟಕಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಬಹುಗ್ರಾಮ ಪದ್ದತಿಯಲ್ಲಿ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮ ಪಂಚಾಯಿತಿಯಲ್ಲಿ ಅತ್ಯುತ್ತಮವಾಗಿ ತ್ಯಾಜ್ಯ ನಿರ್ವಹಣೆ ಘಟಕವನ್ನು ನಿರ್ವಹಣೆ ಮಾಡಲಾಗುತ್ತಿದೆ. ಸದರಿ ಘಟಕದಲ್ಲಿ ಕಸ ಸಂಗ್ರಹಣೆ ಮತ್ತು ಕಸ ವಿಲೇವಾರಿಯಲ್ಲಿ ವಿನೂತನ ಕಾರ್ಯತಂತ್ರ, ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದಕ್ಕೆ ಅಲ್ಲಿನ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಇದಕ್ಕೆ ನಿದರ್ಶನವಾಗಿದೆ ಎಂದು ಅವರ ಸೇವೆ ಮತ್ತು ಆಸಕ್ತಿಯ ಕುರಿತು ಮಾನ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಮಾದರಿಯನ್ನು ಇತರೆ ಜಿಲ್ಲೆಗಳು ಸಹ ಅಳವಡಿಸಿಕೊಳ್ಳಬೇಕು ಎಂದು ಮಾನ್ಯ ಸಚಿವರು ಕರೆ ನೀಡಿದ್ದಾರೆ. ೨೦೨೦-೨೧ನೇ ಸಾಲಿನ ಅಂತ್ಯದ ಒಳಗಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಸ್ಥಾಪಿಸಿ, ಪ್ರತಿಯೊಂದು ಮನೆಯಲ್ಲಿ ಒಣ-ಹಸಿ ಕಸ ವಿಂಗಡಿಸಿ ವಿಲೇವಾರಿ ಮಾಡುವ ಪದ್ದತಿಯನ್ನು ಅಳವಡಿಸಿಕೊಂಡು ಗ್ರಾಮಗಳನ್ನು ಸ್ವಚ್ಛ ಸುಂದರವನ್ನಾಗಿಸಿ, ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ವಿಶೇಷವಾಗಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಇದಕ್ಕೆ ಬೇಕಾದ ಎಲ್ಲಾ ಅಗತ್ಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರವನ್ನು  ಇಲಾಖೆಯು ಒದಗಿಸಲು ಬದ್ದವಿದೆ.

 6,959 total views,  1 views today

WhatsApp chat