Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಟ್ಟ ಗ್ರಾಮ ಬೆಳವಿನಾಳ. ಇಲ್ಲಿ 98 ಕುಟುಂಬಗಳು 309 ಜನಸಂಖ್ಯೆಯನ್ನು ಒಳಗೊಂಡಿದೆ. ಹಳ್ಳಿ ಎಂದ ಕೂಡಲೇ ಕೆಟ್ಟ ರಸ್ತೆಗಳು, ರಸ್ತೆ ಬದಿಯಲ್ಲಿ ತಿಪ್ಪೆ, ಬಯಲು ಶೌಚ, ಮೂಗು ಮುಚ್ಚಿಕೊಂಡು ಹೋಗುವ ವಾತಾವರಣ ಕಣ್ಣೆದುರು ಬಂದಂತೆ ಅನಿಸುವುದು ಸರ್ವೆ ಸಾಮಾನ್ಯ ಅಲ್ವ. ಆದರೆ ಈಗ ನಮ್ಮ ಹಳ್ಳಿಯ ಚಿತ್ರಣವೇ ಬೇರೆಯಾಗಿದೆ.

ಹೌದು, ಕೊಪ್ಪಳ ನಗರ ದಿಂದ 5 ರಿಂದ 6 ಕಿಮೀ ದೂರವಿರುವ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಛತೆಗೆ ಯಾವುದೇ ಕೊರತೆ ಕಂಡುಬರುವುದಿಲ್ಲ. ಏಕೆಂದರೆ ಇಲ್ಲಿಯ ಜನರು ಗ್ರಾಮದ ಸ್ವಚ್ಛತೆ ಬಗ್ಗೆ ಹೆಚ್ಚು ತಿಳಿದವರಾಗಿದ್ದು, ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡು ಬಳಕೆ ಮಾಡುತ್ತಾರೆ. ಯಾರೊಬ್ಬರು ಕೂಡ ಬಯಲು ಶೌಚಕ್ಕೆ ಹೊಗುವುದಿಲ್ಲ. ಮನೆಯ ಶೌಚಾಲಯವನ್ನು ಪ್ರತಿಯೊಬ್ಬ ಸದಸ್ಯರು ಬಳಕೆ ಮಾಡುತ್ತಾರೆ ಹಾಗಾಗಿ ಗ್ರಾಮದ ರಸ್ತೆಯ ಇಕ್ಕೆಲಗಳು ಸ್ವಚ್ಛವಾಗಿರುವುದನ್ನು ಕಾಣಬಹುದಾಗಿದೆ.

ಇಂಗು ಗುಂಡಿ ನಿರ್ಮಾಣ:

ಮನೆ ಹಂತದಲ್ಲಿ ಉತ್ಪತ್ತಿಯಾಗುವ ಬೂದು ನೀರನ್ನು ಎಲ್ಲೆಂದರಲ್ಲಿ ಹರಿಬಿಡದೇ ಗ್ರಾಮದ ಪ್ರತಿಯೊಂದು ಮನೆಗೂ ಇಂಗು ಗುಂಡಿ ನಿರ್ಮಾಣ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಸಹಕಾರವಾಗಿದೆ. ಬೆಳವಿನಾಳ ಗ್ರಾಮದಲ್ಲಿ ಪ್ರತಿ ಓಣಿಗಳಲ್ಲಿಯೂ ಎಲ್ಲೂ ಕೂಡ ನಿಂತ ನೀರು ಕಂಡುಬರುವುದಿಲ್ಲ. ಹೀಗಾಗಿ ಗ್ರಾಮದಲ್ಲಿ ಸೊಳ್ಳೆ-ನೊಣಗಳ ಕಾಟ ಕಂಡುಬರುವುದಿಲ್ಲ. ಒಂದು ಸುಂದರವಾದ ಗ್ರಾಮವನ್ನು ಕಾಣಬಹುದು.

ನಾವು ನೋಡಿರುವ ಪ್ರಕಾರ ಹಳ್ಳಿಗಳ ರಸ್ತೆಗಳು, ತಗ್ಗು ದಿನ್ನಿಗಳು, ರಸ್ತೆ ಪಕ್ಕದಲ್ಲಿ ತಿಪ್ಪೆಗಳು, ತಿಪ್ಪೆಗಳ ಪಕ್ಕದಲ್ಲಿ ಬಯಲು ಶೌಚ ಮಾಡುವುದು, ಕಸ ತುಂಬಿದ ರಸ್ತೆಗಳು ನಿಂತ ನೀರಿನ ಗುಂಡಿಗಳು ಕಂಡು ಬರುವುದು ಸಾಮಾನ್ಯ ಆದರೆ ಬೆಳವಿನಹಾಳ ಗ್ರಾಮ ಇದಕ್ಕೆ ವಿರುದ್ಧವಾಗಿದೆ. ಸ್ವಚ್ಛತೆಗೆ ಇನ್ನೊಂದು ಹೆಸರು ಬೆಳವಿನಾಳ ಎಂದರೆ ತಪ್ಪಾಗಲಾರದು.

ಜಲ ಜೀವನ್ ಮಿಷನ್:

ನೀರಿನ ಮಿತ ಬಳಕೆ ಬಗ್ಗೆ ಕೂಡ ಜಾಗೃತರಾಗಿದ್ದು, ಪ್ರತಿಯೊಬ್ಬರು ತಮ್ಮ ಮನೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ವೈಯಕ್ತಿಕ ನಳ ಸಂಪರ್ಕ ಪಡೆದು ಸರಕಾರದ ಯೋಜನೆಗಳ ಸದುಪಯೋಗದೊಂದಿಗೆ ಸಹ ಜೀವನ ನಡೆಸುತ್ತಿದ್ದಾರೆ.

ಗ್ರಾಮದ ಅಭಿವೃದ್ಧಿಯಲ್ಲಿ ಸಹಕಾರಿಯಾಗಿರುವ ಗ್ರಾಮಸ್ಥರಾದ ಬಸನಗೌಡ್ರು ಹೇಳುವ ಪ್ರಕಾರ ಇಂಗು ಗುಂಡಿ ಮಾಡಿಕೊಳ್ಳಲು ನನ್ನ ಮನೆಯ ಮುಂದೆ ಜಾಗವಿರಲಿಲ್ಲ. ಮನೆಯ ಅಕ್ಕಪಕ್ಕದವರು ಇಂಗು ಗುಂಡಿ ನಿರ್ಮಿಸಿಕೊಂಡಿದ್ದನ್ನು ನೋಡಿ, ನಾನು ಕೂಡ ನನ್ನ ಮನೆಯ ಮುಂದೆ ಇಂಗು ಗುಂಡಿ ಮಾಡಿಕೊಂಡೆ. ಇದರಿಂದ ನನ್ನ ಮನೆಯ ಸುತ್ತ ಸ್ವಚ್ಛವಾಗಿದೆ. ಸೊಳ್ಳೆ ಕಾಟ, ಕೆಟ್ಟ ವಾಸನೆ ಇಲ್ಲ. ಮೊದಲು ಬಳಸಿದ ನೀರಿನಿಂದ ಮನೆ ಮುಂದೆ ಇರುವವರೊಂದಿಗೆ ಸಾಕಷ್ಟು ಭಾರಿ ಜಗಳ ಮಾಡಿಕೊಳ್ಳುತ್ತಿದ್ದೇವು. ಆದರೆ ಈಗ ಅಂತಹ ಸಮಸ್ಯೆಗಳಿಲ್ಲ. ನಮ್ಮ ಗ್ರಾಮದ ಎಲ್ಲಾ ಮನೆಗಳಲ್ಲೂ ನಳ ಸಂಪರ್ಕ, ಶೌಚಾಲಯ, ಇಂಗು ಗುಂಡಿ ಇದ್ದು, ಗ್ರಾಮ ಸ್ವಚ್ಛ, ಸ್ವಸ್ಥ, ಸುಂದರವಾಗಿದೆಎಂದು ಸಂತಸ ವ್ಯಕ್ತಪಡಿಸಿದರು.

ಬೆಳವಿನಾಳ ಗ್ರಾಮ ಪಂಚಾಯಿತಿಯ ಬಗ್ಗೆ ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೀಗೆನ್ನುತ್ತಾರೆ “ಬೆಳವಿನಾಳ ಗ್ರಾಮ ಎಂದ ಕೂಡಲೇ ಒಂದು ಹೊಸ ಅನುಭವ ಏಕೆಂದರೆ ಅಲ್ಲಿಯ ಜನರ ಸಹಕಾರ, ಯೋಜನೆಗಳ ಸದುಪಯೋಗದ ಬಗ್ಗೆ ಅವರಿಗಿರುವ ಕಾಳಜಿ ಮತ್ತಾವ ಗ್ರಾಮಗಳಲ್ಲಿ ಕಾಣಸಿಗುವುದಿಲ್ಲ ಎಂದು ಹೇಳಬಹುದು. ಮೊದಮೊದಲು ಎಲ್ಲಾ ಗ್ರಾಮಗಳ ಜನರಂತೆ ಇವರು ಕೂಡ ಇಂಗು ಗುಂಡಿ ನಮಗೆ ಬೇಡ, ನಮ್ಮ ಮನೆಯಲ್ಲಿ ಜಾಗ ಇಲ್ಲ ಎಂದು ಹಿಂದೆ ಸರಿದಾಗ 2 ಗ್ರಾಮ ಸಭೆ ಮಾಡಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಮನವೊಲಿಸಿದಾಗ ಗ್ರಾಮದ ಪ್ರತಿ ಮನೆಗೂ ಇಂಗು ಗುಂಡಿ ನಿರ್ಮಾಣ ಮಾಡಿಕೊಳ್ಳಲು ಒಬ್ಬೊಬ್ಬರಾಗಿ ಮುಂದೆ ಬಂದು ಗ್ರಾಮಸ್ಥರೇ ಮುಂದಾಳತ್ವ ವಹಿಸಿಕೊಂಡು ಇಡೀ ಗ್ರಾಮಕ್ಕೆ ಇಂಗು ಗುಂಡಿ ನಿರ್ಮಾಣ ಮಾಡುವ ಮೂಲಕ ಯಶಸ್ವಿಯಾಗಿ ಬೇರೆಯವರಿಗೆ ಮಾದರಿಯಾಗಿದ್ದಾರೆ.

ಈಗ ಸರಕಾರದ ಯಾವುದೇ ಯೋಜನೆಗಳ ಬಗ್ಗೆ ತಿಳಿಸಿದಾಗ ಯಾವುದೇ ಸಬೂಬು ಹೇಳದೇ ಉತ್ಸಾಹದಿಂದ ಮುಂದೆ ಬಂದು ಯೋಜನೆಗಳ ಅನುಷ್ಠಾನಕ್ಕೆ ಗ್ರಾಮ ಪಂಚಾಯತಿಯೊಂದಿಗೆ ಕೈ ಜೋಡಿಸುತ್ತಾರೆ. ಗ್ರಾಮದ ಸ್ವಚ್ಛ ಹಾಗೂ ಸುಂದರ ಗ್ರಾಮ ನಿರ್ಮಾಣದಲ್ಲಿ ಗ್ರಾಮಸ್ತರ ಪಾತ್ರ ಬಹುಮುಖ್ಯ. ಸಾರ್ವಜನಿಕರ ಸಹಕಾರದಿಂದ ಒಂದು ಸುಂದರ ಗ್ರಾಮವನ್ನು ಕಂಡ ಜನರು ನಮ್ಮೂರಿಗೆ ಒಳ್ಳೆಯ ಕೆಲಸ ಮಾಡಿಕೊಟ್ರಿ ಅಂತ ಸಂತೋಷಪಡುತ್ತಾರೆ

ಈ ಗ್ರಾಮ ಪಂಚಾಯಿತಿಯ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನಮ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶ್ರೀ.ಎಲ್.ಕೆ ಅತೀಕ್ ..ಎಸ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಸಚಿವಾಲಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಇವರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದಲ್ಲಾದ ಪ್ರಗತಿಯ ಕುರಿತು ಪ್ರಶಂಸೆ ವ್ಯಕ್ತ ಪಡಿಸಿದರು. ಇದು ನಮಗೆ ಹೆಮ್ಮೆಯ ವಿಷಯಎನ್ನುತ್ತಾರೆ.

 2,590 total views,  5 views today

WhatsApp chat