ಆಧುನಿಕ ಯುಗದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿರುವ ಶೌಚಾಲಯ, ಇಂದು ಪ್ರತಿಯೊಬ್ಬರಿಗೂ ದೊರೆಯುವಲ್ಲಿ ವಿಶ್ವದಾದ್ಯಂತ ಗಣನೀಯ ಬೆಳವಣಿಗೆಗಳು ಕಂಡುಬರುತ್ತಿವೆ. ಆರೋಗ್ಯವಂತ ಮತ್ತು ಆರ್ಥಿಕ ಸದೃಢ ಸಮಾಜ ನಿರ್ಮಾಣದಲ್ಲಿ ''ಮನೆಗೊಂದು ಶೌಚಾಲಯ'' ಎಂಬ ಧ್ಯೇಯ ಇಂದು ಅತೀ ಮುಖ್ಯ ಪಾತ್ರ ವಹಿಸುತ್ತಿದೆ. ಏಕೆಂದರೆ ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಅನೇಕ ಕಾಯಿಲೆಗಳನ್ನು ಹರಡುತ್ತದೆ. ಹಾಗಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ.
ವಿಶ್ವ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನ ಎಂದು ಘೋಷಿಸಿ, ಆಚರಿಸುತ್ತಾ ಬರುತ್ತಿದೆ. ವಿಶ್ವ ಶೌಚಾಲಯ ದಿನಾಚರಣೆಯ ಸಂದರ್ಭದಲ್ಲಿ 2019ರ ಈ ಹೊತ್ತಿನಲ್ಲಿ ವಿಶ್ವದಲ್ಲಿನ ಶೌಚಾಲಯಗಳ ಸ್ಥಿತಿಗತಿಗಳ ಒಂದು ನೋಟ ಇಲ್ಲಿದೆ.
ಬಯಲು ಶೌಚ ಪದ್ಧತಿಯನ್ನು ರೂಢಿಸಿಕೊಂಡ ವಿಶ್ವದ ಹಲವು ದೇಶಗಳ ಪೈಕಿ ಭಾರತವು ಒಂದಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದ ಸಾಧನೆ 2014ರ ಬಳಿಕ ಬದಲಾಗುತ್ತ ಸಾಗಿ ಪ್ರಶಂಸನೀಯ ಸಾಧನೆ ಮಾಡಲಾಗಿದೆ. “ಸ್ವಚ್ಛ ಭಾರತ ಅಭಿಯಾನ”ದಡಿ ಶೌಚಾಲಯದ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೋತ್ಸಾಹಧನವನ್ನು ನೀಡಿ, ಎಲ್ಲರಿಗೂ ಶೌಚಾಲಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಸ್ವಚ್ಛ ಭಾರತ್ ಅಭಿಯಾನದಡಿ ಐದು ವರ್ಷಗಳಲ್ಲಿ 11.1 ಕೋಟಿ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿತ್ತು. 2014ರ ನಂತರ ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಸುಮಾರು 10.36 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಇದು ಜಗತ್ತಿನ ಯಾವುದೇ ದೇಶದಲ್ಲಿ ಯಾವುದೇ ಸರ್ಕಾರ ಐದು ವರ್ಷದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಹಾಕಿಕೊಂಡ ಅತಿದೊಡ್ಡ ಗುರಿಯಾಗಿದೆ. ಇದರಿಂದ ಭಾರತದಲ್ಲಿ ಶೌಚಾಲಯ ಕ್ರಾಂತಿ ನಡೆಯುತ್ತಿದೆ ಎಂದು ಜಗತ್ತು ಗುರುತಿಸುವಂತಾಗಿದೆ.
ಈ ನಿಟ್ಟಿನಲ್ಲಿ 2019 ರ ಈ ಹೊತ್ತಿನಲ್ಲಿ ಎಲ್ಲರಿಗೂ ಶೌಚಾಲಯ ಇರಬೇಕು ಎಂಬ ಗುರಿ ಸಾಧಿಸುವಲ್ಲಿ ಭಾರತ ನಿರೀಕ್ಷಿತ ಪ್ರಗತಿ ತೋರಿಸಿ, ಜಗತ್ತಿನ ಪ್ರಶಂಸೆಗೆ ಪಾತ್ರವಾಗಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಭಾರತದ ಗ್ರಾಮೀಣ ವ್ಯಾಪ್ತಿಯಲ್ಲಿ ಜನರಿಗೆ ಉದ್ಯೋಗ ನೀಡಲು ಆರಂಭಿಸಿದ್ದ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಿಸುವುದನ್ನೂ ಸೇರಿಸಿದ್ದು, ಹೆಚ್ಚು ಅನುಕೂಲವಾಗಿದೆ. ಭಾರತ ಸರ್ಕಾರ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುವ ಆಂದೋಲನವನ್ನೇ ಮಾಡುತ್ತಿದೆ ಎಂದರೆ ತಪ್ಪಾಗಲಾರದು.
ಇಥಿಯೋಪಿಯಾ ವಿಶ್ವದಲ್ಲಿ ಅತೀ ಹೆಚ್ಚು ಶೌಚಾಲಯದ ಕೊರತೆ ಎದುರಿಸುತ್ತಿರುವ ದೇಶ. ನಂತರ ಛಾಡ್, ಮಡಗಾಸ್ಕರ್, ದಕ್ಷಿಣ ಸುಡಾನ್, ಎರಿಟ್ರಿಯಾ ದೇಶಗಳು ಕ್ರಮವಾಗಿ 5 ಸ್ಥಾನಗಳಲ್ಲಿವೆ. ಉಗಾಂಡಾ, ಭಾರತ, ಭೂತಾನ್, ಬರ್ರ್ಕಿನಾ, ಫಾಸೋ, ಮಲವಿ ದೇಶಗಳು ಮಕ್ಕಳಿಗೆ ಅತ್ಯುತ್ತಮ, ಸುರಕ್ಷಿತ ಶೌಚಾಲಯಗಳನ್ನು ಇತ್ತೀಚಿನ ವರ್ಷಗಳಲ್ಲಿ ಒದಗಿಸುತ್ತಿರುವ ದೇಶಗಳಾಗಿವೆ. ಈ ನಿಟ್ಟಿನಲ್ಲಿ ಭಾರತವು ಜಗತ್ತಿನಲ್ಲೇ ಹೆಚ್ಚು ಪ್ರಗತಿ ಸಾಧಿಸುತ್ತಿದೆ.
ಶೌಚಾಲಯವಿಲ್ಲದ ಜನರು ನೇರವಾಗಿ ಬಯಲಿನಲ್ಲಿ ವಿಸರ್ಜನೆ ಮಾಡುತ್ತಾರೆ. ಅಲ್ಲದೇ ನೀರಿನ ಮೂಲಗಳಲ್ಲಿ ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಇದರಿಂದ ನೀರಿನ ಮೂಲಗಳು ಕಲುಷಿತಗೊಂಡು ಅತಿಸಾರ, ಕಾಲರಾದಂತಹ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ಇದರಿಂದ ವಿಶ್ವದಲ್ಲಿ ಪ್ರತಿದಿನ 5,500 ಜನರ ಸಾವು ಸಂಭವಿಸುತ್ತಿರುವುದಾಗಿ ವರದಿಯೊಂದು ಸಾಬೀತುಪಡಿಸಿದೆ. ಇದು ವಿಶ್ವ ಭಯಾನಕ ಕಾಯಿಲೆಗಳೆಂದು ಹೆಸರಾದ ಏಡ್ಸ್, ಮಲೇರಿಯಾ, ಕ್ಷಯದಿಂದ ಸಾಯುವವರ ಪ್ರಮಾಣಕ್ಕಿಂತ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ವಿಶ್ವದೆಲ್ಲೆಡೆ ಸುರಕ್ಷಿತ ಶೌಚಾಲಯದ ಬಗ್ಗೆ ಮೂಡಿಸುತ್ತಿರುವ ಜಾಗೃತಿ ಉತ್ತಮ ಫಲಿತಾಂಶ ನೀಡುತ್ತಿದ್ದು, ಕಳೆದ 25 ವರ್ಷಗಳಲ್ಲಿ 210 ಕೋಟಿ ಜನರು ಶೌಚಾಲಯ ಕಟ್ಟಿಸಿಕೊಂಡಿದ್ದಾರೆ ಎಂದು ಅಂಕಿಅಂಶ ಹೇಳುತ್ತಿದೆ. ಭಾರತದಲ್ಲಿ ಶೌಚಾಲಯ ನಿರ್ಮಾಣದ ವೇಗ ನೋಡಿ ಇತರ ದೇಶಗಳೂ ಅಚ್ಚರಿ ವ್ಯಕ್ತಪಡಿಸುವಂತಾಗಿದೆ.
ಶೌಚಾಲಯಗಳ ಅಗತ್ಯ ಹಾಗೂ ಮಹತ್ವ ಕುರಿತು ಮನವರಿಕೆ ಮಾಡಿ ಶೌಚಾಲಯ ಕಟ್ಟಿಸಲು ಪ್ರೇರಣೆ ನೀಡುವ ಕೆಲಸವನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳು ಮಾಡುತ್ತಿರುವಾಗ್ಯೂ, ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಗ್ರಾಮಗಳನ್ನು 'ನಿರ್ಮಲ ಗ್ರಾಮ' ಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಒಂದು ಸಣ್ಣ ಬದಲಾವಣೆ, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.
ಇನ್ನು ಶೌಚಾಲಯದ ಬಳಕೆ, ನಿರ್ವಹಣೆಯೂ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಬನ್ನಿ ಇದರಲ್ಲಿ ನಾವೂ ಪಾಲುದಾರರಾಗೋಣ, ನೈರ್ಮಲ್ಯ, ಸ್ವಚ್ಛ ಸುಂದರ ಭವಿಷ್ಯದ ಕಹಳೆ ಮೊಳಗಿಸೋಣ. ಸಮೃದ್ಧ ನಾಡನ್ನು ಕಟ್ಟಲು ಎಲ್ಲರೂ ಶ್ರಮಿಸೋಣ, ಆ ಮೂಲಕ ರಾಜ್ಯ, ದೇಶವನ್ನು ಬಯಲು ಶೌಚ ಮುಕ್ತ, ತ್ಯಾಜ್ಯ ಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಪ್ರತಿಜ್ಞೆ ಮಾಡೋಣ...
ಸ್ವಚ್ಛ ಮೇವ ಜಯತೇ.......
Source: www.who.int