Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2019/09/blog-img-150x80.png
//swachhamevajayate.org/wp-content/uploads/2019/10/Image-1.jpg

ಮನುಷ್ಯನಿಗೆ ತಾನು ಸಂಪಾದಿಸಿದ ವಸ್ತುಗಳ ಮೇಲೆ ಅದೇನೋ ವಿಶೇಷವಾದ ಮಮತೆ. ತನಗೇನೇ ಆದರೂ ಆ ವಸ್ತುಗಳನ್ನು ಮಾತ್ರ ಜೋಪಾನವಾಗಿಟ್ಟುಕೊಳ್ಳಲು ಬಯಸುತ್ತಾನೆ. ಸಾವಿರಾರು ರೂಗಳನ್ನು ಸುರಿದು ಕೊಂಡುಕೊಂಡ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ಜೀವನ ಪರ್ಯಂತ ಖಜಾನೆಯಲ್ಲಿಟ್ಟು ಮುತುವರ್ಜಿ ವಹಿಸಿ ಕೂಡಿಡುತ್ತಾನೆ. ಕೇವಲ ತನಗೆ ಅಂತಸ್ತು, ಕ್ಷಣಿಕ ಸುಖ ನೀಡುವ ವಸ್ತುಗಳಿಗೇ ಲಕ್ಷಾಂತರ ರೂಗಳನ್ನು ಖರ್ಚುಮಾಡಿ ಅವುಗಳ ಕಡೆ ಸದಾ ಗಮನ ಹರಿಸುತ್ತಾನೆ. ದಿನನಿತ್ಯದ ಯಾಂತ್ರಿಕ ಜೀವನಕ್ಕೆ ಸಹಕಾರಿಯಾದ ಎಷ್ಟೋ ವಸ್ತುಗಳ ಮೇಲೆ ಮನುಷ್ಯ ಇಂದು ಅವಲಂಬಿತನಾಗಿದ್ದು ಅವುಗಳನ್ನು ಕಾಪಾಡಿಕೊಳ್ಳುವುದು ಅವನ ಆದ್ಯತೆಗಳಲ್ಲೊಂದಾಗಿದೆ. ನನಗೇನಾದರೂ ಪರವಾಗಿಲ್ಲ, ಕೈಯಲ್ಲಿನ ಮೊಬೈಲ್ ಒಡೆದುಹೋಗಬಾರದು, ಅದರ ವೆಚ್ಚ ಸಾವಿರಾರು ರೂಪಾಯಿ, ನನಗೆ ಏನಾದರೂ ಸರಿ, ಕೋಟಿ ಕೊಟ್ಟು ಕೊಂಡ ಕಾರಿನ ಗಾಜು ಒಡೆದು ಹೋಗಬಾರದು... ಇದು ಇಂದಿನ ಯೋಚನಾಲಹರಿ.

ಆದರೆ ಒಮ್ಮೆಯಾದರೂ ನಾವು ನಮ್ಮ ಪರಿಸರಕ್ಕೇನೂ ಆಗಬಾರದು, ನಮ್ಮ ಮುಂದಿನ ಪೀಳಿಗೆಗೇನೂ ಆಗಬಾರದು ಎಂದು ಯೋಚಿಸಿದ್ದೇವೆಯೇ? ನಾವು ಇಂದು ಬದುಕಲು ಆಧಾರವಾದ ಗಾಳಿ, ನೀರು, ಶುದ್ಧ ಪರಿಸರ ಮಲಿನವಾಗುತ್ತಿರುವುದನ್ನು ನೋಡಿಯೂ ನಾವೂ ಅದನ್ನು ಕಾಪಾಡುವ ಕುರಿತಾಗಿ ಯೋಚಿಸಿದ್ದೇವೆಯೇ? ಉಸಿರಾಡುವ ಗಾಳಿಯೇ ಇಂದು ವಿಷವಾಗುತ್ತಿದೆ. ಏನೂ ಅರಿಯದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಇಂದು ಪರಿಸರ ಮಾಲಿನ್ಯಕ್ಕೆ ತುತ್ತಾಗುತ್ತಿರುವವರೆಷ್ಟೋ. ಇದರ ಬಗ್ಗೆ ನಾವು ಎಂದಾದರೂ ಯೋಚಿಸಿದ್ದೇವೆಯೇ? ಇಂದಿನ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯ, ವಿಷಪೂರಿತವಾಗುತ್ತಿರುವ ಗಾಳಿ, ನೀರು, ಆಹಾರ, ಹೆಚ್ಚುತ್ತಿರುವ ರೋಗರುಜಿನಗಳು, ಎಲ್ಲದರ ಹಿಂದಿರುವ ಅತಿದೊಡ್ಡ ಕಾರಣವನ್ನು ನಾವು ಅರಿಯಲು ವಿಫಲರಾಗುತ್ತಿದ್ದೇವೆ.

ಇಂದು ಈ ಎಲ್ಲಾ ಸಮಸ್ಯೆಗಳ ಹಿಂದಿರುವ ಒಂದು ಪ್ರಮುಖ ಕಾರಣ ಪ್ಲಾಸ್ಟಿಕ್. ನಮ್ಮ ಜೀವನದ ಅವಿಭಾಜ್ಯ ಅಂಗವೋ ಏನೋ ಎಂಬಂತೆ ಗುರುತಿಸಿಕೊಂಡಿರುವ ಪ್ಲಾಸ್ಟಿಕ್ ನಮ್ಮ ಜೀವನಕ್ಕೇ ಮಾರಕವಾಗುತ್ತಿರುವುದು ನಮಗೆ ಕಾಣಿಸುತ್ತಿದ್ದರೂ ನಾವು ಸುಮ್ಮನಿದ್ದೇವೆ. ನಾವು ಪ್ಲಾಸ್ಟಿಕ್ ನ್ನು ನಿರಾಯಾಸವಾಗಿ ಉಪಯೋಗಿಸುತ್ತೇವೆ. ಶುದ್ಧ ಎಳನೀರಿಗೂ ಪ್ಲಾಸ್ಟಿಕ್ ಸ್ಟ್ರಾ, ತರಕಾರಿ ತರಲು ಹೊರಟರೆ ಕವರ್ ಕೊಡಿ ಎಂದು ಅಂಗಡಿಯಾತನನ್ನೇ ಕೇಳುತ್ತೇವೆ. ಇನ್ನು ಯಾವುದಾದರೂ ಸಮಾರಂಭಗಳೆಂದರೆ ಸಾಕು ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಬಾಳೆ ಎಲೆಯಂತೆ ಕಾಣುವ ಪ್ಲಾಸ್ಟಿಕ್ ಎಲೆ, ಮುಂತಾದುವುಗಳ ರಾಶಿಯೇ ಸುರಿಯುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲಿ ಒಂದೇ ಬಾರಿ ಬಳಸಿ ಬಿಸಾಡುವ ಹಲವಾರು ಪ್ಲಾಸ್ಟಿಕ್ ವಸ್ತುಗಳಿವೆ. ಕೇವಲ ಕೆಲವೇ ನಿಮಿಷಗಳಿಗಾಗಿ ಬಳಸಿ ಎಸೆಯುವ ಈ ಪ್ಲಾಸ್ಟಿಕ್ ಭೂಮಿಯಲ್ಲಿ ಸಾವಿರಾರು ವರ್ಷಗಳಾದರೂ ಕರಗುವುದಿಲ್ಲ, ಕೊಳೆಯುವುದಿಲ್ಲ. ಸಾವಿರ ವರ್ಷಗಳಾದರೂ ಪರಿಸರಕ್ಕೆ ಹಾನಿಯುಂಟು ಮಾಡುತ್ತ ನಮ್ಮ ಸುತ್ತಲು ಇದ್ದೇ ಇರುತ್ತದೆ.

ಪ್ಲಾಸ್ಟಿಕ್ ಸುಟ್ಟ ಹೊಗೆಯಿಂದ ಅನೇಕ ಚರ್ಮರೋಗಗಳು, ಉಸಿರಾಟದ ತೊಂದರೆಗಳು, ಕ್ಯಾನ್ಸರ್ ಮುಂತಾದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರುವುದನ್ನು ನಾವು ಇಂದು ನೋಡುತ್ತಿದ್ದೇವೆ.

ಇದರಿಂದ ಹೊರಬರಲು ನಮ್ಮಿಂದ ಮಾತ್ರ ಸಾಧ್ಯ. ಮೊದಲು ನಾವು ಪ್ಲಾಸ್ಟಿಕ್ ನಿಂದ ನಮ್ಮ ಪರಿಸರದ ಮೇಲೆ, ನಮ್ಮ ಆರೋಗ್ಯದ ಮೇಲೆ, ನಮ್ಮ ಮುಂದಿನ ಪೀಳಿಗೆಯ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತಾಗಿ ಅರಿಯಬೇಕು. ನಮ್ಮಲ್ಲಿ ಈ ಕುರಿತಾದ ಜಾಗೃತಿ ಆಳವಾಗಿ ಬೇರೂರಿದಾಗಲೇ ಮನಸ್ಸಿನಲ್ಲಿ ದೃಢತೆ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉಪಯೋಗಿಸುವುದನ್ನು ನಿಲ್ಲಿಸುವುದು ನಮ್ಮ ಮೊದಲ ದೃಢವಾದ ಹೆಜ್ಜೆಯಾಗಬೇಕು. ಪ್ಲಾಸ್ಟಿಕ್ ನ್ನು ಮರುಬಳಕೆ ಮಾಡುವುದರತ್ತ ನಾವು ಗಮನ ಹರಿಸಬೇಕಾಗಿದೆ. ನಾವು ನಮ್ಮ ನಾಡಲ್ಲಿ ನೋಡಬಯಸುವ ಬದಲಾವಣೆ ಮೊದಲು ನಮ್ಮಂದಲೇ ಮೊದಲಾಗಬೇಕು. ನಮ್ಮಿಂದಾಷ್ಟು ನಾವು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಬೇಕು. ಅಂಗಡಿಯಾತ ತಾನಾಗಿಯೇ ಪ್ಲಾಸ್ಟಿಕ್ ಕವರ್ ನೀಡಿದರೂ ಬೇಡ ಎನ್ನುವಷ್ಟರ ಮಟ್ಟಿಗೆ ನಮ್ಮ ಸಂಕಲ್ಪ ದೃಢವಾಗಬೇಕು. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಾಗಲಷ್ಟೇ ನಮ್ಮ ನಾಡು ಸಂಪೂರ್ಣ ಸ್ವಚ್ಛವಾಗಲು ಸಾಧ್ಯ.

SBMG Karnataka

ಬನ್ನಿ! ಪ್ಲಾಸ್ಟಿಕ್ ಮುಕ್ತ ಜನಾಂದೋಲನದಲ್ಲಿ ಭಾಗವಹಿಸಿ. ನಿಮ್ಮ ಮನೆ, ನಿಮ್ಮ ಗ್ರಾಮವನ್ನು ‘ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ’ವನ್ನಾಗಿಸಲು ಕೈಜೋಡಿಸಿ.

WhatsApp chat