ನೀರಿದ್ದರೆ ನಾವು, ನೀರಿದ್ದರೆ ನಾಳೆ
“ಕೇಳ್ರಪ್ಪೋ ಕೇಳಿ…. ಎಲ್ಲಾ ಕಡೆ ನೀರಿನ ಸಮಸ್ಯೆ ಜಾಸ್ತಿ ಆಗ್ತಿರೋದ್ರಿಂದ, ಕೇಂದ್ರ ಸರ್ಕಾರ ‘ಕ್ಯಾಚ್ ದಿ ರೇನ್’ ಅಭಿಯಾನ ಪ್ರಾರಂಭ ಮಾಡೈತೆ. ಹಂಗಾಗಿ ಎಲ್ರೂ ಮಳೆಗಾಲ ಆರಂಭ ಆಗೋ ಮುನ್ನ, ಮಳೆನೀರು ಸಂಗ್ರಹಕ್ಕೆ ಅಣಿ ಮಾಡ್ಕೊಳ್ರಪ್ಪೋ...”. ಇದೇನಪ್ಪಾ, ಎಲ್ಲಾ ಕಡೆ ‘ಕ್ಯಾಚ್ ದಿ ರೇನ್’ ಅಂತ ಹೇಳ್ತಿದಾರಲ್ಲಾ! ಹಾಗಂದ್ರೆ ಏನು? ಅದರ ಉದ್ದೇಶ ಏನು ? ಅದರಿಂದ ಏನ್ ಉಪಯೋಗ ಅಂತ ಸಾಕಷ್ಟು ಜನ ಯೋಚನೆ ಮಾಡ್ತಿರ್ಬಹುದು. ಅದರ ಸಂಪೂರ್ಣ ವಿವರ ಇಲ್ಲಿದೆ.
ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯವು ಮಳೆನೀರಿನ ಸಂರಕ್ಷಣೆಗಾಗಿ ‘ಕ್ಯಾಚ್ ದಿ ರೇನ್’ ಅಭಿಯಾನವನ್ನು ದೇಶಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೊಳಿಸಿದೆ. ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ ಜಲಸಂರಕ್ಷಣೆಗಾಗಿ ಗ್ರಾಮೀಣಮಟ್ಟದಿಂದ ಜನರ ಸಹಭಾಗಿತ್ವದೊಂದಿದೆ ಕಾರ್ಯಪ್ರವೃತ್ತವಾಗುವುದಾಗಿದೆ. ಜೊತೆಗೆ, ಹವಾಮಾನ ಮತ್ತು ಮಣ್ಣಿನ ಸ್ಥಿತಿಗತಿಗೆ ಅನುಗುಣವಾಗಿ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಜನಾಂದೋಲನ ರೂಪಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶ.
ಈಗಾಗಲೇ ಈ ಅಭಿಯಾನದಡಿಯಲ್ಲಿ ಮುಂಗಾರನ್ನು ಸ್ವಾಗತಿಸಿ, ಮಳೆನೀರು ಸಂಗ್ರಹಣೆಗಾಗಿ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿಗಳ ವತಿಯಿಂದ ಮೇಲ್ಛಾವಣಿ ಮಳೆನೀರಿನ ಕೊಯ್ಲು ಅಳವಡಿಕೆ, ಚೆಕ್‍ಡ್ಯಾಮ್‍ಗಳು, ಕೃಷಿ ಹೊಂಡಗಳು, ಕಲ್ಯಾಣಿಗಳು, ತೆರೆದ ಬಾವಿಗಳು, ಇಂಗು ಗುಂಡಿಗಳ ನಿರ್ಮಾಣ ಮತ್ತು ಪುನಶ್ಚೇತನ, ಕೆರೆ-ಕಟ್ಟೆಗಳಲ್ಲಿ ಹೂಳೆತ್ತುವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲೆಡೆ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೊಯ್ಯೂರು ಗ್ರಾಮ ಪಂಚಾಯಿತಿಯಿಂದ 2 ಕಿ.ಮೀ. ದೂರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ಮಳೆನೀರನ್ನು ಸಂಗ್ರಹಿಸಿ, ಶೋಧಿಸಿ, ಆ ನೀರನ್ನು ಸಾರ್ವಜನಿಕ ಬಾವಿಗೆ ಹರಿಯಬಿಡಲಾಗಿದೆ. ಈ ಮೂಲಕ ಅಂತರ್ಜಲ ಮರುಪೂರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. “ನಮ್ಮ ಶಾಲೆಯ ಮೇಲ್ಛಾವಣಿಯಲ್ಲಿ ಬಿದ್ದ ಮಳೆ ನೀರು ವ್ಯರ್ಥವಾಗದಂತೆ ತಡೆಯಲು ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದೇವೆ. ಇದರಿಂದ ಬಾವಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಅಲ್ಲದೆ, ಸಂಗ್ರಹವಾದ ಮಳೆ ನೀರನ್ನು ಶಾಲೆಯಲ್ಲೇ ಇರುವ ಗಿಡಮೂಲಿಕೆಗಳ ತೋಟಕ್ಕೆ ಬಳಸುತ್ತಿದ್ದೇವೆ” ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ರಾಧಾಕೃಷ್ಣ ಅವರು ತಿಳಿಸಿದ್ದಾರೆ.
ಇವಿಷ್ಟೇ ಅಲ್ಲದೆ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆಗಳ ಮೂಲಕ ಜಲಸಂರಕ್ಷಣೆ ಬಗ್ಗೆ ಚರ್ಚಿಸಿ, ಜಲಮೂಲಗಳನ್ನು ಗುರುತಿಸಿ, ಮಳೆನೀರನ್ನು ಸಂಗ್ರಹ ಮಾಡುವ ಮೂಲಕ ಅಂತರ್ಜಲ ಮರುಪೂರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಗಳು, ಅಂಗನವಾಡಿಗಳು, ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆನೀರುಕೊಯ್ಲು ಪದ್ಧತಿ ಅಳವಡಿಕೆಗೆ ಕ್ರಿಯಾಯೋಜನೆ ರೂಪಿಸಲಾಗುತ್ತಿದ್ದು, ಜನರಲ್ಲಿ ಜಲಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.
6,895 total views, 3 views today