ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು...
ಹುಟ್ಟಿದಾಗಿನಿಂದ ನಾವು, ನಮ್ಮ ಸಹಿತ ಮನೆಯ ಗೋಡೆಗಳು ಅದೆಷ್ಟು ಬಣ್ಣ ಬಣ್ಣದ ಕ್ಯಾಲೆಂಡರ್‌ಗಳನ್ನು ನೋಡಿಬಿಟ್ವಿ. ದಿನದ ಅಧಿಕ, ಕಡಿತ, ಒಂದಷ್ಟು ಸರ್ಕಾರಿ ರಜೆಗಳು ಹೆಚ್ಚಾಗಿದ್ದು ಬಿಟ್ಟರೆ, ಅಲ್ಲೇನೂ ಹೊಸತನ ಕಾಣಿಸಲೇ ಇಲ್ಲ. ಆದರೆ ನಾವು ಅಧಿಕಗೊಳಿಸಿಕೊಂಡಿದ್ದೇನು? ಕಡಿತ ಮಾಡಿಕೊಂಡಿದ್ದೇನು? ಎಂದಾದರೂ ಲೆಕ್ಕಾಚಾರ ಹಾಕಿದ್ದೀವಾ! ಇಷ್ಟಕ್ಕೂ ಅದಕ್ಕೆಲ್ಲಾ ಪುರುಸೊತ್ತೆಲ್ಲಿದೆ ಎನ್ನುವ ಸಬೂಬು ನಮ್ಮ ಏಕಮಾತ್ರ ಡೈಲಾಗ್ ಆಗಿರುವಾಗ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಗೋಜಿಲ್ಲ. ಆದರೂ ಪ್ರತಿ ಸಂವತ್ಸರ ತಪ್ಪದಂತೆ ಹೊಸ ವರ್ಷವಾಗಿ ದಾಂಗುಡಿ ಇಟ್ಟು, ಹಳೆಯದರ ನೆನಪೆಲ್ಲವನ್ನು ಇತಿಹಾಸಕ್ಕೆ ಸೇರಿಸಿಬಿಡುತ್ತೆ. ವರ್ಷಕ್ಕೆ 365 ದಿನಗಳೇ (ಈ ವರ್ಷ 366) ಇದ್ದರೂ, ಅಗಾಧ ನೋವು-ನಲಿವುಗಳ ಚೂರಣವನ್ನು ಕಾಲಗರ್ಭದಲ್ಲಿ ಹುದುಗಿಸಿಡುತ್ತಲೇ ಸಾಗುವ ಜಾಯಮಾನ ಅದರದು. ಅದಕ್ಯಾವ ಅಂಕೆ ಶಂಕೆಗಳಿಲ್ಲ. ಕಾಲಕ್ಕೆ ಮಾತ್ರವೇ ಎಲ್ಲವನ್ನೂ ಮೆಟ್ಟಿ ಸಾಗುವ ಗುಂಡಿಗೆ ಇರೋದು.
ಗ್ರೀಕ್ ಮತ್ತು ಈಜಿಪ್ಟಿಯನ್ ನಾಗರಿಕತೆಯಲ್ಲಿ ಹೊಸ ವರ್ಷದ ಹುಟ್ಟು ಮಗುವಿನ ಜನನಕ್ಕೆ ಸಮ. ಕಾಲಾಂತರದಲ್ಲಿ ಜಾಗತಿಕವಾಗಿ ಗ್ರಿಗೊರಿಯನ್ ಕ್ಯಾಲೆಂಡರ್ ಪ್ರಕಾರ ಅದು ಪ್ರತಿ ಖಂಡ, ದೇಶ, ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ, ಬೇರೆ ಬೇರೆ ದಿನಗಳಲ್ಲಿ ಆಚರಣೆಗೆ ಒಗ್ಗಿಕೊಂಡಿದೆ. ಉತ್ತರ ಭಾರತದಲ್ಲಿ ‘ದೀಪಾವಳಿ’ಯಾಗಿ ಹೊಸ ವರ್ಷ ಆಚರಣೆಯಾದರೆ, ಕೇರಳದಲ್ಲಿ ‘ವಿಶು’, ತಮಿಳುನಾಡಿನಲ್ಲಿ ‘ವರ್ಷಪಿರಪ್ಪು’, ಬೆಂಗಾಲಿಗರು ‘ನಬ’, ಬಾಂಗ್ಲಾದಲ್ಲಿ ‘ಪೈಲಾ ಬೈಸಾಖ್’, ಕಾಶ್ಮೀರದಲ್ಲಿ ‘ನವ್ರೆಹ್’, ಪಾರ್ಸಿ ಸಮುದಾಯದವರು ‘ನವ್ರೊಜ್’, ಪಂಜಾಬಿನಲ್ಲಿ ‘ಬೈಸಾಕಿ’, ಮಹಾರಾಷ್ಟ್ರೀಯರು ‘ಗುಡಿಪಾಡವ’, ಅಸ್ಸಾಮಿಗರು ‘ಗೊರು ಬಿರ್ಹ’, ಆಂಧ್ರ ಮತ್ತು ಕರ್ನಾಟಕದಲ್ಲಿ ‘ಯುಗಾದಿ’, ಹೆಸರಿನಲ್ಲಿ ಆಚರಣೆಗಳು ಜಾರಿಯಲ್ಲಿವೆ. ಯಾವ ಹೆಸರಿನಲ್ಲಿ ಆಚರಣೆಗಳು ನಡೆದುಬಂದಿದ್ದರೂ, ಅವೆಲ್ಲದರ ಆಶಯ ಮಾತ್ರ ಒಂದೇ, ಬದಲಾವಣೆಗೆ ತೆರೆದುಕೊಳ್ಳುವುದು, ಸಕಾರಾತ್ಮಕತೆ ಬೆಳೆಸಿಕೊಳ್ಳುವುದು, ಹೊಸತನ ಕಾಯ್ದುಕೊಳ್ಳುವುದು, ಉತ್ತಮ ಪ್ರಜೆಯಾಗಿ ಬದುಕುವುದು, ಇವೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನಾರ್ಥಕ ಚಿಹ್ನೆ ಬೇಡ. ಈಗಿರುವ ಯಾವ ಅವಸ್ಥೆಯೂ ಹುಟ್ಟಿನಿಂದಲೇ ಆಗಿದಂಥದ್ದಲ್ಲ. ಎಲ್ಲ ನಾವು ನೋಡುತ್ತಾ ಬೆಳೆಯುತ್ತಾ ಕಲಿತಂಥವೇ. ಆದರೆ, ಮೊದಲಿಗೆ ಕಲಿಯುವ ಮನಸ್ಸು ಮಾಡಬೇಕಷ್ಟೇ...!
ಪ್ರಪಂಚದಾದ್ಯಂತ ಪ್ಲಾಸ್ಟಿಕ್ ತಂದೊಡ್ಡಿರುವ ಅಘಾತಕಾರಿ ಸವಾಲುಗಳಿಂದ ಎಚ್ಚೆತ್ತುಕೊಂಡು ಬಹುತೇಕ ರಾಷ್ಟ್ರಗಳು ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟಿಕ್ ಬಳಕೆ ತಗ್ಗಿಸುವುದು, ಪ್ಲಾಸ್ಟಿಕ್ ಮರುಬಳಕೆ ಸೇರಿದಂತೆ ಪರಿಸರಸ್ನೇಹಿ ವಸ್ತುಗಳ ಬಳಕೆಯತ್ತ ಜಪ ಶುರು ಮಾಡಿವೆ. ಆದರೆ ಇದನ್ನು ಸರ್ಕಾರಗಳು ಪಾಲಿಸುವುದಕ್ಕಿಂತ ಹೆಚ್ಚಾಗಿ ಜನರ ಬೆಂಬಲ ಹಾಗೂ ಪ್ರತಿಕ್ರಿಯೆಯಿಂದಷ್ಟೇ ಯಾವೊಂದು ವ್ಯವಸ್ಥೆ ಕೂಡ ಬದಲಾಗಲು ಸಾಧ್ಯ. ಇವೆಲ್ಲವುಗಳಕ್ಕೂ ಮೊದಲು ನಾವುಗಳು ಮನಸ್ಸು ಮಾಡಬೇಕು.
ಪ್ಲಾಸ್ಟಿಕ್ ತ್ಯಜಿಸಿ, ಪರಿಸರವನ್ನು ಉಳಿಸಿ
ರಾಜ್ಯದಲ್ಲಿ ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಹಾಗಾಗಿ ನಾವು ಪ್ಲಾಸ್ಟಿಕ್ ಬಳಕೆಯನ್ನು ತುರ್ತಾಗಿ ಕೈಬಿಡುವ ದೃಢ ನಿರ್ಧಾರ ಕೈಗೊಳ್ಳಬೇಕಿದೆ. ಒಂದು ಸಣ್ಣ ಪ್ಲಾಸ್ಟಿಕ್ ಚೂರನ್ನು ತಿಂದರೂ ದನಕರುಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಇಲ್ಲವೆ, ಚೂರು ಏರುಪೇರಾದರು ಸಾಕು ಪ್ರಾಣವನ್ನೂ ಕಳೆದುಕೊಳ್ಳುತ್ತವೆ. ಇದಲ್ಲದೇ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದಿರುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಇಂದು ಗುಡ್ಡಗಾಡಿನಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ಇವುಗಳನ್ನು ಸುಡುವುದು ಕೂಡ ಪರಿಸರದಲ್ಲಿ ಅಪಾರ ಪ್ರಮಾಣದ ವ್ಯತ್ಯಯವನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಅನ್ನು ಪುನರ್ ಬಳಕೆಗೆ ನೀಡಬೇಕು. ಅಲ್ಲದೇ, ಹೊಸ ವರ್ಷದ ಆರಂಭದಲ್ಲಿರುವ ನಾವೆಲ್ಲರೂ ಪ್ಲಾಸ್ಟಿಕ್ ಬದಲು ಪರಿಸರಸ್ನೇಹಿ ಪರ್ಯಾಯ ವಸ್ತುಗಳ ಬಳಕೆ ಮಾಡುವ ಸಂಕಲ್ಪವನ್ನು ಮಾಡಬೇಕಿದೆ.
* ಎಲ್ಲಾದರೂ ಹೊರಗಡೆ ಹೋಗುವ ಸಂದರ್ಭ ಆದಷ್ಟು ನಿಮ್ಮದೇ ನೀರಿನ ಬಾಟಲಿಗಳನ್ನು ಕೊಂಡೊಯ್ಯಿರಿ.
* ಶಾಪಿಂಗ್, ಹೊರಗಡೆ ಸುಮ್ಮನೆ ಸುತ್ತಾಡಿ ಬರೋಣ ಎಂದು ಹೊರಟರೂ ಏನಾದರೂ ಕೊಳ್ಳುವ ಮನಸ್ಸು ಆಗಿಯೇ ಆಗುತ್ತೆ. ಹೀಗಾಗಿ, ಒಂದು ಬಟ್ಟೆ ಬ್ಯಾಗ್ ಸದಾ ನಿಮ್ಮ ಜತೆಗಿರಲಿ.
* ಸಾಧ್ಯವಾದಷ್ಟು ಮರುಬಳಕೆ ವಸ್ತುಗಳನ್ನು ಉಪಯೋಗಿಸಿ. ಒಂದೇ ಬಾರಿ ಬಳಸಿ ಬಿಸಾಡುವ ಯಾವೊಂದು ಪ್ಲಾಸ್ಟಿಕ್ ತುಣುಕುಗಳನ್ನು ಬಳಸದಂತೆ ಸಂಕಲ್ಪ ಮಾಡಿ.
ಹಸಿರಿನತ್ತ ಹೆಜ್ಜೆಯಿಡಿ:
ಹಸಿರು, ಹಸಿರೇ ಉಸಿರು. ಹಸಿರಿನತ್ತ ಮುಖ ಮಾಡಬೇಕಿರುವುದು ನಮ್ಮ ಭವಿಷ್ಯದ ದೃಷ್ಟಿಯಿಂದ ಸಹಕಾರಿ. ನಾಳೆ ಯಾವತ್ತೂ ಹಸಿರಾಗಿಯೇ ನಳನಳಿಸಬೇಕು. ಹಾಗಾಗಿ ಹಸಿರ ನಡುವಿನ ಉತ್ತಮ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಇದಕ್ಕೆ ನಾಂದಿಯಾಡಬೇಕು.
• ಮನೆಯ ಆವರಣದಲ್ಲಿ ಹಣ್ಣು, ತರಕಾರಿಗಳನ್ನು ಬೆಳೆಯುವ ಮೂಲಕ ಪರಿಸರ ಕಾಳಜಿ ಮಾಡಬೇಕು.
• ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ವಾತಾವರಣವನ್ನು ಸಮತೋಲನದಲ್ಲಿಡಲು ಪುಟ್ಟ ಬಳುವಳಿ ನೀಡಬೇಕು. ಮನೆಯಲ್ಲಿ ಉತ್ಪಾದನೆಯಾಗುವ ಹಸಿ ಕಸವನ್ನು ಮನೆಯ ಸುತ್ತಮುತ್ತ ಇರುವ ಗಿಡಗಳಿಗೆ ಗೊಬ್ಬರ ತಯಾರಿಸಿ ಹಾಕಬೇಕು. ಒಣ ಕಸವನ್ನು ಗ್ರಾಮ ಪಂಚಾಯಿತಿಯಿಂದ ಬರುವ ಕಸ ವಿಲೇವಾರಿ ಘಟಕಕ್ಕೆ ನೀಡಬೇಕು. ಪ್ರತಿಯೊಬ್ಬರೂ ಕಸದ ಮೂಲವಾಗಿದ್ದಾರೆ. ನಮ್ಮ ಕಸ ನಮ್ಮ ಜವಾಬ್ದಾರಿ ಎನ್ನಬೇಕಿದೆ. ಕಸದ ವಿಂಗಡಣೆ ಹಾಗೂ ಅದರ ಸರಿಯಾದ ವಿಲೇವಾರಿ ಮೂಲಕ ದೇಶದ ಸದೃಢ ಆರ್ಥಿಕತೆಗೆ ನಮ್ಮ ಕೊಡುಗೆ ನೀಡಬೇಕಿದೆ.
ಹನಿ ಹನಿ ನೀರು ಅಮೂಲ್ಯ:
ಸಕಲ ಜೀವರಾಶಿಗೂ ನೀರೇ ಜೀವಾಳ, ನೀರನ್ನು ಮಿತವಾಗಿ ಬಳಸುವುದು, ಅಲ್ಲದೆ, ಸರಿಯಾಗಿ ಬಳಕೆ ಮಾಡಿ ಕಾಪಾಡುವುದು ಕೂಡ ನಮ್ಮೆಲ್ಲರ ಕರ್ತವ್ಯ. ಹನಿ ಹನಿ ನೀರು ಎಷ್ಟು ಪ್ರಾಮುಖ್ಯ ಪಡೆದಿದೆ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ.
• ದಿನನಿತ್ಯದ ಬಳಕೆಯಲ್ಲಿ ಬಳಸುವ ನೀರನ್ನು ಉಪಯುಕ್ತವಾಗಿ ಬಳಕೆ ಮಾಡುವುದು ಮೊದಲ ಹೆಜ್ಜೆ.
• ಬಾವಿ, ಕೆರೆ, ಕಲ್ಯಾಣಿಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಿ ಮಳೆ ನೀರು ಸಂಗ್ರಹವಾಗುವಂತೆ ಜೀವಂತವಾಗಿಡುವತ್ತ ಗಮನ ಹರಿಸಬೇಕು. ಇಂಗು ಗುಂಡಿಗಳನ್ನು ನಿರ್ಮಿಸಬೇಕು. ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ.
ಆರೋಗ್ಯಕರ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಿ
ಬಯಲಿನಲ್ಲಿ, ಕೆರೆ ಕುಂಟೆಗಳ ಅಕ್ಕಪಕ್ಕದಲ್ಲಿ ಮಲ, ಮೂತ್ರ ವಿಸರ್ಜನೆ ಕೊಳಕು ಪರಿಸರವನ್ನು ನಿರ್ಮಿಸುವುದಲ್ಲದೆ, ರೋಗ ರುಜಿನಗಳನ್ನು ಉಂಟುಮಾಡುತ್ತವೆ. ಹೀಗಾಗಿ ಇಂತಹ ಅಭ್ಯಾಸವನ್ನು ಕೊನೆಗೊಳಿಸಿ, ಶೌಚಕ್ಕೆ ಶೌಚಾಲಯವನ್ನೇ ಬಳಸುವುದು ಆರೋಗ್ಯಕ್ಕೂ ಒಳಿತು, ದೇಶದ ಆರ್ಥಿಕತೆ ದೃಷ್ಟಿಯಿಂದಲೂ ಪರಿಣಾಮಕಾರಿ ಬೆಳವಣಿಗೆ ಎನ್ನಬಹುದು. ಅಲ್ಲದೆ, ಪ್ರತಿಯೊಬ್ಬರಿಗೂ ಶೌಚಾಲಯ ಅತ್ಯವಶ್ಯ, ಈ ಅತ್ಯವಶ್ಯದ ಮಹತ್ವ ಅರಿತು ಅದನ್ನು ಸ್ವಚ್ಛವಾಗಿರಿಸಬೇಕಿದೆ. ಈ ಮೂಲಕ ದೇಶದಲ್ಲಿ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಹೊಣೆ ಹೊರಬೇಕಿದೆ.
ಮಕ್ಕಳು ನಾವು ಹೇಳುವುದಕ್ಕಿಂತ ನಾವು ಮಾಡುವುದನ್ನು ನೋಡಿ ಕಲಿಯುವುದೇ ಹೆಚ್ಚು. ನಾವು ದೇಶಕ್ಕೆ ಮಾದರಿಯಾಗಿರುವವರ ಬಗ್ಗೆ ಚಿಂತಿಸುವುದಕ್ಕೂ ಮೊದಲು, ನಮ್ಮ ಮನೆಗಳಲಿ, ಸುತ್ತ ಮುತ್ತಲಿನ ವಾತಾವರಣದಲ್ಲಿ ಮಾದರಿ ಜೀವನವನ್ನು ನಡೆಸುವುದು ಪ್ರಮುಖ ವಿಷಯ. ಸರಿಯಾದ ಕಸ ವಿಲೇವಾರಿ, ನೀರಿನ ಸದ್ಭಳಕೆ, ಹದಿಹರೆಯದ ಹೆಣ್ಣುಮಕ್ಕಳಿಗೆ ಕಾಲಕಾಲಕ್ಕೆ ಬೇಕಾದ ಸಾಂತ್ವನ, ಸಲಹೆಗಳನ್ನು ಮಾಡುತ್ತಿರಬೇಕು. ಇವುಗಳು ಮುಂದಿನ ಪೀಳಿಗೆಯು ಸರಿಯಾದ ಹಾದಿಯಲ್ಲಿ ನಡೆಯಲು ನಾವು ಉತ್ತಮ ಹಾದಿ ನಿರ್ಮಿಸಿದಂತೆಯೇ ಸರಿ. ಮಕ್ಕಳು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಆಸ್ಪದ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಯೋಚನೆ ಮಾಡಿದಾಗ ಹೊಸ ವರ್ಷದ ಆರಂಭದಲ್ಲಿರುವ ನಾವು ಈ ವರ್ಷ `ಪರಿಸರಸ್ನೇಹಿ ವಸ್ತುಗಳ ಬಳಕೆ’ ಮಾಡುವುದಾಗಿ ಸಂಕಲ್ಪ ಮಾಡೋಣ. ಉತ್ತಮ ಭವಿಷ್ಯ ನಿರ್ಮಿಸೋಣ.