Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2019/09/blog-img-150x80.png

ನಾವು ಮನುಷ್ಯರಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಿರುವುದು ಖಂಡಿತವಾಗಿಯೂ ಹೆಮ್ಮೆ ಪಡಲೇಬೇಕಾದ ವಿಚಾರ. ಆದರೆ ನಾವು ಪ್ರಬುದ್ಧರಾದಂತೆ, ವಿಕಸಿತರಾದಂತೆ ನಮ್ಮ ನೈತಿಕ ಜವಾಬ್ದಾರಿಗಳನ್ನು ಕಡೆಗಣಿಸಿರುವುದು ನಿಜಕ್ಕೂ ದುರದೃಷ್ಟಕರ. ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಉಜ್ವಲ ಭವಿಷ್ಯಕ್ಕೆಂದು ಸಾಕಷ್ಟು ಕಾಳಜಿಯಿಂದ ಸಂಪಾದನೆ ಮಾಡುತ್ತಿದ್ದೇವೆ; ಹಲವಾರು ಕನಸುಗಳನ್ನು ಕಂಡಿದ್ದೇವೆ; ಅವರಿಗೆ ಎಂದು ತೊಂದರೆಯಾಗದಂತೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಇವೆಲ್ಲವೂ ಸರಿಯೆ ಆಗಿದೆ. ಆದರೆ ನಮ್ಮ ಮುಂಬರುವ ಪೀಳಿಗೆಗೆ ನಾವು ಉತ್ತಮವಾದ ಪರಿಸರ, ವಾತಾವರಣ ನೀಡುವುದರ ಕುರಿತು ಗಂಭೀರವಾಗಿ ಯೋಚಿಸಿದ್ದೇವೆಯೆ? ನಿಮ್ಮ ಎದೆಯನ್ನೊಮ್ಮೆ ತಟ್ಟಿಕೊಂಡು ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ? ನನ್ನ ಉತ್ತರ ಖಂಡಿತ ಇಲ್ಲ. ಇಂದು ನೀರು ದೊರಕುತ್ತಿದೆ, ಉಸಿರಾಡಲು ಗಾಳಿಯಿದೆ, ನಮ್ಮ ನಮ್ಮ ಮನೆಗಳು ಸ್ವಚ್ಛವಾಗಿವೆ ಸಾಕು, ಇನ್ನೇನು ಬೇಕು, ನಾವಾಯಿತು ನಮ್ಮ ಜೀವನವಾಯಿತು ಹೇಗೊ ಚೆನ್ನಾಗಿ ನಡೆಯುತ್ತಿದೆಯಲ್ಲ ಎಂಬ ಧೋರಣೆಯೊಂದಿಗೆ ನಾವು ನಿತ್ಯ ಬದುಕುತ್ತಿದ್ದೇವೆ.

ಸಮಯ ಎಂಬುದು ನಮಗೆ ಅಲ್ಲಲ್ಲಿ ಪ್ರಕೃತಿ ವಿಕೋಪಗಳ ಮೂಲಕ, ಮಾಲಿನ್ಯದಿಂದಾಗುವ ಅಪಾಯಗಳ ಕುರಿತು ಈಗಾಗಲೆ ಸಾಕಷ್ಟು ಬಾರಿ ಎಚ್ಚರಿಸುತ್ತಲೆ ಇದೆಯಾದರೂ ನಮಗೆಲ್ಲವೂ ತಿಳಿದೂ ಸಹ ನಾವು ದಿವ್ಯ ಮೌನವಹಿಸಿದ್ದು ನಾವು ನಮ್ಮ ಭವಿಷ್ಯದ ಪೀಳಿಗೆಯ ಮೇಲೆ ಮಾಡುತ್ತಿರುವ ಘೋರ ಅತ್ಯಾಚಾರ.

ಬದುಕಲು ಪ್ರಮುಖವಾಗಿ ಬೇಕಾಗಿರುವ ಶುದ್ಧ ನೀರು, ಶುದ್ಧಗಾಳಿ, ಸ್ವಚ್ಛ ಪರಿಸರ ಇಲ್ಲದೆ ಹೋದಲ್ಲಿ ಕಾರು ಬೈಕುಗಳಿದ್ದರೇನು, ಮನೆ ದೊಡ್ಡದಾಗಿದ್ದರೇನು, ಕೋಟಿ ಕೋಟಿ ಹಣಗಳಿಸಿದರೇನು ಪ್ರಯೋಜನ? ಎಲ್ಲವೂ ನೀರಲ್ಲಿ ಹೋಮ ಮಾಡಿದ ಹಾಗೆಯೆ. ತಂತ್ರಜ್ಞಾನ ಬೆಳೆಯಲಿ, ಅಭಿವೃದ್ಧಿ ಪಥದಲ್ಲೇ ಸಾಗೋಣ. ಆದರೆ, ನಮಗೆ ಆಶ್ರಯ ನೀಡಿ ಸಾಕಿ ಸಲಹುತ್ತಿರುವ ಈ ಪ್ರಕೃತಿಯ ಪ್ರತಿ ನಮಗಿರುವ ಜವಾಬ್ದಾರಿಗಳ ಕುರಿತು ಮೊದಲ ಆದ್ಯತೆ ನೀಡೋಣ. ಒಮ್ಮೆ ಯೋಚಿಸಿ ನಿಮ್ಮ ಇಷ್ಟದ ನೆಂಟರೊಬ್ಬರು ಯಾವುದೋ ಒಂದು ಕೆಲಸದ ನಿಮಿತ್ತ ಹೊರ ಹೋಗಬೇಕಾಗಿ ಬಂದು ತಮ್ಮ ಬಳಿಯಿರುವ ಒಂದು ಅಮೂಲ್ಯವಾದ ವಸ್ತುವನ್ನು ನಿಮ್ಮ ಕೈಯಲ್ಲಿ ನೀಡಿ ಮರಳಿ ಬರುವವರೆಗೂ ಜೋಪಾನವಾಗಿಟ್ಟುಕೊಳ್ಳಿ ಎಂದರೆ ನಾವು ಅದನ್ನು ಅದೆಷ್ಟರ ಮಟ್ಟಿಗೆ ಜೋಪಾನವಾಗಿಟ್ಟುಕೊಳ್ಳುತ್ತೇವೆ ಎಂಬುದು ನಿಮಗೆಲ್ಲ ಗೊತ್ತೆ ಇದೆ.

ನಾವು ಮೊದಲಿಗೆ ಬದಲಾಗಬೇಕು, ನಂತರ ಇತರರಿಗೂ ತಿಳಿ ಹೇಳಬೇಕು. ನಿತ್ಯ ದಿನಚರಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಶಾಪಿಂಗ್ ಹೋದಾಗ ಬಟ್ಟೆಯ ಕೈಚೀಲಗಳನ್ನು ಬಳಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಮನೆಯಲ್ಲಿ ನಿತ್ಯ ಉತ್ಪನ್ನವಾಗುವ ಕಸವನ್ನು ಮನೆಯಲ್ಲೇ ಮೊದಲಿಗೆ ವಿಂಗಡಿಸಿ ನಂತರ ವಿಲೇವಾರಿ ಮಾಡಲು ಸಹಕರಿಸಬೇಕು. ಶೌಚಾಲಯದ ಪ್ಯಾನ್ ಗಳನ್ನು ಇಳಿಜಾರು ಹೊಂದಿರುವಂತೆ ವಿನ್ಯಾಸ ಮಾಡಲಾಗಿರುವುದರಿಂದ ಬಳಸುವ ಮೊದಲು ನೀರು ಹಾಕಿ ಬಳಸಿದ ನಂತರ ಮತ್ತೆ ನೀರು ಹಾಕುವುದರ ಮೂಲಕ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆಯಿಲ್ಲದೆಯೇ ಉಪಯೋಗಿಸಬಹುದೆಂಬುದನ್ನು ತಿಳಿಯಬೇಕು. ಕಸಗಳನ್ನು ರಸ್ತೆಯ ಅಕ್ಕ-ಪಕ್ಕಗಳಲ್ಲಿ ಎಸೆಯದೆ ಅದಕ್ಕೆಂದೇ ಮೀಸಲಾದ ಕಸದ ಡಬ್ಬಗಳಲ್ಲಿ ಹಾಕುವುದು. ಇಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮನಸ್ಥಿತಿಯನ್ನು ಹೊಂದಬೇಕು. ಈ ರೀತಿಯ ಬದಲಾದ ಧನಾತ್ಮಕ ಮನಸ್ಥಿತಿಯಿಂದ ನಾವು ಬದುಕಲು ಪ್ರಾರಂಭಿಸಿದರೆ ಅತ್ಯಲ್ಪ ಸಮಯದಲ್ಲೇ ಎಲ್ಲೆಡೆ ಸ್ವಚ್ಛತೆಯನ್ನು ಹರಡಿ ಸುಸ್ಥಿರವಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು. ಇದೇ ನಾವು ನಮ್ಮ ಪ್ರಕೃತಿಗೆ ಹಿಂತಿರುಗಿ ನೀಡಬೇಕಾಗಿರುವ ಉಡುಗೊರೆಯಾಗಿದೆ.

ಭವಿಷ್ಯದ ಪೀಳಿಗೆಯು ಶಾಂತಿ ನೆಮ್ಮದಿಗಳಿಂದ ಬದುಕಲು ಅನುವಾಗುವಂತೆ ನಾವು ನಿರ್ವಹಿಸಬೇಕಾಗಿರುವ ಜವಾಬ್ದಾರಿಯಾಗಿದೆ.  ಸಮಯ ಇನ್ನು ಮೀರಿಲ್ಲ ಈಗಲೇ ಎಚ್ಚೆತ್ತುಕೊಳ್ಳಿ, ಒಂದೊಮ್ಮೆ ಸಮಯ ಗತಿಸಿ ಹೋದರೆ ಮುಂದೆಂದೂ ಮತ್ತೆ ಸಿಗದು.

WhatsApp chat