ಸ್ವಚ್ಛ ಜೀವನ ಶೈಲಿ ಆರೋಗ್ಯಕರ ಜೀವನದ ಗುಟ್ಟು ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ನಿರ್ಲಕ್ಷ್ಯ ಮತ್ತು ಆಲಸ್ಯದಿಂದಾಗಿ ನಾವು ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂಬುದು ಸಂಶೋಧನೆಯಿಂದಲೂ ದೃಢಪಟ್ಟ ವಿಚಾರ. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಕಾಳಜಿ ವಹಿಸುವುದು ಅತ್ಯವಶ್ಯಕವಾಗಿದೆ. ಆರೋಗ್ಯದ ವಿಚಾರದಲ್ಲಿ ಸಣ್ಣ ಪುಟ್ಟ ವಿಷಯಗಳೂ ಮಹತ್ವ ಪಡೆಯುತ್ತದೆ. ಅಜಾಗರೂಕತೆ ಮತ್ತು ಆಲಸ್ಯತನದಿಂದಾಗಿ ಹಲವು ಬಾರಿ ರೋಗಗಳು ನಮ್ಮನ್ನು ಹೈರಾಣಾಗಿಸಿ ಬಿಡುತ್ತವೆ. ಇದಕ್ಕೆ ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಮುಖ್ಯ ಕಾರಣ.
ನಿತ್ಯ ಜೀವನದಲ್ಲಿ ನಾವು ಮಾಡುವ ಈ ಒಂದು ತಪ್ಪು ಸಹ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಏನನ್ನಾದರೂ ತಿನ್ನುವ ಮುಂಚೆ, ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಸರಿಯಾಗಿ ಕೈಗಳನ್ನು ಶುಚಿಗೊಳಿಸದೇ ಇದ್ದರೆ ನಾವು ತಿನ್ನುವ ಆಹಾರ ಅಥವಾ ಇನ್ನಿತರ ಮೂಲಗಳ ಮೂಲಕ ಕೀಟಾಣುಗಳು ಹೊಟ್ಟೆ ಸೇರಿ ಆರೋಗ್ಯ ಸಮಸ್ಯೆ ಉಂಟು ಮಾಡುತ್ತವೆ. ಈ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ ೧೫ ಅನ್ನು ಪ್ರತಿ ವರ್ಷವೂ 'ವಿಶ್ವ ಕೈ ತೊಳೆಯುವ ದಿನ' ವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಜಗತ್ತಿನ ಹಲವು ದೇಶಗಳಲ್ಲಿ ಅಭಿಯಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ವಿಶ್ವ ಮಟ್ಟದಲ್ಲಿ ಮಾತ್ರವಲ್ಲದೆ, ಪ್ರತಿ ವರ್ಷ ಭಾರತದಲ್ಲಿ ಒಂದು ವಾರವನ್ನು 'ರಾಷ್ಟ್ರೀಯ ಕೈ ತೊಳೆಯುವ ಜಾಗೃತಿ ವಾರ'ವಾಗಿ ಆಚರಿಸುತ್ತಾ ಬರಲಾಗಿದೆ. ಅದರಂತೆ, ಈ ವರ್ಷ ಡಿಸೆಂಬರ್ ಮೊದಲ ವಾರವನ್ನು ರಾಷ್ಟ್ರೀಯ ಕೈತೊಳೆಯುವ ಜಾಗೃತಿ ವಾರವಾಗಿ ಆಚರಿಸಲಾಯಿತು. ಕೈಗಳ ನೈರ್ಮಲ್ಯ ಆರೋಗ್ಯಕರ ಜೀವನಕ್ಕೆ ಅಮೂಲ್ಯ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗುತ್ತಿದೆ.
ಹಿನ್ನೆಲೆ :
ಸಮಾಜದಲ್ಲಿ ಕೈ ತೊಳೆಯುವ ಪದ್ಧತಿಯನ್ನು ಹೆಚ್ಚಿಸುವಂತೆ ಮಾಡಲು ಮತ್ತು ಸಾಬೂನು ಬಳಸಿ ಕೈ ತೊಳೆಯುವ ಉಪಯೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು 2008ರಲ್ಲಿ ಈ ಅಭಿಯಾನ ರೂಪಿಸಿದವರು ಸ್ವೀಡನ್‌ನ ಗ್ಲೋಬಲ್ ಹ್ಯಾಂಡ್ ವಾಷಿಂಗ್ ಪಾರ್ಟ್ನರ್‌ಶಿಪ್ (ಜಿಎಚ್‌ಪಿ) ಎಂಬ ಸಂಸ್ಥೆ. ಈ ಸಂಸ್ಥೆಯನ್ನು ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ ಆಫ್ ಹ್ಯಾಂಡ್ ವಾಷಿಂಗ್ ಎಂದೂ ಕರೆಯುತ್ತಾರೆ. ಆರಂಭದಲ್ಲಿ ಸಾಬೂನು ಬಳಸಿ ಕೈ ತೊಳೆಯವ ಕುರಿತು ಜಾಗೃತಿ ಮೂಡಿಸಲು ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಳಿಕ ಈ ಸಂಸ್ಥೆಯ ಜತೆಗೆ ಹಲವು ಸಂಸ್ಥೆಗಳು ಕೈಜೋಡಿಸಿದವು. 2011ರಲ್ಲಿ ಸ್ವೆನ್ಸ್ಕಾ ಸೆಲ್ಯುಲೊಸಾ ಆಯಕ್ಟಿಬಲಾಗೆಟ್ (ಎಸ್‌ಸಿಎ) ಎಂಬ ಸಂಸ್ಥೆ ಅಮೆರಿಕ ಮತ್ತು ಕೆನಡಾ ದೇಶಗಳಿಗೆ ಸಂಬಂಧಿಸಿ ಕೈ ತೊಳೆಯುವ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಸುಮಾರು ಶೇ. 50ಕ್ಕೂ ಅಧಿಕ ಮಂದಿ ಕೈ ತೊಳೆಯುವ ಸಂದರ್ಭ ಸೋಪ್ ಅಥವಾ ವೈರಾಣು ನಿರೋಧಕಗಳನ್ನು ಬಳಕೆ ಮಾಡುವುದಿಲ್ಲ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.
ಕೈಯಲ್ಲಿ ಇರಬಹುದಾದ ರೋಗಾಣುಗಳಿಂದಾಗಿ ಮತ್ತು ಸ್ವಚ್ಛತೆಯ ಕೊರತೆಯಿಂದಾಗಿ ಮಕ್ಕಳಲ್ಲಿ ಉಂಟಾಗುವ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲು 15 ಅಕ್ಟೋಬರ್ 2008 ರಲ್ಲಿ ಯುಎನ್ ಜನರಲ್ ಅಸೆಂಬ್ಲಿ ಆರಂಭಿಸಿದ ಅಭಿಯಾನವೇ ‘ವಿಶ್ವ ಕೈ ತೊಳೆಯುವ ದಿನ'. ಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ 70 ಕ್ಕೂ ಹೆಚ್ಚು ದೇಶಗಳು ಈ ಅಭಿಯಾನದಲ್ಲಿ ಪಾಲ್ಗೊಂಡವು. ಅದರಲ್ಲಿ ಭಾರತವೂ ಒಂದು.
ಉದ್ದೇಶವೇನು?:
- ಆರೋಗ್ಯಕರ ಜೀವನ ಎಲ್ಲರಿಗೂ ಮುಖ್ಯ. ಹೀಗಾಗಿ ಕೈ ತೊಳೆಯುವ ಪ್ರಕ್ರಿಯೆ ದೈನಂದಿನ ಆಗುಹೋಗುಗಳಲ್ಲಿ ಪ್ರಮುಖ ವಿಷಯವಾಗಿ ಸೇರಿಕೊಳ್ಳಬೇಕು.
- ಸಾಬೂನು, ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಯಾವುದೇ ಲಿಕ್ವಿಡ್ ಸಾಮಗ್ರಿಗಳನ್ನು ಬಳಕೆ ಮಾಡಿ ಆಗಾಗ್ಗೆ ಮುಖ್ಯವಾಗಿ ಆಹಾರ ಸೇವನೆಯ ಮುಂಚೆ ಕೈ ತೊಳೆಯುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯಕರ ಜೀವನದತ್ತ ಒಂದು ಪ್ರಮುಖ ಹೆಜ್ಜೆಯಾಗಬಲ್ಲದು.
- ಕೀಟಾಣುಗಳು ದೇಹ ಸೇರುವುದರಿಂದಾಗಿ ಪ್ರತಿ ವರ್ಷಕ್ಕೆ ಎರಡು ವರ್ಷಕ್ಕಿಂತ ಕೆಳಗಿನ ಸುಮಾರು 3.5 ಮಿಲಿಯನ್ ಮಕ್ಕಳು ಡೈರಿಯಾ ಮತ್ತು ನ್ಯುಮೋನಿಯಾಕ್ಕೆ ತುತ್ತಾಗುತ್ತಿದ್ದಾರೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಿದರೆ ಈ ರೀತಿಯ ದೈಹಿಕ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯವಿದೆ. ಆದ್ದರಿಂದ ಕೈ ತೊಳೆಯುವುದರಲ್ಲಿ ನಿರ್ಲಕ್ಷ್ಯ ವಹಿಸದೆ ಅದನ್ನೊಂದು ಸುರಕ್ಷಿತ ಅಭ್ಯಾಸ ಮತ್ತು ಹವ್ಯಾಸವಾಗಿ ರೂಢಿಸಿಕೊಂಡಾಗ ಆರೋಗ್ಯದ ಜತೆಗೆ ನಾವೂ ಸುರಕ್ಷಿತ ಜೀವನ ನಡೆಸಬಹುದು.
2008 ರಿಂದ ಆಚರಣೆ
ಭಾರತದಲ್ಲಿ 2008 ರಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಗೆ ಚಾಲನೆ ನೀಡಿದವರು ಕ್ರಿಕೆಟ್ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡುಲ್ಕರ್. ದೇಶವ್ಯಾಪಿ ಸುಮಾರು 100 ದಶಲಕ್ಷ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಆರೋಗ್ಯ ಮತ್ತು ಸ್ವಚ್ಛತೆಯ ವಿಚಾರದಲ್ಲಿ ಕೈ ತೊಳೆಯುವ ಪ್ರಯೋಜನಗಳ ಬಗ್ಗೆ ತಿಳಿವಳಿಕೆ ಮೂಡಿಸಿದ್ದರು.
ಜಾಗೃತಿ ಏಕೆ ಬೇಕು?:
ಶಾಲೆಯಿಂದ ಬಂದ ಮಗು ಸೀದಾ ಅಡುಗೆಮನೆಗೆ ಹೋಗಿ, ಡಬ್ಬದಿಂದ ಏನಾದರೂ ಕುರುಕಲು ತಿಂಡಿ ತೆಗೆದು ತಿನ್ನಲು ಹೊರಟಾಗ ಅಮ್ಮಂದಿರು ‘ಮೊದಲು ಕೈ ತೊಳೆದು ಬಾ’ ಎಂದು ಹೇಳುತ್ತಾರೆ. ಮಣ್ಣಿನಲ್ಲಿ ಆಟವಾಡಿದ ಮೇಲೆ ಹಾಗೂ ಶೌಚದ ನಂತರ ಸೋಪು ನೀರಿನಲ್ಲಿ ಕೈ ತೊಳೆಯಬೇಕು ಎಂಬುದನ್ನು ಚಿಕ್ಕಂದಿನಿಂದಲೇ ಕೇಳಿ ಬೆಳೆದಿರುತ್ತೇವೆ. ಕೈ ತೊಳೆದುಕೊಂಡು ಊಟಕ್ಕೆ ಕೂರಬೇಕು ಎಂಬುದು ಅಲಿಖಿತ ನಿಯಮ. ಕೈತೊಳೆಯಲು ಸಾಧ್ಯವಿಲ್ಲದ್ದಿದ್ದಲ್ಲಿ ಟಿಶ್ಯೂ ಪೇಪರ್ ನಲ್ಲಿ ಕೈ ಒರೆಸಿ ಅಥವಾ ಚಮಚದಲ್ಲಿ ಉಣ್ಣುವ ಪದ್ಧತಿ ಇಂದಿನ ಕಾಲದ ವ್ಯವಸ್ಥೆ. ಇನ್ನು ಈಗಿನ ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಪುಟ್ಟ ಸ್ಯಾನಿಟೈಸರ್ ಇರಬೇಕೆಂದು ಕೆಲವು ಶಾಲೆಗಳಲ್ಲಿ ನಿಯಮವನ್ನೂ ರೂಪಿಸಿದ್ದಾರೆ. ಕೈಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಸೋಂಕುಕಾರಕ ರೋಗಾಣುಗಳಿಂದ ಮುಕ್ತಗೊಳಿಸುವುದು ಕೈತೊಳೆಯುವುದರ ಮೂಲ ಉದ್ದೇಶ. ವಿವಿಧ ಸುವಾಸನೆಯುಕ್ತ ಮಾರ್ಜಕಗಳಿಂದ ಕೈತೊಳೆದಾಗ ಸಿಗುವ ಆಹ್ಲಾದಕರ ಅನುಭವವೂ ಇನ್ನೊಂದು ಕಾರಣ.
ಅಧ್ಯಯನದ ಸಾರಾಂಶ:
ಮಕ್ಕಳಿಗೆ ಬರುವ ಡೈರಿಯಾ ಕಾಯಿಲೆಯನ್ನು ತಡೆಯಲು ಅತ್ಯಂತ ಸರಳ ಮತ್ತು ಮಿತವ್ಯಯಕಾರಿಯಾದ ವಿಧಾನ ಎಂದರೆ ಊಟಕ್ಕೆ ಮೊದಲು, ಸಾಕುಪ್ರಾಣಿಗಳೊಡನೆ ಆಟವಾಡಿದರೆ ಹಾಗೂ ಶೌಚದ ನಂತರ ಕೈಯನ್ನು ಶುಭ್ರವಾಗಿ ಸಾಬೂನು ಹಾಕಿ ತೊಳೆಯುವುದು. ಈ ಬಗ್ಗೆ ಹಲವಾರು ರಾಷ್ಟ್ರಗಳಲ್ಲಿ ಶಾಲಾಮಕ್ಕಳಿಗೆ ಕೈತೊಳೆಯುವ ಬಗ್ಗೆ ಅರಿವು ಮೂಡಿಸಿ, ಅವರು ಅದನ್ನು ಪಾಲಿಸಿದಾಗ ಡೈರಿಯಾದಿಂದ ಮರಣ ಹೊಂದುವ ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನದ ವರದಿ ತಿಳಿಸುತ್ತದೆ.
ತಿಳಿಯಿರಿ ಮತ್ತು ತಿಳಿಸಿರಿ:
ಆಹಾರ ತಿನ್ನುವುದು, ಮಲ ವಿಸರ್ಜನೆಯ ನಂತರ ಸ್ವಚ್ಛಗೊಳಿಸುವುದು, ಮೂಗು ಸ್ವಚ್ಛಗೊಳಿಸುವುದು, ಸಗಣಿ ತೆಗೆಯುವುದು, ಇತ್ಯಾದಿ ಚಟುವಟಿಕೆಗಳನ್ನು ನಾವು ನಮ್ಮ ಕೈಗಳನ್ನು ಬಳಸಿಕೊಂಡೇ ಮಾಡುತ್ತೇವೆ. ಈ ಚಟುವಟಿಕೆಯ ಸಮಯದಲ್ಲಿ ಹಲವಾರು ಕಾಯಿಲೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳು / ರೋಗಾಣುಗಳು ನಮ್ಮ ಉಗುರಿನಲ್ಲಿ ಉಳಿಯುತ್ತವೆ ಹಾಗೆಯೇ ಚರ್ಮದ ಮೇಲೆಯೂ ಇರುತ್ತವೆ. ಚಟುವಟಿಕೆ ಮುಗಿಸಿದ ನಂತರ ಮತ್ತು ಮುಖ್ಯವಾಗಿ ಅಡುಗೆ ಮಾಡುವ ಮುನ್ನ ಹಾಗೂ ಆಹಾರ ಸೇವನೆಯ ಮುನ್ನ ಸಾಬೂನು ಬಳಸಿ ಕೈಯನ್ನು ತೊಳೆಯುವುದರಿಂದ (ಕೈಯ ಹರಡುವ / ಮಣಿಕಟ್ಟಿನ ಮೇಲೆ, ಬೆರಳುಗಳ ಮಧ್ಯದಲ್ಲಿ ಮತ್ತು ಉಗುರುಗಳು) ಹಲವಾರು ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯವಾಗುತ್ತದೆ.
- ಮಕ್ಕಳು ಮಣ್ಣಿನಲ್ಲಿ ಆಟವಾಡುತ್ತಾರೆ. ಅವರಿಗೆ ಊಟ ಮಾಡುವ ಮುನ್ನ ಕೈತೊಳೆಯುವುದನ್ನು ಕಲಿಸಿರಿ.
- ರಕ್ತ, ಮಲ, ಮೂತ್ರ ಹಾಗೂ ವಾಂತಿಯ ಜೊತೆ ಸಂಪರ್ಕ ಮಾಡದಿರಿ / ತಡೆಯಿರಿ.
- ಮಲವಿಸರ್ಜನೆ ಹಾಗೂ ಮೂತ್ರವಿಸರ್ಜನೆ ಸಂದರ್ಭದಲ್ಲಿ ಶುಚಿತ್ವ
- ಮಲವಿಸರ್ಜನೆ ಹಾಗೂ ಮೂತ್ರವಿಸರ್ಜನೆ ನಂತರ, ಸಾಬೂನಿನಿಂದ ನಿಮ್ಮ ಕೈಯನ್ನು ತೊಳೆಯುವುದನ್ನು ಮರೆಯದಿರಿ.
- ಶೌಚಾಲಯ, ಸ್ನಾನದ ಮನೆ ಮತ್ತು ಸುತ್ತಮುತ್ತ ಜಾಗ ಸ್ವಚ್ಛವಾಗಿಡಿ. ಬಯಲು ಮಲವಿಸರ್ಜನೆ ಮಾಡದಿರಿ.
- ಸಂಶೋಧನೆಯ ಪ್ರಕಾರ ಕೈಗಳನ್ನು 30 ಸೆಕೆಂಡುಗಳ ಕಾಲ ಚೆನ್ನಾಗಿ ತೊಳೆಯಬೇಕು. ಆದರೆ ಮಾರುಕಟ್ಟೆಯಲ್ಲಿ ಕೈ ತೊಳೆಯುವ ಸಾಬೂನು, ಸ್ಯಾನಿಟೈಸರ್‌ಗಳ ಉಪಯೋಗ ಬಂದಾಗಿನಿಂದ ಕನಿಷ್ಠ 15 ಸೆಕೆಂಡುಗಳಲ್ಲಿ ಕೈಗಳನ್ನು ಸ್ವಚ್ಛವಾಗಿಸಿಕೊಳ್ಳಬಹುದು.
- ಶೇ. 80ರಷ್ಟು ಸಾಂಕ್ರಾಮಿಕ ರೋಗಗಳು ಕೈಗಳ ಸ್ಪರ್ಶದಿಂದ ಹರಡುತ್ತವೆ. ಕೈಗಳನ್ನು ದಿನಕ್ಕೆ 4-5 ಬಾರಿ ತೊಳೆಯುವುದು ಅತಿಸಾರದ ಪ್ರಮಾಣವನ್ನು ಶೇ.40ರಷ್ಟು ಕಡಿಮೆ ಮಾಡುತ್ತದೆ. ಕೊಳಕು ಕೈಗಳಿಂದ ಮುಖವನ್ನು ಸ್ಪರ್ಶಿಸುವುದರಿಂದ ನ್ಯುಮೋನಿಯಾ, ಶೀತ ಮತ್ತು ಜ್ವರ ಬೇಗನೆ ಹರಡುತ್ತವೆ. ಒಣಗಿದ ಕೈಗಳಿಗಿಂತ ಒದ್ದೆಯಾದ ಕೈಗಳು ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಸಾವಿರ ಪಟ್ಟು ಹೆಚ್ಚು.
- ನಿಯಮಿತವಾಗಿ ಉಗುರನ್ನು ಕತ್ತರಿಸಿ. ಉಗುರು ಕಚ್ಚುವುದು ಮತ್ತು ಮೂಗುಜ್ಜುವುದು ಕೂಡ ನೇರವಾಗಿ ಕೈಗಳೇ ಬಳಕೆಯಾಗುವುದರಿಂದ ಇವುಗಳನ್ನು ಮಾಡುವಾಗ ಕೈಗಳು ಸ್ವಚ್ಛವಾಗಿವೆಯಾ ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ. ಅಲ್ಲದೆ, ಇವುಗಳ ಬಳಿಕವೂ ಕೈಯನ್ನು ಶುದ್ಧೀಕರಿಸಿಕೊಳ್ಳುವುದನ್ನು ಮರೆಯದಿರಿ.