ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ತ್ಯಾಜ್ಯದ/ಕಸದ ಸಮಸ್ಯೆ ದಿನೆ ದಿನೇ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಭಾರತದ 7 ಸಾವಿರಕ್ಕೂ ಹೆಚ್ಚಿನ ನಗರ ಪ್ರದೇಶಗಳಲ್ಲಿ ಅಂದಾಜು 377 ಮಿಲಿಯನ್ ಜನರು ವಾಸಿಸುತ್ತಿದ್ದು ಪ್ರತಿವರ್ಷ 62 ಮಿಲಿಯನ್ ಟನ್ ಗಳಷ್ಟು ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ವಿಪರ್ಯಾಸವೆಂದರೆ ಇಷ್ಟೊಂದು ಪ್ರಮಾಣದಲ್ಲಿ ಉತ್ಪತ್ತಿಯಾದ ಈ ಘನತ್ಯಾಜ್ಯದಲ್ಲಿ ಕೇವಲ 43 ಮಿಲಿಯನ್ ಟನ್ ಗಳಷ್ಟು ತ್ಯಾಜ್ಯವನ್ನು ಮಾತ್ರ ಸಂಗ್ರಹಿಸಲಾಗುತ್ತಿದ್ದು ಅದರಲ್ಲೂ ಅಂದಾಜು 12 ಮಿಲಿಯನ್ ಟನ್ ಗಳಷ್ಟು ತ್ಯಾಜ್ಯ ಮಾತ್ರ ಸಂಸ್ಕರಿಸಲ್ಪಡುತ್ತಿದೆ. ಮಿಕ್ಕ 31 ಮಿಲಿಯನ್ ಟನ್ ಗಳಷ್ಟು ಘನತ್ಯಾಜ್ಯವನ್ನು ಭೂಮಿಯಲ್ಲಿ ತುಂಬಲಾಗುತ್ತಿದೆ (ಲ್ಯಾಂಡ್ ಫಿಲ್)
ತಜ್ಞರ ಅಭಿಪ್ರಾಯದಂತೆ ಸದ್ಯ ನಮ್ಮಲ್ಲಿ ಬಹುತೇಕ ಕಡೆ ಪಾಲಿಸಲಾಗುತ್ತಿರುವ ಘನತ್ಯಾಜ್ಯದ ನಿರ್ವಹಣೆ ವ್ಯವಸ್ಥೆಯು ಅವೈಜ್ಞಾನಿಕವಾಗಿದೆ. ಇದಕ್ಕೆ ಅತಿ ಮುಖ್ಯ ಕಾರಣವೆಂದರೆ "ಕಸ ವಿಂಗಡಣೆ" ಆಗದೆ ವಿಲೇವಾರಿಯಾಗುತ್ತಿರುವುದು. ಅಂದರೆ ನಾವು ನಿತ್ಯ ನಮ್ಮ ಮನೆಯಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಸರಿಯಾದ ಕ್ರಮದಲ್ಲಿ ವಿಂಗಡಿಸದೆ ಹಾಗೇ ವಿಲೇವಾರಿ ಮಾಡುತ್ತಿರುವುದು ಕಸದ ಸಮಸ್ಯೆಯನ್ನು ಪೆಡಂಭೂತವನ್ನಾಗಿ ಪರಿವರ್ತಿಸಿದೆ. ಇದರಿಂದಾಗಿಯೇ ಕಸದ ಸಮಸ್ಯೆ ಈಗ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು ದಿನೇ ದಿನೇ ಜಟಿಲವಾಗುತ್ತಿದೆ. ಇದು ಮುಂದುವರೆದಿದ್ದೆ ಆದಲ್ಲಿ ಕ್ರಮೇಣ ಇದು ರಾಜ್ಯದ ಅಭಿವೃದ್ಧಿ ಮೇಲೆಯೂ ಅಡ್ಡ ಪರಿಣಾಮ ಬೀರಿ ಜನಸಾಮಾನ್ಯರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ
ಈ ಹಿನ್ನೆಲೆಯಲ್ಲಿ ಈಗಲೇ ಕಸದ ವಿಂಗಡಣೆ ಕುರಿತು ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸಿಕೊಂಡು ಗ್ರಾಮ ಮಟ್ಟದಿಂದಲೇ ಅದನ್ನು ಅಳವಡಿಸಿಕೊಳ್ಳುವಂತೆ ಪ್ರಯತ್ನಿಸಬೇಕಾಗಿರುವುದು ಅವಶ್ಯಕವಾಗಿದೆ. ಇದು ಅನಿವಾರ್ಯವೂ ಸಹ. ಮೂಲದಲ್ಲಿಯೇ ಅಂದರೆ ಮನೆಯಲ್ಲೆ ಪ್ರಥಮ ಅಭ್ಯಾಸವಾಗಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ಹಸಿಕಸ ಹಾಗೂ ಒಣ ಕಸವಾಗಿ ಬೇರ್ಪಡಿಸಿ ವಿಲೇವಾರಿ ಮಾಡುವಲ್ಲಿ ಸಹಕರಿಸಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ ಪಾಲಿಸುವುದಲ್ಲದೆ ಇತರರೂ ಇದನ್ನು ಪಾಲಿಸುವಂತೆ ಮಾಡಲು ಉತ್ತೇಜನ ನೀಡುವುದರಿಂದ ನಾವು ನಮ್ಮ ಪ್ರಕೃತಿಗೆ ಹಾಗೂ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಪರಿಸರ ಕಟ್ಟಿ ಕೊಡುವಲ್ಲಿ ನಮ್ಮ ಪಾತ್ರ ಬಹುಮುಖ್ಯ ಪಾತ್ರ.
ಪ್ಲಾಸ್ಟಿಕ್, ಕಟ್ಟಿಗೆ, ಕಾರ್ಡ್ ಬೋರ್ಡ್, ಗಾಜಿನ ಬಾಟಲ್, ಪೇಪರ್, ಲೋಹದ ಸಾಮಗ್ರಿಗಳು ಮುಂತಾದವು ಒಣ ಕಸವಾಗಿದೆ. ಈ ರೀತಿಯ ಒಣಕಸವನ್ನು ಸೌಲಭ್ಯಗಳಿದ್ದರೆ ಮರುಬಳಕೆಯ ವಸ್ತುಗಳಾಗಿಯೂ ಬಳಸಬಹುದು, ಇಲ್ಲವೆ ಗುಜರಿ ವ್ಯಾಪಾರಿಗಳಿಗೆ ನೀಡಿ ಹಣ ಸಂಪಾದಿಸಬಹುದು. ವಿಶೇಷವಾಗಿ ಪ್ಲಾಸ್ಟಿಕ್ ಪರಿಸರಕ್ಕೆ ಸಾಕಷ್ಟು ಹಾನಿಯುಂಟು ಮಾಡುವ ವಸ್ತು. ಇದು ನೂರಾರು ವರ್ಷಗಳಾದರೂ ಕರಗುವುದಿಲ್ಲ, ಆದರೆ ಅದರಲ್ಲಿರುವ ರಾಸಾಯನಿಕಗಳು ಪರಿಸರಕ್ಕೆ ಹಾನಿಯುಂಟು ಮಾಡುವುದಲ್ಲದೆ ಹಲವಾರು ಕಾಯಿಲೆಗಳು ಬರುವಲ್ಲಿಯೂ ಸಂಭಾವ್ಯ ಪಾತ್ರ ನಿರ್ವಹಿಸುತ್ತವೆ. ಸಾಮಾನ್ಯವಾಗಿ ಬಹುತೇಕ ಕಡೆ ಜನರು ಹಸಿಕಸಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಎಸೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಪ್ಲಾಸ್ಟಿಕ್, ಕಟ್ಟಿಗೆ, ಕಾರ್ಡ್ ಬೋರ್ಡ್, ಗಾಜಿನ ಬಾಟಲ್, ಪೇಪರ್, ಲೋಹದ ಸಾಮಗ್ರಿಗಳು ಮುಂತಾದವು ಒಣ ಕಸವಾಗಿದೆ. ಈ ರೀತಿಯ ಒಣಕಸವನ್ನು ಸೌಲಭ್ಯಗಳಿದ್ದರೆ ಮರುಬಳಕೆಯ ವಸ್ತುಗಳಾಗಿಯೂ ಬಳಸಬಹುದು, ಇಲ್ಲವೆ ಗುಜರಿ ವ್ಯಾಪಾರಿಗಳಿಗೆ ನೀಡಿ ಹಣ ಸಂಪಾದಿಸಬಹುದು. ವಿಶೇಷವಾಗಿ ಪ್ಲಾಸ್ಟಿಕ್ ಪರಿಸರಕ್ಕೆ ಸಾಕಷ್ಟು ಹಾನಿಯುಂಟು ಮಾಡುವ ವಸ್ತು. ಇದು ನೂರಾರು ವರ್ಷಗಳಾದರೂ ಕರಗುವುದಿಲ್ಲ, ಆದರೆ ಅದರಲ್ಲಿರುವ ರಾಸಾಯನಿಕಗಳು ಪರಿಸರಕ್ಕೆ ಹಾನಿಯುಂಟು ಮಾಡುವುದಲ್ಲದೆ ಹಲವಾರು ಕಾಯಿಲೆಗಳು ಬರುವಲ್ಲಿಯೂ ಸಂಭಾವ್ಯ ಪಾತ್ರ ನಿರ್ವಹಿಸುತ್ತವೆ. ಸಾಮಾನ್ಯವಾಗಿ ಬಹುತೇಕ ಕಡೆ ಜನರು ಹಸಿಕಸಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಎಸೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಈ ರೀತಿ ಪ್ಲಾಸ್ಟಿಕ್ ನಲ್ಲಿ ಹಸಿಕಸ ಹಾಕಿ ಎಲ್ಲೆಂದರಲ್ಲಿ ಎಸೆದಲ್ಲಿ ಅಂತಹ ಕಸವನ್ನು ಬೀದಿ ನಾಯಿ, ದನಗಳು ತಿನ್ನುವ ಸಾಧ್ಯತೆ ಹೆಚ್ಚಿರುತ್ತದೆ. ಈ ಮೂಲಕ ಆ ಪ್ರಾಣಿಗಳ ಹೊಟ್ಟೆಯೊಳಗೆ ಪ್ಲಾಸ್ಟಿಕ್ ಸೇರಿ ಪ್ರಾಣಹಾನಿ ಉಂಟಾಗುತ್ತದೆ. ಅಲ್ಲದೆ ವಿಪರೀತ ಪ್ರಮಾಣದ ಪ್ಲಾಸ್ಟಿಕ್ ಚೀಲಗಳು ಚರಂಡಿ/ಮೋರಿಗಳಲ್ಲಿ ಎಸೆಯಲ್ಪಟ್ಟಾಗ ಚರಂಡಿ ನೀರು ಸುಗಮವಾಗಿ ಹರಿಯದೆ ತಡೆಗಳುಂಟಾಗಿ ಕೊಳಚೆಯು ಸಾಂದ್ರೀಕೃತವಾಗುತ್ತದೆ. ಇದರಿಂದ ಕ್ರಿಮಿ-ಕೀಟಗಳು, ಸೊಳ್ಳೆಗಳು ಉತ್ಪತ್ತಿಯಾಗಿ ಹಲವಾರು ರೋಗಗಳು ಮನುಷ್ಯರಿಗೆ ಬರಲು ಇದು ನಾಂದಿಯಾಗಲಿದೆ. ಒಟ್ಟಾರೆಯಾಗಿ ಅನಾರೋಗ್ಯಕರ ಪರಿಸರ ಉಂಟಾಗುತ್ತದೆ. ಸದ್ಯ ಈ ರೀತಿಯ ಪರಿಸ್ಥಿತಿಗಳನ್ನು ನಾವು ಎಲ್ಲೆಡೆ ನೋಡುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣವೇ ನಾವು ಕಸವನ್ನು ವಿಂಗಡಿಸದೆ ಇರುವುದು.
ನಾಳಿನ ನಮ್ಮ ಭವಿಷ್ಯಕ್ಕೆ ಆರೋಗ್ಯಕರ ಪರಿಸರ ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ನೈತಿಕ ಹೊಣೆಯಾಗಿದೆ. ಅದಕ್ಕಾಗಿ ಸ್ವಚ್ಛತೆಯನ್ನು ರೂಢಿಸಿಕೊಳ್ಳುವುದಷ್ಟೆ ಅಲ್ಲದೆ ಅದು ಸದಾ ನೆಲೆಸುವಂತೆ ಮಾಡುವುದೂ ಸಹ ನಮ್ಮ ಕರ್ತವ್ಯವಾಗಬೇಕು. ಇಂದಿನಿಂದಲೇ ಕಸ ವಿಂಗಡಣೆಯ ಅಭ್ಯಾಸವನ್ನು ರೂಢಿಸಿಕೊಳ್ಳೋಣ. ಮನೆಯೇ ಮೊದಲ ಪಾಠಶಾಲೆ ಎಂಬಂತೆ, ಕಸ ವಿಂಗಡಣೆಗೂ ಮನೆಯೇ ಮೊದಲ ಹಂತದ ಅನುಷ್ಠಾನ ಕೇಂದ್ರವಾಗಲಿ. ಮನೆಯಲ್ಲಿ ಉತ್ಪತ್ತಿಯಾಗುವ ಒಟ್ಟಾರೆ ಕಸದಲ್ಲಿ ಹಸಿಕಸ ಯಾವುದು ಹಾಗೂ ಒಣಕಸ ಯಾವುದು ಎಂದು ತಿಳಿದುಕೊಳ್ಳುವುದು ಖಂಡಿತವಾಗಿಯೂ ಕಷ್ಟವಾದ ಪ್ರಕ್ರಿಯೆ ಅಲ್ಲವೇ ಅಲ್ಲ, ಇದರಲ್ಲಿ ಯಾವ ರಾಕೆಟ್ ಸೈನ್ಸ್ ಎಂಬುದೂ ಇಲ್ಲ, ಬರೀ ಕಾಮನ್ ಸೆನ್ಸ್ ಅಷ್ಟೆ ಅಲ್ಲವೆ?
ಎಲ್ಲರಿಗೂ ಬರಲಿ ಪರಿಸರ ಪ್ರಜ್ಞೆ
ಇದಕ್ಕೆ ಬೇಕಿಲ್ಲ ಸರ್ಕಾರದ ಆಜ್ಞೆ
- ಕುವೆಂಪು