ಹೋತನಹಳ್ಳಿ ಗ್ರಾಮ ಪಂಚಾಯತಿಯು ಹೋತನಹಳ್ಳಿ, ಶಿಡ್ಲಾಪೂರ ಮತ್ತು ಲಕ್ಕಿಕೊಪ್ಪ ಗ್ರಾಮಗಳನ್ನು ಒಳಗೊಂಡಂತೆ 936 ಕುಟುಂಬಗಳನ್ನು ಹೊಂದಿದೆ. ಅದರಲ್ಲಿ ಪ್ರಾಯೋಗಿಕವಾಗಿ ಸಂಪೂರ್ಣವಾಗಿ ಪ.ಜಾತಿ/ಪ.ಪಂಗಡ. ಸಮುದಾಯವನ್ನು ಹೊಂದಿರುವ ಶಿಡ್ಲಾಪೂರ ಗ್ರಾಮದಲ್ಲಿ ಎಲ್ಲಾ ಕುಟುಂಬಗಳ ಹಂತದಲ್ಲಿ “ಪೈಪ್ ಕಾಂಪೋಸ್ಟ್” ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದು ಹಾವೇರಿ ಜಿಲ್ಲೆಯಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಸಿದ ಪ್ರಥಮ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗ್ರಾಮ ಪಂಚಾಯತಿಯ 06 ಶಾಲೆಗಳು, 06 ಅಂಗನವಾಡಿ ಕೇಂದ್ರಗಳು, 01 ಬಿ.ಸಿ.ಎಂ ಹಾಸ್ಟೆಲ್, ಗ್ರಾಮ ಪಂಚಾಯತಿಯ ಕಾರ್ಯಾಲಯ ಹಾಗೂ ಗ್ರಾಮ ಪಂಚಾಯಿತಿಯ 13 ಸದಸ್ಯರ ಮನೆಗಳಿಗೆ ಪ್ರಾಯೋಗಿಕವಾಗಿ ಪೈಪ್ ಕಾಂಪೋಸ್ಟನ್ನು ಅಳವಡಿಸಿ ಮನೆ ಹಂತದಲ್ಲಿ ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆ ಮಾಡುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳಲ್ಲಿ ಈ ಪೈಪ್ ಕಾಂಪೋಸ್ಟ್ ಪದ್ಧತಿಯನ್ನು ಅಳವಡಿಸಿಕೊಳ್ಳುವ ದೃಢ ನಿರ್ಧಾರವನ್ನು ಗ್ರಾಮ ಪಂಚಾಯಿತಿಯು ಮಾಡಿದೆ.
ಏನಿದು ಪೈಪ್ ಕಾಂಪೋಸ್ಟ್?
ಪಿವಿಸಿ ಪೈಪ್ ಅಥವಾ ಸಿಮೆಂಟ್ ಪೈಪ್ ಬಳಸಿ ದಿನಬಳಕೆಯ ಅಡುಗೆ ಮನೆಯ ಹಸಿ ಕಸವನ್ನು ಜೈವಿಕ ಗೊಬ್ಬರವನ್ನಾಗಿ ಮಾರ್ಪಡಿಸುವುದೇ ಪೈಪ್ ಕಾಂಪೋಸ್ಟ್ ೦೬ ಅಡಿ ಉದ್ದದ ಪೈಪಿನಲ್ಲಿ ದಿನನಿತ್ಯದ ಅಡಿಗೆ ತ್ಯಾಜ್ಯವನ್ನು ಸುರಿದು, ಅದನ್ನು ಗೊಬ್ಬರವಾಗಿ ಪರಿವರ್ತಿಸುವುದೇ ಪೈಪ್ ಕಾಂಪೋಸ್ಟ್. ಇದಕ್ಕೆ ಹೆಚ್ಚು ಖರ್ಚಿಲ್ಲ, ಅಲ್ಲದೇ ನಿರ್ವಹಣೆಯು ಬಹಳ ಸುಲಭ. ಅಡುಗೆ ಮನೆಯ ಹಸಿ ಕಸ ನಿರ್ವಹಣೆಗಾಗಿ ಪೈಪ್ ಕಾಂಪೋಸ್ಟ್ ವಿಧಾನ ಅಳವಡಿಸಿಕೊಳ್ಳುವುದು ತುಂಬಾ ಸರಳ ವಿಧಾನವಾಗಿದೆ.
ಏನೇನು ಬೇಕು?
ಪೈಪ್ ಕಾಂಪೋಸ್ಟ್ಟ್ ತಯಾರಿಕೆಗೆ ಒಂದು ಕೆ.ಜಿ. ಬೆಲ್ಲ ಸಗಣಿ ನೀರು, ಆರು ಅಡಿ ಉದ್ದದ ಪೈಪ್, ಎರಡು ಅಡಿ ಉದ್ದದ ಜಾಗ ಸಾಕು. ಇಷ್ಟು ಪ್ರಮಾಣದ ವಸ್ತುಗಳಿಂದಲೇ ಮನೆಯ ಬಳಿಯ ಕೈತೋಟಕ್ಕೆ ಬೇಕಾಗುವ ಗೊಬ್ಬರವನ್ನು ಉತ್ಪಾದಿಸಬಹುದು.
ಅಳವಡಿಕೆಯ ವಿಧಾನ:
೦೬ ಅಡಿ ಉದ್ದ, ೬ ಇಂಚು ಅಗಲದ ಪಿವಿಸಿ ಅಥವಾ ಸಿಮೆಂಟ್ ಪೈಪ್ ತೆಗೆದುಕೊಂಡು ಒಂದು ಅಡಿಯಷ್ಟು ಭೂಮಿಯನ್ನು ಅಗೆದು ಗುಂಡಿಯನ್ನು ತೆಗೆಯಬೇಕು.
ಒಂದು ಅಡಿ ಭೂಮಿಯ ಒಳಗೆ ಹಾಗೂ ಐದು ಅಡಿ ಭೂಮಿಯ ಮೇಲೆ ಇರುವಂತೆ ಪೈಪ್‌ನ್ನು ಲಂಬಾಕಾರವಾಗಿ ನಿಲ್ಲಿಸಬೇಕು, ನಂತರ ೧ ಕೆ.ಜಿ ಸಗಣಿ, ೧ ಕೆ.ಜಿ ಬೆಲ್ಲ ಹಾಗೂ ಅರ್ಧ ಜಗ್ಗು ನೀರನ್ನು ಮೊದಲಿಗೆ ಪೈಪ್ ಒಳಗಡೆ ಹಾಕಬೇಕು.
ನಂತರ ಪ್ರತಿ ದಿನ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪೈಪ್‌ನಲ್ಲಿ ಹಾಕುತ್ತಾ ಬರಬೇಕು, ಹಾಗೆಯೇ ವಾರದಲ್ಲಿ ಒಂದು ಬಾರಿ ಮಾತ್ರ ಒಂದು ಬೊಗಸೆ ಫಲವತ್ತಾದ ಮಣ್ಣು ಹಾಗೂ ಅರ್ಧ ಜಗ್ಗು ನೀರು ಹಾಕಬೇಕು. ಕಸ ಹಾಕಿದ ಮೇಲೆ ಪೈಪ್‌ನ್ನು ಮುಚ್ಚಬೇಕು.
ಎಲ್ಲೆಲ್ಲಿ ಅಳವಡಿಕೆ?
ಪೈಪ್-ಕಾಂಪೋಸ್ಟ್ ಅಳವಡಿಸಲು ಎರಡು ಅಡಿ ಜಾಗ ಇದ್ದರೆ ಸಾಕು. ಗ್ರಾಮ ಪಂಚಾಯತಿಯ ಕಛೇರಿ ಶಾಲೆ, ಅಂಗನವಾಡಿ, ದೇವಸ್ಥಾನ, ಹೋಟೆಲ್, ವೈಯಕ್ತಿಕ ಕುಟುಂಬಗಳಿಗೆ, ಸರ್ಕಾರಿ ವಸತಿ ಗೃಹಗಳ ಮುಂದೆ ಮತ್ತು ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಬಹುದು.
ಬಳಕೆಯಾಗುವ ಕಸದ ವಿಧಗಳು:
ದೈನಂದಿನ ಗೃಹ ಬಳಕೆಯಿಂದ ಮನೆ, ಶಾಲೆ, ಅಂಗನವಾಡಿಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ, ತರಕಾರಿ ತ್ಯಾಜ್ಯ ಅಡುಗೆ ಮನೆಯಲ್ಲಿ ಉಳಿದ ಮುಸುರೆ/ಅನ್ನ, ಕಾಯಿ ಪಲ್ಯದ ಕಸ, ಹಣ್ಣು ಹಂಪಲ ಕಸ, ಎಲೆ, ಇತರೆ ಬಳಕೆಯ ಹಸಿ-ಕಸ ಮಾತ್ರ ಪ್ರತಿ ದಿನ ಪೈಪ್‌ನಲ್ಲಿ ಹಾಕಬಹುದು.
ಉಪಯೋಗಗಳು:
* ಅತೀ ಕಡಿಮೆ ವೆಚ್ಚದಲ್ಲಿ ಜೈವಿಕ ಗೊಬ್ಬರ ತಯಾರಿಕೆ
* ಹಸಿಕಸ ಮನೆ ಹಂತದಲ್ಲಿಯೇ ಸಂಸ್ಕರಿಸಿ ಪೈಪ್ ಕಾಂಪೋಸ್ಟ್ ಮಾಡುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು
* ಮನೆ, ತೋಟ, ಶಾಲಾ ಆವರಣದ ಕೈತೋಟದ ಸಸ್ಯಗಳಿಗೆ ಅತ್ಯುತ್ತಮ ಜೈವಿಕ ಗೊಬ್ಬರ ಮೂಲದಲ್ಲಿಯೇ ದೊರೆಯುವುದು
* ಅತ್ಯಂತ ಕಡಿಮೆ ಸ್ಥಳಾವಕಾಶ ಇರುವಲ್ಲಿಯೂ ಮಾಡಬಹುದು
* ಅನ್ನದ ಅಗಳು/ಮುಸರೆ ಇತರೆ ದ್ರವತ್ಯಾಜ್ಯದಿಂದ ಉಂಟಾಗಬಹುದಾದ ಮಾಲಿನ್ಯ ಹಾಗೂ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ
* ಗ್ರಾಮದಲ್ಲಿ ತಿಪ್ಪೆಗುಂಡಿಗಳು ನಿವಾರಣೆಯಾಗುತ್ತವೆ
* ಗ್ರಾಮ, ಶಾಲೆ ಹಾಗೂ ಅಂಗನವಾಡಿಗಳ ಪರಿಸರವನ್ನು ಶುಚಿಯಾಗಿ ಮತ್ತು ಸುಂದರವಾಗಿಡಲು ಹಾಗೂ ಹಸಿ ತ್ಯಾಜ್ಯ ನಿರ್ವಹಣೆಗೆ ಅತ್ಯುತ್ತಮವಾದ ವಿಧಾನವಾಗಿದೆ.
ಈ ನಿಟ್ಟಿನಲ್ಲಿ ಹೋತನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮದ ಎಲ್ಲಾ ಶಾಲೆ, ಅಂಗನವಾಡಿ, ಸರ್ಕಾರಿ ಕಚೇರಿಗಳು ಮತ್ತು ಹಾಸ್ಟೆಲ್‌ಗಳಿಗೆ ಪೈಪ್ ಕಾಂಪೋಸ್ಟ್ ಅಳವಡಿಸಲಾಗಿದೆ. ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಡ್ಲಾಪುರ ಗ್ರಾಮದ ಎಲ್ಲ ಕುಟುಂಬಗಳಿಗೂ ಮತ್ತು ಸರ್ಕಾರಿ ಕಚೇರಿಗಳಿಗೂ ಪೈಪ್ ಕಾಂಪೋಸ್ಟ್ ಅಳವಡಿಸಲಾಗಿದೆ. ಈ ಗ್ರಾಮದಲ್ಲಿ ಮಾಂಸಹಾರದ ತ್ಯಾಜ್ಯವು ಅಧಿಕವಾಗಿ ಉತ್ಪತ್ತಿಯಾಗುವುದರಿಂದ ಪೈಪ್ ಕಾಂಪೋಸ್ಟಿಂಗ್ ವಿಧಾನವು ಸದುಪಯೋಗವಾಗುತ್ತಿದೆ.
7,783 total views, 1 views today