Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಜನಜಾಗೃತಿಗಾಗಿ ವಿನೂತನ ಕಾರ್ಯಕ್ರಮಗಳ ಅನುಷ್ಟಾನ

https://swachhamevajayate.org/wp-content/uploads/2019/09/blog-img-150x80.png

ಕರ್ನಾಟಕ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯೂ ಒಂದಾಗಿದ್ದು, ‘ಶ್ರೀಮಂತ ಸಂಸ್ಕೃತಿ ಸಂಪ್ರದಾಯದ ತವರು’ ಹಾಗೂ ‘ಪ್ರಜ್ಞಾವಂತ ನಾಗರೀಕರ ತವರು’ ಎಂದೇ ಪ್ರಖ್ಯಾತವಾಗಿದೆ. ಅಷ್ಟೇ ಅಲ್ಲ, ಇದೀಗ “ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ” ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ೨೦೧೭ರಲ್ಲಿ “ರಾಷ್ಟ್ರೀಯ ಸ್ವಚ್ಛತಾ ದರ್ಪಣ” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಜಿಲ್ಲೆಯು ಒಟ್ಟು ೧೦,೯೩,೫೬೩ರಷ್ಟು ಜನಸಂಖ್ಯೆ ಹೊಂದಿದ್ದು ಐದು ತಾಲ್ಲೂಕು ಪಂಚಾಯತ್‌ಗಳನ್ನೊಳಗೊಂಡ ೨೩೦ ಗ್ರಾಮ ಪಂಚಾಯತ್‌ಗಳು, ೩೬೬ ಕಂದಾಯ ಗ್ರಾಮಗಳಿದ್ದು, ೧೬೮೮ ಅಂಗನವಾಡಿ ಕೇಂದ್ರಗಳು ಹಾಗೂ ೩೯೦೧ ಗ್ರಾಮೀಣ ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯನ್ನು ನೈರ್ಮಲ್ಯದಡಿ ಸುಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ೨೦೧೭-೧೮ನೇ ಸಾಲಿನಲ್ಲಿ “ಸ್ವಚ್ಛತಾ ವರ್ಷವನ್ನಾಗಿ” ಒಡಿಎಫ್ ಫ್ಲಸ್ ಚಟುವಟಿಕೆಗಳ ಮೂಲಕ ಜನರ ಮನೋಭಾವನೆಯನ್ನು ಬದಲಾಯಿಸಲು ಹತ್ತು-ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

//swachhamevajayate.org/wp-content/uploads/2020/02/Blog-4-Image-1-6.jpg

ಸ್ವಚ್ಛತೆ, ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಆಹಾರದ ಬಗ್ಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ರೇಡಿಯೋ ಮುಖಾಂತರ ಸುಮಾರು ೭೫೦೦೦ ಗ್ರಾಮೀಣ ಮಹಿಳೆಯರು ಹಾಗೂ ಯುವ ತಾಯಂದಿರಿಗೆ ಮಾಹಿತಿ ನೀಡುವ ಮಂಗಳೂರು ಆಕಾಶವಾಣಿ ಸಹಯೋಗದಲ್ಲಿ “ಸ್ವಚ್ಛ ಸೌರಭ” ಎಂಬ ರೇಡಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಈ ಉದ್ದೇಶಕ್ಕಾಗಿಯೇ ಸಾವಿರಕ್ಕೂ ಹೆಚ್ಚಿನ ಅಂಗನವಾಡಿ ಕೇಂದ್ರಗಳಲ್ಲಿ ರೇಡಿಯೊಗಳನ್ನು ಒದಗಿಸಲಾಗಿದೆ.
ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಂದ ಸ್ವಚ್ಛತೆಯ ಕುರಿತು ಪ್ರತಿಜ್ಞೆ ಸ್ವೀಕರಿಸಲಾಗಿದೆ. ಪ್ರತಿ ನಿತ್ಯ ಶಾಲೆಗಳಲ್ಲಿ ನಡೆಯುವ ಪ್ರಾಥನಾ ಸಮಯದಲ್ಲಿ “ಸ್ವಚ್ಛತಾ ವಾಣಿ” ಯನ್ನು ಬೋಧಿಸುವ ಮೂಲಕ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲಾ ಸರ್ಕಾರಿ, ಅನುದಾನಿತ ಖಾಸಗಿ ಸಹಿತ ಶಾಲೆಗಳಲ್ಲಿ ಪ್ರತಿ ಶನಿವಾರ “ಸ್ವಚ್ಛತಾ ದಿನ”ವನ್ನಾಗಿ ಆಚರಿಸಲಾಗುತ್ತಿದೆ. ಈ ಮೂಲಕ ಪ್ರತಿ ವಾರ ಸುಮಾರು ೩ ಲಕ್ಷ ೩೦ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ನೈರ್ಮಲ್ಯ ಕುರಿತಾದ ಮಾಹಿತಿ ತಲುಪುತ್ತಿದೆ.
ಎಲ್ಲಾ ಶಾಲಾ ಮಕ್ಕಳಲ್ಲಿ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸುವ ನಿಟ್ಟಿನಲ್ಲಿ ೭೫ ಮಂದಿ ಶಾಲಾ ಶಿಕ್ಷಕರಿಗೆ ಸ್ವಚ್ಛಾಗ್ರಹಿಗಳಾಗಿ ತರಬೇತಿ ನೀಡಲಾಗಿದೆ. ಹಾಗೂ ಪ್ರತಿ ಶನಿವಾರ ಜಿಲ್ಲೆಯ ಗ್ರಾಮೀಣ ಭಾಗದ ೧೬೮೮ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು ೩೦ ಸಾವಿರ ತಾಯಂದಿರಿಗೆ, ೫೩ ಸಾವಿರ ಸ್ವಸಹಾಯ ಸಂಘದ ಮಹಿಳೆಯರಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ಶಿಬಿರಗಳ ಮೂಲಕ ‘ಸ್ವಚ್ಛ ಶನಿವಾರ’ವನ್ನಾಗಿ ಆಚರಿಸಲಾಗುತ್ತಿದೆ.
ಋತುಚಕ್ರ ಸಮಯದ ಶುಚಿತ್ವದ ಅರಿವು ಮೂಡಿಸುವ ಸಲುವಾಗಿ ೧,೧೬೩ ಶಾಲೆಗಳಲ್ಲಿ ೬ಮತ್ತು ೭ ನೇ ತರಗತಿಯ ಸುಮಾರು ೩೦,೭೩೪ ಹೆಣ್ಣುಮಕ್ಕಳಿಗೆ “ಸ್ವಚ್ಛಗೆಳತಿ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಋತುಚಕ್ರ ಶುಚಿತ್ವ ಕುರಿತ ಮಾಹಿತಿಯುಳ್ಳ ಕೈಪಿಡಿಯನ್ನು ಮುದ್ರಿಸಿ, ಹಂಚಲಾಗಿದೆ.

ತಾಜ್ಯ ನಿರ್ವಹಣೆ: “ನಮ್ಮ ತ್ಯಾಜ್ಯ-ನಮ್ಮ ಹೊಣೆ” ಕಲ್ಪನೆಯಡಿಯಲ್ಲಿ ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಜೈವಿಕ ಇಂಧನ ತಯಾರಿಸುವ ಬಯೋಗ್ಯಾಸ್ ಘಟಕವನ್ನು ಯಶಸ್ವಿಯಾಗಿ ೩೨ ಸರಕಾರಿ ವಸತಿ ನಿಲಯಗಳಲ್ಲಿ ಅಳವಡಿಸಲಾಗಿದೆ. ಜೊತೆಗೆ ಪೈಪ್ ಕಾಂಪೋಸ್ಟ್, ಬಯೋಬಿನ್ ಗೊಬ್ಬರ ತಯಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ.

//swachhamevajayate.org/wp-content/uploads/2020/02/Blog-4-Image-2-1.jpg

ಸ್ವಚ್ಛತಾ ನೀತಿಯ ಅನುಷ್ಠಾನಕ್ಕಾಗಿ ಪ್ರತಿ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಗ್ರಾಮ ಪಂಚಾಯತ್ ಸದಸ್ಯವಾರು ವಿಶೇಷ ಉಪ ಸಮಿತಿಗಳನ್ನು ರಚಿಸಿ ೧೦ ಮನೆಗಳಿಗೆ ಒಬ್ಬ ಸದಸ್ಯ ಜವಾಬ್ದಾರಿಯನ್ನು ಹೊರುವಂತೆ ಮಾಡಲಾಗಿದೆ. ಹೆದ್ದಾರಿ ಬದಿಗಳಲ್ಲಿ ತ್ಯಾಜ್ಯ ಸುರಿಯುವುದನ್ನು ನಿಯಂತ್ರಿಸಲು ಹೆದ್ದಾರಿ ಪ್ರಾಧಿಕಾರ, ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮಕೈಗೊಳ್ಳಲು ಸುತ್ತೋಲೆ ಹೊರಡಿಸಿ ಅದರಂತೆ ಪಾಲನೆ ಮಾಡಲು ನಿರಂತರ ಅನುಸರಣೆ ಮಾಡುವಲ್ಲಿ ಜಿಲ್ಲಾ ಪಂಚಾಯತ್ ಮುಂದಾಗಿದೆ.

ಜೊತೆಗೆ ಕೆಲವೊಂದು ಗ್ರಾಮ ಪಂಚಾಯತ್‌ನ ಸರಹದ್ದಿನಲ್ಲಿ ತ್ಯಾಜ್ಯ ಸುರಿಯುವವರ ಮೇಲೆ ನಿಗಾ ಇಡಲು ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹಗಲು ಮತ್ತು ರಾತ್ರಿ ಪಹರೆಗಾಗಿ ತ್ಯಾಜ್ಯ ವೀಕ್ಷಣೆ ಸಮಿತಿಯನ್ನು ರಚಿಸಲಾಗಿದೆ. ತ್ಯಾಜ್ಯ ಸುರಿಯುವ ವಾಹನ ಮಾಲೀಕರ ವಿರುದ್ಧ ಹತ್ತಿರದ ಪೊಲೀಸ್ ಠಾಣೆಗೆ, ಮೋಟಾರು ವಾಹನ ಕಾಯ್ದೆ ೧೭೭ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಆರ್‌ಟಿಒಗೆ ಹಾಗೂ ದಂಡ ಪ್ರಕ್ರಿಯಾ ಸಂಹಿತೆ ೧೩೩ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಲಾಗುತ್ತಿದೆ.

ನಿರಾಕರಿಸು, ನಿರ್ಬಂಧಿಸು, ಮರುಬಳಕೆ, ಮರು ಉತ್ಪಾದನೆ ಎಂಬ ನಾಲ್ಕು ತತ್ವಗಳ ಅಡಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ೧,೬೮೮ ಅಂಗನವಾಡಿ ಕೇಂದ್ರಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಯ ಘಟಕಗಳನ್ನಾಗಿ ಗುರುತಿಸಿ, ಪ್ರತಿ ೩ ನೇ ಶನಿವಾರ ಜನರು ತಮ್ಮ ಮನೆಗಳಲ್ಲಿ ಸಂಗ್ರಹಿಸಿದ ಒಣ ಪ್ಲಾಸ್ಟಿಕ್ ಕಸವನ್ನು ಅಂಗನವಾಡಿಗೆ ಹಸ್ತಾಂತರಿಸುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಗ್ರಾಮ ಪಂಚಾಯತ್‌ನ ಪ್ರತಿನಿಧಿಗಳ ನೇತೃತ್ವದಲ್ಲಿ ಒಣ ತ್ಯಾಜ್ಯ ಖರೀದಿದಾರರಿಗೆ ನೀಡುವ ಮೂಲಕ ಪ್ಲಾಸ್ಟಿಕ್ ಒಂದು ಆದಾಯದ ಮೂಲವಾಗಿ ರೂಪಿಸಲಾಗಿದೆ. ಈ ಆದಾಯದಲ್ಲಿ ಶೇ.೨೫ ಭಾಗವನ್ನು ಅಂಗನವಾಡಿ ಅಭಿವೃದ್ಧಿಗೆ ಬಳಸಲಾಗುತ್ತಿದೆ.

ಸರಳವಾದ ಹಾಗೂ ಕಡಿಮೆ ವೆಚ್ಚದಲ್ಲಿ ಜೈವಿಕ ವಿಘಟನೆಯಾಗುವ ಹಾಗೂ ವಿಘಟನೆ ಹೊಂದದ ತ್ಯಾಜ್ಯಗಳ ಸಂಸ್ಕರಣೆಯ ಪರಿಸರ ಸ್ನೇಹಿ ತಂತ್ರಜ್ಞಾನಗಳ ಮಾಹಿತಿಯನ್ನೊಳಗೊಂಡ “ಸ್ವಚ್ಛ ಮಿತ್ರ” ಕೈಪಿಡಿಯನ್ನು ಮುದ್ರಿಸಲಾಗಿದೆ. ವಿಶೇಷವಾಗಿ ಸಂಯೋಜಿಸಿದ ಸಂಗೀತಮಯ ಕರೆಗಂಟೆಗಳನ್ನು ಜಿಲ್ಲಾದ್ಯಂತ ಅಳವಡಿಸಲಾಗಿದ್ದು, ಜಿಲ್ಲಾ ಪಂಚಾಯತ್, ಶಾಲಾ ಕಾಲೇಜುಗಳು, ಅಂಗನವಾಡಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಕರೆಗಂಟೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕಲ್ಲಿಗೆ ಗ್ರಾಮದ ೧,೧೨೭ ಮನೆಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿAಗ್ ಹಾಗೂ ರಾಮಕೃಷ್ಣ ಮಠಗಳು ಅಭಿಯಾನದ ಯಶಸ್ವಿಗೆ ಶ್ರಮಿಸಿ, ಪ್ರಾಯೋಜಕತ್ವವನ್ನು ವಹಿಸಿವೆ. ಅಲ್ಲದೆ, ರಾಮಕೃಷ್ಣ ಮಠ ಹಾಗೂ ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಸ್ವಚ್ಚ ಗ್ರಾಮಾಭಿಯಾನದಡಿ “ಸ್ವಚ್ಛಗ್ರಾಮ” ಎಂಬ ಕಾರ್ಯಕ್ರಮ ಕೈಗೊಳ್ಳಲಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗಾಗಿ “ಇರುವುದು ಒಂದೇ ಭೂಮಿ” “ಜಲಧಾರೆÀ” “ನೈರ್ಮಲ್ಯ ಗೀತೆ(ಸ್ವಚ್ಛತಾ ಗೀತೆ) ಹಾಗೂ “ಗೇಟ್‌ಪಾಸ್ ಟು ಪ್ಲಾಸ್ಟಿಕ್” ಎಂಬ ಸಾಕ್ಷ್ಯಚಿತ್ರಗಳ ಮೂಲಕ ಅರಿವು ಕಾರ್ಯಾಗಾರಗಳನ್ನು, ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಜಿಲ್ಲೆಯಾದ್ಯಂತ ಅರಿವು ಮೂಡಿಸಲು ಜಾಥಾ, “ಸ್ವಚ್ಛಮೇವ ಜಯತೆ ಪ್ರತಿಜ್ಞೆ ಹಾಗೂ ಬೃಹತ್ ಆಂದೋಲನಗಳನ್ನು, ಸ್ವಚ್ಛತಾ ರಥದ ಮೂಲಕ ಅರಿವು, ಸ್ವಚ್ಛತೆಯ ಮಹತ್ವ ಸಾರುವಂತಹ ಗೋಡೆ ಬರಹ ಮತ್ತು ಭಿತ್ತಿಚಿತ್ರಗಳು ಹಾಗೂ ಸ್ತಬ್ಧ ಚಿತ್ರಗಳು, ಶಾಲಾ-ಕಾಲೇಜು ಮಕ್ಕಳಿಗೆ ಸ್ವಚ್ಛತೆಯ ಕುರಿತು ರಸಪ್ರಶ್ನೆ ಸ್ಪರ್ಧೆ, ಶ್ರಮದಾನ, ಬಟ್ಟೆ ವಿತರಣೆ ಹಾಗೂ ಬಕೆಟ್ ವಿತರಣೆ ಅಷ್ಟೇ ಅಲ್ಲದೆ ಅಧ್ಯಯನ ಪ್ರವಾಸಗಳ ಮೂಲಕವು ಪ್ರೇರಣಾತ್ಮಕ ಕೆಲಸಗಳನ್ನು ದಕ್ಷಿಣ ಕನ್ನಡ ಜಿಲ್ಲೆಯು ನಿರಂತರ ಮಾಡುತ್ತಿದೆ.

//swachhamevajayate.org/wp-content/uploads/2020/02/Blog-4-Image-3-1.jpeg

೨೦೧೭-೧೮ನೇ ಸಾಲಿನ ಅಂತ್ಯಕೆ ೪೭ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಮಂಜೂರು ಆಗಿದ್ದವು. ಇದರಲ್ಲಿ ೨೨ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೮೦ ಘಟಕಗಳ ಪೈಕಿ ೩೭ ಘನತ್ಯಾಜ್ಯ ಘಟಕ ಕಾರ್ಯನಿರ್ವಹಿಸುತ್ತಿದ್ದು ೭ ಪ್ರಗತಿಯಲ್ಲಿವೆ. ಉಳಿದಂತೆ ನಿರ್ಮಾಣದ ಯೋಜನೆಯಲ್ಲಿವೆ. ಒಟ್ಟು ೪ ದ್ರವ ತ್ಯಾಜ್ಯ ಸಂಸ್ಕರಣಾ ಘಟಕಗಳು, ಉಳಿದಂತೆ ಘನತ್ಯಾಜ್ಯ ನಿರ್ವಾಹಣಾ ಘಟಕಗಳಾಗಿವೆ. ಏಳು ಗ್ರಾಮ ಪಂಚಾಯತ್‌ಗಳು ಮೂರು ಘಟಕಗಳಲ್ಲಿ ಬಹುಗ್ರಾಮ ಮಾದರಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಪದ್ದತಿಯನ್ನು ಅಳವಡಿಸಿಕೊಂಡು ಯಶಸ್ಸಿನತ್ತ ದಾಪುಗಾಲಿಟ್ಟಿವೆ.

ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯು ಸುಸ್ಥಿರ ನೈರ್ಮಲ್ಯ ವಿಷಯಗಳ ಕುರಿತು, ನಾಗರೀಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತ್ತು ಅದರಲ್ಲೂ ಶಾಲಾ ಮಕ್ಕಳಲ್ಲಿ ನಿರಂತರ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನೈರ್ಮಲ್ಯ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ.

WhatsApp chat