Englishs

ಗ್ರಾಮೀಣ ಕರ್ನಾಟಕದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ

ಗ್ರಾಮೀಣ ಭಾರತದಲ್ಲಿ ಬಯಲು ಬಹಿರ್ದೆಸೆ ಒಂದು ಸಾಮಾನ್ಯ ಸಮಸ್ಯೆಯಾಗಿತ್ತು. ಅದನ್ನು ಎಂದೂ ಅವಮಾನಕರವೆಂದಾಗಲೀ, ಸ್ವಚ‍್ಛತೆಯ ಕೊರತೆಯೆಂದಾಗಲೀ ಗ್ರಾಮೀಣ ಜನರು ಭಾವಿಸಿರಲಿಲ್ಲ. ಕಳೆದ ಹಲವು ದಶಕಗಳಿಂದ ಕರ್ನಾಟಕದಲ್ಲಿ ಸ್ವಚ್ಛತೆಯ ಹಾಗೂ ನೈರ್ಮಲ್ಯದ ಕುರಿತಾದ ಹಲವಾರು ಯೋಜನೆಗಳು ಅನುಷ್ಠಾನಗೊಂಡಿವೆ. ಕರ್ನಾಟಕ ಸರ್ಕಾರವು ನಿರ್ಮಲ ಗ್ರಾಮ ಯೋಜನೆ, ಸ್ವಚ್ಛ ಗ್ರಾಮ ಯೋಜನೆ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡಿತ್ತು. 2012ರ ಬೇಸ್ಲೈನ್ ಸಮೀಕ್ಷೆಯ ಅನುಸಾರ ಕರ್ನಾಟಕದ 70.32 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ 35% ಕುಟುಂಬಗಳು ವೈಯಕ್ತಿಕ ಶೌಚಾಲಯವನ್ನು ಹೊಂದಿದ್ದು 65% ಕುಟುಂಬಗಳಲ್ಲಿ ಶೌಚಾಲಯಗಳಿರಲಿಲ್ಲ. ಗ್ರಾಮೀಣ ಭಾರತದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಸಾಧಿಸುವ ಉದ್ದೇಶದಿಂದ ಭಾರತ ಸರ್ಕಾರವು 2014 ಅಕ್ಟೋಬರ್ ನಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಜಾರಿಗೆ ತಂದಿತು.

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)

ಗ್ರಾಮೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು 2005 ರಿಂದ ಮಾರ್ಚ್ 2012 ರವರೆಗೆ ಹಾಗೂ ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಏಪ್ರಿಲ್ 2012 ರಿಂದ ಅಕ್ಟೋಬರ್-2, 2014 ರವರೆಗೆ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಯಿತು. ಬಳಿಕ ಕೇಂದ್ರ ಸರ್ಕಾರವು ಇದೇ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮವನ್ನು ಪುನರ್ ನಾಮಕರಣ ಮಾಡಿ ಹೊಸ ರೂಪದೊಂದಿಗೆ ಅಕ್ಟೋಬರ್-2, 2014 ರಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹೆಸರಿನಡಿ ಅನುಷ್ಠಾನ ಮಾಡಲಾಯಿತು. ಪ್ರಸ್ತುತ ಸ್ವಚ್ಛ ಭಾರತ್ ಮಿಷನ್ (ಗ್ರಾ) ನ ಹಂತ-2 ಚಾಲ್ತಿಯಲ್ಲಿದೆ.

ಗ್ರಾಮೀಣ ಪ್ರದೇಶಗಳ ಎಲ್ಲಾ ಕುಟುಂಬಗಳಲ್ಲಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಶೌಚಾಲಯಗಳಿರಬೇಕು, ಮಲ-ಮೂತ್ರ ವಿಸರ್ಜನೆಗಳಿಗೆ ಶೌಚಾಲಯಗಳನ್ನೇ ಬಳಸಬೇಕು, ಉತ್ತಮ ನಿರ್ವಹಣೆ ಇರಬೇಕು, ಗ್ರಾಮದ ಬೀದಿಗಳು, ಓಣಿಗಳು ಶುಚಿಯಾಗಿರಬೇಕು, ಇದರ ಜೊತೆಗೆ ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಕೂಡ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಒಟ್ಟಾರೆ ರಾಜ್ಯದ ಎಲ್ಲಾ ಗ್ರಾಮಗಳ ಸಂಪೂರ್ಣ ಸ್ವಚ್ಛತೆಗೆ ಪೂರಕವಾದ ಚಟುವಟಿಕೆಗಳನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಉದ್ದೇಶಗಳು:
  • ಗ್ರಾಮೀಣ ಜನರಿಗೆ ಶುಚಿತ್ವದ ಬಗ್ಗೆ ಅರಿವು ಹಾಗೂ ಆರೋಗ್ಯ ಶಿಕ್ಷಣ ನೀಡುವ ಮೂಲಕ ನೈರ್ಮಲ್ಯದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವುದು
  • ಸ್ವಚ್ಛ ಪರಿಸರಕ್ಕಾಗಿ ಜನರಿಂದಲೇ ಬೇಡಿಕೆ ಸೃಷ್ಟಿಸುವುದು
  • ಗ್ರಾಮೀಣ ಪ್ರದೇಶಗಳ ಎಲ್ಲಾ ಕುಟುಂಬಗಳೂ ಶೌಚಾಲಯಗಳನ್ನು ಹೊಂದುವಂತೆ ಹಾಗೂ ಬಳಸುವಂತೆ ಪ್ರೇರೇಪಿಸುವುದು
  • ವೈಯಕ್ತಿಕ ಶುಚಿತ್ವ, ಕುಟುಂಬದ ಸ್ವಚ್ಛತೆ ಹಾಗೂ ಸಮುದಾಯ ಸ್ವಚ್ಛತೆಯನ್ನು ಉತ್ತೇಜಿಸುವುದು ಮತ್ತು ಈ ಮೂಲಕ ಗ್ರಾಮೀಣ ಜನರ ಜೀವನ ಮಟ್ಟದಲ್ಲಿ ಸುಧಾರಣೆ ತರುವುದು
  • ಹಳ್ಳಿಗಳ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ನೈರ್ಮಲ್ಯದ ಸೌಲಭ್ಯಗಳನ್ನು ನಿರ್ಮಿಸುವುದು ಹಾಗೂ ಮಕ್ಕಳಲ್ಲಿ ನೈರ್ಮಲ್ಯದ ಅಭ್ಯಾಸಗಳನ್ನು ರೂಢಿಸುವುದು
  • ಗ್ರಾಮ ಹಾಗೂ ಸಮುದಾಯ ಮಟ್ಟದಲ್ಲಿಯೇ ತ್ಯಾಜ್ಯಗಳ ಸೂಕ್ತ ವಿಲೇವಾರಿ ಹಾಗೂ ಸಮರ್ಪಕ ನಿರ್ವಹಣೆಯನ್ನು ಅಭಿವೃದ್ಧಿಪಡಿಸುವ ಮೂಲಕ ಇಡೀ ಗ್ರಾಮೀಣ ಪರಿಸರದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಸಾಧಿಸುವುದು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಹಂತ 1:

ಬಯಲು ಬಹಿರ್ದೆಸೆಯನ್ನು ಗ್ರಾಮೀಣ ಭಾರತದ ಜನರು ಅವಮಾನಕರವೆಂದಾಗಲಿ ಅಥವಾ ತಪ್ಪು ಪದ್ಧತಿಯೆಂದಾಗಲೀ ಭಾವಿಸಿರಲಿಲ್ಲ. ಕಳೆದ ಕೆಲ ದಶಕಗಳಿಂದ ವೈಯಕ್ತಿಕ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತಾಗಿ ಹಲವು ಯೋಜನೆಗಳು ಜಾರಿಗೆ ಬಂದ ನಂತರ ರಾಜ್ಯದ ಜನರಲ್ಲಿ ಶುಚಿತ್ವದ ಬಗೆಗಿನ ಅರಿವು ಹೆಚ್ಚಾಗಿದೆ.

ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಅನೇಕ ಮಾರಕ ಖಾಯಿಲೆಗಳಿಗೆ ರಹದಾರಿಯನ್ನು ಮಾಡಿಕೊಟ್ಟಂತೆ. 5 ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ, ಅಂತರ್ಜಲ ಮೂಲಗಳ ಮಾಲಿನ್ಯ, ರೋಗಗಳು ಹೆಚ್ಚಾಗುವುದರಿಂದ ಕುಟುಂಬದ ಆದಾಯದಲ್ಲಿ ನಷ್ಟ ಮತ್ತು ಮಾನವನ ಘನತೆಗೆ ಧಕ್ಕೆ ಯುಂಟಾಗುತ್ತದೆ. ಮಾನವನ ಮಲಮೂತ್ರವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು, ಬಯಲಿನಲ್ಲಿ ಮಲಮೂತ್ರ ವಿಸರ್ಜನೆಮಾಡುವುದನ್ನು ತಪ್ಪಿಸಿ ಶೌಚಾಲಯದ ಸಮರ್ಪಕ ಬಳಕೆಗೆ ಉತ್ತೇಜನ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಧಿಕೃತವಾಗಿ 2ನೇ ಅಕ್ಟೋಬರ್ 2014 ರಂದು ಸ್ವಚ್ಛ ಭಾರತ್ ಮಿಷನ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪ್ರಮುಖವಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾ), ಹಂತ-1 ರಲ್ಲಿ ದೇಶವನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಹೆಚ್ಚಿನ ಆದ್ಯತೆ ನೀಡಲಾಯಿತು. ಇದರ ಜೊತೆಯಲ್ಲಿಯೇ ನೈರ್ಮಲ್ಯ - ಶುಚಿತ್ವ ಕುರಿತು ದೇಶದ ಜನರ ನಡತೆಯಲ್ಲಿ ಬದಲಾವಣೆ ತರುವುದು, ಮಲ ಹೊರುವ ಪದ್ಧತಿಯ ನಿರ್ಮೂಲನೆ ಮಾಡುವುದು ಸೇರಿದಂತೆ ಇತರೆ ಉದ್ದೇಶಗಳನ್ನಿಟ್ಟುಕೊಂಡು 2ನೇ ಅಕ್ಟೋಬರ್ 2014 ರಿಂದ ಅಕ್ಟೋಬರ್ 2019 ರವರೆಗೆ ಸ್ವಚ್ಛ ಭಾರತ್ ಮಿಷನ್ (ಗ್ರಾ), ಹಂತ-1 ರಲ್ಲಿ ಚಾಲ್ತಿಯಲ್ಲಿತ್ತು. 19ನೇ ನವೆಂಬರ್ 2018 ರಂದು ಕರ್ನಾಟಕ ರಾಜ್ಯ ಬಯಲು ಬುರ್ದೆಸೆ ಮುಕ್ತ ರಾಜ್ಯವೆಂದು ಘೋಷಿಸಲ್ಪಟ್ಟಿತು. ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-1 ರ ಅವಧಿಯಲ್ಲಿ 1283 ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ 470 ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲಾರಂಭಿಸಿದವು. ಈ ಅವಧಿಯಲ್ಲಿ ರಾಜ್ಯಾದ್ಯಂತ 1675 ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ಇದರಲ್ಲಿ 1191 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇವುಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿವೆ.

ಹಂತ 2:

ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-2ನ್ನು 2020-21 ರಿಂದ 2024-25 ರವರೆಗೆ ಮುಂದುವರೆಸಲಾಗಿದೆ. ಈ ಅವದಿಯಲ್ಲಿ ಬಯಲು ಬಹಿರ್ದೆಸೆ ಮುಕ್ತತೆಯ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಘನ-ದ್ರವ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರ ಜೊತೆಯಲ್ಲಿಯೇ ಅವಳಿ ಗುಂಡಿಗಳ ನಿರ್ಮಾಣ, ವೈಯಕ್ತಿಕ ನೈರ್ಮಲ್ಯ, ಕೈ ತೊಳೆಯುವ ಅಭ್ಯಾಸ, ಆರೋಗ್ಯಕರ ಋತುಚಕ್ರ ನಿರ್ವಹಣೆಗೂ ಆದ್ಯತೆ ನೀಡಲಾಗಿದೆ LOB, NOLB ಅಡಿಯಲ್ಲಿ ರಾಜ್ಯದಲ್ಲಿ 4,20,116 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ದಿನಾಂಕ 7.11.2020ಕ್ಕೆ ರಾಜ್ಯದಲ್ಲಿ ನಿರ್ಮಿಸಲಾಗಿರುವ ವೈಯಕ್ತಿಕ ಶೌಚಾಲಯಗಳ ಸಂಖ್ಯೆ 48,81,772 ಆಗಿದೆ. ಮನೆಯಲ್ಲಿ ಪ್ರತಿಯೊಬ್ಬ ಸದಸ್ಯನೂ ಪ್ರತಿ ಸಲ ಶೌಚಾಲಯವನ್ನೇ ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಗ್ರಾಮ ಮಟ್ಟದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲಾಗಿತ್ತಿದ್ದು, ಮೂಲದಲ್ಲಿಯೇ ಕಸ ವಿಂಗಡಣೆಗೆ ಸಮುದಾಯಗಳನ್ನು ಪ್ರೇರೇಪಿಸುವ ಕೆಲಸ ರಾಜ್ಯಾದ್ಯಂತ ಚಾಲ್ತಿಯಲ್ಲಿದೆ. ದ್ರವ ತ್ಯಾಜ್ಯ ನಿರ್ವಹಣೆಗೆ FSTPಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಹಾಗೂ ಗೋಬರ್‌ಧನ್ ಘಟಕಗಳ ನಿರ್ಮಾಣ ಕಾರ್ಯ ಕೂಡ ನಿರಂತರವಾಗಿ ಪ್ರಗತಿಯಲ್ಲಿದೆ.

ಪ್ರಮುಖ ಘಟಕಾಂಶಗಳು:
ಗೃಹ ಶೌಚಾಲಯ

ಈ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಂದು BPL ಕುಟುಂಬಗಳು ಹಾಗೂ ನಿರ್ಬಂಧಿತ ಎಪಿಎಲ್ ವರ್ಗಕ್ಕೆ ಸೇರಿದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಕುಟುಂಬಗಳು, ಸಣ್ಣ ಮತ್ತು ಅತಿಸಣ್ಣ ಕುಟುಂಬಗಳು, ಭೂರಹಿತ ಕುಟುಂಬಗಳಿಗೆ, ಅಂಗವಿಕಲರಿರುವ ಕುಟುಂಬಗಳಿಗೆ ಹಾಗೂ ಮಹಿಳಾ ಮುಖ್ಯಸ್ಥ ಕುಟುಂಬಗಳು ವೈಯಕ್ತಿಕ ಗೃಹ ಶೌಚಾಲಯವನ್ನು ಕಟ್ಟಿಕೊಂಡಲ್ಲಿ ಕೇಂದ್ರ ಸರ್ಕಾರ ರೂ.7200/- ರಾಜ್ಯ ಸರ್ಕಾರ ರೂ.4800/- ಒಟ್ಟು ರೂ.12000/- ಗಳು ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಕುಟುಂಬಗಳಿಗೆ ರೂ.15000/-ಗಳ (ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.3000/-ಗಳನ್ನು ಹಾಗೂ ಎಸ್‌ಸಿಪಿ/ಟಿಎಸ್‌ಪಿಯಡಿ ನೀಡಲಾಗುತ್ತಿದೆ) ಪ್ರೋತ್ಸಾಹ ಧನವಾಗಿ ನೀಡುತ್ತಿದೆ. ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೂ ಒತ್ತು ನೀಡಲಾಗುತ್ತಿದೆ.

ಸಮುದಾಯ ಶೌಚಾಲಯ

ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವುದು ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-2 ರ ಮುಖ್ಯ ಧ್ಯೇಯವಾಗಿದೆ. ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲು ಸಾದ್ಯವಾಗದೇ ಇರುವಂತಹ ಗರಿಷ್ಠ 35 ಮನೆಗಳಿರುವಂತಹ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯವನ್ನು ನಿರ್ಮಿಸಲು ಕ್ರಮ ವಹಿಸುವಂತೆ ಜಲಶಕ್ತಿ ಮಂತ್ರಾಲಯ ಸೂಚನೆ ನೀಡಿದೆ. ಅಂತೆಯೇ ರಾಜ್ಯದಲ್ಲಿ ಈಗಾಗಲೇ (ಆಗಸ್ಟ್ 2020ಕ್ಕೆ ಅನ್ವಯಿಸುವಂತೆ) 905 ಸಮುದಾಯ ಶೌಚಾಲಯಗಳು ಬಳಕೆಯಲ್ಲಿದ್ದು, ಇನ್ನು ಸಾವಿರ (1,862) ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇವುಗಳ ನಿರ್ಮಾಣಕ್ಕೆ ತಗಲುವ ವೆಚ್ಚದ ಶೇ.70% ರಷ್ಟನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಭರಿಸುತ್ತದೆ. ಇನ್ನುಳಿದ ಶೇ.30% ರಷ್ಟು ಖರ್ಚನ್ನು 15ನೇ ಹಣಕಾಸು ಆಯೋಗದ ನಿಧಿಯನ್ನು ಬಳಸಿಕೊಳ್ಳಬಹುದಾಗಿದೆ.

ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ

ಗ್ರಾಮೀಣ ಪ್ರದೇಶಗಳಲ್ಲಿನ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸುವ ಉದ್ದೇಶದೊಂದಿಗೆ ಘನ ಹಾಗೂ ದ್ರವ ತ್ಯಾಜ್ಯಗಳ ನಿರ್ವಹಣೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ದಿನಾಂಕ 01.04.2012 ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕುಟುಂಬಗಳ ಆಧಾರದ ಮೇಲೆ 5000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಲ್ಲಿ ತಲಾ ರೂ.45ಗಳನ್ನು, 5000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಿಗೆ ತಲಾ ರೂ.60ಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಅಂತೆಯೇ ದ್ರವ ತ್ಯಾಜ್ಯ ವಿಲೇವಾರಿಗೆ 5000ಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಿಗೆ ತಲಾ ರೂ.660ಗಳನ್ನು, 5000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗೆ ತಲಾ ರೂ.280 ರಂತೆ ದ್ರವ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಇದರ ಅನುಪಾತವು 60:40 ಇದ್ದು, ಈ ಪೈಕಿ ಶೇಕಡಾ 60% ರಷ್ಟನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾ) ಭರಿಸುತ್ತದೆ. ಇನ್ನುಳಿದ ಶೇಕಡಾ 40% ರಷ್ಟನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಲಿವೆ. ಇದನ್ನು ಹೊರತುಪಡಿಸಿ 15ನೇ ಹಣಕಾಸು ಆಯೋಗದ ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ.

ಅನುಷ್ಠಾನ ವಿಧಾನ

ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕ್ಷೇತ್ರ ಮಟ್ಟದಲ್ಲಿ ಆಂದೋಲನವನ್ನು ಅನುಷ್ಠಾನಗೊಳಿಸುವ ಹೊಣೆ ಸಂಪೂರ್ಣವಾಗಿ ಗ್ರಾಮ ಪಂಚಾಯಿತಿಯದಾಗಿರುತ್ತದೆ.

ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಕೈಗೊಂಡ / ಸಾಧಿಸಿದ ಪ್ರಮುಖ ಕಾರ್ಯಕ್ರಮಗಳು:

1.  ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯನ್ನು ಕೇಂದ್ರ ಸರ್ಕಾರವು 2ನೇ ಅಕ್ಟೋಬರ್ 2014ರಂದು ಜಾರಿಗೆ ತಂದಿದ್ದು, ಇದರ ಪ್ರಮುಖ ಉದ್ದೇಶವು ಗ್ರಾಮೀಣ ಪ್ರದೇಶದಲ್ಲಿ ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯನ್ನು ಮುಕ್ತ ಮಾಡುವುದಾಗಿರುತ್ತದೆ. ಅದರಂತೆ ನವೆಂಬರ್ 19, 2018ರ ವಿಶ್ವ ಶೌಚಾಲಯ ದಿನದಂದು, ಗ್ರಾಮೀಣ ಕರ್ನಾಟಕವನ್ನು “ಬಯಲು ಬಹಿರ್ದೆಸೆ ಮುಕ್ತ” ಎಂದು ಘೋಷಿಸಲಾಗಿರುತ್ತದೆ.

2.  ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯನ್ನು ಕಾಯ್ದುಕೊಳ್ಳಲು ರಾಜ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

3.  ODF Sustainability ಕುರಿತು ರಾಜ್ಯ ಮಟ್ಟದಲ್ಲಿ ODF Plus Cell ಅನ್ನು ಸ್ಥಾಪಿಸಲಾಗಿದೆ.

4.  ಯೋಜನೆಯ ಯಶಸ್ವಿ ಅನುಷ್ಠಾನದ ಉದ್ದೇಶದಿಂದ ಮಾರ್ಗಸೂಚಿಯಂತೆ ಪ್ರತಿ ಜಿಲ್ಲೆಯಲ್ಲಿ 5 ಸಮಾಲೋಚಕರು ಕಾರ್ಯನಿರ್ವಹಿಸುತ್ತಿದ್ದಾರೆ.

5.  ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳನ್ನು ಉತ್ತಮವಾಗಿ ಅನುಷ್ಠಾನ ಮಾಡಲು ರಾಜ್ಯ ಕಛೇರಿಯಲ್ಲಿ IEC-Cell ಅನ್ನು ಸ್ಥಾಪಿಸಿಲಾಗಿದೆ.

6.  ODF ಸುಸ್ಥಿರತೆಯ ಉದ್ದೇಶದಿಂದ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ನೀತಿ, ಕಾರ್ಯತಂತ್ರ ಮತ್ತು ಉಪವಿಧಿಗಳನ್ನು ಜಾರಿಗೆ ತರಲಾಗಿದೆ.

7.  ರಾಜ್ಯದ ಆಯ್ದ ಮಹಿಳಾ ಹಾಸ್ಟೆಲ್ಸ್ ಹಾಗೂ ಹೈಸ್ಕೂಲ್‌ಗಳಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗಲು, ಋತುಚಕ್ರದ ವೇಳೆ ಬಳಸುವ ಪ್ಯಾಡ್‌ಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಇನ್ಸಿನರೇಟರ್‌ಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ.

ಕೈತೊಳೆಯುವುದು

ವೈಯಕ್ತಿಕ ಸ್ವಚ‍್ಛತೆಯ ಮೊದಲ ಹಂತವೇ ಕೈತೊಳಯುವುದು. ಶಾಲೆಯಲ್ಲಿ ಮಕ್ಕಳಿಗೆ ಇದರ ಮಹತ್ವವನ್ನು ತಿಳಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಹಾರ ಸೇವಿಸುವ ಮೊದಲು ಹಾಗೂ ನಂತರ, ಶೌಚಾಲಯ ಬಳಕೆಯ ಮೊದಲು ಹಾಗೂ ನಂತರ ಸ್ವಚ‍್ಛವಾಗಿ ಕೈತೊಳೆದುಕೊಳ್ಳುವುದು ವೈಯಕ್ತಿಕ ಸ್ವಚ‍್ಚತೆಯ ಮುಖ್ಯ ಹಂತಗಳಾಗಿವೆ. ಸೋಪನ್ನು ಬಳಸಿ 7 ಹಂತದ ಕೈತೊಳೆಯುವ ಅಭ್ಯಾಸವನ್ನು ಶಾಲೆಗಳಲ್ಲಿ ಭಿತ್ತಿ ಪತ್ರಗಳ ಮೂಲಕ ಪರಿಚಯಿಸಿ ಉತ್ತಮ ಆರೋಕ್ಯಕರ ಕೈತೊಳೆಯುವ ಅಭ್ಯಾಸವನ್ನು ಪ್ರೋತ್ಸಾಹಿಸಲಾಗುತ್ತಿದೆ.

SBM Karnataka

ಆರೋಗ್ಯಕರ ಋತುಚಕ್ರ ನೈರ್ಮಲ್ಯ ನಿರ್ವಹಣೆ

ಗ್ರಾಮೀಣ ಕರ್ನಾಟಕದ ಹಲವಾರು ಮಹಿಳೆಯರಲ್ಲಿ ಸರಿಯಾದ ಋತುಚಕ್ರ ನಿರ್ವಹಣೆ ಮಾಡದಿರುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯ ಒಂದು ಮುಖ್ಯ ಘಟಕವೆಂದರೆ ಆರೋಗ್ಯಕರ ಋತುಚಕ್ರ ನಿರ್ವಹಣೆ. ಇದು ಮಹಿಳೆಯರಲ್ಲಿ ಉತ್ತಮ ಋತುಚಕ್ರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನಶೈಲಿಯ ಸುಧಾರಣೆ ಮಾಡಲು ಹೆಚ್ಚಿನ ಒತ್ತು ನೀಡುತ್ತದೆ. ಆರೋಗ್ಯಕರ ಋತುಚಕ್ರ ನಿರ್ವಹಣೆಯ ಮುಖ್ಯ ಅಂಶಗಳೆಂದರೆ, ಸರಿಯಾಗಿ ಒಗೆದು ಬಿಸಿಲಿನಲ್ಲಿ ಒಣಗಿಸಿದ ಬಟ್ಟೆಗಳ ಬಳಕೆ, ಸ್ಯಾನಿಟರಿ ನ್ಯಾಪ್ ಕಿನ್ ಗಳ ಬಳಕೆ, ಮುಟ್ಟಿನ ತ್ಯಾಜ್ಯದ ಸರಿಯಾದ ವಿಲೇವಾರಿ ಹಾಗೂ ಋತುಚಕ್ರಕ್ಕೆ ಸಂಬಂಧಿಸಿದ ತಪ್ಪು ತಿಳುವಳಿಕೆಗಳನ್ನು ದೂರಗೊಳಿಸುವುದು. ಮುಟ್ಟಿನ ತ್ಯಾಜ್ಯದ ಸರಿಯಾದ ವಿಲೇವಾರಿಗಾಗಿ ಶಾಲೆಗಳಲ್ಲಿ ಭಸ್ಮೀಕರಣ ಯಂತ್ರಗಳನ್ನು ಕೂಡಾ ಅಳವಡಿಸಲಾಗುತ್ತಿದೆ.

 6,238 total views,  3 views today

WhatsApp chat